ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಕಾರ್ಖಾನೆಗೆ ಚಾಲನೆ; ರೈತರಲ್ಲಿ ಹರ್ಷ

Last Updated 10 ನವೆಂಬರ್ 2017, 10:23 IST
ಅಕ್ಷರ ಗಾತ್ರ

ವಿಜಯಪುರ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭ... ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ... ಬರದ ಭೀಕರ ಹೊಡೆತಕ್ಕೆ ತತ್ತರಿಸಿ ಹಲ ವರ್ಷಗಳಿಂದ ಬಾಯ್ತೆರೆದಿದ್ದ ಕೆರೆಗಳ ಒಡಲಿಗೆ ನೀರು ತುಂಬಿಸುವಿಕೆ... ಇಂಡಿ ತಾಲ್ಲೂಕಿನ ಜನರ ದಶಕ ಗಳ ಕನಸಿವು. ಹಲ ವರ್ಷಗಳಿಂದ ಅಭಿವೃದ್ಧಿಯ ಕನಸು ಕಂಡಿದ್ದ ತಾಲ್ಲೂಕಿನ ಜನರ ಆಶಯ ಇದೀಗ ಸಾಕಾರಗೊಳ್ಳುತ್ತಿದೆ.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾರಂಭದಿಂದ ಕೃಷ್ಣಾ ಹೊಳೆ ದಂಡೆಯ ರೈತರು ಸ್ವಾವಲಂಬಿಗಳಾಗಿ ಆರ್ಥಿಕ, ಸಾಮಾಜಿಕ ಪ್ರಗತಿ ಹೊಂದಿದಂತೆ, ಭೀಮಾ ಹೊಳೆ ದಂಡೆಯ ರೈತರು ಆರ್ಥಿಕ ಸ್ವಾವಲಂಬಿಗಳಾಗಬೇಕು ಎಂದು ಮೂರ್ನಾಲ್ಕು ದಶಕಗಳ ಹಿಂದೆ ಕಂಡಿದ್ದ ಕನಸು ಇದೀಗ ನನಸಾಗಿದೆ.

ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ ಸತತ ಪ್ರಯತ್ನದಿಂದ, ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸಹಕಾರಿ ಸಕ್ಕರೆ ಕಾರ್ಖಾನೆ ನಾಲ್ಕು ವರ್ಷಗಳಲ್ಲಿ ನಿರ್ಮಾಣ ಗೊಂಡು, ಲೋಕಾರ್ಪಣೆಗೆ ಸಜ್ಜಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನ. 10ರಂದು ಕಬ್ಬು ಅರೆಯಲು ಚಾಲನೆ ನೀಡಲಿದ್ದಾರೆ.

ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ನಿಂಬೆ ಬೆಳೆಗಾರರ ಹಿತರಕ್ಷಣೆಗೆ, ಅಭಿವೃದ್ಧಿಗೆ ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂಬ ಕೂಗಿಗೂ ರಾಜ್ಯ ಸರ್ಕಾರ ಸ್ಪಂದಿಸಿದ್ದು, ಮಂಡಳಿಯ ಪ್ರಧಾನ ಕಚೇರಿ ಇಂಡಿ ಪಟ್ಟಣದಲ್ಲೇ ಸ್ಥಾಪನೆಗೊಳ್ಳುತ್ತಿರುವುದು ಸ್ಥಳೀಯ ರೈತರ ಉತ್ಸಾಹ ಇಮ್ಮಡಿಗೊಳಿಸಿದೆ.

‘ರಾಜ್ಯದಲ್ಲಿ 12,375 ಹೆಕ್ಟೇರ್‌ನಲ್ಲಿ ನಿಂಬೆ ಕೃಷಿ ಮಾಡಲಾಗುತ್ತಿದೆ.ಈ ಪೈಕಿ 6,814 ಹೆಕ್ಟೇರ್‌ ನಿಂಬೆ ಬೆಳೆ ಜಿಲ್ಲೆಯಲ್ಲೇ ಇದ್ದು, ಇದರಲ್ಲಿ 3,944 ಹೆಕ್ಟೇರ್‌ ನಿಂಬೆ ಕೃಷಿ ಇಂಡಿ ತಾಲ್ಲೂಕಿನಲ್ಲಿ ಇರುವುದು ವಿಶೇಷ’ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಸ್‌.ಆರ್‌.ಕುಮಾರಸ್ವಾಮಿ ತಿಳಿಸಿದರು.

‘ಸತತ ಬರಕ್ಕೆ ತುತ್ತಾಗುವ ಇಂಡಿ ತಾಲ್ಲೂಕಿನ 17 ಕೆರೆಗಳಿಗೆ ₹ 106 ಕೋಟಿ ವೆಚ್ಚದಲ್ಲಿ ಅಣಚಿ ಏತ ನೀರಾವರಿ ಯೋಜನೆಯಡಿ, ಭುಯ್ಯಾರ ಏತ ನೀರಾವರಿ ಯೋಜನೆಯಡಿ ನೀರು ತುಂಬಿಸಲಾಗುತ್ತಿದೆ.

ಈಗಾಗಲೇ 14 ಕೆರೆಗಳ ಅಂಗಳಕ್ಕೆ ನೀರು ಹರಿಯುತ್ತಿದೆ. ನಿಂಬಾಳ, ಬಬಲಾದ, ಕೊಟ್ನಾಳ ಕೆರೆಗಳಿಗೆ ನೀರು ಹರಿಸಲು ರೈಲು ಹಳಿ ಅಡ್ಡಿಯಾಗಿದ್ದು, ಇದೇ 30ರೊಳಗೆ ತಾಂತ್ರಿಕ ಸಮಸ್ಯೆ ಪರಿಹರಿಸಿ, ನೀರು ಹರಿಸಲಾಗುವುದು’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ‘ಪ್ರಜಾವಾಣಿ’ಗೆ ಹೇಳಿದರು.

ಘೋಷಣೆ: ‘ಇಂಡಿ ವಿಧಾನಸಭಾ ಕ್ಷೇತ್ರ, ತಾಲ್ಲೂಕಿನ ವ್ಯಾಪ್ತಿ ₹ 400 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನ. 10 ಲೋಕಾರ್ಪಣೆಗೊಳಿಸಲಿದ್ದಾರೆ. ಈ ಸಮಾರಂಭದಲ್ಲೇ ಹಲ ನೂತನ ಯೋಜನೆ ಘೋಷಿಸುವ ನಿರೀಕ್ಷೆಯಿದೆ’ ಎಂದು ತಿಳಿಸಿದರು.

‘ಇಂಡಿ ಪಟ್ಟಣದ ಎಲ್ಲ ಬಡಾವಣೆಗಳಿಗೂ ದಿನದ 24 ತಾಸು ನೀರು ಪೂರೈಸುವ, ₹ 96 ಕೋಟಿ ವೆಚ್ಚದ 24X7 ಯೋಜನೆ, ಪಟ್ಟಣದ ಎಂಟು ಸಾವಿರ ಮನೆಗಳಿಗೆ ಯುಜಿಡಿ ಸಂಪರ್ಕ ಕಲ್ಪಿಸುವ ₹ 8.32 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ, ₹ 31 ಕೋಟಿ ವೆಚ್ಚದಲ್ಲಿ ಮೆಗಾ ಮಾರ್ಕೆಟ್‌ ನಿರ್ಮಾಣ.

ವಿಜಯಪುರ–ಕಲಬುರ್ಗಿ ಜಿಲ್ಲೆ ಸಂಪರ್ಕಿಸುವ ₹ 72 ಕೋಟಿ ವೆಚ್ಚದ ರೂಡಗಿ–ಉಡಚಣ ಸೇತುವೆ ನಿರ್ಮಾಣ ಕಾಮಗಾರಿ, ₹ 36 ಕೋಟಿ ವೆಚ್ಚದ ಭುಯ್ಯಾರ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುವ ಮೂಲಕ ತಾಲ್ಲೂಕಿನ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಕೊಡುಗೆಯಾಗಿ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT