ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಶಿಕಲಾ ಸಂಬಂಧಿಕರ ಮನೆಗಳಲ್ಲಿ ಐ.ಟಿ ಶೋಧ

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾ ಅವರ ಸಂಬಂಧಿಕರ ಮನೆಗಳು ಮತ್ತು ಇತರ ಸ್ಥಳಗಳಲ್ಲಿ ಆದಾಯ ತೆರಿಗೆ (ಐ.ಟಿ) ಅಧಿಕಾರಿಗಳು ಶೋಧ ನಡೆಸಿದ್ದಾರೆ. ಶಶಿಕಲಾ ಅವರ ಸೋದರಳಿಯ ಟಿ.ಟಿ.ವಿ. ದಿನಕರನ್‌ ನಿವಾಸ ಮತ್ತು ಜಯಾ ಟಿ.ವಿ. ಕಚೇರಿಯಲ್ಲಿಯೂ ಪರಿಶೀಲನೆ ನಡೆಸಲಾಗಿದೆ.

ಶಶಿಕಲಾ ಅವರ ಸಂಬಂಧಿಕರಿಗೆ ನಂಟು ಇರುವ ಕಂಪೆನಿಗಳಲ್ಲಿಯೂ ಶೋಧ ನಡೆಸಿದ್ದಾರೆ. ತಮಿಳುನಾಡು, ಕರ್ನಾಟಕ, ಹೈದರಾಬಾದ್‌ ಮತ್ತು ದೆಹಲಿಯಲ್ಲಿನ 90ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೀಲನೆ ನಡೆದಿದೆ.

ಶಶಿಕಲಾ ಅವರ ಗಂಡ ನಟರಾಜನ್‌ ಅವರ ತಂಜಾವೂರ್‌ ಮನೆಯಲ್ಲಿ ಶೋಧ ನಡೆಸಲಾಗಿದೆ. ನೋಟು ರದ್ದತಿ ನಂತರ ವಿವಿಧ ಮಾರ್ಗಗಳ ಮೂಲಕ ಹವಾಲಾ ವಹಿವಾಟು ನಡೆದಿದೆ ಎಂಬ ಶಂಕೆಯಲ್ಲಿ ಈ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಪೊಯೆಸ್‌ ಗಾರ್ಡನ್‌ ಮನೆಯಲ್ಲಿ ತಪಾಸಣೆ ನಡೆಸಲು ಆದಾಯ ತೆರಿಗೆ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಎಐಎಡಿಎಂಕೆಯ ದಿನಪತ್ರಿಕೆ ನಮಧು ಎಂಜಿಆರ್‌ ಕಚೇರಿಯಲ್ಲಿ ಶೋಧ ನಡೆಸಲಾಗಿದೆ. ವಿವಿಧ ಸ್ಥಳಗಳಿಂದ ಮಹತ್ವದ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲೂ ದಾಳಿ
ಬೆಂಗಳೂರು: ಎಐಎಡಿಎಂಕೆ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ವಿ. ಪುಗಳೇಂದಿ ಅವರ ಮನೆ ಹಾಗೂ ಪಕ್ಷದ ಕಚೇರಿ ಮೇಲೂ ಚೆನ್ನೈನ ಆದಾಯ ತೆರಿಗೆ(ಐ.ಟಿ) ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ಶ್ರೀರಾಮಪುರದಲ್ಲಿರುವ ಪಕ್ಷದ ಕಚೇರಿ ಮತ್ತು ಮುರುಗೇಶಪಾಳ್ಯದಲ್ಲಿನ ಪುಗಳೇಂದಿ ಮನೆಯಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬೆಳಿಗ್ಗೆ 6ರ ಸುಮಾರಿಗೆ ವಾಯು ವಿಹಾರಕ್ಕೆ ಪುಗಳೇಂದಿ ಸಿದ್ಧವಾಗುತ್ತಿದ್ದಾಗ ಮನೆ ಪ್ರವೇಶಿಸಿ ತಪಾಸಣೆ ಆರಂಭಿಸಲಾಗಿದೆ. ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ತಪಾಸಣೆ ಮುಂದುವರಿದಿದೆ ಎಂದು ಐ.ಟಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT