ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗೆ ಬಂದರೂ ಬಾಯಿಗೆ ಬಾರದ ‘ರಾಗಿ’ ತುತ್ತು

Last Updated 9 ನವೆಂಬರ್ 2017, 6:30 IST
ಅಕ್ಷರ ಗಾತ್ರ

ಹಳೇಬೀಡು: ಈ ಬಾರಿ ತಾಲ್ಲೂಕಿನ ರೈತರು ನಿರೀಕ್ಷೆಗೂ ಮೀರಿ ರಾಗಿ ಬೆಳೆಯಲಾಗಿದೆ. ಮಾತ್ರವಲ್ಲ; ಅಕ್ಟೋಬರ್‌ ವೇಳೆ ಬಂಪರ್‌ ಬೆಳೆ ಬರುತ್ತದೆ ಎಂಬ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆದರೆ, ಸತತವಾಗಿ ಸುರಿವ ಮಳೆ ಕೊಯ್ಲಿಗೆ ಅಡ್ಡಿಯಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಕೊಯ್ಲು ಮಾಡಿ ಜಮೀನಿನಲ್ಲಿ ಹರಡಿದ್ದ ರಾಗಿ ಬೆಳೆ ಮಂಗಳವಾರ ಬಿದ್ದ ಮಳೆಗೆ ನೆನೆದು ತೊಪ್ಪೆಯಾಗಿದೆ. ಕತ್ತೆಕಟ್ಟಿ ಬಣವೆ ಹಾಕುವ ಮೊದಲೇ ಮಳೆ ಬಿದ್ದಿದ್ದರಿಂದ ರಾಗಿ ಕಟಾವಿಗೆ ಕೈಹಾಕಿದ ರೈತರಿಗೆ ದಿಕ್ಕು ತೋಚದಂತಾಗಿದೆ.

ಮೇ ತಿಂಗಳಿಂದ ಸೆಪ್ಟೆಂಬರ್‌ ಅವಧಿಯಲ್ಲಿ ಮುಂಗಾರು ಮಳೆ ಸಕಾಲಕ್ಕೆ ಬೀಳದೆ; ವಿಫಲವಾಯಿತು. ಆಗಸ್ಟ್‌ ಕೊನೆಯ ವಾರದಲ್ಲಿ ಬಿದ್ದ ಮಳೆಗೆ ರಾಗಿ ಬೆಳೆಗೆ ಕೈಹಾಕಿದ್ದರು. ಕಳೆದ ಮೂರು ವರ್ಷದಿಂದ ಮೇವಿಗಾಗಿ ಪರದಾಡಿದ ರೈತರಿಗೆ ಇದು ತುಸು ನೆಮ್ಮದಿ ತಂದಿತ್ತು.

‘ಮುದ್ದೆ, ಅಂಬಲಿಗೆ ಒಂದಿಷ್ಟು ರಾಗಿ, ಜಾನುವಾರು ಮೇವಿಗೆ ಹುಲ್ಲು ಸಿಕ್ಕಿದರೆ ಸಾಕು ಎಂದು ರಾಗಿ ಬೆಳೆ ಮಾಡಿದೆವು. ಅಕ್ಟೋಬರಿನಲ್ಲಿ ಬಿದ್ದ ಮಳೆಗೆ ತಿಳಿ ಹಸಿರಿನ ರಾಗಿ ತೆನೆ ಬಂಗಾರದ ಬಣ್ಣಕ್ಕೆ ತಿರುಗಿ, ಮಾಗುವವರೆಗೂ ನೆಮ್ಮದಿಯಾಗಿದ್ದೆವು. ಕೊಯ್ಲು ಸಮಯಕ್ಕೆ ಸರಿಯಾಗಿ ಕಾಣಿಸಿಕೊಂಡ ಮೋಡದ ವಾತವರಣ ನಿದ್ದೆಗೆಡಿಸಿದೆ.

ಮಳೆ ಬಿದ್ದರೂ ಕೊಯ್ಲು ಮಾಡಿ ಕಣದ ಕೆಲಸ ಮುಗಿಸುವ ಹೊತ್ತಿಗೆ ಮಳೆ ಬಂದು ನಿಲ್ಲುತ್ತದೆ ಎಂದು ಸಮಾಧಾನ ಮಾಡಿಕೊಂಡಿದ್ದೇವು. ಆದರೆ, ಮಳೆರಾಯನಿಗೆ ಕರುಣೆಯೇ ಇಲ್ಲ. ಕಳೆದ ಮುಂಗಾರಿನಲ್ಲಿ ಮಳೆ ಬೀಳದೆ ರೈತರಿಗೆ ನಷ್ಟವಾಯಿತು. ಈಗ ಮಳೆ ಬಂದು ರಾಗಿ ಬೆಳೆಗಾರರಿಗೆ ತೊಂದರೆಯಾಗುತ್ತಿದೆ’ ಎಂದು ಮಾಯಗೊಂಡನಹಳ್ಳಿಯ ರೈತ ರುದ್ರೇಗೌಡ ಅಳಲು ತೋಡಿಕೊಂಡರು.

‘ಕಣದ ಕೆಲಸ ಮುಗಿಯುವವರೆಗೆ ಮಳೆ ಬಿಡುವು ನೀಡದಿದ್ದರೆ ಕಾಳು ಮುಗ್ಗಲು ಬರುವ ಸಾಧ್ಯತೆ ಇದೆ. ಮಳೆಯಲ್ಲಿ ನೆಂದ ತೆನೆಯಿಂದ ಬೇರ್ಪಡಿಸಿದ ರಾಗಿ ಕಪ್ಪು ಬಣ್ಣಕ್ಕೆ ತಿರುಗುವ ಅವಕಾಶವೂ ಇದೆ. ಹುಲ್ಲು ಸಹ ಕೊಳೆತು ಕರಗಿ ಹೊದರೆ ರಾಗಿ ಬೆಳೆದರೂ ಮೇವಿಗೆ ಪರದಾಡಲೇ ಬೇಕಾಗುತ್ತದೆ. ಒಂದು ಎಕರೆ ರಾಗಿ ಬೆಳೆಯಲು ₹ 20 ಸಾವಿರ ವೆಚ್ಚ ಮಾಡಿದ್ದಲ್ಲದೆ, ಮನೆಮಂದಿಯೆಲ್ಲ ಕಷ್ಟಪಟ್ಟಿದ್ದೇವು, ಹುಲ್ಲು, ರಾಗಿ ಸೇರಿ ₹ 50 ಸಾವಿರ ಆದಾಯದ ನಿರೀಕ್ಷೆಯಲ್ಲಿದ್ದೇವು’ ಎಂದು ರುದ್ರೇಗೌಡ ವಿವರಿಸಿದರು.

ಮೋಡದ ವಾತವರಣಕ್ಕೆ ಅವರೆ, ತೊಗರಿ ಬೆಳೆಗಳಿಗೂ ಹೊಡೆತ ಬೀಳಲಿದೆ. ಹೂವಾದ ಬೆಳೆ ಕಾಯಿಕಟ್ಟದೆ ಉದುರಿ ಹೋಗುವ ಸಾಧ್ಯತೆ ಇದೆ. ಬೀಳುವ ಮಳೆ ಕೆರೆ ಕಟ್ಟೆಯನ್ನಾದರೂ ತುಂಬಿಸಿದರೆ ಅಂತರ್ಜಲ ಹೆಚ್ಚುತ್ತದೆ. ಆಗ ನಷ್ಟವನ್ನು ಹೇಗಾದರೂ ಸಹಿಸಿಕೊಳ್ಳಬಹುದು ಎಂಬ ಮಾತು ಬಹುತೇಕ ರೈತರಿಂದ ಕೇಳಿ ಬರುತ್ತಿದೆ.
ಎಚ್.ಎಸ್‌.ಅನಿಲ್‌ ಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT