ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಯದ ಸಚಿವ, ಸಂಸದರ ಕಚೇರಿ ಬಾಗಿಲು

Last Updated 9 ನವೆಂಬರ್ 2017, 6:08 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಸಾರ್ವಜನಿಕರು ಅಹವಾಲುಗಳನ್ನು ಎಲ್ಲಿ ಹೇಳಿಕೊಳ್ಳಬೇಕು? ಬಹುತೇಕ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಭವನದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ, ಸಂಸದರ ಕಚೇರಿಗಳು ಇರುತ್ತವೆ. ಅಲ್ಲಿಯೇ ಜನರು ತಮ್ಮೂರಿನ ಸಮಸ್ಯೆಗಳ ಬಗ್ಗೆ ಅಹವಾಲು ಸಲ್ಲಿಸಲು ಸಚಿವರ, ಸಂಸದರ ಕಚೇರಿಗಳಿಗೆ ಹೋಗುತ್ತಾರೆ.

ಆದರೆ, ಜಿಲ್ಲೆಯಲ್ಲಿ ಜಿಲ್ಲಾಡಳಿತದ ಭವನದಲ್ಲಿರುವ ಉಸ್ತುವಾರಿ ಸಚಿವರ, ಸಂಸದರ ಕಚೇರಿಗಳ ಬಾಗಿಲು ತೆರೆದೇ ಇಲ್ಲ! ಜನರ ಅನುಕೂಲಕ್ಕಾಗಿ ಜಿಲ್ಲಾಡಳಿತವೇ ಆಯಾ ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ಸಂಸದರಿಗೆ ಕಚೇರಿಗಳ ವ್ಯವಸ್ಥೆ ಮಾಡುತ್ತದೆ. ಅದೇ ರೀತಿ ಜಿಲ್ಲೆಯಲ್ಲೂ ಜಿಲ್ಲಾಡಳಿತ ಭವನದ ಮೊದಲ ಮಹಡಿಯ ‘ಬಿ’ ಬ್ಲಾಕ್‌ನ 31ನೇ ನಂಬರ್‌ ಕೊಠಡಿಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ಅವರಿಗೆ, ಎದುರಿನ 32ನೇ ನಂಬರ್ ಕೊಠಡಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಅವರಿಗೆ ನೀಡಿತ್ತು.

ಈ ಕೊಠಡಿಗಳನ್ನು ಸಂಬಂಧಪಟ್ಟವರಿಗೆ ವಹಿಸಿಕೊಟ್ಟ ದಿನದಿಂದಲೂ ಇವುಗಳ ಬಾಗಿಲು ತೆರೆದಿಲ್ಲ. ಸಚಿವರಾಗಲಿ, ಸಂಸದರಾಗಲಿ ಒಮ್ಮೆಯೂ ಇತ್ತ ಸುಳಿದಿಲ್ಲ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು. ಈ ಕಚೇರಿಗಳಲ್ಲಿ ಸುಸಜ್ಜಿತವಾದ ಪೀಠೋಪಕರಣ ಇವೆ. ವಿಶಾಲವಾದ ಕೊಠಡಿಗಳಿವೆ. ಆದರೆ, ಬಳಕೆ ಮಾಡದೆ ದೂಳು ಹಿಡಿದಿವೆ. ಕಚೇರಿ ಮುಂದೆ ನಾಮಫಲಕಗಳು ಮಾತ್ರ ರಾರಾಜಿಸುತ್ತಿವೆ. ಸದಾ ಬಾಗಿಲಿಗೆ ಬೀಗ ಬಿದ್ದಿರುತ್ತದೆ.

ಎಸ್‌.ಎಸ್‌.ಮಲ್ಲಿಕಾರ್ಜುನ ಸಚಿವರಾಗುವುದಕ್ಕೂ ಮುಂಚೆ ಅವರ ತಂದೆ, ಶಾಸಕ ಶಾಮನೂರು ಶಿವಶಂಕರಪ್ಪ ಸಚಿವರಾಗಿದ್ದರು. ಅವರು ಇದ್ದಾಗಲೂ ಕಚೇರಿ ಇತ್ತು. ಆದರೆ, ಅವರು ಎಂದಿಗೂ ಕಚೇರಿಗೆ ಬಂದಿರಲಿಲ್ಲ. ಈಗ ಮಲ್ಲಿಕಾರ್ಜುನ ಅವರೂ ಅತ್ತ ಹೋಗುತ್ತಿಲ್ಲ. ಮೊದಲಿನಿಂದಲೂ ಸಚಿವರು–ಶಾಸಕರ ಮನೆಯೇ ಕಚೇರಿ ಆಗಿದೆ. ಎಂಸಿಸಿ ‘ಬಿ’ ಬ್ಲಾಕ್‌ನ ಗೃಹ ಕಚೇರಿಯಲ್ಲೇ ಇವರಿಬ್ಬರು ಜನರ ಸಮಸ್ಯೆ ಆಲಿಸುತ್ತಾರೆ.

‘ಮನೆ ಮುಂದೆ ನಿತ್ಯ ನೂರಾರು ಜನ ನೆರೆದಿರುತ್ತಾರೆ. ಅಲ್ಲಿ ಶೇ 90ರಷ್ಟು ಜನ ಹಿಂಬಾಲಕರೇ ಇರುತ್ತಾರೆ. ಪಕ್ಷದ ಮುಖಂಡರೇ ಅವರ ಸುತ್ತಮುತ್ತ ಸುತ್ತುವರಿದಿರುತ್ತಾರೆ. ದೊಡ್ಡ ಮನೆಯ ಒಳಗೆ ಹೋಗಿ ಹೇಗೆ ನಮ್ಮ ಅಹವಾಲು ಸಲ್ಲಿಸಲು ಸಾಧ್ಯ?’ ಎನ್ನುತ್ತಾರೆ ಸಾರ್ವಜನಿಕರು. ‘ಕೆಲವು ಜಿಲ್ಲೆಗಳಲ್ಲಿ ಸಚಿವರು ಜನಸಂಪರ್ಕ ಸಭೆ ನಡೆಸುತ್ತಾರೆ.

ಅಲ್ಲಿ ಜನರು ಗೋಳು ಹೇಳಿಕೊಳ್ಳುವುದಕ್ಕೆ ಅವಕಾಶ ಇದೆ. ಇಲ್ಲಿ ಜನಸಂಪರ್ಕ ಸಭೆಗಳು ನಡೆದ ಉದಾಹರಣೆಗಳೂ ಇಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ನಮ್ಮ ತಾಲ್ಲೂಕಿಗೆ ಬಂದು ಮಳೆ, ಬೆಳೆ, ಬರದ ಬಗ್ಗೆ ಕೇಳುವುದಿಲ್ಲ. ಇಲ್ಲಿಗೆ ಬಂದು ದಿನಗಟ್ಟಲೇ ಅವರ ಮನೆ ಬಾಗಿಲು ಕಾಯಬೇಕು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಹರಪನಹಳ್ಳಿಯ ಹಲುವಾಗಲಿನ ಗ್ರಾಮಸ್ಥರೊಬ್ಬರು.

‘ಸಾಹೇಬ್ರನ್ನ ಯಾವುದೇ ಸಮಯದಲ್ಲಿ, ಯಾರೇ ಬಂದು ಭೇಟಿ ಮಾಡಿ, ಅಹವಾಲು ಸಲ್ಲಿಸಬಹುದು. ಜಿಲ್ಲಾಡಳಿತ ಭವನ ಬಹಳ ದೂರ ಇರುವುದರಿಂದ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಮನೆಯಲ್ಲೇ ಕಚೇರಿ ತೆರೆಯಲಾಗಿದೆ’ ಎನ್ನುತ್ತಾರೆ ಸಚಿವರ ಗೃಹ ಕಚೇರಿಯ ಆಪ್ತ ಸಹಾಯಕರಲ್ಲಿ ಒಬ್ಬರು.

ಸಕಾಲಕ್ಕೆ ಸಿಗದ ಸಂಸದರು: ಸಂಸದ ಜಿ.ಎಂ.ಸಿದ್ದೇಶ್ವರ ತಮ್ಮ ಜನಸಂಪರ್ಕ ಕಚೇರಿಯನ್ನು ಪಿ.ಬಿ.ರಸ್ತೆಯ ಜನನಿಬಿಡ ಸ್ಥಳದಲ್ಲಿ ಸ್ಥಾಪಿಸಿದ್ದಾರೆ. ಪಾಲಿಕೆ ಎದುರು, ರೈಲ್ವೆ ನಿಲ್ದಾಣ ಬಳಿ ಇರುವ ಈ ಕಚೇರಿ ಜನರ ಸಂಪರ್ಕಕ್ಕೆ ಬಹಳ ಸುಲಭವಾಗುತ್ತದೆ.

‘ಸಂಸದರ ಕಚೇರಿಯಲ್ಲೂ ಹಿಂಬಾಲಕರ ಕಾಟ ಇದೆ. ಅವರು ಕಚೇರಿಗೆ ಬಂದಾಗಲೆಲ್ಲ ಪಕ್ಷದ ಮುಖಂಡರೂ ತುಂಬಿಕೊಳ್ಳುತ್ತಾರೆ. ಅಲ್ಲದೇ, ಅವರ ಭೇಟಿಗೆ ನಿಗದಿಪಡಿಸಿದ ಸಮಯದಲ್ಲಿ ಅವರು ಕಚೇರಿಯಲ್ಲಿ ಸಿಗುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಜಗಳೂರಿನ ಸಾರ್ವಜನಿಕರೊಬ್ಬರು.

ಕೆಲವು ಬಾರಿ ಜನಸಂಪರ್ಕ ಸಭೆಯನ್ನು ಅವರದೇ ಜಿಎಂಐಟಿ ಅತಿಥಿಗೃಹದಲ್ಲಿ ಸಂಸದರು ಕರೆಯುತ್ತಾರೆ. ಅದೂ ನಗರದಿಂದ ಬಹಳಷ್ಟು ದೂರ ಇದೆ. ಅಲ್ಲದೇ, ಅತಿಥಿಗೃಹವನ್ನು ಹುಡುಕಿಕೊಂಡು ಹೋಗುವುದೇ ಸವಾಲು ಎಂದು ಬೇಸರ ವ್ಯಕ್ತಪಡಿಸುತ್ತಾರೆ ಅವರು.

ಜಿಲ್ಲಾಡಳಿತ, ನಗರದಿಂದ ದೂರ ಇರುವುದರಿಂದ ಜನರ ಅನುಕೂಲಕ್ಕಾಗಿಯೇ ಪಾಲಿಕೆ ಎದುರು ಸಂಸದರ ಕಚೇರಿ ಸ್ಥಾಪಿಸಲಾಗಿದೆ ಎನ್ನುತ್ತಾರೆ ಸಂಸದರ ಆಪ್ತ ಸಹಾಯಕ ದೇವರಾಜ್. ಜಿಲ್ಲಾಡಳಿತ ಭವನದಲ್ಲೇ ಇರುವ ಉಸ್ತುವಾರಿ ಸಚಿವರ ಹಾಗೂ ಸಂಸದರ ಕಚೇರಿಯ ಬಾಗಿಲುಗಳನ್ನು ತೆರೆದು, ಅಲ್ಲಿಯೇ ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT