ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬದುಕಿನ ತಲ್ಲಣ

Last Updated 10 ನವೆಂಬರ್ 2017, 19:30 IST
ಅಕ್ಷರ ಗಾತ್ರ

–ಸಮುದ್ಯತಾ ಕಂಜರ್ಪಣೆ

**

"ಎಲ್ಲಾ ಗೆಳತಿಯರೂ ಟೀ ಶರ್ಟ್ ಹಾಕುತ್ತಾರೆ ಅಮ್ಮಾ.. ನೀನು ಯಾವಾಗಲೂ ಕುರ್ತಾ ಮಾತ್ರ ಹಾಕು ಅಂತ ಬಲವಂತ ಮಾಡಬೇಡ" ವಿದ್ಯಾ ಗೊಣಗುತ್ತಿದ್ದಳು. "ನೀನು ಕಾಲೇಜಿಗೆ ಓದುವುದಕ್ಕೆ ಹೋಗುವುದಾ, ಅಲಂಕಾರ ಮಾಡಿಕೊಂಡು ತೋರಿಸುವುದಕ್ಕಾ?" ಅಮ್ಮನ ಬೈಗುಳ ಶುರುವಾಯಿತು. ಇದು ವಿದ್ಯಾ ಮಾತ್ರವಲ್ಲ ನಮ್ಮೆಲ್ಲರ ಮನೆಯ ಕಥೆ. ಇಷ್ಟವಾದ ಬಟ್ಟೆಗಳನ್ನು ತೊಟ್ಟಾಗ, ಸ್ನೇಹಿತರೊಂದಿಗೆ ಹೊರಗೆ ಹೋದಾಗ, ಹುಡುಗರೊಂದಿಗೆ ಮಾತನಾಡಿದಾಗ, ಫೋನ್ ಉಪಯೋಗಿಸುವಾಗ ಮುಂತಾದ ಹಲವಾರು ಸನ್ನಿವೇಶಗಳಲ್ಲಿ ಪೋಷಕರ ಗೊಣಗಾಟ ಕೇಳಿಸುತ್ತಿರುತ್ತದೆ.

ಯುವಜನತೆ ಇದಕ್ಕೆ ’ಜನರೇಶನ್ ಗ್ಯಾಪ್’ ಎನ್ನುವ ಹೆಸರು ಕೊಟ್ಟು ಅಪ್ಪ ಅಮ್ಮಂದಿರಿಗೆ ನಮ್ಮ ಕಷ್ಟ ಅರ್ಥವೇ ಆಗುವುದಿಲ್ಲ ಎಂದು ಗೊಂದಲದಲ್ಲಿ ತೊಳಲಾಡುತ್ತಿರುತ್ತದೆ. ಹಿರಿಯರು ಈಗಿನ ಕಾಲದ ಹುಡುಗರಿಗೆ ಗೌರವವೇ ಇಲ್ಲ, ಹಾಳಾಗಿ ಹೋಗಿದ್ದಾರೆ ಎಂದು ಆರೋಪಿಸುತ್ತಾರೆ. ಇದು ಕೇವಲ ಪೋಷಕರ ಸಮಸ್ಯೆಯಲ್ಲ. ಯುವಜನತೆಗೆ ಕೂಡಾ ಇದು ಒತ್ತಡ ಹೇರುವ ವಿಷಯವೇ ಆಗಿದೆ. ನಾವೇನೇ ಮಾಡಿದರೂ ಅಪ್ಪ ಅಮ್ಮ ಏಕೆ ವಿರೋಧಿಸುತ್ತಾರೆ, ನಮ್ಮ ಗೊಂದಲಗಳು ಒತ್ತಡಗಳು ಅವರಿಗೇಕೆ ಅರ್ಥವಾಗುವುದಿಲ್ಲ ಎನ್ನುವುದು ಸಾಧಾರಣ ಪ್ರಶ್ನೆ.

ಮಗಳನ್ನು "ನಾನು ನಿನಗಿಂತ ದೊಡ್ಡವಳು ನನ್ನ ಮಾತು ಕೇಳು" ಎನ್ನುವ ಅಮ್ಮ ತನ್ನ ತಾಯಿಯನ್ನು "ಅದು ಹಾಗಲ್ಲಮ್ಮ, ನಿಂಗೆ ಗೊತ್ತಾಗಲ್ಲ" ಎಂದು ವಿರೋಧಿಸಿದ್ದಿದೆ. ಪ್ರತಿ ತಲೆಮಾರಿಗೂ ತನ್ನ ಮುಂದಿನ ಹಾಗೂ ಹಿಂದಿನ ತಲೆಮಾರಿನ ಜೊತೆ ಹಲವಾರು ದೃಷ್ಟಿಕೋನಗಳಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಇದು ಕೇವಲ ಅವರ ನಡುವಿನ ವಯಸ್ಸಿನ ಅಂತರವಲ್ಲ. ವಯಸ್ಸಿಗನುಗುನವಾಗಿ ಅನುಭವಗಳು ಬದಲಾಗುತ್ತವೆ. ಆದರೆ ಜನರೇಶನ್ ಗ್ಯಾಪ್ ಎನ್ನುವುದು ಒಂದು ತಲೆಮಾರಿನ ಸಾಮಾಜಿಕ ವೈಚಾರಿಕ ಸಮಗ್ರ ಬದಲಾವಣೆ.

ತಂದೆ-ಮಗ, ತಾಯಿ-ಮಗಳು ಮುಂತಾದ ಸಂಬಂಧಗಳಲ್ಲಿ ಇಂತಹ ಭಿನ್ನಾಭಿಪ್ರಾಯ ಸಹಜ. ಹದಿಹರೆಯದಲ್ಲಿ ಇದರ ಒತ್ತಡ ತುಸು ಜಾಸ್ತಿಯೇ ಅನಿಸುತ್ತದೆ. ಕೆಲವು ವಿಷಯಗಳಲ್ಲಿ ಅಮ್ಮ ತುಸು ಜಾಸ್ತಿಯೇ ರಿಯಾಕ್ಟ್ ಮಾಡುತ್ತಾಳೆ ಅನಿಸುತ್ತದೆ. ಅಮ್ಮ-ಮಗಳ ಸುಮಧುರ ಸಂಬಂಧ ಹದಿಹರೆಯದಲ್ಲಿ ಹದಗೆಡುತ್ತಿರುತ್ತದೆ. ಮಗಳು ಓದನ್ನು ಕಡೆಗಣಿಸಿ ಬೇರೆಡೆಗೆ ಆಕರ್ಷಿತಳಾದರೆ ಎನ್ನುವ ಆತಂಕ ಅಮ್ಮನದ್ದಾದರೆ ಅಮ್ಮ ಜವಾಬ್ದಾರಿಯ ಹೆಸರಲ್ಲಿ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಾಳೆ ಎಂಬ ಆರೋಪ ಮಗಳದ್ದು. ಅದನ್ನು ಸೂಕ್ಷ್ಮವಾಗಿ ತಿಳಿಸಿ ಹೇಳಿ ಗೊಂದಲವನ್ನು ಸರಿಪಡಿಸುವ ವ್ಯವದಾನ ಇಬ್ಬರಲ್ಲೂ ಇರುವುದಿಲ್ಲ.

"ಓದೋದು ಬಿಟ್ರೆ ನಿಮಗಿನ್ನೇನು ಚಿಂತೆ" ಎಂದು ಆಗಾಗ ಹಿರಿಯರು ಹೇಳುತ್ತಿರುತ್ತಾರೆ. ಆದರೆ ಹಿರಿಯರು ಅರಿಯದ ಸತ್ಯವೇನೆಂದರೆ ’ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ’ ಎಂಬಂತೆ ಹದಿಹರೆಯದವರ ಒತ್ತಡ ಕೆಲವೊಮ್ಮೆ ಅವರಿಗೆ ಹೊರಲಾರದಂತಾಗುತ್ತದೆ. ಉಳಿದ ಸಹಪಾಠಿಗಳೊಂದಿಗೆ ಅವರ ಅಂತಸ್ತಿಗೆ ತಕ್ಕಂತೆ ಹೊಂದಿಕೊಳ್ಳಲು ಪರದಾಡುತ್ತೇವೆ. ಏನನ್ನಾದರೂ ಸಾಧಿಸಿ ಅಪ್ಪಮ್ಮನಿಗೆ ಹೆಮ್ಮೆಯುಂಟು ಮಾಡಬೇಕು ಎಂದು ಪರದಾಡುತ್ತೇವೆ. ಮನೆಯ ಆರ್ಥಿಕ ಕಷ್ಟಗಳನ್ನು ನೋಡಿ ನಾವೇನು ಸಹಾಯ ಮಾಡಬೇಕು ತಿಳಿಯದೇ ಒದ್ದಾಡುತ್ತೇವೆ. ಮನೆಯಲ್ಲಿ ಅಮ್ಮನೊಂದಿಗೆ ರೇಗಾಡಿ ಗೊಣಗುತ್ತಾ ಹೊರಬರುವ ನಾವು ಅಮ್ಮನನ್ನು ನೆನೆದು ಸ್ನೇಹಿತೆಯರೊಂದಿಗೆ ಕಣ್ಣೀರಾಗುತ್ತೇವೆ. ಅಪ್ಪನ ಅತೀಶಿಸ್ತಿಗೆ ಹೆದರಿದರೂ ಅಪ್ಪಾ ಐ ಲವ್ ಯು ಪಾ...ಎಂದು ಗುನುಗುತ್ತೇವೆ. ಹೇಗೆ ಅಪ್ಪ ಅಮ್ಮ ಅವರೇನೇ ಮಾಡಿದರೂ ನಮ್ಮ ಮಕ್ಕಳಲ್ವಾ ಎಂದು ಪ್ರೀತಿಸುತ್ತಾರೋ, ಹಾಗೇ ನಾವೂ ಅಪ್ಪ ಅಮ್ಮನನ್ನು ಪ್ರೀತಿಸುತ್ತೇವೆ.

ಹಲವು ವರ್ಷಗಳಿಂದ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ ಎಂಬ ಆರೋಪ ಹಿರಿಯರದ್ದು. ಆದರೆ ಈಗ ಕಾಲ ಬದಲಾಗಿದೆ. ಬಹುತೇಕ ಹಿರಿಯ ನಾಗರಿಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ನಮ್ಮ ವಯೋಮಾನದವರೊಂದಿಗೆ ಬೆರೆಯುತ್ತಾ ಲವಲವಿಕೆಯನ್ನು ಹೆಚ್ಚಿಸಿಕೊಳ್ಳುತ್ತಾರೆ. ನನ್ನಂತಹಾ ಹಲವಾರು ಮಕ್ಕಳು ತಮ್ಮ ಪೋಷಕರಲ್ಲಿ ಇಂತಹಾ ಬೆಳವಣಿಗೆಯನ್ನು ನೋಡಿ ಸಂತೋಷಪಡುತ್ತಾರೆ. ಆದರೆ ಇದರ ಜೊತೆಗೆ ಕಂಡುಬರುವ ಇನ್ನೊಂದು ಅಂಶವೇನೆಂದರೆ ಟೆಕ್ನಾಲಜಿಗೆ ಹೊಂದಿಕೊಳ್ಳುವ ಪೋಷಕರು ಇನ್ನಿತರ ಸಾಮಾಜಿಕ-ಧಾರ್ಮಿಕ ಆಚರಣೆಗಳಲ್ಲಿ, ಮೌಢ್ಯಗಳಲ್ಲಿ ಬದಲಾವಣೆಯನ್ನು ವಿರೋಧಿಸುತ್ತಾರೆ.

ಮುಟ್ಟಿನ ದಿನಗಳ ಕುರಿತು ಎಷ್ಟೇ ವೈಜ್ಞಾನಿಕ ವಿವರಣೆಗಳು ಬಂದಿದ್ದರೂ, ಅದು ಮುಜುಗರ ಪಡುವ ವಿಚಾರವಲ್ಲ ಅದೊಂದು ಕ್ರಿಯೆ ಅಷ್ಟೇ ಎಂದು ಹಲವಾರು ಕಡೆ ಕೇಳಿ ತಿಳಿದಿದ್ದರೂ ಅಮ್ಮ ಮಗಳನ್ನು ಈ ಆಚರಣೆಗೊಳಪಡಿಸುತ್ತಾಳೆ. ಅಡಿಗೆ ಮನೆ, ದೇವರ ಮನೆ ಬಿಟ್ಟು ಮನೆಯ ಇತರ ಭಾಗಗಳಿಗೆ ಗೊಣಗಾಡುತ್ತಾ ಪ್ರವೇಶಿಸಲು ಅನುಮತಿ ಕೊಟ್ಟು "ನಿಮ್ಮ ಅಜ್ಜಿ ನಾವು ಚಿಕ್ಕೋರಿದ್ದಾಗ ಕೋಣೆ ಬಿಟ್ಟು ಹೊರಕ್ಕೆ ಬರಲು ಬಿಡ್ತಾ ಇರಲಿಲ್ಲ" ಎನ್ನುತ್ತಾಳೆ. ತಾನು ಬರೀ ಮುಟ್ಟಿನ ಕೋಣೆಯಿಂದ ಪ್ರತಿರೋಧಿಸುತ್ತಾ ಮನೆಯ ಉಳಿದ ಭಾಗಗಳಿಗೆ ಬರುವ ಅನುಮತಿ ಪಡೆದಿದ್ದನ್ನು ಸೂಚ್ಯವಾಗಿ ತೋರಿಸುತ್ತಾ ಮಗಳು ಪ್ರತಿರೋಧವನ್ನು ನಿರಾಕರಿಸುತ್ತಾಳೆ. "ಅವೆಲ್ಲಾ ನಿಮ್ಮ ಕಾಲದಲ್ಲಿ ಅಮ್ಮಾ, ಈಗ ಇಂತಹಾ ಆಚರಣೆಗಳನ್ನು ಯಾರು ಮಾಡುವುದಿಲ್ಲ" ಎನ್ನುವ ಮಗಳ ಮಾತಿಗೆ "ನಿಮ್ಮ ಕಾಲದವರಿಗೆ ಮಡಿಹುಡಿ, ದೇವರು ದಿಂಡರ ಬಗ್ಗೆ ಭಯಭಕ್ತಿಯೇ ಇಲ್ಲ" ಎನ್ನುತ್ತಾಳೆ.

(ಸಮುದ್ಯತಾ ಕಂಜರ್ಪಣೆ)

ಇಂದಿನ ಕಾಲದ ಮಕ್ಕಳಿಗೆ ಹಿರಿಯರ ಬಗೆಗೆ ಗೌರವವೇ ಇಲ್ಲ, ಬೇಜವಾಬ್ದಾರಿ, ತಾವು ಹೇಳಿದ್ದೇ ನಡೆಯಬೇಕು ಎನ್ನುತ್ತಾರೆ ಎಂಬಿತ್ಯಾದಿ ಆರೋಪಗಳು ಯುವಜನತೆಯ ಮೇಲಿವೆ. ನಾವು ನಮ್ಮ ಕಾಲದ, ಹೊಸದೆನ್ನಿಸುವ ರೀತಿನೀತಿಗಳಿಗೆ ತೆರೆದುಕೊಂಡ ಮಾತ್ರಕ್ಕೆ ತಂದೆ-ತಾಯಿಯ ಬಗೆಗೆ ಪ್ರೀತಿ ಕಡಿಮೆಯಾಗಿದೆ, ಜವಾಬ್ದಾರಿ ಇಲ್ಲ, ಓದುವುದರಲ್ಲಿ ಆಸಕ್ತಿಯಿಲ್ಲ ಎಂದು ಅರ್ಥವಲ್ಲ. ಮಕ್ಕಳು ಹಾಳಾಗುವುದಕ್ಕೆ ಕಾರಣ ಇಂತಹಾ ಬದಲಾವಣೆಗಳೂ ಅಲ್ಲ. ಪೋಷಕರು ಅವನ್ನು ಅರ್ಥಮಾಡಿಕೊಳ್ಳುವ ವಿಧಾನ. ಮಕ್ಕಳಿಗೆ ತಮ್ಮ ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಅನಿವಾರ್ಯತೆ ಇರುತ್ತದೆ. ತಮ್ಮ ಗೆಳೆಯ ಗೆಳತಿಯರ ಮುಂದೆ, ತಮ್ಮ ಉದ್ಯೋಗದಲ್ಲಿ, ಕಾಲಕ್ಕೆ ತಕ್ಕಂತೆ ’ಅಪ್‌ಡೇಟ್’ ಆಗಿರುವ ಅಗತ್ಯ ಇರುತ್ತದೆ. ಅದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಹೆಚ್ಚಿನ ಪೋಷಕರು ಹಾಗೂ ಮಕ್ಕಳ ನಡುವೆ ಸೌಹಾರ್ದಯುತ ಮಾತುಕತೆಗೆ ಅವಕಾಶವೇ ಇರುವುದಿಲ್ಲ. ಅಭಿಪ್ರಾಯಗಳು ಹಳಿತಪ್ಪುವುದು ಇಂತಹಾ ಸಂದರ್ಭಗಳಲ್ಲಿ.

ನಾವು ನಮ್ಮ ಪೋಷಕರನ್ನು, ಅಜ್ಜಿ–ತಾತಂದಿರನ್ನು ಎಲ್ಲಾ ಸಂಬಂಧಿಕರನ್ನು ಬಯಸುತ್ತೇವೆ. ಸಂಬಂಧಿಕರ ಮುಂದೆ ಮಕ್ಕಳನ್ನು ಹೋಲಿಸಿ ಟೀಕಿಸಿದಾಗ ಅಂತಹಾ ವಾತಾವರಣ ಅಸಹನೀಯವಾಗುತ್ತದೆ. ಬೆಳೆಯುವ ಮಕ್ಕಳು ಅಂತಹಾ ವಾತಾವರಣವನ್ನು ತಪ್ಪಿಸಲು ಪಡುವ ಅಸಹಾಯಕತೆಯನ್ನು ಹಿರಿಯರು ಮತ್ತೆ ತಪ್ಪಾಗಿ ಅರ್ಥೆಸಿಕೊಂಡು ’ಇವಳಿಗೆ ಯಾರೂ ಬೇಡ, ಯಾವಾಗ್ಲೂ ಒಬ್ಬಳೇ ರೂಮಲ್ಲಿ ಇರ‍್ತಾಳೆ, ನಮ್ಮ ಕಾಲದಲ್ಲಿ ಹೀಗಿರಲಿಲ್ಲ" ಎಂದು ಹೇಳಿಕೆ ನೀಡುತ್ತಾರೆ. ಎಲ್ಲಾ ಕಾಲದಲ್ಲಿಯೂ ಕೆಲವು ಮಕ್ಕಳು ದಾರಿ ತಪ್ಪಿದ್ದಿದೆ, ಕೆಲವು ಮಕ್ಕಳು ಸಾಧನೆ ಮಾಡಿದ್ದಿದೆ. ಆದರೆ ತಮ್ಮ ತಂದೆತಾಯಿಯರಿಗೆ ಉದ್ದೇಶಪೂರ್ವಕವಾಗಿ ನೋಯಿಸುವ ಉದ್ದೇಶ ನಮ್ಮದಲ್ಲ. ಹಿರಿಯರು ಅಪಾರ್ಥ ಮಾಡಿಕೊಳ್ಳುತ್ತಾ ಯುವಪೀಳಿಗೆ ಹಾಗೂ ಹಳೆತಲೆಮಾರಿನ ಬಂಧವನ್ನು ಬಿರುಕುಗೊಳಿಸಿದಾಗ ಮಕ್ಕಳು ಹತ್ತಿರ ಬರಲು ಹಿಂಜರಿಯುತ್ತಾರೆ.

ನಮಗೆ ಪ್ರೀತಿ ನೀಡಿ. ಮಮತೆ ನೀಡಿ, ನಾವು ದುಡುಕಿದಾಗ ನಮ್ಮನ್ನು ಕೀಳಾಗಿ ನಡೆಸಿಕೊಳ್ಳದೇ, ಯಾರೊಂದಿಗೂ ಹೋಲಿಸದೇ, ಅಪ್ಪಂಗೆ ಹೇಳ್ತೀನಿ, ನಿನಗೆ ಸ್ವಾತಂತ್ರ್ಯ ಕೊಟ್ಟಿದ್ದೇ ತಪ್ಪಾಯ್ತು ಮುಂತಾದ ಮಾತುಗಳಿಂದ ಚುಚ್ಚದೇ ಪಕ್ಕದಲ್ಲಿ ಕುಳಿತು ಮಾತನಾಡಿಸಿ. ನಮ್ಮ ತೊಂದರೆಗಳನ್ನು ಅರ್ಥಮಾಡಿಕೊಳ್ಳುತ್ತಾ ನಮಗೆ ಸರಿಯಾದ ದಾರಿ ಯಾವುದೆಂದು ತೋರಿಸಿ. ನಮಗೆ ವಯಸ್ಸಾದ ಮೇಲೆ ವೃದ್ಧಾಶ್ರಮಕ್ಕೆ ಸೇರಿಸುತ್ತಾರೆ ಎಂಬರ್ಥದಲ್ಲಿ ಮಾತನಾಡದೇ ನಿನ್ನ ಮೇಲೆ ನನಗೆ ನಂಬಿಕೆಯಿದೆ ಎಂಬುದನ್ನು ನಿಮ್ಮ ವರ್ತನೆಯಲ್ಲಿ ತೋರಿಸಿ. ಹಿರಿಯರ ವರ್ತನೆಗೆ ಅನುಗುಣವಾಗಿ ನಮ್ಮ ಭಾವನೆಗಳು ಬದಲಾಗುತ್ತವೆ. ಒಂದೇ ದಿನದಲ್ಲಿ ನಾಟಕೀಯವಾದ ಬದಲಾವಣೆಗಳನ್ನು ಆಶಿಸದೇ ನಿಧಾನವಾದ ಬದಲಾವಣೆಗೆ ದಾರಿ ಮಾಡಿಕೊಡಿ. ನಿಮ್ಮ ಆತಂಕಗಳೇನು ಎನ್ನುವುದನ್ನು ನಮಗೆ ನಿಧಾನವಾಗಿ ತಿಳಿಸಿ ನಮ್ಮ ನಿರ್ಧಾರಗಳ ಕುರಿತಾಗಿಯೂ ನಮಗೆ ತಿಳಿಸುವುದಕ್ಕೆ ಅವಕಾಶ ಮಾಡಿಕೊಡಿ.

ಪೋಷಕರು ಅರಿಯದ ಸೂಕ್ಷ್ಮ ವಿಷಯವೇನೆಂದರೆ, ಮಕ್ಕಳು ತಮ್ಮ ತಂದೆತಾಯಿಯರನ್ನು ಎಂದಿಗೂ ಬೇರೆ ತಂದೆತಾಯಿಯರ ಜೊತೆ ಹೋಲಿಸುವುದಿಲ್ಲ. ಒಂದು ವೇಳೆ ಹೋಲಿಸಿದಾಗ ಪೋಷಕರಿಗಾಗುವ ನೋವು ಅಷ್ಟಿಷ್ಟಲ್ಲ. ಅದೇ ಪೋಷಕರು ಮಕ್ಕಳನ್ನು ಬೇರೆಯವರೊಂದಿಗೆ ಹೋಲಿಸಿದಾಗ ಆ ನೋವು ಆಳವಾಗಿ ಅವರ ವರ್ತನೆಯನ್ನು ಬದಲಾಯಿಸುವ ಸಾಧ್ಯತೆ ಇದೆ ಎಂದು ಅರಿಯುವುದಿಲ್ಲ. ಕೇವಲ ವರ್ತನಾ ಸಮಸ್ಯೆಗಳಲ್ಲದೇ ವಿದ್ಯಾಭ್ಯಾಸದಲ್ಲಿನ ಆಯ್ಕೆಗಳು, ಮದುವೆ ಮುಂತಾದ ಜೀವನದ ಅತಿಮುಖ್ಯ ನಿರ್ಧಾರಗಳಲ್ಲೂ ಮಕ್ಕಳು ಪೋಷಕರೊಂದಿಗಿನ ಆಪ್ತ ಸಮಾಲೋಚನೆ, ಬೆಂಬಲವನ್ನು ಬಯಸುತ್ತಾರೆ.

ಆದರೆ ಅದರ ವ್ಯತಿರಿಕ್ತ ಪರಿಣಾಮಗಳನ್ನು ನೋಡಿದಾಗ ಮಕ್ಕಳು ದುಡುಕುವ ಸಾಧ್ಯತೆ ಹೆಚ್ಚು. ಇಂತಹಾ ಭಾವನೆಗಳನ್ನು ಪೋಷಕರೆದುರು ತೆರೆದುಕೊಳ್ಳುವ ಸನ್ನಿವೇಶಗಳು ಬಹಳ ಕಡಿಮೆ. ಮಕ್ಕಳು ಬದಲಾವಣೆಗೆ ತೆರೆದುಕೊಂಡಷ್ಟು ವೇಗವಾಗಿ ಪೋಷಕರು ಅವನ್ನು ಒಪ್ಪಿಕೊಳುವುದಿಲ್ಲ. ಅವರಿಗೆ ಅವರದೇ ಆದ ಕಾರಣಗಳೂ ಇರುತ್ತವೆ. ಬದಲಾಣೆಯ ಉಪಯೋಗಗಳಿಗಿಂತ ಅವುಗಳ ಹಾನಿಯ ಬಗೆಗೆ ಜಾಸ್ತಿ ಯೊಚಿಸುತ್ತಾರೆ. ಇಲ್ಲಿ ಸಮಸ್ಯೆಯಾಗುವುದು "ಜನರೇಶನ್ ಗ್ಯಾಪ್" ಅಲ್ಲ. "ಅದು ಕಮ್ಯುನಿಕೇಶನ್ ಗ್ಯಾಪ್" ತಮ್ಮ ನಿರ್ಧಾರಗಳ ಸಾಧಕ ಭಾಧಕಗಳ ಕುರಿತಾಗಿ ಎರಡೂ ತಲೆಮಾರಿನವರು ಆರೋಗ್ಯಕರ ಚರ್ಚೆ ನಡೆಸಿದಾಗ ಉತ್ತಮ ನಿರ್ಧಾರದ ಆಯ್ಕೆ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT