ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂ ಪ್ರೇರಿತ ಬಂದ್‌ಗೆ ಮನವಿ

Last Updated 10 ನವೆಂಬರ್ 2017, 8:45 IST
ಅಕ್ಷರ ಗಾತ್ರ

ಮಡಿಕೇರಿ: ಟಿಪ್ಪು ಜಯಂತಿ ವಿರೋಧಿಸಿ, ಕೊಡಗು ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಬಂದ್‌ ಆಚರಿಸುವಂತೆ ಶಾಸಕ ಕೆ.ಜಿ. ಬೋಪಯ್ಯ ಕೋರಿದರು. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯದಲ್ಲಿ ಯಾರಿಗೂ ಬೇಡವಾದ ಜಯಂತಿಯನ್ನು ಸರ್ಕಾರ ಆಚರಣೆಗೆ ಮುಂದಾಗಿದೆ. ಜಿಲ್ಲೆಯ ಜನರ ಭಾವನೆಗೆ ವಿರುದ್ಧವಾಗಿ ರಾಜಕೀಯ ದುರುದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ. ಟಿಪ್ಪು ಮತಾಂಧ, ಕ್ರೂರಿ, ಕೊಡಗಿನ ದೇವಸ್ಥಾನಗಳನ್ನು ನಾಶ ಪಡಿಸಿದ್ದ ಎಂಬ ವಿಚಾರ ಎಲ್ಲರಿಗೂ ಗೊತ್ತಿದೆ’ ಎಂದು ಹೇಳಿದರು.

‘ಟಿಪ್ಪು ಜಿಲ್ಲೆಯ 310 ದೇವಸ್ಥಾನಗಳನ್ನು ನಾಶಪಡಿಸಿದ್ದ ಎಂಬುದಕ್ಕೆ ಇಂದಿಗೂ ಕುರುಹುಗಳಿವೆ. ಭಾಗಮಂಡಲದಲ್ಲಿ ಇರುವ ಎರಡು ಆನೆಯ ಕಾಲಕೃತಿಯನ್ನೇ ನಾಶ ಪಡಿಸಿದ್ದ. ತಲಕಾವೇರಿಯ ಮೇಲೂ ದಾಳಿಗೆ ಮುಂದಾಗಿದ್ದ. ಜತೆಗೆ, ದೇವಟಿ ಪರಂಬು ಎಂಬಲ್ಲಿ ಕೊಡವರ ಮಾರಣಹೋಮ ನಡೆಸಿದ್ದ. ಇಂತಹ ವ್ಯಕ್ತಿಯ ಜಯಂತಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ದುರಂತ; ಜಿಲ್ಲೆಯಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ನಡೆಸುವ ಮೂಲಕ ಪ್ರತಿಭಟಿಸಿ’ ಎಂದು ಬೋಪಯ್ಯ ಮನವಿ ಮಾಡಿದರು.

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್‌ ಮಾತನಾಡಿ, ‘ಕೊಡಗಿನ ಮೇಲೆ 32 ಬಾರಿ ದಾಳಿ ನಡೆಸಿದ್ದ ಟಿಪ್ಪು, 15 ಸಾವಿರ ಮಂದಿಯ ಕಗ್ಗೊಲೆ ನಡೆಸಿದ್ದ. ಅದಕ್ಕೆ ಸಾಕ್ಷ್ಯಗಳಿವೆ. ಆತ ಸ್ವಾತಂತ್ರ್ಯ ಹೋರಾಟಗಾರ ಎಂದು ರಾಜ್ಯ ಸರ್ಕಾರ ಹೇಳಿತ್ತಿದ್ದು, ಅದು ಸುಳ್ಳು. ಮಂಗಳೂರಿನಲ್ಲಿ 25 ಸಾವಿರ ಕ್ರೈಸ್ತರನ್ನು ಮತಾಂತರ ಮಾಡಿದ್ದ. ಅಷ್ಟು ಮಾತ್ರವಲ್ಲದೇ ಚರ್ಚ್‌ಗಳ ಮೇಲೂ ದಾಳಿ ನಡೆಸಿ ಹಾನಿಗೊಳಿಸಿದ್ದ’ ಎಂದು ದೂರಿದರು.

‘ಮುಸ್ಲಿಂ ಸಂಘಟನೆಗಳೂ ಟಿಪ್ಪು ಜಯಂತಿ ಆಚರಿಸಿ ಎಂದು ಎಲ್ಲಿಯೂ ಮನವಿ ಮಾಡಿಲ್ಲ. ಆದರೆ, ರಾಜಕೀಯ ಕಾರಣಕ್ಕೆ ಈ ಜಯಂತಿ ನಡೆಸಲಾಗುತ್ತಿದೆ. ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುತ್ತಿದ್ದು, ಹೆಚ್ಚು ದಿವಸ ಅವರ ಆಟ ನಡೆಯುವುದಿಲ್ಲ’ ಎಂದು ಎಚ್ಚರಿಸಿದರು. ‘ಆತನ ದಾಳಿಗೆ ಬೇಸತ್ತು ದಕ್ಷಿಣ ಕೊಡಗಿನಲ್ಲಿ ಮನೆಯಲ್ಲಿ ಸಾಕುವ ನಾಯಿಗೆ ಟಿಪ್ಪು ಎಂದು ಹೆಸರು ಇಡಲಾಗುತ್ತಿದೆ’ ಎಂದು ಅಪ್ಪಚ್ಚು ರಂಜನ್‌ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ ಮಾತನಾಡಿ, ‘ಸಿದ್ದರಾಮಯ್ಯ ಅವರಿಗೆ ತಲಕಾವೇರಿಗೆ ಬರಲು ಸಮಯವಿಲ್ಲ. ಅದೇ ಟಿಪ್ಪು ಜಯಂತಿ ಆಚರಣೆಗೆ ಸಮಯವಿದೆ. ಕೊಡಗಿನಲ್ಲಿ ಕೊಡವರನ್ನು, ಕೇರಳದಲ್ಲಿ ನಾಯರ್‌ಗಳನ್ನು, ಮೇಲುಕೋಟೆಯಲ್ಲಿ ಅಯ್ಯಂಗಾರಿಗಳನ್ನು ಮತಾಂತರ ಮಾಡಿದ್ದ. ಆತನ ಜಯಂತಿ ಆಚರಿಸಲು ಸಿದ್ದರಾಮಯ್ಯ ಮುಂದಾಗಿದ್ದು ಆತ ದುಷ್ಟ’ ಎಂದು ಏಕವಚನದಲ್ಲಿ ನಿಂದಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌ ಮಾತನಾಡಿ, ‘ ರಾಜ್ಯ ಸರ್ಕಾರಕ್ಕೆ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಹಣವಿಲ್ಲ. ಅದೇ ಟಿಪ್ಪು ಜಯಂತಿ ಆಚರಿಸಲು ಹಣವಿದೆ. ಟಿಪ್ಪು ಜಯಂತಿಯನ್ನು ಜಿ.ಪಂ ಖಂಡಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT