ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟೇಲ್ ಮೀಸಲಾತಿಗೆ 3 ಪ್ರಸ್ತಾವ

ಪ್ರಮುಖ ಸಮುದಾಯದ ಮನವೊಲಿಕೆಗೆ ಮುಂದುವರಿದ ಕಾಂಗ್ರೆಸ್ ಯತ್ನ
Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತಿನ ಪಟೇಲ್‌ ಮೀಸಲಾತಿ ಚಳವಳಿಯ ಮುಖಂಡರು ಮತ್ತು ಕಾಂಗ್ರೆಸ್‌ ಮುಖಂಡರ ಜತೆಗೆ ಬುಧವಾರ ಮಧ್ಯರಾತ್ರಿ 2 ಗಂಟೆಯವರೆಗೆ ಮೀಸಲಾತಿ ಬಗ್ಗೆ ಚರ್ಚೆ ನಡೆದಿದೆ. ಕಾಂಗ್ರೆಸ್‌ ಪಕ್ಷವು ಪಟೇಲ್‌ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಮೂರು ಪ್ರಸ್ತಾವಗಳನ್ನು ಚಳವಳಿಯ ನಾಯಕರ ಮುಂದೆ ಇರಿಸಿದೆ.

ಸಾಂಪ್ರದಾಯಿಕವಾಗಿ ಬಿಜೆಪಿ ಜತೆಗಿದ್ದ ಪಟೇಲ್‌ ಸಮುದಾಯ ಹಾರ್ದಿಕ್‌ ಪಟೇಲ್‌ ನೇತೃತ್ವದಲ್ಲಿ ನಡೆದ ಮೀಸಲಾತಿ ಚಳವಳಿಯ ಬಳಿಕ ಆ ಪಕ್ಷದಿಂದ ದೂರ ಸರಿದಿದೆ ಎನ್ನಲಾಗುತ್ತಿದೆ. ಈ ಚಳವಳಿ ಈಗ ಗುಜರಾತ್‌ ವಿಧಾನಸಭೆ ಚುನಾವಣೆಯ ಚಿತ್ರಣವನ್ನೇ ಬದಲಾಯಿಸಿದೆ. ಪಟೇಲ್‌ ಸಮುದಾಯದ ಹೋರಾಟ ಇತರ ಹಿಂದುಳಿದ ಜಾತಿಗಳು ಮತ್ತು ದಲಿತರಲ್ಲಿ ಹೋರಾಟದ ಸ್ಫೂರ್ತಿ ತುಂಬಿದೆ. ಈ ಜಾತಿಗಳೂ ಒಟ್ಟಾಗಿವೆ. ಹಾಗಾಗಿ ಈ ಗುಂಪುಗಳನ್ನು ತಮ್ಮತ್ತ ಸೆಳೆದುಕೊಳ್ಳಲು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ.

ಅಹಮದಾಬಾದ್‌ನ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ರಾತ್ರಿ 10.45ಕ್ಕೆ ಸಭೆ ಆರಂಭವಾಗಿತ್ತು. ಈ ಸಭೆಗೂ ಮೊದಲು ಪಟೇಲ್‌ ಸಮುದಾಯದ ಪ್ರತಿನಿಧಿಗಳು ಚಳವಳಿಯ ನಾಯಕ ಹಾರ್ದಿಕ್‌ ಪಟೇಲ್‌ ಜತೆ ಚರ್ಚೆ ನಡೆಸಿದ್ದರು. ಕಾಂಗ್ರೆಸ್‌ ನಿಯೋಗದಲ್ಲಿ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಭರತ್‌ ಸಿಂಹ ಸೋಲಂಕಿ ಇದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ಕಪಿಲ್‌ ಸಿಬಲ್‌ ಅವರನ್ನು ಸಂಧಾನಕಾರರಾಗಿ ದೆಹಲಿಯಿಂದ ಕರೆಸಿಕೊಳ್ಳಲಾಗಿತ್ತು.

ಮಾತುಕತೆ ಸೌಹಾರ್ದಯುತವಾಗಿತ್ತು ಎಂದು ಪಟೇಲ್‌ ಹೋರಾಟದ ಮುಖಂಡ ದಿನೇಶ್‌ ಭಂಭಾನಿಯಾ ಹೇಳಿದ್ದಾರೆ. ‘ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡಲು ಕಾನೂನು ಚೌಕಟ್ಟಿನಲ್ಲಿ ಯಾವೆಲ್ಲ ಅವಕಾಶಗಳು ಇವೆ ಎಂಬುದನ್ನು ಪರಿಶೀಲಿಸಲು ಕಾಂಗ್ರೆಸ್‌ನವರು ಸಾಕಷ್ಟು ಶ್ರಮ ವಹಿಸಿದ್ದಾರೆ. ನಮ್ಮ ಮುಂದೆ ಮೂರು ಪ್ರಸ್ತಾವಗಳನ್ನು ಇರಿಸಲಾಗಿದೆ. ಹಾರ್ದಿಕ್‌ ಮತ್ತು ಸಮುದಾಯದ ಇತರ ಮುಖಂಡರ ಜತೆ ಮಾತನಾಡಿ ಒಂದೆರಡು ದಿನಗಳಲ್ಲಿ ಕಾಂಗ್ರೆಸ್‌ ಮುಖಂಡರನ್ನು ಮತ್ತೆ ಭೇಟಿಯಾಗಲಿದ್ದೇವೆ’ ಎಂದು ಅವರು ಹೇಳಿದ್ದಾರೆ.
*
ಶಿವಸೇನಾ ಸ್ಪರ್ಧೆ
ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನಾ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿದೆ. 50–75 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಯೋಜನೆಯನ್ನು ಸೇನಾ ಹಾಕಿಕೊಂಡಿದೆ.

‘ಗುಜರಾತಿನ ಜನರು ಬದಲಾವಣೆ ಬಯಸಿದ್ದಾರೆ. ಬಹುಸಂಖ್ಯಾತ ಸಮುದಾಯದ ಭಾವನೆಗಳನ್ನು ಸಂರಕ್ಷಿಸುವ ತನ್ನ ಹಳೆಯ ಉದ್ದೇಶವನ್ನು ಬಿಜೆಪಿ ಮರೆತಿದೆ. ತನ್ನ ಸ್ಥಾಪನೆಯ ಅಂದಿನಿಂದಲೇ ಶಿವಸೇನಾವು ಹಿಂದುತ್ವದ ರಕ್ಷಣೆಗೆ ಬದ್ಧವಾಗಿದೆ. ಈಗ ಹಿಂದುತ್ವದ ರಕ್ಷಣೆಗಾಗಿಯೇ ಗುಜರಾತಿನಲ್ಲಿ ಸ್ಪರ್ಧಿಸಲಾಗುವುದು’ ಎಂದು ಸೇನಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲ್ ದೇಸಾಯಿ ಹೇಳಿದ್ದಾರೆ.

ಸ್ಪರ್ಧಿಸುವ ನಿರ್ಧಾರವನ್ನು ಒಂದು ತಿಂಗಳ ಹಿಂದೆಯೇ ತೆಗೆದುಕೊಳ್ಳಲಾಗಿದೆ. 50 ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ ಎಂದು ದೇಸಾಯಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT