ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಆ ಎರಡಕ್ಷರ

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

‘ಆಗೆಲ್ಲಾ ಕನ್ನಡಕ್ಕೊಬ್ಬರು ಗಣಿತಕ್ಕೊಬ್ಬರು ಅಂತ ಮಾಸ್ತರ್ ಇರ್ತಿರಲಿಲ್ಲ. ಸರ್ಕಾರಿ ಶಾಲೆಗಳಲ್ಲಿ ಈಗಲೂ ಇಲ್ಲ ಬಿಡಿ. ಒಬ್ಬರೇ ಎಲ್ಲವನ್ನೂ ಹೇಳಿಕೊಡುತ್ತಿದ್ದರು. ಸಣ್ಣಬಸಪ್ಪ ಮಾಸ್ತರ್ ಅಂತ ಒಬ್ರು ಇದ್ರು. ನಾನು ಒಂದನೆ ತರಗತಿಗೆ ಸೇರುವ ಹೊತ್ತಿಗೇ ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಕಚ್ಚೆಪಂಚೆ, ಪೈಜಾಮ, ಸೈಕಲ್ ಮತ್ತು ಛತ್ರಿ ಅವರ ವಸ್ತ್ರಸಂಹಿತೆ!

ಒಂದನೇ ತರಗತಿಗೆ ನಾನು ಸೇರುವ ಹೊತ್ತಿಗೆ ಉಳಿದವರು ವರ್ಣಮಾಲೆ ಕಲಿತು ಗುಣಿತಾಕ್ಷರದತ್ತ ಹೊರಟಿದ್ದರು. ಈಗಿನಂತೆ ನಲಿ–ಕಲಿ ಇರಲಿಲ್ಲ ಬಿಡಿ. ಶಾಲೆ ಎಂದರೆ ನನಗೆ ಸಿಕ್ಕಾಪಟ್ಟೆ ಭಯ. ನಮ್ಮಪ್ಪನೆ ಕರ್ಕೊಂಡು ಬಂದು ಸಣ್ಣಬಸಪ್ಪ ಮಾಸ್ತರ್‌ಗೆ ಹೇಳಿಹೋಗಿದ್ದರು. ಮಾಸ್ತರ್ ಸ್ವಲ್ಪ ದಿನ ನನ್ನನ್ನು ಅವರ ಬಳಿಯೇ ಕೂರಿಸಿಕೊಳ್ಳುತ್ತಿದ್ದರು. ಮೊದಲ ದಿನ ಶಾಲೆಗೆ ಸೇರಿದಾಗ ನನಗೆ ಸಾಹಿತಿಗಳು ಹಾಕಿಕೊಳ್ಳುವಂತ ಉದ್ದನೆಯ ಬಟ್ಟೆಯ ಚೀಲ, ಒಂದು ಬಳಪದ ಕಲ್ಲಿನ ಸ್ಲೇಟ್ ಮತ್ತು ಒಂದು ಉದ್ದನೆಯ ಬಳಪ ಕೊಡಿಸಿದ್ದರು. ಮೊದಲ ದಿನ ಶಾಲೆಗೆ ಹೋಗುವಾಗ ಭಯದಲ್ಲಿ ನಡುಗಿಹೋಗಿದ್ದೆ.

ಸಣ್ಣಬಸಪ್ಪ ಮಾಸ್ತರ್‌ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ವಿಶ್ವಾಸ ತೋರಿಸಿದ್ದರು. ನನ್ನ ಕಲ್ಲಿನ ಸ್ಲೇಟ್ ಇಸಿದುಕೊಂಡು ಅದರ ಮೇಲೆ ಸೀಮೆ ಸುಣ್ಣದಲ್ಲಿ 'ಅ, ಆ' ಎರಡು ಅಕ್ಷರಗಳನ್ನು ಬರೆದುಕೊಟ್ಟು ತಿದ್ದಲು ಹೇಳಿದರು. ಆ ಅಕ್ಷರಗಳು ಹೇಗಿದ್ದವು ಎಂಬುದನ್ನು ಈಗಲೂ ಬರೆದು ತೋರಿಸಬಲ್ಲೆ. ಈಗೀಗ ಕೇಳಿದ ಉಪನ್ಯಾಸಗಳು ನೆನಪಿನಲ್ಲಿ ಉಳಿಯುವುದಿಲ್ಲ. ಆದರೆ ಆ ಎರಡು ಅಕ್ಷರಗಳು ಮರೆಯುವುದೇ ಇಲ್ಲ. 'ಇ, ಈ, ಉ, ಊ..' ಬರೆದುಕೊಟ್ಟ ನೆನಪು ಸ್ಪಷ್ಟವಾಗಿಲ್ಲ. ಆದರೆ ಆ ಎರಡು ಅಕ್ಷರಗಳು ಯಾಕೋ ಹಸುರಾಗಿಯೇ ಉಳಿದುಹೋಗಿವೆ!

ಅವರು ಕಲಿಸುವ ಪರಿ ಹೇಗಿತ್ತು ಅಂದರೆ ನಾನು ಎರಡೇ ದಿನಕ್ಕೆ ವರ್ಣಮಾಲೆ ಕಲಿತು, ಮೂರನೇ ದಿನಕ್ಕೆ ಗುಣಿತಾಕ್ಷರಕ್ಕೆ ಬಂದಿದ್ದೆ. ಒಂದನೆ ತರಗತಿ ಮುಗಿಯುವ ವೇಳೆಗಾಗಲೇ ನಾನು ಕನ್ನಡವನ್ನು ಚೆನ್ನಾಗಿ ಓದುತ್ತಿದ್ದೆ! ಅವರ ವ್ಯಕ್ತಿತ್ವದ ಆಕರ್ಷಣೆಯೊ, ಅವರ ಪ್ರಭಾವವೊ ಕನ್ನಡ ಅಂದ್ರೆ ನನಗೆ ಆಸಕ್ತಿಯ ವಿಷಯವಾಯಿತು. ಆ ಆಸಕ್ತಿಯೇ ಇವತ್ತು ನಾನು ಕನ್ನಡ ಮಾಸ್ತರ್ ಆಗಲು ಕಾರಣವಾಗಿರಬೇಕು.

ಮೊದಲು ಕಲಿಸಿದ ಆ ಅಕ್ಷರಗಳಂತೆ ಸಣ್ಣಬಸಪ್ಪ ಮಾಸ್ತರ್ ಕೂಡ ನನ್ನ ನೆನಪಿನಾಳದಲ್ಲಿ ಉಳಿದುಹೋಗಿದ್ದಾರೆ. ಅವರಿಗೆ ನನ್ನ ಜೀವನ ಕೃತಜ್ಞವಾಗಿದೆ.

-ಸದಾಶಿವ ಸೊರಟೂರು

ಶಿಕ್ಷಕ, ಸರ್ಕಾರಿ ಪ್ರೌಢಶಾಲೆ, ದೊಡ್ಡಬೊಮ್ಮನಹಳ್ಳಿ
ಚಿಕ್ಕಬಳ್ಳಾಪುರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT