ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಗೆ ನಾಡ ಕೆರೆಗಳಿಗೆ ಹರಿಯುವಳು ತುಂಗಭದ್ರೆ

Last Updated 10 ನವೆಂಬರ್ 2017, 5:54 IST
ಅಕ್ಷರ ಗಾತ್ರ

ಹೂವಿನಹಡಗಲಿ : ತಾಲ್ಲೂಕಿನ ಪ್ರಮುಖ 10 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಮಹತ್ವಾಕಾಂಕ್ಷಿ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಇದೇ 10 ರಂದು ಪ್ರಾಯೋಗಿಕವಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ.

ನಿರಂತರ ಬರಗಾಲದಿಂದ ತಾಲ್ಲೂಕಿನ ಜನರು ಕಂಗೆಟ್ಟಿದ್ದಾರೆ. ಅಂತರ್ಜಲ ಪಾತಾಳ ಸೇರಿದೆ. ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಎಲ್ಲೆಡೆ ಸಾಮಾನ್ಯವಾಗಿದೆ. ಹಾಗಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಮಹತ್ವ ಪಡೆದುಕೊಂಡಿದೆ.

ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ತುಂಗಭದ್ರೆ ಹರಿಯುವುದರಿಂದ ಅಂತರ್ಜಲ ಹೆಚ್ಚಾಗಿ ಜನ, ಜಾನುವಾರು ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಪರೋಕ್ಷವಾಗಿ ನೀರಾವರಿಗೂ ಅನುಕೂಲ ಆಗಲಿದ್ದು, ರೈತರ ಬದುಕು ಹಸನಾಗಲಿದೆ ಎಂಬುದು ನೀರಾವರಿ ತಜ್ಞರ ಅಭಿಮತ.

ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ, ಹಿರೇಹಡಗಲಿ, ಹಗರನೂರು, ದೇವಗೊಂಡನಹಳ್ಳಿ, ಮುದೇನೂರು, ತಳಕಲ್ಲು, ಹಿರೇಮಲ್ಲನಕೆರೆ, ಹ್ಯಾರಡ ಮಲಿಯಮ್ಮನ ಕೆರೆ, ದಾಸನಹಳ್ಳಿ ಕೆರೆ ಮತ್ತು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲು ಕೆರೆಗಳು ಈ ಯೋಜನೆ ವ್ಯಾಪ್ತಿಗೆ ಒಳಪಟ್ಟಿವೆ. ಈಗಾಗಲೇ ದೇವಗೊಂಡನಹಳ್ಳಿ, ಮುದೇನೂರು ಕೆರೆಗಳಿಗೆ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕಾಲುವೆ ಮೂಲಕ ನೀರು ತುಂಬಿಸಲಾಗಿದೆ. ಮಲ್ಲಿಯಮ್ಮ ಕೆರೆ ಮತ್ತು ದಾಸನಹಳ್ಳಿ ಕೆರೆಗಳಿಗೂ ನೀರು ಹರಿಸಲಾಗಿದೆ. ಉಳಿದ ಕೆರೆಗಳಿಗೆ ಇಂದಿನಿಂದ (ನ.10) ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು.

ತಾಂತ್ರಿಕ ಅಡಚಣೆಯಿಂದ ನನೆಗುದಿಗೆ ಬಿದ್ದಿದ್ದ ಈ ಯೋಜನೆಯನ್ನು ಪೂರ್ಣಗೊಳಿಸುವಲ್ಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ. ಅಧಿಕಾರಿಗಳು ಕೂಡ ಬದ್ಧತೆಯಿಂದ ಕೆಲಸ ಮಾಡಿದ ಕಾರಣ ತಾಲ್ಲೂಕಿನಲ್ಲಿ ಜಲಕ್ರಾಂತಿಯ ಯೋಜನೆ ರೂಪುಗೊಂಡಿದೆ ಎಂಬ ಶ್ಲಾಘನೆ ವ್ಯಕ್ತವಾಗುತ್ತಿದೆ.

ಯೋಜನೆ ಮಂಜೂರಾತಿ : 2010ರಲ್ಲಿ ಅಂದಿನ ಶಾಸಕ ಬಿ.ಚಂದ್ರನಾಯ್ಕ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಅವರ ಮೇಲೆ ಒತ್ತಡ ಹೇರಿ ಕಲಬುರ್ಗಿ ಸಚಿವ ಸಂಪುಟ ಸಭೆಯಲ್ಲಿ ₹76.70 ಕೋಟಿಯ ಈ ಯೋಜನೆಗೆ ಮಂಜೂರಾತಿ ಕೊಡಿಸಿದ್ದರು. ಕೆಲಕಾಲ ನನೆಗುದಿಗೆ ಬಿದ್ದಿದ್ದ ಯೋಜನೆಯನ್ನು 2013ರಲ್ಲಿ ₹114.85 ಕೋಟಿಗೆ ಪರಿಷ್ಕರಿಸಿ ಹೈದರಾಬಾದ್‌ ಮೂಲದ ಜಿ.ವಿ.ಪಿ.ಆರ್. ಕಂಪೆನಿಗೆ ಕಾಮಗಾರಿ ವಹಿಸಲಾಗಿತ್ತು.

0.5 ಟಿಎಂಸಿ ನೀರು: ಕೆರೆ ತುಂಬಿಸುವ ಯೋಜನೆಗೆ 0.5 ಟಿಎಂಸಿ ನೀರಿನ ಬಳಕೆಗೆ ಅನುಮತಿ ದೊರೆತಿದೆ. ಶೇ 30ರಷ್ಟು ಮಳೆಯಾಶ್ರಿತ ಹಾಗೂ ಶೇ 70ರಷ್ಟು ನದಿಮೂಲದಿಂದ ನೀರು ಹರಿಸಲಾಗುತ್ತಿದೆ. ಈ ಪೈಕಿ ಅರಳಿಹಳ್ಳಿ ಕೆರೆಗೆ 106.36 ಹತ್ತು ಲಕ್ಷ ಘನ ಅಡಿ (ಎಂಸಿಎಫ್‌ಟಿ–ಮಿಲಿಯನ್‌ ಕ್ಯೂಬಿಕ್‌ ಫೀಟ್‌), ಹಿರೇಹಡಗಲಿ 34.86, ಹಗರನೂರು 120.67, ದೇವಗೊಂಡನಹಳ್ಳಿ 64.07, ಮುದೇನೂರು 70, ತಳಕಲ್ಲು 38.12, ಹಿರೇಮಲ್ಲನಕೆರೆ 35, ಹ್ಯಾರಡ 62, ದಾಸನಹಳ್ಳಿ 39.61, ಬನ್ನಿಕಲ್ಲು 116.07 ಎಂಸಿಎಫ್‌ಟಿ ನೀರನ್ನು ತುಂಬಿಸಲಾಗುತ್ತಿದೆ. ಸಮರ್ಪಕ ಮಳೆ ಇಲ್ಲದೇ ದಶಕಗಳಿಂದ ಬತ್ತಿ ಹೋಗಿದ್ದ ಕೆರೆಗಳಿಗೆ ಜೀವಕಳೆ ಬರುವುದನ್ನು ಈ ಭಾಗದ ರೈತರು ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಕೆ.ಸೋಮಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT