ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯ: ಮಯಂಕ್‌ ಮನಮೋಹಕ ಶತಕ

ಕರ್ನಾಟಕ ಸವಾಲಿನ ಮೊತ್ತ; ಮನೀಷ್‌ ಮಿಂಚಿನ ಆಟ
Last Updated 9 ನವೆಂಬರ್ 2017, 19:27 IST
ಅಕ್ಷರ ಗಾತ್ರ

ಬೆಂಗಳೂರು: ಮಯಂಕ್‌ ಅಗರವಾಲ್‌ (ಬ್ಯಾಟಿಂಗ್‌ 169; 235ಎ, 23ಬೌಂಡರಿ, 3ಸಿ) ಗುರುವಾರ ದೆಹಲಿ ಬೌಲರ್‌ಗಳಿಗೆ ಸಿಂಹಸ್ವಪ್ನರಾದರು. ಅವರ ಮನಮೋಹಕ ಶತಕದ ಬಲದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಸವಾಲಿನ ಮೊತ್ತ ಕಲೆಹಾಕಿತು.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಎರಡನೇ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ವಿನಯ್‌ ಕುಮಾರ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 4 ವಿಕೆಟ್‌ಗೆ 348 ರನ್‌ ಗಳಿಸಿದೆ.

ನಡೆಯದ ರಾಹುಲ್‌ ಆಟ: ಬ್ಯಾಟಿಂಗ್‌ ಆರಂಭಿಸಿದ ಕರ್ನಾಟಕ ತಂಡ ಆರಂಭಿಕ ಸಂಕಷ್ಟಕ್ಕೊಳಗಾಯಿತು. ಭಾರತ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಕೆ.ಎಲ್‌.ರಾಹುಲ್‌ ದಿನದ 8ನೇ ಓವರ್‌ನ ಕೊನೆಯ ಎಸೆತದಲ್ಲಿ ಕುಲವಂತ್‌ ಖೇಜ್ರೋಲಿಯಾಗೆ ವಿಕೆಟ್‌ ನೀಡಿದರು. 37 ನಿಮಿಷ ಕ್ರೀಸ್‌ನಲ್ಲಿದ್ದ ಅವರು 9 ರನ್‌ ಗಳಿಸಲಷ್ಟೇ ಶಕ್ತರಾದರು. ರಾಹುಲ್‌ ಪೆವಿಲಿಯನ್‌ ಸೇರಿಕೊಂಡಾಗ ತಂಡದ ಖಾತೆಯಲ್ಲಿದ್ದುದು 21ರನ್‌.

ಸಮರ್ಥ್‌–ಮಯಂಕ್‌ ಮೋಡಿ: ಈ ಹಂತದಲ್ಲಿ ಒಂದಾದ ಮಯಂಕ್‌ ಮತ್ತು ಆರ್‌.ಸಮರ್ಥ್‌ (58; 107ಎ, 8ಬೌಂ) ಮತ್ತೊಮ್ಮೆ ಮೋಡಿ ಮಾಡಿದರು. ಪುಣೆಯಲ್ಲಿ ನಡೆದಿದ್ದ ಮಹಾರಾಷ್ಟ್ರ ಎದುರಿನ ಹಣಾಹಣಿಯಲ್ಲಿ ದ್ವಿಶತಕದ (259 ರನ್‌) ಜೊತೆಯಾಟ ಆಡಿದ್ದ ಇವರು ಆಲೂರಿನ ಅಂಗಳದಲ್ಲೂ ಸುಂದರ ಇನಿಂಗ್ಸ್‌ ಕಟ್ಟಿದರು.

ಆರಂಭದಲ್ಲಿ ಒಂದೊಂದು ರನ್‌ ಗಳಿಸುತ್ತ ಸಾಗಿದ ಈ ಜೋಡಿ ಅವಕಾಶ ಸಿಕ್ಕಾಗಲೆಲ್ಲಾ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಮರೆಯಲಿಲ್ಲ. ಹೀಗಾಗಿ 16.2 ಓವರ್‌ಗಳಲ್ಲಿ ಆತಿಥೇಯರ ಖಾತೆಗೆ 50 ರನ್‌ಗಳು ಸೇರ್ಪಡೆಯಾದವು. ಆ ನಂತರವೂ ಇವರು ಕಲಾತ್ಮಕ ಹೊಡೆತಗಳ ಮೂಲಕ ಇನಿಂಗ್ಸ್‌ನ ರಂಗು ಹೆಚ್ಚಿಸಿದರು. ಆದ್ದರಿಂದ ರಾಜ್ಯ ತಂಡ 32ನೇ ಓವರ್‌ನಲ್ಲಿ ಶತಕ ಪೂರೈಸಿತು.

‌ಖೇಜ್ರೋಲಿಯಾ ಬೌಲ್‌ ಮಾಡಿದ 33ನೇ ಓವರ್‌ನ 3ನೇ ಎಸೆತದಲ್ಲಿ ಒಂದು ರನ್‌ ಗಳಿಸಿದ ಬಲಗೈ ಬ್ಯಾಟ್ಸ್‌ಮನ್‌ ಸಮರ್ಥ್‌ ಅರ್ಧಶತಕದ ಸಂಭ್ರಮ ಆಚರಿಸಿದರು. 141 ನಿಮಿಷ ಕ್ರೀಸ್‌ನಲ್ಲಿದ್ದ ಅವರು ಇದಕ್ಕಾಗಿ 96 ಎಸೆತ ತೆಗೆದುಕೊಂಡರು. ಇದರಲ್ಲಿ 7 ಸೊಗಸಾದ ಬೌಂಡರಿಗಳೂ ಸೇರಿದ್ದವು. ಮಯಂಕ್‌ ತಾವೆದುರಿಸಿದ 81ನೇ ಎಸೆತವನ್ನು ಬೌಂಡರಿಗೆ ಅಟ್ಟಿ 50 ರನ್‌ ಪೂರೈಸಿದರು. ಅಪಾಯಕಾರಿಯಾಗಿ ಬೆಳೆಯುತ್ತಿದ್ದ ಈ ಜೊತೆಯಾಟ ಮುರಿಯಲು ದೆಹಲಿ ತಂಡದ ನಾಯಕ ರಿಷಭ್‌ ಪಂತ್‌ ಬೌಲಿಂಗ್‌ನಲ್ಲಿ ಹಲವು ಬದಲಾವಣೆ ಮಾಡಿದರೂ ಪ್ರಯೋಜನವಾಗಲಿಲ್ಲ.

ಊಟದ ವಿರಾಮಕ್ಕೆ 35 ಓವರ್‌ಗಳಲ್ಲಿ 1 ವಿಕೆಟ್‌ಗೆ 124 ರನ್‌ ಗಳಿಸಿದ್ದ ಆರ್‌.ವಿನಯ್ ಕುಮಾರ್‌ ಬಳಗಕ್ಕೆ 38ನೇ ಓವರ್‌ನಲ್ಲಿ ಎರಡನೇ ಆಘಾತ ಎದುರಾಯಿತು. ಸ್ಪಿನ್ನರ್‌ ವಿಕಾಸ್‌ ಮಿಶ್ರಾ ಹಾಕಿದ ಎರಡನೇ ಎಸೆತದ ಗತಿ ಅರಿಯುವಲ್ಲಿ ಎಡವಿದ ಸಮರ್ಥ್‌, ಗೌತಮ್‌ ಗಂಭೀರ್‌ಗೆ ಕ್ಯಾಚ್‌ ನೀಡಿದರು. ಇದರೊಂದಿಗೆ 105 ರನ್‌ಗಳ ಜೊತೆಯಾಟಕ್ಕೆ ತೆರೆ ಬಿತ್ತು. ಬಳಿಕ ಮಯಂಕ್, ಕರುಣ್‌ ನಾಯರ್‌ ಜೊತೆಗೂಡಿ ಇನಿಂಗ್ಸ್‌ ಬೆಳೆಸಿದರು.

46ನೇ ಓವರ್‌ನಲ್ಲಿ ಮೊದಲ ಸಿಕ್ಸರ್‌: ವಿಕಾಸ್‌ ಮಿಶ್ರಾ ಬೌಲ್‌ ಮಾಡಿದ 46ನೇ ಓವರ್‌ನಲ್ಲಿ ಮಯಂಕ್‌ ಇನಿಂಗ್ಸ್‌ನ ಮೊದಲ ಸಿಕ್ಸರ್ ಸಿಡಿಸಿದರು. ಮೂರನೇ ಎಸೆತವನ್ನು ಅವರು ಲಾಂಗ್‌ ಆನ್‌ನತ್ತ ಬಾರಿಸಿ ಮೈದಾನದಲ್ಲಿ ಸೇರಿದ್ದ 200ಕ್ಕೂ ಹೆಚ್ಚು ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದರು. ವಿಕಾಸ್‌ ಎಸೆದ 48ನೇ ಓವರ್‌ನ 3 ಮತ್ತು 4ನೇ ಎಸೆತಗಳನ್ನೂ ಮಯಂಕ್‌ ಸಿಕ್ಸರ್‌ಗೆ ಅಟ್ಟಿದಾಗ ಮೈದಾನದಲ್ಲಿ ಸಂಭ್ರಮ ಮನೆ ಮಾಡಿತು. ಇದರೊಂದಿಗೆ ತಂಡದ ಮೊತ್ತ 176ಕ್ಕೆ ಹೆಚ್ಚಿತು. 50ನೇ ಓವರ್‌ನಲ್ಲಿ ದಾಳಿಗಿಳಿದ ಮನನ್‌ ಶರ್ಮಾ ಮೊದಲ ಎಸೆತದಲ್ಲಿ ಕರುಣ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಯಲ್ಲಿ ಸಿಲುಕಿಸಿ ದೆಹಲಿ ಆಟಗಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.

ಮಹಾರಾಷ್ಟ್ರ ವಿರುದ್ಧ ಶತಕ ಗಳಿಸಿದ್ದ ಕರುಣ್‌, 39 ಎಸೆತಗಳಲ್ಲಿ 2 ಬೌಂಡರಿ ಸಹಿತ 15 ರನ್‌ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ಅವರು ಮೂರನೇ ವಿಕೆಟ್‌ಗೆ ಮಯಂಕ್‌ ಜೊತೆ 48 ರನ್‌ ಸೇರಿಸಿದರು. ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಸೇರಿಕೊಂಡರೂ ಮಯಂಕ್‌ ಎದೆಗುಂದಲಿಲ್ಲ. ಮನನ್‌ ಶರ್ಮಾ ಬೌಲ್‌ ಮಾಡಿದ 52ನೇ ಓವರ್‌ನ ನಾಲ್ಕನೇ ಎಸೆತವನ್ನು ಲೀಲಾಜಾಲವಾಗಿ ಬೌಂಡರಿಗಟ್ಟಿ ಮೂರಂಕಿಯ ಗಡಿ ದಾಟಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 136 ಎಸೆತ. ಅವರು ಬೌಂಡರಿ (14) ಮತ್ತು ಸಿಕ್ಸರ್‌ಗಳ (3) ಮೂಲಕವೇ 74 ರನ್‌ ಗಳಿಸಿದ್ದು ವಿಶೇಷ.

ಶತಕದ ಬಳಿಕವೂ ಮಯಂಕ್‌ ದೆಹಲಿ ಬೌಲರ್‌ಗಳನ್ನು ಕಾಡಿದರು. ವಿಕಾಸ್‌ ಮಿಶ್ರಾ ಮತ್ತು ಮನನ್‌ ಶರ್ಮಾ ಅವರನ್ನು ಮನಬಂದಂತೆ ದಂಡಿಸಿದರು. ಅವರಿಗೆ ಮನೀಷ್‌ ಪಾಂಡೆ ಸೂಕ್ತ ಬೆಂಬಲ ನೀಡಿದರು. ಈ ಜೋಡಿ ನಾಲ್ಕನೇ ವಿಕೆಟ್‌ಗೆ 136 ರನ್‌ ಗಳಿಸಿ ತಂಡದ ಮೊತ್ತ 300ರ ಗಡಿ ದಾಟುವಂತೆ ಮಾಡಿತು.

81ನೇ ಓವರ್‌ನಲ್ಲಿ ಮಯಂಕ್‌, 150 ರನ್ ಪೂರೈಸಿದರು. 306 ನಿಮಿಷ ಕ್ರೀಸ್‌ನಲ್ಲಿದ್ದ ಅವರು 207 ಎಸೆತಗಳನ್ನು ಎದುರಿಸಿದರು. ಇದರಲ್ಲಿ 22 ಬೌಂಡರಿ ಮತ್ತು 3 ಸಿಕ್ಸರ್ ಇದ್ದವು. ಮರು ಓವರ್‌ನಲ್ಲಿ ಮನೀಷ್‌, ನವದೀಪ್‌ ಸೈನಿಗೆ ವಿಕೆಟ್‌ ನೀಡಿದರು. ಆಗ ದಿನದಾಟ ಮುಗಿಯಲು 9 ಓವರ್‌ಗಳು ಬಾಕಿ ಇದ್ದವು. ನಂತರ ಸ್ಟುವರ್ಟ್‌ ಬಿನ್ನಿ (ಬ್ಯಾಟಿಂಗ್‌ 14; 30ಎ, 2ಬೌಂ) ಮತ್ತು ಮಯಂಕ್‌ ಮುರಿಯದ ಐದನೇ ವಿಕೆಟ್‌ಗೆ 31 ರನ್‌ ಗಳಿಸಿದರು.

ಸ್ಪಿನ್ನರ್‌ಗಳ ಮೇಲೆ ಮಯಂಕ್‌ ಸವಾರಿ
ಮಯಂಕ್‌ ಅಗರವಾಲ್‌ಗೆ ದಿನದ 26ನೇ ಓವರ್‌ನಲ್ಲಿ ಜೀವದಾನ ಲಭಿಸಿತು. ಮಿಶ್ರಾ ಹಾಕಿದ 5ನೇ ಎಸೆತವನ್ನು ಅವರು ನೇರವಾಗಿ ಬಾರಿಸಿದ್ದರು. ತಮ್ಮತ್ತ ನುಗ್ಗಿ ಬಂದ ಚೆಂಡನ್ನು ಮಿಶ್ರಾ ಹಿಡಿತಕ್ಕೆ ಪಡೆಯಲು ವಿಫಲರಾದರು. ಮಯಂಕ್‌ ಇದರ ಲಾಭ ಎತ್ತಿಕೊಂಡರು. ಅವರು ಎಡಗೈ ಸ್ಪಿನ್ನರ್‌ಗಳಾದ ವಿಕಾಸ್‌ ಮಿಶ್ರಾ ಮತ್ತು ಮನನ್‌ ಶರ್ಮಾ ಅವರನ್ನು ಮನಬಂದಂತೆ ದಂಡಿಸಿದರು. ವಿಕಾಸ್‌ ಬೌಲಿಂಗ್‌ನಲ್ಲಿ 57ರನ್‌ ಕಲೆಹಾಕಿದ ಅವರು, ಮನನ್‌ ಬೌಲಿಂಗ್‌ನಲ್ಲಿ 38 ರನ್‌ ಹೆಕ್ಕಿದರು.

ಮನೀಷ್‌ ಮೊದಲ ಪಂದ್ಯ
ಈ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯ ಆಡಿದ ಮನೀಷ್‌ ಪಾಂಡೆ ಅರ್ಧಶತಕ ಗಳಿಸಿ ಮಿಂಚಿದರು. ಬೌಂಡರಿಯೊಂದಿಗೆ ಖಾತೆ ತೆರೆದ ಅವರು 107 ಎಸೆತಗಳಲ್ಲಿ 74 ರನ್‌ ಬಾರಿಸಿದರು. ಇದರಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ ಇದ್ದವು.

ಪಂದ್ಯ ವೀಕ್ಷಿಸಿದ ಪ್ರಸಾದ್‌
ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್‌.ಕೆ.ಪ್ರಸಾದ್‌, ಗುರುವಾರ ಕರ್ನಾಟಕ ಮತ್ತು ದೆಹಲಿ ನಡುವಣ ಪಂದ್ಯ ವೀಕ್ಷಿಸಿದರು. ಅವರು ದಿನದಾಟ ಮುಗಿಯುವವರೆಗೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT