ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌–ಕಮ್ಯುನಿಸ್ಟರಿಂದ ಕರಾಳ ದಿನಾಚರಣೆ; ಬಿಜೆಪಿ ವಿಜಯೋತ್ಸವ

Last Updated 9 ನವೆಂಬರ್ 2017, 10:02 IST
ಅಕ್ಷರ ಗಾತ್ರ

ವಿಜಯಪುರ: ಕೇಂದ್ರ ಸರ್ಕಾರ ವರ್ಷದ ಹಿಂದೆ (ನ 8) ನೋಟು ರದ್ದುಗೊಳಿಸಿದ್ದನ್ನು ಖಂಡಿಸಿ ನಗರದ ಹೃದಯಭಾಗ ಗಾಂಧಿ ವೃತ್ತದಲ್ಲಿ ಬುಧವಾರ  ಕಾಂಗ್ರೆಸ್‌, ಎಸ್‌ಯುಸಿಐ, ಸಿಪಿಐ ಕಾರ್ಯಕರ್ತರು ಕರಾಳ ದಿನ ಆಚರಿಸಿದರೆ, ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ನೆರೆದು ಪ್ರತಿಭಟನಾ ಜಾಥಾ ನಡೆಸಿ, ಕೇಂದ್ರದ ನಡೆಯನ್ನು ಖಂಡಿಸಿದರು. ಎಸ್‌ಯುಸಿಐ, ಸಿಪಿಐ ಕಾರ್ಯಕರ್ತರು ಜಂಟಿಯಾಗಿ ಗಾಂಧಿವೃತ್ತದಲ್ಲಿ ಕೇಂದ್ರದ ನಿಲುವನ್ನು ಖಂಡಿಸಿ ಪ್ರತಿಭಟಿಸಿದರು.ಬಿಜೆಪಿ ಕಾರ್ಯಕರ್ತರು ಪರಸ್ಪರ ಸಿಹಿ ವಿತರಿಸಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಕೊನೆಯಲ್ಲಿ ವೃತ್ತ ಸ್ವಚ್ಛಗೊಳಿಸಿ ತೆರಳಿದ್ದು ವಿಶೇಷವಾಗಿತ್ತು.

ಕಪ್ಪು ಬಣ್ಣದ ಬಲೂನ್ ಹಾರಿಸಿದ ಕಾಂಗ್ರೆಸ್ಸಿಗರು: ಪ್ರಧಾನಮಂತ್ರಿ ನರೇಂದ್ರ ಮೋದಿ ₹ 500, 1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ, ಜನ ಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದರು. ಇಂದಿಗೂ ಸಾಮಾನ್ಯ ಜನರು ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲಾಗಿಲ್ಲ ಎಂದು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಎಐಸಿಸಿ ಕಾರ್ಯದರ್ಶಿ, ಬೆಳಗಾವಿ ವಿಭಾಗದ ಕಾಂಗ್ರೆಸ್‌ ಉಸ್ತುವಾರಿ ಮಾಣಿಕ್ಕಂ ಠಾಕೂರ್‌ ಮಾತನಾಡಿ ‘ನೋಟು ರದ್ದತಿಯಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ವ್ಯಾಪಾರಿ ಸಮೂಹ ತತ್ತರಿಸುತ್ತಿದೆ. ಸಾಮಾನ್ಯ ಜನರು ಇಂದಿಗೂ ನಗದಿಗಾಗಿ ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ ಆರ್ಥಿಕ ಪರಿಸ್ಥಿತಿ ಪಾತಾಳಕ್ಕೆ ಕುಸಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ, ಕರ್ನಾಟಕ ಸಾಬೂನು -ಮಾರ್ಜಕ ನಿಗಮದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಲಜಾ ನಾಯ್ಕ್‌, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

₹ 15 ಲಕ್ಷ ಎಲ್ಲಿ ?: ಕೇಂದ್ರದ ನೋಟು ರದ್ಧತಿ ನಿರ್ಧಾರದಿಂದ ದೇಶದ ಜನ ಸಾಮಾನ್ಯರು ಇಂದಿಗೂ ಪರದಾಡುತ್ತಿದ್ದಾರೆ ಎಂದು ದೂರಿ ಎಸ್‌ಯುಸಿಐ ಕಮ್ಯುನಿಸ್ಟ್‌ ಹಾಗೂ ಸಿಪಿಐ ಕಾರ್ಯಕರ್ತರು ಗಾಂಧಿವೃತ್ತದಲ್ಲಿ ಜಂಟಿಯಾಗಿ ಪ್ರತಿಭಟಿಸಿದರು.

‘ಕೇಂದ್ರದ ನಿರ್ಧಾರದಿಂದ ದೇಶದ ಆರ್ಥಿಕತೆ ಹಾಳಾಗಿದೆ. ರೈತರು ಬೆಳೆದ ಉತ್ಪನ್ನಕ್ಕೆ ಇಂದಿಗೂ ಕನಿಷ್ಠ ಬೆಲೆ ಸಿಗುತ್ತಿಲ್ಲ, ವ್ಯಾಪಾರಿ ಸಮೂಹ, ಸಣ್ಣ ಉದ್ದಿಮೆದಾರರ ಸಂಕಷ್ಟ ತಪ್ಪಿಲ್ಲ. ಸಾಮಾನ್ಯ ಜನರ ಸಬ್ಸಿಡಿ ವಾಪಸ್‌ ಪಡೆದು, ಕಾರ್ಪೊರೇಟ್‌ ಮನೆತನಗಳ ಸೇವೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಯೂರಿದೆ’ ಎಂದು ಎಸ್‌ಯುಸಿಐ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ದೂರಿದರು.

ಸಿಪಿಐ ಮುಖಂಡ ಪ್ರಕಾಶ್ ಹಿಟ್ನಳ್ಳಿ ಮಾತನಾಡಿ ‘ಯುವಕರಿಗೆ ಉದ್ಯೋಗ ಸೃಷ್ಟಿಸಲಿಲ್ಲ, ರೈತರ ಸಾಲ ಮನ್ನಾ ಮಾಡಲಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ವಾಗ್ದಾಳಿ ನಡೆಸಿದರು.

ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಎಚ್‌.ಟಿ.ಭರತಕುಮಾರ, ಶೋಭಾ, ಸುನೀಲ್, ಜ್ಯೋತಿ, ಎಚ್‌.ಗೀತಾ, ಮುತ್ತು ಚೌಧರಿ, ಕವಿತಾ, ಸುರೇಖಾ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪಟಾಕಿ ಸಿಡಿಸಿ ಸ್ವಚ್ಛಗೊಳಿಸಿದರು: ನೋಟು ರದ್ದತಿ ನಿರ್ಧಾರದ ವಿಜಯೋತ್ಸವವನ್ನು ಬಿಜೆಪಿ ಕಾರ್ಯಕರ್ತರು ಅದ್ದೂರಿಯಿಂದ ಆಚರಿಸಿದರು. ಗಾಂಧಿ ವೃತ್ತದಲ್ಲಿ ಜಮಾಯಿಸಿ ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದರು. ಸಿಹಿ ವಿತರಿಸಿ ಸಂಭ್ರಮಾಚರಣೆ ನಡೆಸಿದರು. ಎಲ್ಲವೂ ಮುಗಿದ ಬಳಿಕ ಮುಖಂಡರು, ಕಾರ್ಯಕರ್ತರು ಒಟ್ಟಾಗಿ ಸ್ವಚ್ಛ ಭಾರತ ಅಭಿಯಾನದ ಸಂಕಲ್ಪದಂತೆ ಪಟಾಕಿ ಸಿಡಿಸಿದ್ದ ಕಸವನ್ನು ಗುಡಿಸಿ ಸ್ವಚ್ಛಗೊಳಿಸಿದರು. ಈ ಸಂದರ್ಭ ‘ಮೋದಿಜಿ ತುಮ್ ಆಗೇ ಬಡೋ ಹಮ್ ತುಮಾರೆ ಸಾಥ್ ಹೈ...’ ಎಂಬ ಘೋಷಣೆ ಮುಗಿಲು ಮುಟ್ಟಿದವು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವಿಠ್ಠಲ ಕಟಕದೊಂಡ ಮಾತನಾಡಿ, ಕಪ್ಪು ಹಣ ನಿರ್ಮೂಲನೆ, ಭ್ರಷ್ಟಾಚಾರ ನಿವಾರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರಿ ಮುಖಬೆಲೆಯ ನೋಟು ರದ್ದತಿಯ ದಿಟ್ಟ ನಿರ್ಧಾರ ಕೈಗೊಂಡ ಪರಿಣಾಮ ದೇಶ ಪ್ರಸ್ತುತ ಆರ್ಥಿಕ ಸದೃಢತೆ ಸಾಧಿಸುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಸೋಮನಗೌಡ ಪಾಟೀಲ ಸಾಸನೂರ, ದಯಾಸಾಗರ ಪಾಟೀಲ, ಡಾ.ಸುರೇಶ ಬಿರಾದರ, ಪ್ರಕಾಶ ಅಕ್ಕಲಕೋಟ, ರಾಜು ಮಗಿಮಠ, ಶ್ರೀಶೈಲಗೌಡ ಬಿರಾದರ, ಶಿವರುದ್ರ ಬಾಗಲಕೋಟ, ಮಳುಗೌಡ ಪಾಟೀಲ, ಸಂಗರಾಜ ದೇಸಾಯಿ, ವಿವೇಕ ಡಬ್ಬಿ, ರವಿಕಾಂತ ಬಗಲಿ, ಭೀಮಾಶಂಕರ ಹದನೂರ, ಗೂಳಪ್ಪ ಶಟಗಾರ, ರಾಹುಲ ಜಾಧವ, ಪರಶುರಾಮ ರಜಪೂತ ವಿಜಯೋತ್ಸವದ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT