ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಂಬಹಳ್ಳಿ ಕೆರೆಗೆ ಕಸದ ರಾಶಿ

Last Updated 9 ನವೆಂಬರ್ 2017, 9:37 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದ ಕೆರೆಯ ಏರಿಯ ಮೇಲೆ ರಾಶಿ ರಾಶಿ ಕಸವನ್ನು ಸುರಿಯಲಾಗುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಎದುರಾಗಿದೆ. ಈಗಾಗಲೇ ಏತ ನೀರಾವರಿ ಹಾಗೂ ಮಳೆಯಿಂದಾಗಿ ಕೆರೆ ತುಂಬಿ ತುಳುಕುತ್ತಿದೆ. ಈ ಕಸ ಸೇರಿ ನೀರು ಕಲುಷಿತವಾಗುವ ಭಯವೂ ಸಾರ್ವಜನಿಕರನ್ನು ಕಾಡುತ್ತಿದೆ.

ಎರಡು ವರ್ಷಗಳ ಹಿಂದೆ ತುಂಬಿದ್ದ ಕೆರೆ ಈಗ ಮತ್ತೆ ಭರ್ತಿಯಾಗಿ ಕೋಡಿ ಹರಿದಿದೆ. ಕೆರೆಯ ಏರಿ 2 ಕಿ.ಮೀ.ಗಿಂತಲೂ ಉದ್ದವಾಗಿರುವ ಕಾರಣ ಗ್ರಾಮ ಪಂಚಾಯಿತಿಯವರೇ ಏರಿಯ ಮೇಲೆ ರಾಶಿ ರಾಶಿ ಕಸ ಸುರಿಯುತ್ತಿದಾರೆ. ಈ ಕಸ ಏರಿಯ ತುಂಬೆಲ್ಲಾ ಹರಡಿ ಕಲುಷಿತ ವಾತಾವರಣ ಹುಟ್ಟುಹಾಕಿದೆ ಎಂದು ಗ್ರಾಮಸ್ಥರಾದ ಕೆ.ಎಂ.ಮಂಚೇಗೌಡ, ಅಶೋಕ್, ಅಂಜನ್ ಆರೋಪಿಸುತ್ತಾರೆ.

ಕೆರೆಯ ರಸ್ತೆ ಚನ್ನಪಟ್ಟಣ ಹಲಗೂರು ಮುಖ್ಯ ರಸ್ತೆಯಾಗಿದ್ದು, ಇಲ್ಲಿ ನೂರಾರು ಮಂದಿ ದಿನನಿತ್ಯ ಓಡಾಡುತ್ತಾರೆ. ಅವರೂ ಈ ಜಾಗದಲ್ಲಿ ಮೂಗು ಮುಚ್ಚಿಕೊಳ್ಳುವಂತಾಗಿದೆ ಎಂದು ಮಂಗಾಡಹಳ್ಳಿ ಎಂ.ಜೆ.ಮಹೇಶ್, ಪುಟ್ಟಸ್ವಾಮಿ, ಕೆ.ಪಿ.ಮಹೇಂದ್ರ, ಸ್ವರೂಪ್, ಕೆ.ಸಿ.ಕಾರ್ತಿಕ್, ಕೆ.ಪಿ.ಮಹೇಶ್, ಈರೇಗೌಡ ವಿವರಿಸುತ್ತಾರೆ.

ಜೊತೆಗೆ ಕೆಲವು ಕೋಳಿ ಅಂಗಡಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವೆಲ್ಲವೂ ಇಲ್ಲಿಗೆ ರವಾನೆಯಾಗುತ್ತಿದೆ. ಇದರಿಂದ ಕೆರೆಯ ಸೌಂದರ್ಯವೇ ನಾಶವಾಗಿದೆ. ಕೋಳಿ ತ್ಯಾಜ್ಯವನ್ನು ತಿನ್ನಲು ಬರುವ ಬೀದಿನಾಯಿಗಳೂ ಇಲ್ಲಿ ಹೆಚ್ಚಿವೆ.

ಇಲ್ಲಿ ಮೇವು ಮೇಯಲು ಬರುವ ಜಾನುವಾರುಗಳು, ತಮ್ಮ ಹೊಲ ತೋಟಗಳಿಗೆ ಹೋಗುವ ಸಾರ್ವಜನಿಕರು ಒಂದೆಡೆ ಮೂಗು ಮುಚ್ಚಿಕೊಂಡು ಓಡಾಡುವ ಸಂಕಷ್ಟ ಎದುರಿಸುತ್ತಾರೆ. ಇನ್ನೊಂದೆಡೆ ಬೀದಿನಾಯಿಗಳ ಕಾಟಕ್ಕೂ ಹೆದರುವಂತಾಗಿದೆ ಎಂದು ವಡ್ಡರಹಳ್ಳಿ ಮಹದೇವ, ಹೊನ್ನಿಗನಹಳ್ಳಿ ನಾಗರಾಜು, ಸಿದ್ದರಾಜು, ಬಾಚಹಳ್ಳಿ ವೆಂಕಟೇಶ್ ತಿಳಿಸುತ್ತಾರೆ.

ಈ ಬಗ್ಗೆ ಗ್ರಾಮ ಪಂಚಾಯಿತಿಯವರನ್ನು ಪ್ರಶ್ನಿಸಿದರೆ ಕಸವನ್ನು ಹಾಕಲು ಸೂಕ್ತ ಜಾಗ ಗುರ್ತಿಸಿಲ್ಲ. ಇದುವರೆಗೂ ಕೆರೆ ಖಾಲಿ ಇದ್ದ ಕಾರಣ ಕೆರೆಯ ಅಂಗಳದಲ್ಲಿ ಸುರಿಯುತ್ತಿದ್ದೆವು. ಆದರೆ ಈಗ ಕೆರೆ ತುಂಬಿರುವ ಕಾರಣ ವಿಧಿ ಇಲ್ಲದೆ ಕೆರೆಯ ಏರಿಯ ಮೇಲೆ ಸುರಿಯುವಂತಾಗಿದೆ ಎಂದು ಉತ್ತರಿಸುತ್ತಾರೆ ಎಂದು ಗ್ರಾಮಸ್ಥರು ದೂರುತ್ತಾರೆ.
ಗ್ರಾಮ ಪಂಚಾಯಿತಿ ಪಿಡಿಒ ಶಿವಲಿಂಗಯ್ಯ ಅವರನ್ನು ಪ್ರಶ್ನಿಸಿದರೆ, ಕಸ ಸುರಿಯಲು ಸೂಕ್ತ ಜಾಗ ಹುಡುಕಲಾಗುತ್ತಿದೆ.

ಸರ್ಕಾರಿ ಜಾಗವನ್ನು ಸರ್ವೇ ಮಾಡಿಕೊಡುವುದಾಗಿ ತಹಶೀಲ್ದಾರ್ ತಿಳಿಸಿದ್ದಾರೆ. ಅವರು ಜಾಗವನ್ನು ಗುರುತಿಸಿ ಕೊಟ್ಟರೆ ಕಸದ ಸಮಸ್ಯೆ ದೂರವಾಗುತ್ತದೆ. ಕೆರೆಯ ಏರಿ ಮೇಲೆ ಸುರಿದಿರುವ ಕಸವನ್ನೂ ತೆಗೆಸುತ್ತೇವೆ ಎಂದು ಉತ್ತರಿಸಿದರು.

ಭರವಸೆ ನೀಡಿದ್ದರು: ಕೆಲವು ದಿನಗಳ ಹಿಂದೆ ನಡೆದಿದ್ದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಸಿ.ಪಿ.ಯೊಗೇಶ್ವರ್ ಅವರಲ್ಲಿ ಈ ಸಮಸ್ಯೆಯನ್ನು ತಿಳಿಸಲಾಗಿತ್ತು. ಅವರು ಸ್ಥಳದಲ್ಲೇ ಇದ್ದ ತಹಶೀಲ್ದಾರ್ ಹಾಗೂ ಪಿಡಿಒ ಅವರನ್ನು ಈ ಸಮಸ್ಯೆ ಶೀಘ್ರ ಪರಿ\ಹರಿಸುವಂತೆ ಸೂಚನೆ ನೀಡಿದ್ದರು. ಆದರೆ ಅದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಮುಖಂಡ ಕೆ.ಎಸ್.ನಾಗರಾಜು ದೂರಿದರು.

ತಹಶೀಲ್ದಾರ್ ಹಾಗೂ ಪಿಡಿಒ ಅವರು, ಶೀಘ್ರವೇ ಕಸವನ್ನು ಕೆರೆಯ ಏರಿಯಿಂದ ವಿಲೇವಾರಿ ಮಾಡಲಾಗುವುದು. ಕಸವನ್ನು ಹಾಕಲು ಬೇರೆ ಜಾಗವನ್ನು ಗುರ್ತಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇದರ ಬಗ್ಗೆ ಗಮನ ಹರಿಸಲಿಲ್ಲ ಎಂದು ಅವರು ತಿಳಿಸಿದರು.

ಗ್ರಾಮದ ಹೊರವಲಯದಲ್ಲಿ ಸಾಕಷ್ಟು ಸರ್ಕಾರಿ ಜಮೀನು ಇದ್ದು, ಈ ಕಸವನ್ನು ಹಾಕಲು ಆದಷ್ಟು ಶೀಘ್ರ ಜಾಗ ಗುರುತಿಸಬೇಕು.ಕೆರೆಯನ್ನು ರಕ್ಷಿಸಬೇಕು. ಕಸದ ವಿಷಕಾರಿ ಅಂಶ ನೀರಿಗೆ ಸೇರಿ ಸಾಂಕ್ರಾಮಿಕ ರೋಗ ಹರಡುವ ಮೊದಲು ಗ್ರಾಮ ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕು. ಆದಷ್ಟು ಶೀಘ್ರ ಕಸದ ಸಮಸ್ಯೆಗೆ ಮುಕ್ತಿ ನೀಡದಿದ್ದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT