ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ: ಶಾಸಕ

Last Updated 10 ನವೆಂಬರ್ 2017, 5:29 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಇದರಿಂದ ಹೆಚ್ಚಿನ ಸೌಲಭ್ಯ ಹಾಗೂ ಸಿಬ್ಬಂದಿ ದೊರೆಯಲಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಗುರುವಾರ ನಗರದ ಡಿ.ಕ್ರಾಸ್‌ ಸಮೀಪ ₹ 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ತಾಯಿ ಮತ್ತು ಮಕ್ಕಳ 100 ಹಾಸಿಗೆ ಆಸ್ಪತ್ರೆ ಕಾರ್ಯಾರಂಭಕ್ಕೆ ಪೂಜೆ ನೆರವೇರಿಸಿದರು. ನೂತನ ಆಸ್ಪತ್ರೆಯಲ್ಲಿ ಆಧುನಿಕ ಶಸ್ತ್ರ ಕೊಠಡಿ ಹಾಗೂ ಚಿಕಿತ್ಸಾ ಯಂತ್ರಗಳು ಸೇರಿದಂತೆ ಸುಸಜ್ಜಿತವಾದ ವಾರ್ಡ್‌ಗಳ ವ್ಯವಸ್ಥೆ ಹೊಂದಿದೆ.

ಇದರಿಂದಾಗಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ದೊರೆಯಲಿದೆ. ನಗರದ ಅಂಚಿನಲ್ಲಿ ಇರುವುದರಿಂದ ಉತ್ತಮವಾದ ಪರಿಸರವನ್ನು ಹೊಂದಿದ್ದು, ಗಾಳಿ, ಬೆಳಕಿನ ವ್ಯವಸ್ಥೆ ಇದೆ. ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದರು.

ಸುಳ್ಳು ಹೇಳಿಕೆ:‘ಸತತ ಪ್ರಯತ್ನದ ನಂತರ ಆಸ್ಪತ್ರೆಗೆ ಐದು ಎಕರೆ ಜಮೀನು ಮಂಜೂರಾತಿ ಹಾಗೂ ನಬಾರ್ಡ್‌ನಿಂದ ₹ 13 ಕೋಟಿ ಹಣವನ್ನು ರಾಜ್ಯ ಸರ್ಕಾರ 2014ರಲ್ಲಿ ಬಿಡುಗಡೆ ಮಾಡಿದೆ.ಜಿಲ್ಲಾ ಉಸ್ತುವಾರಿ ಸಚಿವರ ಆಸಕ್ತಿಯಿಂದಾಗಿ ಇಲ್ಲಿನ ಎಲ್ಲ ಕೆಲಸಗಳು ತ್ವರಿತವಾಗಿ ನಡೆಯಲು ಸಾಧ್ಯವಾಗಿದೆ.

ಆದರೆ ವಿರೋಧಪಕ್ಷದವರು ನಮ್ಮ ಆಡಳಿತ ಅವಧಿಯಲ್ಲಿಯೇ ಆಸ್ಪತ್ರೆ ಮಂಜೂರಾಗಿದ್ದು ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳನ್ನು ಬಹಿರಂಗಪಡಿಸಲಿ. ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ’ ಎಂದು ಅವರು ಹೇಳಿದರು.

ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಗಿರೀಶ್‌ ಮಾತನಾಡಿ, ಆಸ್ಪತ್ರೆಗೆ ಅಗತ್ಯ ಇರುವ ಎಲ್ಲ ಮೂಲಭೂತ ಸೌಲಭ್ಯಗಳು ಹಾಗೂ ವೈದ್ಯರ ಸಂಖ್ಯೆ ಇದೆ. ಡಿ.ಗ್ರೂಪ್‌ ಸಿಬ್ಬಂದಿಯ ಕೊರತೆ ತುಂಬಲು ಅಗತ್ಯ ಇರುವ ಟೆಂಡರ್‌ ಪ್ರಕ್ರಿಯೆ ಮುಕ್ತಾಯವಾಗಿದೆ. ಸದ್ಯದಲ್ಲೇ ಸಿಬ್ಬಂದಿ ಸೇವೆಗೆಬರಲಿದ್ದಾರೆ. ಆಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಲು ಸಾರ್ವಜನಿಕರು ಸಹಕರಿಸಬೇಕು. ತಮ್ಮ ಮನೆಯಂತೆ ಆಸ್ಪತ್ರೆ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಅವರು ಹೇಳಿದರು.

ಡಾ.ಮಂಜುನಾಥ್‌, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್‌, ಕಾಂಗ್ರೆಸ್‌ ನಗರ ಬ್ಲಾಕ್‌ ಸಮಿತಿ ಕಾರ್ಯದರ್ಶಿ ಡಿ.ವಿ.ಅಶ್ವತ್ಥಪ್ಪ, ಮುಖಂಡರಾದ ತಿ.ರಂಗರಾಜು, ನಾಗರತ್ನಮ್ಮ, ನಗರಸಭೆ ಸದಸ್ಯ ಲೋಕೇಶ್‌ ಬಾಬು, ಯುವ ಮುಖಂಡರಾದ ಕಾಂತರಾಜ್‌, ಕೇಶವ, ವಿನೋದ್‌ಗೌಡ, ನಯಾಜ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT