ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿಗೆ ಪೊಲೀಸ್‌ ಪಹರೆ

Last Updated 10 ನವೆಂಬರ್ 2017, 8:48 IST
ಅಕ್ಷರ ಗಾತ್ರ

ಮಡಿಕೇರಿ: ತೀವ್ರ ವಿರೋಧದ ನಡುವೆಯೂ ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ನಡೆಸಿದೆ. ಇಲ್ಲಿನ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶುಕ್ರವಾರ (ನ.10) ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ನಿಗದಿಯಾಗಿದೆ. ಇದೇ ವೇಳೆ ವಿರಾಜಪೇಟೆ ಹಾಗೂ ಸೋಮವಾರಪೇಟೆಯಲ್ಲೂ ಕಾರ್ಯಕ್ರಮ ನಡೆಯಲಿದೆ. ಇಡೀ ಸಭಾಂಗಣದ ಸುತ್ತಮುತ್ತ ಸಿ.ಸಿ.ಟಿ.ವಿ ಕಣ್ಗಾವಲು ಇರಿಸಲಾಗಿದೆ. ಬ್ಯಾರಿಕೇಡ್‌ ಹಾಕಲಾಗಿದೆ. ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ ತೆರೆಯಲಾಗಿದ್ದು ವಾಹನಗಳನ್ನು ತಪಾಸಣೆ ಮಾಡಿ ಒಳಬಿಡಲಾಗುತ್ತಿದೆ.

ಚೆಕ್‌ಪೋಸ್ಟ್‌ಗಳಲ್ಲಿ 40 ಸಿ.ಸಿ.ಟಿ.ವಿ ಕ್ಯಾಮೆರಾ ಹಾಕಲಾಗಿದೆ. 60 ಆಂತರಿಕ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಒಟ್ಟು 249 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದೆ. ಎಡಿಜಿಪಿ ಭಾಸ್ಕರ್‌ ರಾವ್‌ ಅವರನ್ನು ಸರ್ಕಾರ ನಿಯೋಜನೆ ಮಾಡಿದ್ದು ಅವರು ಗುರುವಾರ ಭದ್ರತೆ ಪರಿಶೀಲಿಸಿದರು.

ಎಸ್‌ಪಿ, ಹೆಚ್ಚುವರಿ ಎಸ್‌ಪಿ, 8 ಮಂದಿ ಡಿವೈಎಸ್‌ಪಿ, 23 ಮಂದಿ ಇನ್‌ಸ್ಪೆಕ್ಟರ್‌, 68 ಪಿಎಸ್‌ಐ, 113 ಎಎಸ್‌ಐ, 1,500 ಮಂದಿ ಕಾನ್‌ಸ್ಟೆಬಲ್‌, 27 ಡಿಎಆರ್‌ ತುಕಡಿ, 15 ಕೆಎಸ್‌ಆರ್‌ಪಿ ತುಕಡಿ, ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಭದ್ರತೆಗೆ ಬಳಸಿಕೊಳ್ಳಲಾಗುತ್ತಿದೆ. 100 ವಾಹನಗಳು ದಿನದ 24 ಗಂಟೆಯೂ ಗಸ್ತು ತಿರುಗುತ್ತಿವೆ.

ಆಹ್ವಾನ ಪತ್ರಿಕೆ: ಸಂಸದ ಪ್ರತಾಪ್‌ ಸಿಂಹ ಹಾಗೂ ವಿಧಾನ ಪರಿಷತ್‌ ಸದಸ್ಯ ಗಣೇಶ್‌ ಕಾರ್ಣಿಕ್ ಅವರ ಮನವಿ ಮೇರೆಗೆ ಆಹ್ವಾನ ಪತ್ರಿಕೆಯಿಂದ ಅವರ ಹೆಸರು ಕೈಬಿಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್‌. ಸೀತಾರಾಂ, ಬಿಜೆಪಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್‌ ಸುಬ್ರಮಣಿ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ, ಕಾಂಗ್ರೆಸ್‌ನ ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್‌, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್‌, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಹೆಸರು ಹಾಕಲಾಗಿದೆ. ಮೈಸೂರಿನ ಬರಹಗಾರ ಬಿ.ಆರ್‌. ರಂಗಸ್ವಾಮಿ ಅವರು ಉಪನ್ಯಾಸ ನೀಡಲಿದ್ದಾರೆ.

ಆಹ್ವಾನ ಪತ್ರಿಕೆಯಿದ್ದರೆ ಪ್ರವೇಶ: ಆಹ್ವಾನ ಪತ್ರಿಕೆಯಿದ್ದವರು ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರಿಚರ್ಡ್‌ ವಿನ್ಸೆಂಟ್‌ ಡಿಸೋಜ ತಿಳಿಸಿದ್ದಾರೆ.

ಎಡಿಜಿಪಿ ಸಭೆ: ‘ಸರ್ಕಾರದ ನಿರ್ದೇಶನದಂತೆ ನಡೆಯುವ ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು
ಎಡಿಜಿಪಿ ಭಾಸ್ಕರ್ ರಾವ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿ, ‘ಜಯಂತಿ ಸಂಬಂಧ ಜಿಲ್ಲೆಯಲ್ಲಿ ಪರ– ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಕಾನೂನು ಶಾಂತಿ ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಆ ನಿಟ್ಟಿನಲ್ಲಿ ಅಗತ್ಯ ಬಂದೋಬಸ್ತ್ ಮಾಡಲಾಗಿದೆ’ ಎಂದು ಹೇಳಿದರು.

‘ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ, ಕಾನೂನು ವ್ಯಾಪ್ತಿ ಮೀರಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ನಿಯಮ ಉಲ್ಲಂಘಿಸುವುದು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಬಲವಂತವಾಗಿ ಬಂದ್‌ ಮಾಡಿಸುವ ಕ್ರಮ ಸರಿಯಲ್ಲ. ಸರ್ಕಾರದ ಕಾರ್ಯಕ್ರಮ ಸಂವಿಧಾನಾತ್ಮಕವಾಗಿ ನಡೆಯಲಿದೆ. ಶಾಲಾ– ಕಾಲೇಜುಗಳು ಎಂದಿನಂತೆ ನಡೆಯಲಿವೆ ಎಂದು ಭಾಸ್ಕರ್‌ ರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT