ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೃದ್ಧಿ ತಂದ ಸಿರಿಧಾನ್ಯಗಳ ರಾಶಿ

Last Updated 10 ನವೆಂಬರ್ 2017, 8:59 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಪುರ್ತಗೇರಿ ಗ್ರಾಮದ ರೈತ ನಾಗರಾಜ ಹಿರೇಮಠ, ತಮ್ಮ ಖುಷ್ಕಿ ಜಮೀನಿನಲ್ಲಿ ಇಲ್ಲಿಯವರೆಗೆ ಮಾಮೂಲಿಯಾಗಿ ಬೆಳೆಯುತ್ತಿದ್ದ ಮೆಕ್ಕೆಜೋಳ, ಸೂರ್ಯಕಾಂತಿಯಂತಹ ಬೆಳೆಗಳಿಗೆ ಬಿಡುವು ನೀಡಿದ್ದಾರೆ. ಈ 45 ಎಕರೆ ಜಮೀನಿನಲ್ಲಿ ವೈವಿಧ್ಯಮಯ ಸಿರಿಧಾನ್ಯ ಬೆಳೆದು ಜಮೀನನ್ನು ಸಿಂಗರಿಸಿದ್ದಾರೆ.

ಸಾಮಾನ್ಯ ಬೆಳೆಗಳನ್ನು ಬೆಳೆಯುವುದರಿಂದ ದೊರಕದ ಬೆಲೆ, ಅತ್ಯಧಿಕ ಖರ್ಚು, ಕೂಲಿ ಕಾರ್ಮಿಕರ ಸಮಸ್ಯೆ, ದೊರಕದ ಇಳುವರಿ ಈ ಎಲ್ಲ ಕಾರಣಗಳಿಂದಾಗಿ ಅವರು ಸಿರಿಧಾನ್ಯಗಳ ಮೊರೆಹೋಗಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲಿ ಹುಡುಕಿ ವಿವಿಧ ಸಿರಿಧಾನ್ಯಗಳ ಬೀಜಗಳನ್ನು ತಂದು ಬಿತ್ತನೆ ಮಾಡಿದ್ದು ಬಹುತೇಕ ಬೆಳೆಗಳು ಗುಣಮಟ್ಟದಿಂದ ಬೆಳೆದಿವೆ. ನವಣೆ ರಾಶಿಯಂತೂ ನಳನಳಿಸುತ್ತಿದೆ.

45 ಎಕರೆ ಜಮೀನಿನಲ್ಲಿ 9 ಎಕರೆ ಅರ್ಕ, 10 ಎಕರೆ ಕೂರಲೆ, 6 ಎಕರೆ ಊದಲು, 8 ಎಕರೆ ಬರಗು ಹಾಗೂ ಉಳಿದ ಜಮೀನಿನಲ್ಲಿ ನವಣೆ ಬಿತ್ತಿದ್ದಾರೆ. ಬಿತ್ತನೆ ಬಳಿಕ ಕಳೆ ತೆಗೆದದ್ದು ಬಿಟ್ಟರೆ ಉಳಿದಂತೆ ಕಟಾವಿನದ್ದಷ್ಟೇ ಕೆಲಸ.

ಮಳೆಯ ಕೊರತೆಯಾದರೂ ನಮ್ಮ ಬೆಳೆಗಳು ಇರುವ ತೇವಾಂಶ ಬಳಸಿಕೊಂಡು ಉತ್ತಮವಾಗಿ ಬೆಳೆದಿವೆ. ನಂತರದಲ್ಲಿ ಸುರಿದ ಮಳೆಗೆ ಗುಣಮಟ್ಟದ ಕಾಳು ಕಟ್ಟಲು ಕಾರಣವಾಯಿತು.

ಒಟ್ಟಾರೆ ಅಧಿಕ ಖರ್ಚಿಲ್ಲದೆ ಉತ್ತಮ ಇಳುವರಿ ಪಡೆಯುವ ವಿಶ್ವಾಸ ಬಂದಿದೆ ಎಂದು ವೃತ್ತಿಯಿಂದ ವಕೀಲರಾದ ಹಿರೇಮಠ ಹೇಳುತ್ತಾರೆ. ಸಿರಿಧಾನ್ಯದ ಗುಣಮಟ್ಟದ ಬೆಳೆಗಳನ್ನು ಕಂಡ ಬಹುತೇಕ ರೈತರು ಮುಂದಿನ ವರ್ಷ ಬಿತ್ತನೆ ಮಾಡುವುದಕ್ಕಾಗಿ ಈಗಲೇ ಬೀಜಕ್ಕಾಗಿ ನಾಗರಾಜ ಅವರಲ್ಲಿ ಬೇಡಿಕೆ ಇಟ್ಟಿದ್ದಾರಂತೆ.

ಈ ಬಾರಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರ ಸಿರಿಧಾನ್ಯ ವರ್ಷ ಆಚರಣೆ ಮಾಡುತ್ತಿರುವುದರಿಂದ ವಿವಿಧ ಹಳ್ಳಿಗಳಲ್ಲೂ ಸಿರಿಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಹಿರೇಮಠ ಅವರು ಕೇವಲ ತಾವೊಬ್ಬರೆ ಬೆಳೆಯದೆ ತಮ್ಮ ಸುತ್ತಲಿನ ಈರಪ್ಪ ಉಕ್ಕಿನ, ಸಂಗಪ್ಪ, ಆನಂದ ಪಾಟೀಲರಂತಹ ರೈತರಿಗೂ ಮಾಹಿತಿ ನೀಡಿ ಸಿರಿಧಾನ್ಯ ಬಿತ್ತನೆ ಮಾಡಿಸಿದ್ದಾರೆ. ಮುಂದಿನ ವರ್ಷ ಇದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಮಾಡುತ್ತೇವೆ ಎಂದ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಈ ಭಾಗದಲ್ಲಿ ಊದಲು ಬೆಳೆಯುವುದು ಕಡಿಮೆ. ಆದಾಗ್ಯೂ ಜಿಲ್ಲೆಯಲ್ಲಿ 20 ಎಕರೆ ಪ್ರದೇಶದಲ್ಲಿ ಊದಲು ಬೆಳೆಯಲಾಗಿದೆ. ನವಣೆ ಗಂತೂ ಈ ವರ್ಷ ಪರ್ವಕಾಲ. ಕೃಷಿ ವಿಸ್ತರಣಾ ಕೇಂದ್ರದಿಂದ ಪ್ರಚಾರ ಹಾಗೂ ಸೂಕ್ತ ಮಾರ್ಗದರ್ಶನ ಮಾಡಿದರ ಪ್ರತಿಫಲ ಇದಾಗಿದೆ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು, ವಿಜ್ಞಾನಿ ಡಾ.ಎಂ.ಬಿ.ಪಾಟೀಲ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT