ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆಯ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಆನೇಕಲ್ ಶಿವಣ್ಣ

**

ರಾಗಿ ಕಣಜವೆಂದೇ ಖ್ಯಾತಿ ಗಳಿಸಿದ್ದ ಆನೇಕಲ್ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ನೆಚ್ಚಿನ ತಾಣ ಎನಿಸಿದೆ. 600ಕ್ಕೂ ಹೆಚ್ಚು ಲೇಔಟ್‌ಗಳು, ನೂರಾರು ಅಪಾರ್ಟ್‌ಮೆಂಟ್‌ಗಳು ತಾಲ್ಲೂಕಿನ ವಿವಿಧೆಡೆ ತಲೆ ಎತ್ತಿವೆ. ಕಳೆದ ಒಂದು ವರ್ಷದಿಂದ ಮಾತ್ರ ರಿಯಲ್‌ ಎಸ್ಟೇಟ್‌ ಚಟುವಟಿಕೆಯಲ್ಲಿ ಮೊದಲಿನ ಚುರುಕುತನ ಕಂಡುಬರುತ್ತಿಲ್ಲ.

ತಾಲ್ಲೂಕಿನಲ್ಲಿ ನಾಲ್ಕು ಸಬ್‌ರಿಜಿಸ್ಟ್ರಾರ್ ಕಚೇರಿಗಳಿವೆ. ಈ ಕಚೇರಿಗಳಲ್ಲಿ ಜಮೀನು, ನಿವೇಶನ, ಮನೆ ಕ್ರಯಗಳ ಬಗ್ಗೆ ಮಾಹಿತಿ ಪಡೆದಾಗ ನೋಟು ಅಮಾನ್ಯೀಕರಣದ ನಂತರ ಆಸ್ತಿ ನೋಂದಣಿ ಪ್ರಮಾಣ ಅರ್ಧದಷ್ಟು ಕಡಿಮೆಯಾಗಿರುವುದು ಅರಿವಾಗುತ್ತದೆ. ಆದರೆ ಕಳೆದ ಕೆಲ ತಿಂಗಳುಗಳಿಂದೀಚೆಗೆ ವಹಿವಾಟು ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ.

'ಬ್ಯಾಂಕ್‌ಗಳು ಗೃಹಸಾಲದ ಬಡ್ಡಿದರ ಕಡಿತ ಮಾಡಿರುವುದು ಮಧ್ಯಮ ವರ್ಗದಲ್ಲಿ ಆಸಕ್ತಿ ಕುದುರಲು ಮುಖ್ಯ ಕಾರಣ ಎನಿಸಿದೆ. ಕೇಂದ್ರ ಸರ್ಕಾರ 2 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಬಡ್ಡಿ ಸಬ್ಸಿಡಿ ನೀಡುತ್ತಿರುವುದು ಸಹ ಮಧ್ಯಮ ವರ್ಗದವರ ಸ್ವಂತ ಮನೆ ಹೊಂದುವ ಆಸೆಯನ್ನು ಹೆಚ್ಚಿಸಿದೆ' ಎಂದು ಶ್ರೀಲೈನ್‌ ಪ್ರಾಪರ್ಟಿಸ್‌ ಲಿಮಿಟೆಡ್‌ನ ಮಾರಾಟ ವ್ಯವಸ್ಥಾಪಕ ಜಿ.ಎಂ.ಶಂಕರ್ ಅಭಿಪ್ರಾಯಪಡುತ್ತಾರೆ.

ಆನೇಕಲ್ ತಾಲ್ಲೂಕಿನ ಸರ್ಜಾಪುರ, ಚಂದಾಪುರ, ಎಲೆಕ್ಟ್ರಾನಿಕ್‌ಸಿಟಿ, ಜಿಗಣಿ, ಅತ್ತಿಬೆಲೆ ಪ್ರದೇಶಗಳಲ್ಲಿ ರಿಯಲ್‌ ಎಸ್ಟೇಟ್‌ ಚಟುವಟಿಕೆ ಹೆಚ್ಚು ನಡೆಯುತ್ತದೆ. ಈ ಭಾಗದಲ್ಲಿ ಅಪಾರ್ಟ್‌ಮೆಂಟ್‌ಗಳು, ನಿವೇಶನಗಳು, ವಿಲ್ಲಾಗಳು ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಬೆಳೆದಿವೆ. ಇದು ಕೈಗಾರಿಕಾ ಕೇಂದ್ರವೂ ಆಗಿರುವುದರಿಂದ ಉದ್ಯಮಿಗಳು, ಉದ್ಯೋಗಿಗಳು ತಮ್ಮ ಆಸಕ್ತಿ, ಸಾಮರ್ಥ್ಯಕ್ಕೆ ತಕ್ಕಂತೆ ಮನೆ, ನಿವೇಶನಗಳನ್ನು ಕೊಳ್ಳಲು ಮುಂದಾಗುತ್ತಿದ್ದಾರೆ.

ಆನೇಕಲ್ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಈಚೆಗೆ ಚೇತರಿಸಿಕೊಳ್ಳುತ್ತಿದೆ' ಎಂದು ಇಂಡ್ಯಾ ಪ್ರಾಪರ್ಟಿಸ್‌ನ ಮಾರಾಟ ವ್ಯವಸ್ಥಾಪಕ ಚಲಪತಿ ಅಭಿಪ್ರಾಯಪಡುತ್ತಾರೆ. ಆನೇಕಲ್ ತಾಲ್ಲೂಕಿನಲ್ಲಿ 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ₹25–30 ಲಕ್ಷಕ್ಕೆ ಲಭ್ಯವಿದೆ. 1 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ₹13–19 ಲಕ್ಷ ಬೆಲೆಬಾಳುತ್ತವೆ.

ವಹಿವಾಟು ಕಡಿಮೆಯಾಗಿದ್ದರೂ ಬಿಲ್ಡರ್‌ಗಳು ಬೆಲೆ ಕಡಿಮೆ ಮಾಡುತ್ತಿಲ್ಲ. ಒಂದು ಅಥವಾ ಎರಡು ಫ್ಲಾಟ್‌ಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಿ ಮಾಸಿಕ ಖರ್ಚು ವೆಚ್ಚಗಳನ್ನು ನಿಭಾಯಿಸುತ್ತಿದ್ದಾರೆ. ಬೆಲೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ಅವರದು. ಇನ್ನೊಂದೆಡೆ ವೇತನದಾರರು ಬೆಲೆ ಇನ್ನಷ್ಟು ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.

ವೇತನದಾರರು 1ಬಿಎಚ್‌ಕೆ, 2ಬಿಎಚ್‌ಕೆ ಕಡೆ ಗಮನ ಹರಿಸುತ್ತಾರೆ. ನಿಗದಿತ ಆದಾಯ ಹೊಂದಿರುವ ಈ ವರ್ಗ ನಿವೇಶನ ಮತ್ತು ಫ್ಲಾಟ್‌ಗಳ ಬೆಲೆ ಕಡಿಮೆಯಾಗಬಹುದು ಎಂದು ಕಾಯುತ್ತಿದೆ. ಆದರೆ ಅಂತಹ ಬದಲಾವಣೆ ಕಂಡುಬರುತ್ತಿಲ್ಲ. ಹಾಗಾಗಿ ಇದೀಗ ಬ್ಯಾಂಕ್‌ಗಳು ಬಡ್ಡಿದರ ಕಡಿತ ಮಾಡಿರುವುದು ಹಾಗೂ ರೇರಾ ಕಾಯ್ದೆ ಜಾರಿಯಾಗಿರುವುದು ಉದ್ಯಮಕ್ಕೆ ಪೂರಕವಾಗಿದೆ. ಗ್ರಾಹಕರ ಆಸಕ್ತಿ ಇನ್ನುಮುಂದೆ ಕುದುರಬಹುದು ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

’ರಿಯಲ್ ಎಸ್ಟೇಟ್ ಚಟುವಟಿಕೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಜಮೀನುಗಳ ಬೆಲೆಯಲ್ಲಿ ಭಾರಿ ಏರಿಕೆ ಉಂಟಾಗಿತ್ತು. ಪ್ರಸ್ತುತ ರಿಯಲ್‌ ಎಸ್ಟೇಟ್ ವಹಿವಾಟು ಕುಸಿತ ಕಂಡಿದೆ. ಆದರೆ ಜಮೀನು ಮಾಲೀಕರು ಮೊದಲಿನ ಬೆಲೆಯನ್ನೇ ನಿರೀಕ್ಷಿಸುತ್ತಿದ್ದಾರೆ. ವಹಿವಾಟು ಬ್ಯಾಂಕ್ ಮೂಲಕವೇ ನಡೆಯಬೇಕು ಎಂಬ ನಿಯಮ ಇರುವುದರಿಂದ ಬೇನಾಮಿ ವ್ಯವಹಾರಗಳು ಕಡಿಮೆಯಾಗಿವೆ. ಸದ್ಯಕ್ಕೆ ವಹಿವಾಟು ಮಂದಗತಿಯಲ್ಲಿದ್ದರೂ ಮುಂದಿನ ದಿನಗಳಲ್ಲಿ ವ್ಯಾಪಾರ ಕುದುರಬಹುದು’ ಎನ್ನುವುದು ಮರಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುರುಷೋತ್ತಮರೆಡ್ಡಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT