ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗೆ ಜನಪ್ರತಿನಿಧಿಗಳ ನಿರ್ಲಕ್ಷ್ಯ

Last Updated 10 ನವೆಂಬರ್ 2017, 6:10 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದ ಪುರಸಭೆಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಅಧ್ಯಕ್ಷರ ಬದಲಾವಣೆಯಾಗುತ್ತಿದೆ. ಆದರೆ, ಅನೇಕ ವಾರ್ಡ್‌ಗಳಲ್ಲಿ ಮೂಲಸೌಕರ್ಯಗಳ ಸಮಸ್ಯೆಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗುತ್ತಿಲ್ಲ. ಪಟ್ಟಣ ಬಹುತೇಕ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ವಾರ್ಡ್‌ಗಳಲ್ಲಿ ಉತ್ತಮ ರಸ್ತೆಯಿಲ್ಲ. ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಅಶುಚಿತ್ವದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹೀಗೆ ಅಲ್ಲಿನ ನಿವಾಸಿಗಳು ಸಮಸ್ಯೆಗಳ ಪಟ್ಟಿಯನ್ನು ಮುಂದಿಡುತ್ತಾರೆ.

ಅಧ್ಯಕ್ಷರ ಮನೆಯ ಪಕ್ಕದಲ್ಲಿಯೇ ಅನೈರ್ಮಲ್ಯ: 11ನೇ ವಾರ್ಡ್‌ನಲ್ಲಿ ಹಲವೆಡೆ ಚರಂಡಿಗಳು ಕಟ್ಟಿಕೊಂಡಿವೆ. ಪುರಸಭೆ ಅಧ್ಯಕ್ಷ ಪಿ. ಗಿರೀಶ್‌ ಅವರ ಮನೆಯ ಪಕ್ಕದಲ್ಲೇ ಖಾಸಗಿ ಜಾಗವೊಂದರಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಇದರಿಂದ ಈ ಭಾಗದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು, ನಿವಾಸಿಗಳು ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿಯಲ್ಲಿದ್ದಾರೆ.

ವಾರ್ಡ್‌ನ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಅಂಬೇಡ್ಕರ್ ವಿದ್ಯಾರ್ಥಿನಿಲಯವಿದೆ. ಇದರ ಹಿಂಭಾಗ ಜನವಸತಿ ಪ್ರದೇಶವಾಗಿದ್ದು, ಈ ಸ್ಥಳದಲ್ಲಿ ಮದ್ಯದಂಗಡಿಯ ತ್ಯಾಜ್ಯವನ್ನು ಬಿಸಾಡಲಾಗುತ್ತಿದೆ. ಮಾಂಸದಂಗಡಿಗಳ ಮೂಳೆ ಮತ್ತಿತರ ತ್ಯಾಜ್ಯಗಳನ್ನೂ ಇಲ್ಲಿಯೇ ಎಸೆಯಲಾಗುತ್ತಿದೆ. ಇದರಿಂದ ಇಡೀ ಪ್ರದೇಶ ಗಬ್ಬು ನಾರುತ್ತಿದೆ. ಜತೆಗೆ, ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ಮಕ್ಕಳು, ವಯೋವೃದ್ಧರು ಓಡಾಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಈ ಸಮಸ್ಯೆಗಳು ಪುರಸಭೆ ಅಧ್ಯಕ್ಷರ ಮನೆಯ ಕೂಗಳತೆಯ ದೂರದಲ್ಲಿದ್ದರೂ ಅವರು ಮಾತ್ರ ಈ ಬಗ್ಗೆ ಕ್ರಮವಹಿಸುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಪುರಸಭೆಗೆ ಈ ಅವಧಿಯಲ್ಲಿ ಮೂವರು ಅಧ್ಯಕ್ಷರು ಹಾಗೂ ಮೂವರು ಉಪಾಧ್ಯಕ್ಷರು ಬದಲಾಗಿದ್ದಾರೆ. ಆದರೆ, ಪಟ್ಟಣದ ಸಮಸ್ಯೆಗಳು ಮಾತ್ರ ಹಾಗೆಯೇ ಉಳಿದಿವೆ ಎನ್ನುವುದು ಸಾರ್ವಜನಿಕರ ಆರೋಪ.

‘ಪ್ರತಿ ಆರು ತಿಂಗಳಿಗೊಮ್ಮೆ ಅಧ್ಯಕ್ಷರನ್ನು ಬದಲಿಸುತ್ತ ಅಧಿಕಾರವನ್ನು ಅನುಭವಿಸಲು ಮಾತ್ರ ಪುರಸಭೆ ಸೀಮಿತವಾಗಿದೆ. ವಾರ್ಡ್‌ಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಯಾರಿಗೂ ಆಸಕ್ತಿ ಇಲ್ಲ’ ಎಂದು ನಿವಾಸಿಯೊಬ್ಬರು ದೂರಿದರು. ಮುಸ್ಲಿಂ ಸಮುದಾಯದವರು ಹೆಚ್ಚಿರುವ 3 ಮತ್ತು 4ನೆಯ ವಾರ್ಡ್‌ಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಇಲ್ಲಿ ಕಸದ ಬೃಹತ್‌ ರಾಶಿಗಳೇ ನಿರ್ಮಾಣವಾಗಿವೆ. ಪ್ರಶ್ನಿಸಿದಾಗ ವಿಲೇವಾರಿ ಮಾಡುವುದಾಗಿ ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಇತ್ತ ತಲೆಹಾಕುತ್ತಿಲ್ಲ ಎಂದು ಆರೋಪಿಸಿದರು.

‘ಅಧಿಕಾರದಲ್ಲಿರುವ ಕಾಂಗ್ರೆಸ್ ದುರಾಡಳಿತ ಮತ್ತು ಬಿಜೆಪಿಯ ನಿರ್ಲಕ್ಷ್ಯದಿಂದ ಪಟ್ಟಣದ ಸಾರ್ವಜನಿಕರು ಸಮಸ್ಯೆ ಅನುಭವಿಸಬೇಕಾಗಿದೆ. ಜನಪ್ರತಿನಿಧಿಗಳು ತಾಲ್ಲೂಕನ್ನು ಮಾದರಿ ಮಾಡುತ್ತೇವೆ ಎಂದು ಸಭೆ ಸಮಾರಂಭಗಳಲ್ಲಿ ಹೇಳಿಕೊಂಡು ತಿರುಗುವ ಮೂಲಕ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಬಿಎಸ್‌ಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಜೆ. ಕಾಂತರಾಜು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT