ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಮೊಗದಲ್ಲಿ ನಗು ತಾರದ ಮಳೆ!

Last Updated 9 ನವೆಂಬರ್ 2017, 9:56 IST
ಅಕ್ಷರ ಗಾತ್ರ

ಶಿರ್ವ: ‘ಕರಾವಳಿಯ ಕೆಲವೆಡೆ ಕಳೆದೆ ರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ತೊಂದರೆ ಅನುಭವಿಸುವಂತಾಗಿದೆ. ಇದು ಭತ್ತ ಕಟಾವು ಮಾಡುವ ಸಮಯ. ಈ ಕೆಲಸದಲ್ಲಿ ತೊಡಗಿಕೊಂಡಿರುವ ಅನೇಕ ಕೃಷಿಕರಿಗೆ ಹಠಾತ್ತನೆ ಸುರಿಯುವ ಮಳೆ ಆತಂಕ ತಂದೊಡ್ಡುತ್ತಿದೆ’ ಎನ್ನುವಾಗ ಕಟಪಾಡಿಯ ಕೃಷಿಕ ಅಶೋಕ್ ಪೂಜಾರಿ ಏಣಗುಡ್ಡೆ ಅವರ ಮುಖದಲ್ಲೂ ಆತಂಕ ಮನೆ ಮಾಡಿತ್ತು.

ಕರಾವಳಿಯಾದ್ಯಂತ ದೀಪಾವಳಿ ಹಬ್ಬದ ಬಳಿಕ ಭತ್ತದ ಕಟಾವು ಕಾರ್ಯ ಗಳು ಬಿರುಸುಗೊಳ್ಳುತ್ತವೆ. ಆದರೆ, ಮಳೆಯ ಕಣ್ಣಾಮುಚ್ಚಾಲೆ ಆಟದಿಂದಾಗಿ ರೈತರು ಭತ್ತ ಕಟಾವು ಮಾಡಲಾಗದೆ ದಿನದೂಡುವಂತಾಗಿದೆ.

ಮಳೆ ಬಿಡುವು ಕೊಟ್ಟ ಸಮಯದಲ್ಲಿ ಬಿರುಸಿನಿಂದ ಭತ್ತದ ಕಟಾವು ಮಾಡಿದವರು ದಿಢೀರ್‌ ಅಂತ ಸುರಿಯುವ ಮಳೆ ಯಿಂದಾಗಿ ಗದ್ದೆಯಿಂದ ಭತ್ತದ ಪೈರು ಸಾಗಿಸಲು ಸಾಧ್ಯವಾಗದೇ ಪರದಾ ಡುತ್ತಿದ್ದಾರೆ. ಮಳೆಗೆ ಹೆದರಿ ಭತ್ತದ ಕಟಾವು ಯಂತ್ರಗಳನ್ನು ಬಳಸಿ ಕಟಾವು ಕೆಲಸಗಳನ್ನು ನಡೆಸಲು ಮುಂದಾಗಿದ್ದರೂ ಕೂಡ ಕರಾವಳಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಯಂತ್ರಗಳು ಲಭ್ಯವಿರದ ಕಾರಣ ಕೂಲಿಯಾಳುಗಳನ್ನೇ ಅವಲಂಬಿಸುವಂತಾಗಿದೆ.

ಬೃಹತ್ ಕಟಾವು ಯಂತ್ರಗಳು ನೇರವಾಗಿ ಗದ್ದೆ ಪ್ರದೇಶಗಳಿಗೆ ಸಾಗಿ ಬರಲು ಸಂಪರ್ಕ ವ್ಯವಸ್ಥೆಯಿಲ್ಲದ ಗ್ರಾಮೀಣ ಭಾಗಗಳಲ್ಲಿ ದಿನಗೂಲಿ ವಲಸೆ ಕೂಲಿಕಾರ್ಮಿಕರೇ ಕೃಷಿಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ಕರಾವಳಿಯ ಹೆಚ್ಚಿನ ಕೃಷಿಕರು ಕೂಲಿಯಾಳುಗಳ ಸಮಸ್ಯೆಯಿಂದಾಗಿ ಬಾಗಲಕೋಟೆ, ವಿಜಾಪುರದ ಮಂದಿಯಿಂದ ಗದ್ದೆ ಕೆಲಸಗಳನ್ನು ಮಾಡಿಸಬೇಕಾಗಿದೆ. ಭತ್ತದ ನಾಟಿ ಕೆಲಸ ದಿಂದ ಆರಂಭವಾಗಿ, ಭತ್ತದ ಕೊಯ್ಲು, ಪೈರಿನಿಂದ ಭತ್ತ ಬೇರ್ಪಡಿಸಲು ಕೂಡಾ ಅವರನ್ನೇ ಅವಲಂಬಿಸಬೇಕಿದೆ. ಇದೀಗ ಹೊತ್ತಲ್ಲದ ಹೊತ್ತಿಗೆ ಅಂದರೆ ಭತ್ತದ ಕಟಾವಿನ ಸಂದರ್ಭ ಮಳೆ ಸುರಿಯುತ್ತಿರುವುದರಿಂದ ಕೃಷಿಕ ರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಕೆಲವೆಡೆಗಳಲ್ಲಿ ಮಂಗಳ ವಾರ, ಬುಧವಾರ ಸಂಜೆ ವೇಳೆ ಬಿರುಸಿನ ಮಳೆ ಸುರಿದ ಕಾರಣ ಶಿರ್ವ, ಕಟಪಾಡಿ ಪರಿಸರದಲ್ಲಿ ಗದ್ದೆಯಲ್ಲಿ ನೀರುನಿಂತಿದೆ. ಮಾತ್ರವಲ್ಲದೆ ಭತ್ತದ ಕೊಯ್ಲು ಮಾಡಿದ ಪೈರನ್ನು ಗದ್ದೆಯಿಂದ ಮೇಲೆ ತರಲಾಗದೆ ಸಮಸ್ಯೆಯಾಗಿದೆ.

ಮಳೆನೀರು ತುಂಬಿಕೊಂಡ ಭತ್ತದ ಪೈರು ಭಾರವಾಗುವುದರಿಂದ ಕೂಲಿಯಾಳುಗಳು ಅದನ್ನು ಹೊತ್ತು ತರಲು ಸಾಧ್ಯವಾಗದೆ ಗದ್ದೆಯಲ್ಲೇ ಉಳಿಸ ಬೇಕಾದ ಅನಿವಾರ್ಯತೆ ಎದುರಾಗಿದೆ. ಮಳೆನೀರಿನಲ್ಲಿ ನೆಂದ ಭತ್ತದ ತೆನೆ ಸಹಿತ ಪೈರನ್ನು ಮತ್ತೆ ಸಂಪೂರ್ಣ ಬಿಸಿಲಿನಲ್ಲಿ ಒಣಗಿಸಿದ ಬಳಿಕವೇ ಮೇಲೆ ತರಬೇಕಾಗಿದೆ. ನೀರಿನಿಂದ ಒದ್ದೆಯಾದ ಪೈರನ್ನು ಹೊಡಿಮಂಚಕ್ಕೆ ಬಡಿದು ಬೇರ್ಪಡಿಸುವುದು ಕೂಡಾ ಬಲು ಕಷ್ಟದ ಕೆಲಸವಾಗಿದೆ. ಗದ್ದೆಯ ಹುಣಿಗಳಲ್ಲಿ ಹರಡಿಕೊಂಡು ಅವುಗಳನ್ನು ಒಣಗಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಮಳೆ ನಿರಂತರವಾಗಿ ಸುರಿದಲ್ಲಿ ಕಟಾವು ಮಾಡಿ ಗದ್ದೆಯಲ್ಲೇ ಉಳಿಸಿರುವ ಪೈರಿನಲ್ಲಿ ಭತ್ತಮತ್ತೆ ಮೊಳೆಕೆಯೊಡೆಯುವ ಸಾಧ್ಯತೆಗಳಿವೆ. ಹಾಗಾಗಿ ಭತ್ತ ಕೊಯ್ಲು ಮಾಡಿದ ದಿನವೇ ಬೇರ್ಪಡಿಸಿ, ಕೃಷಿಕರ ಮನೆ ಸೇರಿದರೆ ಬಚಾವ್ ಎಂದು ಹೇಳುತ್ತಾರೆ ಇಲ್ಲಿನ ಹಿರಿಯ ಕೃಷಿಕರು.

ಪ್ರಕಾಶ ಸುವರ್ಣ ಕಟಪಾಡಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT