ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭದ್ರತೆಯ ಜವಾಬ್ದಾರಿ ಪೊಲೀಸರದು’

Last Updated 9 ನವೆಂಬರ್ 2017, 9:59 IST
ಅಕ್ಷರ ಗಾತ್ರ

ವಿಜಯಪುರ: ‘ಸಾರ್ವಜನಿಕರ ಆಸ್ತಿ- ರಕ್ಷಣೆ, ಸುಭದ್ರತೆಯ ಜವಾಬ್ದಾರಿ ಆರಕ್ಷಕರ ಮೇಲಿದೆ’ ಎಂದು ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಕೆ.ರಾಮಚಂದ್ರರಾವ್ ಹೇಳಿದರು. ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಬುಧವಾರ ನಡೆದ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 17ನೇ ಹಂತದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಮಾತನಾಡಿದ ಅವರು ‘ಕಷ್ಟದಲ್ಲಿದ್ದು ನ್ಯಾಯ ಕೋರಿ ಬರುವ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಿ, ನ್ಯಾಯ ಒದಗಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಇದೀಗ ಪ್ರಶಿಕ್ಷಣ ಪಡೆದಿರುವ ಪ್ರಶಿಕ್ಷಣಾರ್ಥಿಗಳು, ಪೂರ್ಣ ಪ್ರಮಾಣದ ಪೊಲೀಸ್ ಸೇವೆಗೆ ಸನ್ನದ್ಧರಾಗಿದ್ದು, ಪೊಲೀಸ್ ಧರ್ಮ ನಿಭಾಯಿಸಬೇಕು. ಸಾರ್ವಜನಿಕರ ಸೇವೆಗಾಗಿ ಪೂರ್ಣ ಪ್ರಮಾಣದ ತರಬೇತಿ ಸಹ ನೀಡಲಾಗಿದ್ದು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಬಡವ–ಶ್ರೀಮಂತರೆಂದು ಭೇದ–ಭಾವ ಮಾಡದೆ ಸಕಾಲಕ್ಕೆ ಸಾರ್ವಜನಿಕರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅನ್ಯಾಯಕ್ಕೊಳಗಾಗಿ ನ್ಯಾಯ ಕೋರಿ ಬರುವ ಸಾರ್ವಜನಿಕರಿಂದ ಸಕಾಲಕ್ಕೆ ದೂರು ದಾಖಲಿಸಿಕೊಳ್ಳಲಾಗುತ್ತಿಲ್ಲ ಎಂಬ ಏಕೈಕ ದೂರು ಸದಾ ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ತಕ್ಷಣ ದೂರು ಸ್ವೀಕರಿಸಿ ಅವರಿಗೆ ಸ್ಪಂದಿಸಿ. ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಿ’ ಎಂದು ಐಜಿಪಿ ಸೇವೆಗೆ ಸೇರಿದ ನೂತನ ಆರಕ್ಷಕರಿಗೆ ಸಲಹೆ ನೀಡಿದರು.

‘ರಾಜ್ಯಾಂಗವೇ ಪವಿತ್ರ ಗ್ರಂಥವೆಂದು ನಂಬುವ ಜತೆಗೆ ಸಂವಿಧಾನಬದ್ಧವಾಗಿ ಸೇವೆ ಸಲ್ಲಿಸಬೇಕು. ಅದರಂತೆ ಪ್ರಶಿಕ್ಷಣಾರ್ಥಿಗಳು ರಾಷ್ಟ್ರಧ್ವಜ, ರಾಜ್ಯಾಂಗಕ್ಕೆ ಸಾಕ್ಷಿಯಾಗಿ ಪ್ರತಿಜ್ಞೆ ಮಾಡಿದ್ದು, ಜೀವನ ಪೂರ್ಣ ಪ್ರಾಮಾಣಿಕ ಸೇವೆ ಸಲ್ಲಿಸುವಂತೆ’ ಕಿವಿಮಾತು ಹೇಳಿದರು.

ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಡಾ.ಶಿವಕುಮಾರ ಗುಣಾರೆ ಮಾತನಾಡಿ ‘17ನೇ ತಂಡದ ಒಟ್ಟು 107 ಎಪಿಸಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಹೊಸ ಪಠ್ಯಕ್ರಮಕ್ಕೆ ಅನುಸಾರವಾಗಿ ಕಾನೂನು ಎಂಐಆರ್‌ಬಿ, ಪೊಲೀಸ್ ಕರ್ತವ್ಯಗಳು, ಆಡಳಿತ ಮತ್ತು ಸಂಘಟನೆ, ಮಾನವೀಯ ವರ್ತನೆ, ಕಂಪ್ಯೂಟರ್ ಮತ್ತು ವೈರ್‌ಲೆಸ್ ವಿಷಯಗಳ ಬಗ್ಗೆ ನುರಿತ ವಕೀಲರು, ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳಿಂದ ಒಳಾಂಗಣ ತರಬೇತಿ ನೀಡಲಾಗಿದೆ. ಅದರಂತೆ ಹೊರಾಂಗಣ ತರಬೇತಿ ಸಹ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‌ ಕುಮಾರ್‌ ಆರ್‌.ಜೈನ್ ಮಾತನಾಡಿದರು. ಒಳಾಂಗಣ ವಿಷಯದಲ್ಲಿ, ಗುರಿ ಪರೀಕ್ಷೆಯಲ್ಲಿ, ಹೊರಾಂಗಣ ವಿಷಯದಲ್ಲಿ, ಪ್ರಥಮ, ದ್ವಿತೀಯ, ತೃತೀಯ, ಸರ್ವೋತ್ತಮ ಪ್ರಶಸ್ತಿ, ಡಿಜಿಪಿ ಟ್ರೋಫಿಗಳನ್ನು ಇದೇ ಸಂದರ್ಭದಲ್ಲಿ ಬೆಳಗಾವಿ ವಲಯ ಐಜಿಪಿ ಕೆ.ರಾಮಚಂದ್ರರಾವ್ ವಿತರಿಸಿದರು. ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳ ಕವಾಯತು ಪರಿವೀಕ್ಷಣೆ, ಗೌರವ ವಂದನೆ ಸ್ವೀಕಾರ, ರಾಷ್ಟ್ರ ಹಾಗೂ ಪೊಲೀಸ್ ಧ್ವಜಗಳ ಸಮ್ಮುಖದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT