ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

Last Updated 10 ನವೆಂಬರ್ 2017, 6:01 IST
ಅಕ್ಷರ ಗಾತ್ರ

ಬೀದರ್: ಶುಕ್ರವಾರ ಟಿಪ್ಪು ಜಯಂತಿ ಆಚರಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಗುರುವಾರ ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ಆಗಿದ್ದು, ಶುಕ್ರವಾರ ರಾತ್ರಿ 12 ಗಂಟೆಯ ವರೆಗೂ ಇರಲಿದೆ.

ಮನೆಗಳಲ್ಲಿ ಟಿಪ್ಪು ಭಾವಚಿತ್ರ ಇಟ್ಟು ಗೌರವ ಸಲ್ಲಿಸಬಹುದು. ಸಾರ್ವಜನಿಕವಾಗಿ ಯಾರೂ ಕಾರ್ಯಕ್ರಮ ಆಚರಿಸುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಹುಮನಾಬಾದ್‌ ಹಾಗೂ ಬಸವಕಲ್ಯಾಣದಲ್ಲಿ ಬುಧವಾರ ಪೊಲೀಸ್‌ ಪಡೆ ಪಥ ಸಂಚಲನ ನಡೆಸಿ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದೆ.

ಗುರುವಾರ ಬೀದರ್‌ ನಗರದ ಡಾ.ಅಂಬೇಡ್ಕರ್‌ ವೃತ್ತದಿಂದ ಒಲ್ಡ್‌ಸಿಟಿ ವರೆಗೆ ಪೊಲೀಸರು ಪಥ ಸಂಚಲನ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದ್ದಾರೆ. ಬಸವಕಲ್ಯಾಣ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಶಾಸಕ ಜುಲ್ಫೇಕಾರ್ ಹಾಸ್ಮಿ ಸಹೋದರ ಗಾಲಿಬ್‌ ಹಾಸ್ಮಿ ಹಾಗೂ ವಹಿದ್‌ ಲಖನ್‌ ಅವರು ಪ್ರತ್ಯೇಕ ಕಾರ್ಯಕ್ರಮ ಆಯೋಜಿಸುವ ಪ್ರಸ್ತಾಪ ಮಾಡಿದ್ದರು. ಅನುಮತಿ ಕೊಡಲು ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

‘ಕೆಎಸ್‌ಆರ್‌ಪಿ ನಾಲ್ಕು ತುಕಡಿ, ಜಿಲ್ಲಾ ಸಶಸ್ತ್ರ ಪಡೆಯ ಆರು ತುಕಡಿ, ಒಂದು ಕಮಾಂಡೊ ಪಡೆಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. 175 ಕೋಮವಾದಿ ಗೂಂಡಾಗಳಿಂದ ಭದ್ರತಾ ಬಾಂಡ್‌ಗಳನ್ನು ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌ ತಿಳಿಸಿದ್ದಾರೆ.

ಆದೇಶ ಪಾಲನೆಗೆ ಸೂಚನೆ: ಜಿಲ್ಲಾಧಿಕಾರಿ ಕಚೇರಿ, ಉಪ ಉಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ ಕಚೇರಿಗಳಲ್ಲಿ ಮಾತ್ರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಷಣ್ಮುಖ ಸೂಚಿಸಿದ್ದಾರೆ. ಮೆರವಣಿಗೆ, ಬೈಕ್‌ ರ‍್ಯಾಲಿ ನಡೆಸ ಬಾರದು. ಯಾರೂ ಖಾಸಗಿ ಕಾರ್ಯಕ್ರಮ ಆಯೋಜಿಸಬಾರದು. ಸರ್ಕಾರಿ ಸಿಬ್ಬಂದಿ ಕಟ್ಟುನಿಟ್ಟಾಗಿ ಆದೇಶ ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ.

ಇಂದು ಕಾರ್ಯಕ್ರಮ: ಜಿಲ್ಲಾ ಆಡಳಿತದ ವತಿಯಿಂದ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮ ನವೆಂಬರ್ 10 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್‌ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿಜಯಪುರದ ಸನತಕುಮಾರ ಬೆಳಗಲಿ ಉಪನ್ಯಾಸ ನೀಡುವರು. ಜಿಲ್ಲಾ ಆಡಳಿತವು ಸಂಸದ ಭಗವಂತ ಖೂಬಾ ಮನವಿಯ ಮೇರೆಗೆ ಆಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT