ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯೂಪಾ ಘಟಕ ಸ್ಥಳಾಂತರಕ್ಕೆ ಒತ್ತಾಯ

Last Updated 10 ನವೆಂಬರ್ 2017, 10:10 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಎಲ್ಲೆಡೆ ಮಳೆ ಬಿದ್ದರೆ ಸಂಭ್ರಮಿಸುತ್ತಾರೆ ಹಾಗೂ ಮಳೆ ಬರಲಿ ಎಂದು ಆಶಿಸುತ್ತಾರೆ. ಆದರೆ ನಗರದ ಹೊರವಲಯದ ರಾಜೀವ್‌ ಗಾಂಧಿ ಬಡಾವಣೆ, ಇದ್ಲೂಡು, ಹನುಮಂತಪುರ, ನೆಲ್ಲೀಮರ­ದ­ಹಳ್ಳಿ ನಿವಾಸಿಗಳು ಮಳೆ ಬಂದರೆ ಆತಂಕಕ್ಕೊಳಗಾಗುತ್ತಾರೆ. ಅವರಿಗೆ ಊಟ ಸರಿಯಾಗಿ ಸೇರದಾಗುತ್ತದೆ, ಹೊಟ್ಟೆ ತೊಳಸಲು ಪ್ರಾರಂಭವಾಗುತ್ತದೆ.

ಹೌದು. ಇದಕ್ಕೆ ಕಾರಣ ರಾಜೀವ್‌ಗಾಂಧಿ ಬಡಾವಣೆ ಹಾಗೂ ಇದ್ಲೂಡು ಸಮೀಪವಿರುವ ಸತ್ತ ರೇಷ್ಮೆ ಹುಳು ಸಂಸ್ಕರಣಾ ಘಟಕಗಳು. ಇದರಿಂದ ಹೊರ ಸೂಸುವ ದುರ್ನಾತ, ಕ್ರಿಮಿ ಕೀಟಗಳ ಕಾಟದಿಂದ ಸುತ್ತ ಮುತ್ತಲಿನ ಜನರು ಶ್ವಾಸ ಕೋಶ, ಉಸಿರಾಟ ಸಂಬಂಧಿತ ರೋಗಗಳಿಗೆ ಉತ್ತಾತ್ತಾಗಿದ್ದಾರೆ.

‘ಪುರಸಭೆಯಿಂದ ನಗರಸಭೆಯಾದ ನಂತರ ನಗರದ ವ್ಯಾಪ್ತಿ ಹೆಚ್ಚಾಯಿತು. ನಗರ ಬೆಳೆದು ಹೊರವಲಯದ ಕೆಲ ಗ್ರಾಮಗಳು ಸೇರಿಕೊಂಡಿರುವುದರಿಂದ ಅವುಗಳೂ ನಗರಸಭೆಗೆ ಸೇರಿವೆ. ಹೀಗಾಗಿ ನಗರದ ವ್ಯಾಪ್ತಿಯಲ್ಲಿ ಪರಿಸರ ಇಲಾಖೆಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವ ಅಕ್ರಮ ಸಂಸ್ಕರಣ ಘಟಕಗಳಿಂದ ಈ ಭಾಗದ ಜನ ಸಾಮಾನ್ಯರ ಆರೋಗ್ಯ ಹದಗೆಡುತ್ತಿದೆ.

ಇವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಎರಡು ವರ್ಷಗಳ ಹಿಂದೆಯೇ ನಾವು ಜಿಲ್ಲಾಧಿಕಾರಿಗೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ, ರೇಷ್ಮೆ ಉಪನಿರ್ದೇಶಕರು ಮಾಲಿನ್ಯ ನಿಯಂತ್ರಣ ಮತ್ತು ಪರಿಸರ ಇಲಾಖೆ, ತಹಶೀಲ್ದಾರ್‌, ರೇಷ್ಮೆ ಸಹಾಯಕ ನಿರ್ದೇಶಕರು ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದ್ದೆವು. ಆದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಎಸ್‌.ವೆಂಕಟಸ್ವಾಮಿ ತಿಳಿಸಿದರು.

‘ರಾಮನಗರದಲ್ಲೂ ಇದೇ ಸಮಸ್ಯೆಯಿತ್ತು. ಅಲ್ಲಿನ ನಗರಸಭೆಯವರು ನಗರಕ್ಕೆ ಬಹು ದೂರದಲ್ಲಿ ಒಂದು ಎಕರೆ ಜಮೀನನ್ನು ಖರೀದಿಸಿ ಪ್ಯೂಪಾ ಸಂಸ್ಕರಣ ಘಟಕಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ರೀತಿಯ ಪರಿಹಾರೋಪಾಯವನ್ನು ಕೂಡ ಆಲೋಚಿಸಬಹುದಾಗಿದೆ’ ಎಂದು ಹೇಳಿದರು.

ರಾಜೀವ್‌ ಗಾಂಧಿ ಬಡಾವಣೆಯ ನಿವಾಸಿಗಳು ಹಲವು ಬಾರಿ ಸತ್ತ ರೇಷ್ಮೆ ಹುಳು ಸಂಸ್ಕರಣಾ ಘಟಕಗಳನ್ನು ತೆರವುಗೊಳಿಸಬೇಕು ಎಂದು ನಗರಸಭೆಯ ಆರೋಗ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಹಿಂದೆ ಪುರಸಭೆಯ ಆರೋಗ್ಯಾಧಿಕಾರಿ ಬಾಲಚಂದ್ರ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿ ಮನವಿ ಸ್ವೀಕರಿಸಿದ್ದರು.

‘ಹತ್ತಿರದಲ್ಲೇ ನ್ಯಾಯಾಧೀಶರ ಮನೆ­ಯಿದ್ದು, ಅವರಿಂದಲೂ ದೂರು ಬಂದಿದೆ. ಹನುಮಂತಪುರ, ನೆಲ್ಲೀಮರ­ದ­ಹಳ್ಳಿ ನಿವಾಸಿಗಳು ಕೂಡ ದೂರು ನೀಡಿದ್ದಾರೆ. ಈ ವಾಸನೆಯಿಂದ ರೇಷ್ಮೆ ಬೆಳೆಗೂ ತೊಂದರೆ­ಯಾಗುತ್ತಿರುವು­ದಾಗಿ ರೈತರು ದೂರಿದ್ದಾರೆ. ಇಲ್ಲಿ ಸುತ್ತಮುತ್ತಲಿನ ಹಲವು ಶಾಲಾ– ಕಾಲೇಜುಗಳ ಮುಖ್ಯಸ್ಥರೂ ಕೆಟ್ಟ ವಾಸನೆಯ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇಲ್ಲಿನ ಪರಿ­ಸ್ಥಿತಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ’ ಎಂದು ಹೆಲ್ತ್ ಇನ್‌ಸ್ಪಕ್ಟರ್‌ ಬಾಲಚಂದ್ರ ತಿಳಿಸಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು.

ರೇಷ್ಮೆ ಗೂಡು ಮಾರುಕಟ್ಟೆಯಿಂದ ಗೂಡನ್ನು ಖರೀದಿ ಮಾಡಿದ ಮೇಲೆ ಗೂಡಿ­ನಿಂದ ಕಚ್ಚಾ ರೇಷ್ಮೆ ತೆಗೆದ ನಂತರ ಉಳಿಯುವ ಸತ್ತ ಹುಳುಗಳು (ಪ್ಯೂಪಾ) ಮತ್ತು ತೆಳು ಪರದೆ­ಯಂತಹ ರೇಷ್ಮೆಯನ್ನು ಈ ಪ್ಯೂಪಾ ಘಟಕ­ದವರು ಕೊಂಡು ತರುತ್ತಾರೆ. ಕೆಟ್ಟ ವಾಸನೆ ಬೀರುವ ಈ ಕೆಲಸದಿಂದ ರೇಷ್ಮೆ ಹಾಗೂ ಹುಳು­ಗಳನ್ನು ಬೇರ್ಪಡಿಸಿ ಒಣಗಿಸಿ ಮಾರುತ್ತಾರೆ.

ಪ್ಯೂಪಾ ಘಟಕದಿಂದ ಹೊರ ಸೂಸುವ ದುರ್ನಾತ, ಹಾಗೂ ಕೆಟ್ಟ ಪರಿಸರದಿಂದ ಸೊಳ್ಳೆಗಳ ಉತ್ಪತ್ತಿಯೂ ಹೆಚ್ಚಾಗಿದೆ. ಡೆಂಗಿ, ಚಿಕೂನ್‌ ಗುನ್ಯಾ ಖಾಯಿಲೆಗಳು ಈ ಭಾಗದಲ್ಲಿ ಹೆಚ್ಚಾಗಿವೆ. ಈ ಭಾಗದ ಜನರಿಗೆ ಶ್ವಾಸ ಕೋಶ, ಉಸಿರಾಟ ಸಂಬಂಧಿತ ರೋಗಗಳು ಹೆಚ್ಚುತ್ತಿವೆ. ದಿನವೂ ₹ 120– 150ಗೆ ರೇಷ್ಮೆನೂಲು ತೆಗೆಯುವ ಕೂಲಿ ಕೆಲಸ ಮಾಡುವ ಇಲ್ಲಿನ ಜನರು ರೋಗ ರುಜುನಗಳಿಗೆ ತುತ್ತಾಗಿ ಸಾವಿರಾರು ರೂಪಾಯಿ ಆಸ್ಪತ್ರೆಗೆ ಖರ್ಚು ಮಾಡುವಂತಾಗಿದೆ. ಹಾಗಾಗಿ ಕೂಡಲೇ ಈ ಹುಳು ಸಂಸ್ಕರಣಾ ಘಟಕಗಳನ್ನು ವಸತಿ ಪ್ರದೇಶದಿಂದ ಹೊರಗೆ ಸ್ಥಳಾಂತರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಕೇಳಿದಾಗ, ‘ಶಿಡ್ಲಘಟ್ಟ ತಾಲ್ಲೂಕು ರೇಷ್ಮೆಗೆ ಪ್ರಸಿದ್ಧಿ. ರೇಷ್ಮೆ ಕಸುಬಿನ ಒಂದು ಭಾಗ ಪ್ಯೂಪಾ ಸಂಸ್ಕರಣೆ. ಆದರೆ ಇದರಿಂದ ಜನರಿಗೆ ಅನಾನುಕೂಲ ಆಗಬಾರದು. ನಾನು ಖುದ್ದಾಗಿ ಸ್ಥಳ ಪರಿಶೀಲನೆ ಮಾಡುತ್ತೇನೆ. ರಾಮನಗರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವುದರ ಬಗ್ಗೆ ಮಾಹಿತಿ ಪಡೆದು ಸಾಧ್ಯವಾದರೆ ಅದೇ ರೀತಿ ನಾವೂ ಇಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಡಿ.ಜಿ.ಮಲ್ಲಿಕಾರ್ಜುನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT