ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಮನೆಗಳಿಗಿಲ್ಲ ಹಂಚಿಕೆ ಭಾಗ್ಯ

Last Updated 10 ನವೆಂಬರ್ 2017, 9:40 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ದೊಡ್ಡಮಣ್ಣುಗುಡ್ಡೆ ಪ್ರದೇಶದಲ್ಲಿ ವಸತಿರಹಿತ ಬಡ ಕುಟುಂಬಗಳಿಗೆಂದು ನಿರ್ಮಿಸಿರುವ ಮನೆಗಳ ಹಂಚಿಕೆಯು ಕಗ್ಗಂಟ್ಟಾಗಿದೆ. 11 ವರ್ಷದ ಹಿಂದೆಯೇ ಹಣ ತುಂಬಿ ಸ್ವಂತ ಸೂರು ಹೊಂದುವ ಕನಸು ಕಂಡವರಿಗೆ ಇದರಿಂದ ನಿರಾಸೆಯಾಗಿದೆ.

ಈಗಾಗಲೇ ಅರ್ಹ ಫಲಾನುಭವಿಗ ಳನ್ನು ಆಯ್ಕೆ ಮಾಡಲಾಗಿದ್ದು, ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡುವ ಪ್ರಕ್ರಿಯೆಯಷ್ಟೇ ಬಾಕಿ ಉಳಿದಿದೆ. ಸಚಿವರು, ಸ್ಥಳೀಯ ಶಾಸಕರ ನೇತೃತ್ವದಲ್ಲಿ ಈ ಕಾರ್ಯ ಆಗಬೇಕಿದೆ. ಆದರೆ, ಜನಪ್ರತಿನಿಧಿಗಳ ದಿನಾಂಕ ಹೊಂದಾಣಿಕೆಯಾಗದ ಕಾರಣ ಈ ಪ್ರಕ್ರಿಯೆ ಮುಂದೆ ಹೋಗುತ್ತಲೇ ಇದೆ.

ಉದ್ಘಾಟನೆಯ ಭಾಗ್ಯ ಕಾಣದ ಹೊಸ ಮನೆಗಳು ಪಾಳು ಬೀಳುವ ಹಂತ ತಲುಪುತ್ತಿವೆ. ಒಂದೊಂದೇ ಸಾಮಗ್ರಿಗಳು ತುಕ್ಕು ಹಿಡಿಯತೊಡಗಿವೆ. ಕುಡುಕರ ಹಾವಳಿಯೂ ಹೆಚ್ಚುತ್ತಿದ್ದು, ಅಲ್ಲಲ್ಲಿ ಮದ್ಯದ ಬಾಟಲಿಗಳು ಯಥೇಚ್ಛವಾಗಿ ಸಿಗತೊಡಗಿದೆ.

ಎಚ್‌ಡಿಕೆ ಕನಸು: ರಾಮನಗರದಲ್ಲಿ ವಾಸವಿರುವ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸುವ ಸದುದ್ದೇಶದಿಂದ 2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಮನೆಗಳ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ ತೋರಿದ್ದರು.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಇದರ ನೇತೃತ್ವ ವಹಿಸಿತ್ತು. ಮನೆ ನೀಡುವಂತೆ ಕೋರಿ ಬರೋಬ್ಬರಿ 1,430 ಮಂದಿ ಅರ್ಜಿ ಸಲ್ಲಿಸಿದ್ದು, ಪ್ರಾಥಮಿಕ ಠೇವಣಿಯಾಗಿ ₹5,100 ಹಣವನ್ನೂ ತುಂಬಿ ದಶಕದಿಂದ ಕಾಯುತ್ತಲೇ ಇದ್ದಾರೆ.

ಮನೆ ನಿರ್ಮಾಣ ಕಾಮಗಾರಿಯು ಪೂರ್ಣಗೊಂಡಿದೆಯಾದರೂ ಹಂಚಿಕೆಗೆ ಮಾತ್ರ ಜನಪ್ರತಿನಿಧಿಗಳು ಒಲವು ತೋರುತ್ತಿಲ್ಲ. ಒಂದು ಬ್ಲಾಕ್‌ಗೆ 8 ಮನೆಗಳಂತೆ ಒಟ್ಟು 30 ಬ್ಲಾಕ್‌ಗಳಲ್ಲಿ 240 ಮನೆಗ\ಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರತಿ ಮನೆಯು 20X20 ಚ.ದ. ಅಡಿ ಅಳತೆಯಲ್ಲಿ ನಿರ್ಮಾಣವಾಗಿದ್ದು, ಎರಡು ಸಣ್ಣ ಕೋಣೆಗಳು, ಅಡುಗೆ ಮನೆ, ಹಾಲ್ ಹಾಗೂ ಸ್ನಾನ ಮತ್ತು ಶೌಚಗೃಹ ಒಳಗೊಂಡಿದೆ.

ಇದರ ಜೊತೆಗೆ ಒಳಚರಂಡಿ, ನೀರಿನ ಸಂಪ್‌ಗಳು, ಕಾಂಕ್ರೀಟ್‌ ರಸ್ತೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ನಿರ್ಮಿತಿ ಕೇಂದ್ರವು ಇದರ ನಿರ್ಮಾಣ ಕಾರ್ಯದ ಜವಾಬ್ದಾರಿ ಹೊತ್ತಿದೆ.
ಮರು ಸರ್ವೆಗೆ ಒತ್ತಾಯ: ಸ್ವಂತ ಮನೆ ಇಲ್ಲದವರಿಗಾಗಿ ಈ ಮನೆಗಳನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ವಿಧಿಸಲಾಗಿದ್ದ ಷರತ್ತುಗಳಲ್ಲಿ ಕೆಲವು ಉಲ್ಲಂಘನೆ ಆಗಿರುವ ಸಾಧ್ಯತೆ ಇದೆ. ಹೀಗಾಗಿ ಮರು ಸರ್ವೆ ನಡೆಸಿ ಅರ್ಹರನ್ನು ಮಾತ್ರ ಲಾಟರಿ ಪ್ರಕ್ರಿಯೆಗೆ ಆಯ್ಕೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳು ಆಗ್ರಹಿಸುತ್ತಾರೆ.

‘ಯಾವುದೇ ರೂಪದಲ್ಲಿ ಸ್ವಂತ ಮನೆ ಹೊಂದದ, ಸರ್ಕಾರದ ಇನ್ನಿತರ ಯಾವುದೇ ಯೋಜನೆಗಳ ಲಾಭ ಪಡೆಯದವರು ಮಾತ್ರ ಈ ಮನೆಗಳನ್ನು ಪಡೆಯಲು ಅರ್ಹರು ಎಂದು ನಿಯಮ ಹೇಳುತ್ತದೆ. ಕಳೆದ 11 ವರ್ಷದ ಅವಧಿಯಲ್ಲಿ ಕೆಲವರು ಇತರ ಯೋಜನೆಗಳ ಲಾಭ ಪಡೆದಿರುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಅರ್ಜಿಗಳನ್ನು ಮರು ಪರಿಶೀಲನೆಗೆ ಒಳಪಡಿಸಬೇಕು’ ಎನ್ನು ವುದು ಆಕಾಂಕ್ಷಿಗಳ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT