ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಯದೆ ಮರೆತರು!

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ದಿಲ್ಲಿಯ ತ್ರಿಲೋಕಪುರಿ ಮತ್ತು ಕಲ್ಯಾಣಪುರಿ ಜನವಸತಿಗಳಲ್ಲಿ ಈವರೆಗೂ ‘ಕನ್ನಡಿಗರೆಂದು ಗುರುತಿಸಿಲ್ಲದ ಸಾವಿರಾರು ಮಂದಿ ಕನ್ನಡಕಾರರ’ ದುರವಸ್ಥೆಯನ್ನು ಪರಿಚಯಿಸಿರುವ ಡಿ. ಉಮಾಪತಿ ಅವರ ಲೇಖನ (ಪ್ರ.ವಾ., ನ.6) ಮನಸ್ಸಿಗೆ ಬಹಳ ತಟ್ಟಿತು. ಲೇಖಕರೇ ಸ್ಪಷ್ಟಪಡಿಸಿರುವಂತೆ ಇವರೆಲ್ಲರೂ ಬಹಳ ಮಟ್ಟಿಗೆ ಅತಿ ನಿಕೃಷ್ಟ ಸ್ಥಿತಿಯಲ್ಲಿರುವ ಶ್ರಮಿಕರು. ದಿನಗೂಲಿ ಮತ್ತಿತರ ಸಣ್ಣ ಪುಟ್ಟ ಕಸುಬುಗಳಲ್ಲಿ ಅನ್ನದ ದಾರಿ ಹುಡುಕಿಕೊಂಡವರು.

ಲೇಖನದ ಶೀರ್ಷಿಕೆ ಇವರನ್ನು ‘ಕರ್ನಾಟಕ ಮರೆತ ಕನ್ನಡಿಗರು’ ಎಂದು ವರ್ಣಿಸಿದ್ದರೂ, ಲೇಖನ ಸ್ಪಷ್ಟಪಡಿಸಿರುವಂತೆ ಈ ಕೊಳೆಗೇರಿಯ ಬಡ ‘ಕನ್ನಡಕಾರರು’ ಕನ್ನಡ ಭಾಷೆಯನ್ನು ಮರೆತಿಲ್ಲ. ಶ್ರಮಿಕವರ್ಗದ ಎಲ್ಲರಂತೆ ತಮಗೆ ಕೆಲಸಕ್ಕೆ ಬರುವ ರೀತಿಯಲ್ಲಿ ಕನ್ನಡವನ್ನು ಬಳಸಿಕೊಂಡಿದ್ದಾರೆ, ಉಳಿಸಿಕೊಂಡಿದ್ದಾರೆ.

ಈ ಕನ್ನಡಿಗರು ಕರ್ನಾಟಕವನ್ನು ಮರೆತಿರಬಹುದು, ಆದರೆ ಕನ್ನಡ ಮಾತು, ನುಡಿ ಮರೆತಿಲ್ಲ. ಒಂದು ರೀತಿ ಕರ್ನಾಟಕವೂ ಇವರನ್ನು ಮರೆತಿಲ್ಲ. ಏಕೆಂದರೆ ಯಾರಾದರೂ ಒಂದು ಸಮಾಜ, ಒಂದು ವರ್ಗ, ಒಂದು ಪ್ರವೃತ್ತಿಯನ್ನು ಮರೆಯಬೇಕಾದರೆ ಅವುಗಳ ಬಗ್ಗೆ ಸ್ವಲ್ಪ ಅರಿತಿರಬೇಕು. ಆದರೆ ಈ ಕನ್ನಡ ಶ್ರಮಜೀವಿಗಳ ಬಗ್ಗೆ ಏನೇನೂ ಅರಿವಿಲ್ಲದವರು, ದಿಲ್ಲಿಯಲ್ಲಿನ ಕರ್ನಾಟಕ ಸಾಹಿತ್ಯ ಮತ್ತು ಸಂಸ್ಕೃತಿಗಳ ವ್ಯಾಪಾರವನ್ನು ಕಸುಬು ಮಾಡಿಕೊಂಡಿರುವ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಅವುಗಳ ಮುನಾಫಾಕೋರ ಮಾಲೀಕರು ಮತ್ತು ಚಾಲಕರು, ತಮಗೆ ಪರಿಚಯವೇ ಇಲ್ಲದ ವಿಷಯವಸ್ತುಗಳನ್ನು ಮರೆಯಲು ಹೇಗೆ ತಾನೇ ಸಾಧ್ಯ?

ಈ ಅನಿವಾಸಿ ಕನ್ನಡ ಶ್ರಮಿಕರ ಹಿನ್ನೆಲೆ, ಅವರ ಸಮಸ್ಯೆಗಳ ಬಗ್ಗೆ ಪರಿಚಯಿಸಿರುವ ಉಮಾಪತಿಯವರ ಲೇಖನ ನಾನು ತಿಳಿಯದಿದ್ದ ಅನೇಕ ಮಾಹಿತಿಗಳನ್ನು ಕೊಟ್ಟಿದೆ. ಅದರೂ ಇವುಗಳ ಬಗ್ಗೆ ನನ್ನ ಒಂದೆರಡು ಪ್ರಶ್ನೆಗಳನ್ನು ಮತ್ತು ಅನುಮಾನಗಳನ್ನು ಮುಂದಿಡಲು ಬಯಸುತ್ತೇನೆ. ಇವೆಲ್ಲದರಲ್ಲೂ ಹಣದ ಪ್ರಲೋಭನಕ್ಕೆ ಮುಖ್ಯಪಾತ್ರವಿದೆ. ಕನ್ನಡ, ಕನ್ನಡಿಗರ ಹೆಸರಿನಲ್ಲಿ ಹಣ ವಿತರಿಸಲು, ಖರ್ಚು ಮಾಡಲು ಕೆಲವಾರು ಸರ್ಕಾರಿ ವಿಭಾಗಗಳಿವೆ.

ಲೇಖನದಲ್ಲಿ ಉಲ್ಲೇಖಿಸಿರುವ ಈ ಅನಿವಾಸಿ ಕನ್ನಡಕಾರರ ವ್ಯಾವಹಾರಿಕ ಕನ್ನಡ ಒಂದು ರೀತಿ ಕಲಸುಮೇಲೋಗರ ಕನ್ನಡ. ಇದನ್ನು ಶುದ್ಧೀಕರಿಸಬೇಕಲ್ಲವೇ? ಮತ್ತೆ ಇವರ ದುರ್ಭಾಗ್ಯ ಪರಿಸ್ಥಿತಿಯ ಅಧ್ಯಯನ ನಡೆಸಲು ಹಿಂಡು ಹಿಂಡು ಬುದ್ಧಿಜೀವಿಗಳ ನಿಯೋಗಗಳು ದಿಲ್ಲಿಗೆ ಪಯಣಿಸಬೇಕಲ್ಲವೇ? ಅರ್ಥಾತ್ ಈ ಕೊಳೆಗೇರಿಯ ಬಡ ಶ್ರಮಿಕ ಕನ್ನಡಕಾರರನ್ನು ತಥಾಕಥಿತ ಕನ್ನಡದ ಮುಖ್ಯವಾಹಿನಿಗೆ ಸೆಳೆದೊಯ್ದು ಅಪ್ಪಟ ಕನ್ನಡಿಗರಾಗಿ ಪರಿವರ್ತಿಸುವುದು ಕನ್ನಡ ಪ್ರೇಮಿಗಳೆಲ್ಲರ ಪರಮ ಕರ್ತವ್ಯ ಅಲ್ಲವೇ? ಜಯ ಕರ್ನಾಟಕ ಮಾತೆ!

ಎಂ.ಎಸ್. ಪ್ರಭಾಕರ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT