ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾದ ಬಿಡಿಗಾಸೂ ರೈತರ ಖಾತೆಗೆ ಬಂದಿಲ್ಲ

Last Updated 10 ನವೆಂಬರ್ 2017, 6:43 IST
ಅಕ್ಷರ ಗಾತ್ರ

ಚನ್ನಗಿರಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೇವಲ ₹ 50 ಸಾವಿರ ಸಾಲ ಮನ್ನಾ ಘೋಷಣೆ ಮಾಡಿದೆ. ಆದರೆ ನವಂಬರ್ ಬಂದರೂ ಬಿಡಿಗಾಸು ಕೂಡ ರೈತರ ಖಾತೆಗೆ ಜಮಾ ಆಗಿಲ್ಲ. ಸರ್ಕಾರ ಸಾಲದಲ್ಲಿ ಮುಳುಗಿದೆ. ನಾಲ್ಕೂವರೆ ವರ್ಷದ ಆಡಳಿತದ ಅವಧಿಯಲ್ಲಿ ₹ 1.80 ಲಕ್ಷ ಕೋಟಿ ಸಾಲ ಮಾಡಿರುವುದು ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ನಡೆದ ಜೆಡಿಎಸ್ ಕರ್ನಾಟಕ ವಿಕಾಸ ಯಾತ್ರೆ ಹಾಗೂ ತಾಲ್ಲೂಕು ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿಯ ಪರಿವರ್ತನಾ ಯಾತ್ರೆಯ ಬಗ್ಗೆ ಕಾಂಗ್ರೆಸ್ ತಲೆಕೆಡಿಸಿಕೊಂಡಿಲ್ಲ. ಆದರೆ ಕಳೆದ ಮೂರು ದಿನಗಳಿಂದ ಆರಂಭವಾಗಿರುವ ಜೆಡಿಎಸ್ ಕರ್ನಾಟಕ ವಿಕಾಸ ಯಾತ್ರೆಯ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಚುನಾವಣೆ ಸಮೀಸುತ್ತಿದ್ದಂತೆ ಮೈಕೊಡವಿ ಮೇಲೆ ಎದ್ದಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗಳ ಭೂಮಿಪೂಜೆಯನ್ನು ತರಾತುರಿ ಯಿಂದ ಮಾಡುತ್ತಿದೆ.

ಉದ್ಯೋಗ ಸೃಷ್ಟಿಸುವಲ್ಲಿ ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕ್ಷೀರಭಾಗ್ಯ, ಅನ್ಯಭಾಗ್ಯ, ಶಾದಿಭಾಗ್ಯ ಮುಂತಾದ ಯೋಜನೆಗಳನ್ನು ಜಾರಿ ಮಾಡಿ, ಕೊಡಲು ಹಣ ಇಲ್ಲದೇ ಪರದಾಡುತ್ತಿದ್ದಾರೆ. ಪ್ರಕೃತಿಯ ಅಸಹಕಾರದಿಂದಾಗಿ ರೈತರ ಬಾಳು ನಾಶವಾಗುತ್ತಿದೆ. ಆದರೆ ಈ ಕಾಂಗ್ರೆಸ್ ಸರ್ಕಾರ ರೈತರ ಕಷ್ಟಗಳಿಗೆ ಸ್ಪಂದಿಸದೇ ಬಿಜೆಪಿಯವರನ್ನು ತೆಗಳುವ ಕಾರ್ಯದಲ್ಲಿ ತೊಡಗಿದೆ ಎಂದು ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರ ತೆರಿಗೆ ಹಣವನ್ನು ಉಪಯೋಗಿಸಿಕೊಂಡು ಪ್ರತಿ ದಿನ ಮೂರು ಪುಟಗಳಷ್ಟು ಸರ್ಕಾರದ ಸಾಧನೆಯ ಬಗ್ಗೆ ಎಲ್ಲಾ
ಪತ್ರಿಕೆಗಳಿಗೂ ಜಾಹೀರಾತನ್ನು ನೀಡುತ್ತಿದ್ದಾರೆ. ಕೇವಲ ಜಾಹೀರಾತಿನಲ್ಲಿ ಮಾತ್ರ ಈ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಆಗಿವೆ. ಜನರ ಕಣ್ಣಿಗೆ ಕಾಣಿಸುವಂತಹ ದೊಡ್ಡ ಯೋಜನೆಗಳನ್ನು ಜಾರಿಗೆ ತರುವಲ್ಲಿ ಈ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.

‘20 ತಿಂಗಳ ಜೆಡಿಎಸ್ ಅಧಿಕಾರವನ್ನು ನೀವು ನೋಡಿದ್ದೀರಿ. ಆಗ ನಾನು ಷರತ್ತಿನಂತೆ ಬಿಜೆಪಿಯವರಿಗೆ ಅಧಿಕಾರ ನೀಡಲಿಲ್ಲ ಎಂಬ ಕಾರಣಕ್ಕೆ ನಮ್ಮ ಪಕ್ಷದ ಬಗ್ಗೆ ಬೇಸರ ವ್ಯಕ್ತಪಡಿಸಿ ಅಧಿಕಾರದಿಂದ ವಂಚಿತರಾಗುವಂತೆ ಮಾಡಿದ್ದೀರಿ. ಆದರೆ ನಾವು ಯಾವುದೇ ತಪ್ಪನ್ನು ಮಾಡಿಲ್ಲ. ಜೆಡಿಎಸ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಒಮ್ಮೆ ಅವಕಾಶ ಕಲ್ಪಿಸಿಕೊಡಿ.

ಈ ರಾಜ್ಯದ ರೈತರು ಎಂದಿಗೂ ಇನ್ನೊಮ್ಮೆ ಕಷ್ಟ ಅನುಭವಿಸದಂತೆ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತೇನೆ’ ಎಂದು ಭರವಸೆ ನೀಡಿದರು. ಮಾಜಿ ಕೃಷಿ ಸಚಿವ ಬಂಡೆಪ್ಪ ಕಾಶಾಂಪೂರ್, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್ ಭೋಜೇಗೌಡ, ಪದವೀಧರ ಕ್ಷೇತ್ರದ ಅಭ್ಯರ್ಥಿ ಅಶ್ವಿನ್, ಹೊದಿಗೆರೆ ರಮೇಶ್, ಬಿ. ಕಾಂತರಾಜ್, ಬಿ. ಫಕೀರಪ್ಪ, ಶಶಿಧರ್, ಜೆ.ಎಸ್. ಶಿವಮೂರ್ತಿ, ಗಾದ್ರಿ ರಾಜು, ವೀರಭದ್ರಪ್ಪ ಉಪಸ್ಥಿತರಿದ್ದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾಕೀರ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಡಿ. ರಮೇಶ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT