ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ ಹೊಸ ಮಾರ್ಗದ ಪ್ರವರ್ತಕ

Last Updated 10 ನವೆಂಬರ್ 2017, 6:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸದಾ ತಮ್ಮೊಳಗೆ ಬೆರಗು ಮತ್ತು ವಿಸ್ಮಯಗಳನ್ನು ಇಟ್ಟುಕೊಂಡು ಕನ್ನಡ ಕಟ್ಟುವ ಕೆಲಸ ಮಾಡಿದ ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡ ಸಾಹಿತ್ಯಕ್ಕೆ ಹೊಸ ಮಾರ್ಗ ಪ್ರವರ್ತಕರಾಗಿದ್ದರು’ ಎಂದು ನಂದಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ತತ್ತೂರು ಲೋಕೇಶಪ್ಪ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಗರದ 13ನೇ ವಾರ್ಡ್‌ನಲ್ಲಿರುವ ಸೇಂಟ್‌ ಜಾನ್ಸ್‌ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ‘ಶಾಲೆಗೊಂದು ಕನ್ನಡದ ಕಾರ್ಯಕ್ರಮ’ದಲ್ಲಿ ಅವರು ‘ಕನ್ನಡ ಜಾಗೃತ ಪ್ರಜ್ಞೆ–ಪೂರ್ಣಚಂದ್ರ ತೇಜಸ್ವಿ’ ಎಂಬ ವಿಚಾರ ಕುರಿತು ಮಾತನಾಡಿದರು.

‘ತಂದೆ ಕುವೆಂಪು ಅವರ ಕಲಾಸೃಷ್ಟಿ, ಶಿವರಾಮ ಕಾರಂತರ ಪರಿಸರ ಪ್ರಜ್ಞೆ ಮೇಳೈಸಿಕೊಂಡು ಕನ್ನಡದಲ್ಲಿ ವೈಜ್ಞಾನಿಕವಾಗಿ ಚಿಂತನೆ ಮಾಡುವ ಸಾಹಿತ್ಯವನ್ನು ನೀಡಿದ ತೇಜಸ್ವಿ ಅವರು ಯಾವುದೇ ಒಂದು ಪಂಥ, ಸಿದ್ಧಾಂತಕ್ಕೆ ಕಟ್ಟು ಬೀಳದೆ ಸದಾ ಸಮಕಾಲೀನ ವಾಸ್ತವ ಪ್ರಪಂಚಕ್ಕೆ ಒತ್ತು ನೀಡಿದವರು’ ಎಂದು ಹೇಳಿದರು.

‘ನವ್ಯ ಸಾಹಿತ್ಯದ ಪ್ರಮುಖ ಲೇಖಕ ಹಾಗೂ ಸ್ವತಂತ್ರ ಪ್ರವೃತ್ತಿಯ ಬರಹಗಾರರಾಗಿದ್ದ ತೇಜಸ್ವಿ ಅವರು ವಿಸ್ಮಯ ಪ್ರಪಂಚ ಅಡಿಯಲ್ಲಿ ವೈಜ್ಞಾನಿಕ ಸತ್ಯಗಳನ್ನು ಅನ್ವೇಷಣೆ ಮಾಡುತ್ತ ಕನ್ನಡಕ್ಕೆ ಹೊಸ ದಿಕ್ಕು ತೋರಿಸಿದರು. ಕವಿತೆ, ನಾಟಕ, ಕಾದಂಬರಿ, ಕತೆ ಮೊದಲಾದ ಸಾಹಿತ್ಯಕ ಪ್ರಕಾರಗಳಲ್ಲಿ ತಮ್ಮ ಛಾಪು ಮೂಡಿಸಿದ ತೇಜಸ್ವಿ, ನಾಲ್ಕು ದಶಕಗಳಲ್ಲಿ ಕನ್ನಡ ಸಾಹಿತ್ಯಕ್ಕೆ ಅನೇಕ ಮಹತ್ವಪೂರ್ಣ ಕೃತಿಗಳನ್ನು ನೀಡಿದರು. ಜತೆಗೆ ಹಲವಾರು ಆಂಗ್ಲ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ’ ಎಂದು ತಿಳಿಸಿದರು.

ಶಾಲೆಯ ಸಂಸ್ಥಾಪಕ ಹೆನ್ರಿ ಪ್ರಸಾದ್ ಮಾತನಾಡಿ, ‘ಪರಿಷತ್ತು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ಮಾತೃಭಾಷೆಯ ಪ್ರಜ್ಞೆ ಜಾಗೃತಗೊಳಿಸಲು ಹೊರಟಿರುವುದು ಅಭಿನಂದನೀಯ. ನಮ್ಮ ಶಾಲೆಯಲ್ಲಿ ಕೂಡ ಸದಾ ನಾವು ಕನ್ನಡಕ್ಕೆ ಒತ್ತು ನೀಡುತ್ತಲೇ ಬಂದಿದ್ದೇವೆ’ ಎಂದು ಹೇಳಿದರು.

ಯುವ ಮುಖಂಡ ಎಸ್.ಪಿ.ಶ್ರೀನಿವಾಸ್ ಮಾತನಾಡಿ, ‘ನಗರದಲ್ಲಿ ನೂರಾರು ಕನ್ನಡಪರ ಸಂಘಟನೆಗಳಿವೆ. ಅವು ವರ್ಷಕ್ಕೆ ಒಂದು ಬಾರಿ ಕನ್ನಡ ರಾಜ್ಯೋತ್ಸವನ್ನು ಮಾಡುವುದು ಬಿಟ್ಟರೆ ಬೇರೆ ಏನನ್ನು ಮಾಡುತ್ತಿಲ್ಲ. ಇನ್ನು ಮುಂದೆಯಾದರೂ ಕನ್ನಡಪರ ಸಂಘಟನೆಗಳು ಸಾಹಿತ್ಯ ಪರಿಷತ್ತಿನ ಜತೆಗೂಡಿ ಇಂತಹ ಕಾರ್ಯಕ್ರಮ ನಡೆಸಲು ಸಹಕಾರ ನೀಡಬೇಕು’ ಎಂದು ತಿಳಿಸಿದರು.

ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮಂಚನಬಲೆ ಶ್ರೀನಿವಾಸ್ ಮಾತನಾಡಿ, ‘ನಾವು ಇದೇ ಮೊದಲ ಬಾರಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಈ ಶಾಲೆಯ ವಿದ್ಯಾರ್ಥಿಗಳು ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ. ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದರು.

ತತ್ತೂರು ಲೋಕೇಶಪ್ಪ, ಹೆನ್ರಿ ಪ್ರಸಾದ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಸಾಪದ ಪದಾಧಿಕಾರಿಗಳಾದ ಪ್ರವೀಣ್, ಉಷಾ ಶ್ರೀನಿವಾಸ್, ಮುಖಂಡ ಮಂಜುನಾಥ್, ಆನಂದ್, ಅಶ್ವಥ್, ದಾಸಪ್ಪ, ಲೋಕೇಶ್, ಉದಯ್ ಶಂಕರ್, ಮಂಜುನಾಥ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT