ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ಅಧಿಕಾರಿಗಳ ನಿರ್ಲಕ್ಷ್ಯ

Last Updated 10 ನವೆಂಬರ್ 2017, 9:30 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನಲ್ಲಿ ವ್ಯಾಪಕವಾಗಿ ಹರಡಿರುವ ಡೆಂಗಿ ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ಅದರ ಸಾವು, ನೋವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂಬ ಒಕ್ಕೊರಲಿನ ಒತ್ತಾಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು. ಸಭೆಯ ಆರಂಭದಲ್ಲಿ ಡೆಂಗಿ ಕುರಿತು ತೀವ್ರ ಚರ್ಚೆ ನಡೆಯಿತು.

‘ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಈಬಗ್ಗೆ ನಾವು ತಾಲ್ಲೂಕು ಪಂಚಾಯಿತಿ ಗಮನಕ್ಕೆ ತಂದಿದ್ದೆವು. ಆದರೆ ಅಧಿಕಾರಿಗಳು ತಮ್ಮ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ ಮುಂಜಾಗ್ರತೆ ಕ್ರಮಕೈಗೊಂಡಿದ್ದರೆ ನಗರದಲ್ಲಿ 10 ಹಾಗೂ ಗ್ರಾಮೀಣ ಪ್ರದೇಶದಲ್ಲಿ 16 ಸೇರಿ ಒಟ್ಟು 26 ಜನರು ರೋಗಕ್ಕೆ ತುತ್ತಾಗುತ್ತಿರಲಿಲ್ಲ. ಕಾಟಾಚಾರಕ್ಕೆ ಎಂಬಂತೆ ಒಂದು ಅಥವಾ ಎರಡು ಬಾರಿ ಮಾತ್ರ ಫಾಂಗಿಂಗ್ ಮಾಡಿದರೆ ಸೊಳ್ಳೆಗಳು ನಿಯಂತ್ರಣಕ್ಕೆ ಬರುತ್ತವೆಯೇ’ ಎಂದು ಸದಸ್ಯರಾದ ಈಶಪ್ಪ ದೇಸಾಯಿ ವಕೀಲ, ಉದಯಗೌಡ ಗಿಣಿವಾರ ಪ್ರಶ್ನಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸರಿಯಾಗಿ ಔಷಧಿ ವಿತರಣೆಯಾಗುತ್ತಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದ್ದು, ಸಮರ್ಪಕ ಚಿಕಿತ್ಸೆ ದೊರೆಯುತ್ತಿಲ್ಲ. ಮುಖ್ಯವಾಗಿ ಆಸ್ಪತ್ರೆಗಳೇ ಕೊಳಚೆ ತಾಣವಾಗಿ ಮಾರ್ಪಟ್ಟಿವೆ ಎಂದು ಸ್ಥಾಯಿ ಸಮಿತಿ ಸದಸ್ಯ ಕಂಟಿಪುಡಿ ನರಸಿಂಹರಾವ್ ಹೇಳುತ್ತಿದ್ದಂತೆ, ಸದಸ್ಯರು ಎದ್ದು ನಿಂತು ಗ್ರಾಮೀಣ ಆಸ್ಪತ್ರೆ ಬೇಡ, ಸಿಂಧನೂರಿನ ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಡಿಯುವ ನೀರು, ಶೌಚಾಲಯ ಇತರೆ ಮೂಲಸೌಕರ್ಯಗಳು ಇಲ್ಲ. ಆಸ್ಪತ್ರೆಯ ಸುತ್ತಲೂ ಕಸದ ರಾಶಿಯಿಂದ ಕೊಳಚೆ ಪ್ರದೇಶ ನಿರ್ಮಾಣಗೊಂಡಿದ’ೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಆರೋಗ್ಯ ಸಹಾಯಕ ರಂಗನಾಥ ಗುಡಿ ಮಾತನಾಡಿ, ‘ರೋಗ ಹರಡುವ ಬಗ್ಗೆ ಹಾಗೂ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರತಿ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸೊಳ್ಳೆಗಳ ನಾಶಕ್ಕಾಗಿ ಪಂಚಾಯಿತಿಗಳಿಂದ ಫಾಂಗಿಂಗ್ ಮಾಡಿಸಲಾಗುತ್ತಿದೆ. ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹಾಗೂ ಮೂಲಸೌಕರ್ಯಗಳ ಕುರಿತು ತಾಲ್ಲೂಕಾಧಿಕಾರಿಗಳ ಗಮನಕ್ಕೆ ತರಲಾಗುವುದು’ ಎಂದರು.

ಗುಡದೂರು ಕ್ಷೇತ್ರದ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕೆಲ ವಿದ್ಯಾರ್ಥಿಗಳಿಗೆ ಇದುವರೆಗೂ ಸಮವಸ್ತ್ರ, 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಿಲ್ಲ ಎಂದು ಸದಸ್ಯ ಈಶಪ್ಪ ದೇಸಾಯಿ ಆರೋಪಿಸಿದರು.

ಇದಕ್ಕೆ ಧ್ವನಿಗೂಡಿಸಿದ ಉಪಾಧ್ಯಕ್ಷ ಅನುಷಾ ಸಣ್ಣರಾಮಣ್ಣ ಹಾಗೂ ಸದಸ್ಯ ಹನುಮೇಶ ಸಾಲಗುಂದಾ ಪುಸ್ತಕ ವಿತರಿಸದಿದ್ದರೆ ಮಕ್ಕಳು ಅಭ್ಯಾಸ ಹೇಗೆ ಮಾಡಬೇಕು? ಶಿಕ್ಷಣ ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದಲೇ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆಂದು ಆರೋಪಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಮಾತನಾಡಿ, ‘ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಖಾಲಿಯಿರುವ 278 ಹುದ್ದೆಗಳಿಗೆ ಈಗಾಗಲೇ ಅತಿಥಿ ಶಿಕ್ಷಕರನ್ನು ಗುತ್ತಿಗೆ ಆಧಾರದಂತೆ ನೇಮಿಸಿಕೊಳ್ಳಲಾಗಿದೆ. ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆಯಲ್ಲಿ ವಿಳಂಬವಾಗಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ತಿಳಿಸಲಾಗುವುದು ’ಎಂದು ಹೇಳಿದರು.

ಸಹಾಯಕ ಕೃಷಿ ಇಲಾಖಾಧಿಕಾರಿ ಡಾ.ಜಯಪ್ರಕಾಶ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡು ಮೂರು ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ವಿತರಿಸಲಾಗಿದೆ. ಒಂದು ವೇಳೆ ಹತ್ತಿ ಮತ್ತು ಕಡ್ಲಿ ಬೆಳೆಗೆ ಕೀಟಗಳು ಹೆಚ್ಚಾದರೆ ಕೃಷಿ ವಿಜ್ಞಾನಿಗಳನ್ನು ಕರೆಯಿಸಿ ಪರಿಶೀಲಿಸುವುದಾಗಿ ಹೇಳಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಬಸನಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಜಿ.ಎಂ.ಬಸಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT