ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಕೊಟ್ಟ ಬೆಳ್ಳಿ ಬಟ್ಟಲಲ್ಲೇ ಶ್ರೀರಂಗನಿಗೆ ನಿತ್ಯ ಅರ್ಚನೆ

Last Updated 10 ನವೆಂಬರ್ 2017, 9:10 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು 17 ವರ್ಷ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್‌ ಹಿಂದೂ ದೇವಾಲಯಗಳಿಗೆ ನೀಡಿದ ಕೊಡುಗೆ, ಉಡುಗೊರೆಗಳು ಇನ್ನೂ ಜೀವಂತವಾಗಿವೆ. ಇಲ್ಲಿನ ಶ್ರೀರಂಗನಾಥ (ಆದಿ ರಂಗ) ದೇಗುಲಕ್ಕೆ ನಾಲ್ಕು ಬೆಳ್ಳಿ ಬಟ್ಟಲು ನೀಡಿದ್ದು, ಅವುಗಳಿಂದಲೇ ಇಂದಿಗೂ ಅರ್ಚಕರು ನಿತ್ಯ ಅರ್ಚನೆ ಮಾಡುತ್ತಿದ್ದಾರೆ.

ಶೃಂಗೇರಿ, ನಂಜನಗೂಡು ಸೇರಿ ಇತರ ಹಿಂದೂ ದೇವಾಲಯಗಳಿಗೆ ಟಿಪ್ಪು ಕೊಡುಗೆ ನೀಡಿದ್ದ ಕುರುಹುಗಳಿವೆ. ದೇಗುಲಕ್ಕೆ ನೀಡಿರುವ ಬಟ್ಟಲಿನ ಮೇಲೆ ‘ಟಿಪೂ ಸುಲತಾನವಾಬರವರ ಧರ್ಮ’ ಎಂಬ ಒಕ್ಕಣೆ ಬರೆದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಪ್ರತಿ ಬೆಳ್ಳಿ ಬಟ್ಟಲು ಅರ್ಧ ಕೆ.ಜಿ ತೂಕ ಇವೆ. ಇವುಗಳ ಮೇಲೆ ‘ಶ್ರೀ ಕೃಷ್ಣ’ ಮತ್ತು ‘ರು. 66’ ಎಂದು ಎಂಬ ಕೆತ್ತನೆಯೂ ಇದೆ.

‘ಟಿಪ್ಪು ಸುಲ್ತಾನ್‌ ಶ್ರೀರಂಗನಾಥ ಸ್ವಾಮಿ ದೇವಾಲಯಕ್ಕೆ, ದೇವರ ಅರ್ಚನೆ ಉದ್ದೇಶಕ್ಕೆ ನೀಡಿರುವ 4 ಬೆಳ್ಳಿ ಬಟ್ಟಲುಗಳ ಪೈಕಿ ಮೂರು ಬಟ್ಟಲುಗಳು ದೇಗುಲದಲ್ಲೇ ಯಥಾಸ್ಥಿತಿಯಲ್ಲಿವೆ. ಪೂಜಾ ಕೈಂಕರ್ಯಗಳ ಸಂದರ್ಭದಲ್ಲಿ ಇವುಗಳನ್ನೇ ಬಳಸಲಾಗುತ್ತಿದೆ.

ಒಂದು ಬಟ್ಟಲನ್ನು ಭಾರತೀಯ ಪುರಾತತ್ವ ಸರ್ವೇಕ್ಷ‌ಣ ಇಲಾಖೆ ಪಡೆದುಕೊಂಡಿದ್ದು, ಅದಕ್ಕೆ ಪ್ರತಿಯಾಗಿ ಮತ್ತೊಂದು ಬಟ್ಟಲನ್ನು ಮಾಡಿಸಿಕೊಟ್ಟಿದೆ’ ಎಂದು ದೇವಾಲಯದ ಪ್ರಧಾನ ಅರ್ಚಕ ವಿಜಯ ಸಾರಥಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಟಿಪ್ಪು ತಂದೆ ಹೈದರ್‌ ಅಲಿ ಖಾನ್‌ ಶ್ರೀರಂಗನಾಥಸ್ವಾಮಿ ದೇವಾಲಯ ಪ್ರಾಂಗಣದ ಮುಂದೆ ಬೃಹತ್‌ ಮಂಟಪ ನಿರ್ಮಿಸಿದ್ದಾರೆ. ಸುಮಾರು 20 ಅಡಿ ಎತ್ತರದ, ಕಲ್ಲಿನ 24 ಕಂಬಗಳನ್ನು ಬಳಸಿ ಈ ಮಂಟಪದ ನಿರ್ಮಿಸಲಾಗಿದೆ. ಅದರೆ ಇದರ ಬಗ್ಗೆ ಎಲ್ಲಿಯೂ ನಿಖರ ದಾಖಲೆಗಳಿಲ್ಲ’ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಧನಲಕ್ಷ್ಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT