ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಕಣ್ಗಾವಲಿಗೆ ಜಾರಿದ ಕೊಡಗು

Last Updated 9 ನವೆಂಬರ್ 2017, 8:41 IST
ಅಕ್ಷರ ಗಾತ್ರ

ಮಡಿಕೇರಿ: ಮತೀಯ ವಿಚಾರದಲ್ಲಿ ಅತಿಸೂಕ್ಷ್ಮ ಜಿಲ್ಲೆ ಎನಿಸಿರುವ ಕೊಡಗಿನಲ್ಲಿ ಈ ಬಾರಿಯೂ ನ. 10ರ ಟಿಪ್ಪು ಜಯಂತಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ, ಬಜರಂಗದಳ, ವಿಶ್ವ ಹಿಂದೂ ಪರಿಷತ್‌, ಹಿಂದೂ ಜಾಗರಣಾ ವೇದಿಕೆ ಹಾಗೂ ಕೊಡವ ಸಮಾಜ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿ, ಜಯಂತಿ ಕೈಬಿಡಲು ಮನವಿ ಮಾಡಿವೆ.

ಜಿಲ್ಲೆಯ ಜನರ ಭಾವನೆಗಳಿಗೆ ವಿರುದ್ಧವಾಗಿರುವ ಟಿಪ್ಪು ಜಯಂತಿಯ ಆಚರಣೆ ಬೇಡವೆಂದು ಪಟ್ಟು ಹಿಡಿದಿರುವುದು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ತೀವ್ರ ತಲೆನೋವಾಗಿದೆ. 2015ರ ನ. 10ರಂದು ಜಿಲ್ಲೆಯಲ್ಲಿ ನಡೆದಿದ್ದ ಟಿಪ್ಪು ಜಯಂತಿಯು ಕಹಿಘಟನೆಗಳಿಗೆ ಕಾರಣವಾಗಿತ್ತು. ಕಳೆದ ವರ್ಷ ಪೊಲೀಸ್‌ ಭದ್ರತೆಯಲ್ಲಿ ಶಾಂತಿಯುತವಾಗಿ ಆಚರಣೆ ನಡೆದಿತ್ತು. ಈ ಬಾರಿ ಮತ್ತೆ ಆತಂಕದ ಸ್ಥಿತಿಯಿದೆ. ಕಿಡಿಗೇಡಿಗಳು ಶಾಂತಿ ಕದಡುವ ಸಾಧ್ಯತೆಯಿದ್ದು ಪೊಲೀಸರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

ಉತ್ತರ ಕೊಡಗು ಭಾಗಕ್ಕಿಂತಲೂ ದಕ್ಷಿಣ ಕೊಡಗು ವ್ಯಾಪ್ತಿಯ ವಿರಾಜಪೇಟೆ, ಪೊನ್ನಂಪೇಟೆ, ಗೋಣಿಕೊಪ್ಪಲಿನಲ್ಲಿ ವಿರೋಧದ ಧ್ವನಿಗಳು ಜೋರಾಗಿವೆ. ಪೊಲೀಸರ ಅನುಮತಿ ನಿರಾಕರಣೆ ನಡುವೆಯೂ ಬುಧವಾರ ಪೊನ್ನಂಪೇಟೆಯಲ್ಲಿ ನಡೆದ ಪ್ರತಿಭಟನೆಗೆ ದೊಡ್ಡಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.

ಚೆಕ್‌ಪೋಸ್ಟ್‌ ಆರಂಭ: ಕಳೆದ ಎರಡು ವರ್ಷಕ್ಕಿಂತಲೂ ಈ ಬಾರಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಇಡೀ ಕೊಡಗು ಪೊಲೀಸರ ಕಣ್ಗಾವಲಿನಲ್ಲಿದೆ. 2015ರಲ್ಲಿ ನಡೆದಿದ್ದ ಗಲಭೆಗೆ ಹೊರ ರಾಜ್ಯದಿಂದ ಬಂದವರು ಕಾರಣವೆಂಬ ಆರೋಪ ಕೇಳಿಬಂದಿತ್ತು. ಹೀಗಾಗಿ, ಹಿರಿಯ ಪೊಲೀಸ್‌ ಅಧಿಕಾರಿಗಳ ತಂಡವು ಕೇರಳದ ಕಣ್ಣೂರು, ಕಾಸರಗೋಡು ಚೆಕ್‌ಪೋಸ್ಟ್‌ಗಳನ್ನು ಪರಿಶೀಲಿಸಿದೆ. ಆ ರಾಜ್ಯದ ಹಿರಿಯ ಅಧಿಕಾರಿಗಳೊಂದಿಗೂ ಭದ್ರತೆ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಲ್ಲೆಯ ಗಡಿಭಾಗಗಳಾದ ಮಾಲ್ದಾರೆ, ಕುಟ್ಟ, ಆನೆಚೌಕೂರು, ಸಿದ್ದಾಪುರ, ಕೊಪ್ಪ, ಶಿರಂಗಾಲ, ಕೊಡ್ಲಿಪೇಟೆ, ಶನಿವಾರಸಂತೆ, ಸಂಪಾಜೆಯಲ್ಲಿ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಒಳ ಪ್ರವೇಶಿಸುವ ಹಾಗೂ ಹೊರಹೋಗುವ ವಾಹನಗಳನ್ನು ತಪಾಸಣೆ ನಡೆಸಿ, ಚಾಲಕರ ವಿಳಾಸ ಬರೆದಿಟ್ಟುಕೊಳ್ಳುವ ಕೆಲಸ ನಡೆಯುತ್ತಿದೆ. ತಮಿಳುನಾಡಿನ ಕ್ಷಿಪ್ರ ಕಾರ್ಯಾಚರಣೆ ಪಡೆಯು ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದು, ಹೆಚ್ಚುವರಿಯಾಗಿ 249 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಹೋಮ್‌ಸ್ಟೇ, ವಸತಿ ಗೃಹಗಳಿಗೆ ಅಚರಿಚಿತರು ಬಂದರೆ ಹತ್ತಿರದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲು ಕೋರಲಾಗಿದೆ.

ಬಹಿರಂಗ ಸಭೆಗಳಿಗೆ ಅನುಮತಿ ನಿರಾಕರಿಸಲಾಗಿದೆ. ಜಿಲ್ಲಾಡಳಿತ ಹೊರತು ಪಡಿಸಿ ಬೇರೆಲ್ಲೂ ಟಿಪ್ಪು ಜಯಂತಿ ಆಚರಿಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯು ಶಾಂತಿ ಕದಡದಂತೆ ಎಚ್ಚರಿಕೆ ವಹಿಸಿದ್ದು ಕಾರ್ಯತಂತ್ರ ರೂಪಿಸಿದೆ. ಆಹ್ವಾನ ಪತ್ರಿಕೆ ಮುದ್ರಣಗೊಂಡಿದ್ದರೂ ಅದನ್ನು ಬಹಿರಂಗಪಡಿಸಿಲ್ಲ. ಹಿರಿಯ ಅಧಿಕಾರಿಗಳು ಜಿಲ್ಲೆಯ ಪೊಲೀಸರೊಂದಿಗೆ ಸಭೆ ನಡೆಸಿ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಿದ್ದಾರೆ.

‘ಅಶಾಂತಿ ವಾತಾವರಣ ನಿರ್ಮಾಣವಾದರೆ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಹದಗೆಡಲಿದೆ. ಹೋಮ್‌ಸ್ಟೇ, ರೆಸಾರ್ಟ್‌ ನಡೆಸುವವರ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಪ್ರವಾಸೋದ್ಯಮಕ್ಕೆ ತೊಂದರೆಯಾಗಲಿದೆ. ವಂದತಿಗಳಿಗೆ ಅವಕಾಶ ನೀಡದೇ ಸಹಕಾರ ನೀಡಬೇಕು’ ಎಂದು ಜಿಲ್ಲಾಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT