ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರಕ್ಕಾಗಿ ಅಹೋರಾತ್ರಿ ಧರಣಿ ಆರಂಭ

Last Updated 10 ನವೆಂಬರ್ 2017, 6:48 IST
ಅಕ್ಷರ ಗಾತ್ರ

ಧಾರವಾಡ: ತಾಲ್ಲೂಕು ಮಟ್ಟದಲ್ಲಿ ರಚನೆಗೊಂಡ ಭೂ ಮಂಜೂರಾತಿ ಸಮಿತಿಯು ಸಾಗುವಳಿದಾರರ ಅರ್ಜಿಗಳನ್ನು ಪರಿಶೀಲಿಸಿ ಅವರಿಗೆ ವಿಳಂಬ ಮಾಡದೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಬಗರ್‌ಹುಕುಂ ಹಾಗೂ ಅರಣ್ಯ ಜಮೀನು ಸಾಗುವಳಿದಾರರು, ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಗುರುವಾರ ಮಧ್ಯಾಹ್ನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಆರಂಭಿಸಿದರು.

ಸಂಘದ ಅಧ್ಯಕ್ಷ ಬಿ.ಎಸ್‌.ಸೊಪ್ಪಿನ ಮಾತನಾಡಿ, ‘ಧಾರವಾಡ, ಕಲಘಟಗಿ ತಾಲ್ಲೂಕಿನ ಸಾವಿರಾರು ರೈತರು ಜಮೀನು ಇಲ್ಲದೆ, ಸರ್ಕಾರಿ ಹಾಗೂ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಹಕ್ಕು ಪತ್ರ ವಿತರಿಸುವಂತೆ ಜಿಲ್ಲಾಡಳಿತವನ್ನು ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಕಂದಾಯ ಸಚಿವರು ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ಕೊಡಲಾಗುವುದು ಎಂದು ಹೇಳುತ್ತಾರೆ. ಆದರೆ, ಆ ನಿಟ್ಟಿನಲ್ಲಿ ಯಾವುದೇ ಕಾರ್ಯ ನಡೆಯುತ್ತಿಲ್ಲ’ ಎಂದು ಆರೋಪ ಮಾಡಿದರು.

‘ಸಾಗುವಳಿ ಮಾಡುವ ಜಮೀನಿಗೆ ನಮೂನೆ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದರೆ ಅದನ್ನು ಸಕ್ರಮಗೊಳಿಸಲು ಅಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡುತ್ತಿದ್ದಾರೆ. ಈ ಜಮೀನುಗಳನ್ನು ಕುಟುಂಬ ನಿರ್ವಹಣೆಗಾಗಿ ಕೃಷಿಗೆ ಮಾತ್ರ ಬಳಸಲಾಗುತ್ತಿದ್ದು, ಯಾವುದೇ ವಾಣಿಜ್ಯ ಉದ್ದೇಶಗಳಿಗಲ್ಲ ಎಂದು ಮನವರಿಕೆ ಮಾಡಿಕೊಟ್ಟರೂ ಬಡ ರೈತರನ್ನು ಭೂಕಬಳಿಕೆದಾರರು ಎಂದು ಅಧಿಕಾರಿಗಳು ಭಾವಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರು ನಮೂನೆ ಒಂದರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅವರನ್ನು ಹೊರ ಹಾಕಿದೆ. ಅವರಿಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಲಾಗುತ್ತಿದೆ. ಹೀಗಾಗಿ ಇಂಥ ರೈತರು ನಿಸ್ಸಹಾಯಕರಾಗಿ ಜಮೀನು ಪಡೆಯುವುದರಿಂದ ವಂಚಿತರಾಗಿದ್ದಾರೆ’ ಎಂದರು. ಕೆ.ಎಚ್‌.ಪಾಟೀಲ, ನೀಲಕಂಠಪ್ಪ ಸಿಂಪಗೇರ, ಚನ್ನಯ್ಯ ಹಿರೇಮಠ, ಶಿವಪ್ಪ ಲಮಾಣಿ, ಶಿವಪುತ್ರಯ್ಯ ಹಿರೇಮಠ, ಬಸವರಾಜ ಬೆಳ್ಳಿಗಟ್ಟಿ, ನಿಂಗಪ್ಪ ಭಜಂತ್ರಿ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT