ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕಾಲೇಜ್‌ಕುಮಾರ 50ರ ಬಾಲಪ್ರತಿಭೆ!

Last Updated 10 ನವೆಂಬರ್ 2017, 11:25 IST
ಅಕ್ಷರ ಗಾತ್ರ

ಸಿನಿಮಾ: ಕಾಲೇಜ್‌ಕುಮಾರ್
ನಿರ್ಮಾಪಕರು: ಎಲ್. ಪದ್ಮನಾಭ್‌
ನಿರ್ದೇಶನ: ‘ಅಲೆಮಾರಿ’ ಸಂತು
ತಾರಾಗಣ: ರವಿಶಂಕರ್, ಶ್ರುತಿ, ವಿಕ್ಕಿ, ಸಂಯುಕ್ತಾ ಹೆಗಡೆ, ಸಾಧುಕೋಕಿಲ, ಪ್ರಕಾಶ್‌ ಬೆಳವಾಡಿ, ಅಚ್ಯುತ್‌ ಕುಮಾರ್

ನಾಯಕನ ಅಪ್ಪ ಶಿವಕುಮಾರ್‌ ಆಡಿಟರ್‌ ಕಚೇರಿಯಲ್ಲಿ ಸಹಾಯಕ. ಸ್ನೇಹಿತನೇ ಆತನಿಗೆ ಬಾಸ್‌. ನಿತ್ಯ ಗೆಳೆಯನಿಂದಲೇ ಅವನಿಗೆ ಅವಮಾನ. ಗರ್ಭಿಣಿಯಾಗಿದ್ದ ಪತ್ನಿ ಪುತ್ರನಿಗೆ ಜನ್ಮ ನೀಡುತ್ತಾಳೆ. ಈ ಖುಷಿ ಹಂಚಿಕೊಳ್ಳಲು ಮುಂದಾದಾಗ ಸ್ನೇಹಿತನಿಂದ ಹೀಯಾಳಿಕೆಯ ಮಾತು.

ಗೆಳೆಯನ ತಿರಸ್ಕಾರಕ್ಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಮಗನನ್ನು ಅಧಿಕಾರಿಯಾಗಿ ಮಾಡುವುದೇ ಅವನ ಜೀವನದ ಕನಸು. ಹಠತೊಟ್ಟು ಸ್ನೇಹಿತನಿಗೆ ಸವಾಲು ಎಸೆಯುತ್ತಾನೆ. ಇದಕ್ಕಾಗಿ ಅವನದು ಅವಿರತ ದುಡಿಮೆ. ‘ಕಾಲೇಜ್‌ಕುಮಾರ್‌’ ಸಿನಿಮಾ ಆರಂಭವಾಗುವುದು ಹೀಗೆ.

ಮೊದಲಾರ್ಧವು ಮಗನನ್ನು ಓದಿಸುವಲ್ಲಿಯೇ ಅಪ್ಪ ಪಡುವ ಶ್ರಮಕ್ಕೆ ಮೀಸಲು. ಚಿತ್ರದ ಟ್ರೇಲರ್‌ನಲ್ಲಿ ಕಂಡ ದೃಶ್ಯಗಳೇ ಮೊದಲಾರ್ಧದಲ್ಲಿ ಸುರುಳಿ ಸುತ್ತುತ್ತವೆ. ಇದನ್ನು ಕಂಡು ಪ್ರೇಕ್ಷಕರಿಗೂ ತಬ್ಬಿಬ್ಬು!

ಕಾಲೇಜಿನಲ್ಲಿ ಪುಂಡಾಟಿಕೆ, ನಾಯಕಿ ಜತೆಗೆ ಪ್ರೇಮದಾಟ, ಪರೀಕ್ಷೆಯಲ್ಲಿ ನಾಯಕ ಡಿಬಾರ್‌ ಆದ ಸುದ್ದಿಯು ಮನೆಯ ಬಾಗಿಲಿಗೆ ಬಂದಾಗ ಕಥೆ ಹೊಸಹಾದಿಗೆ ಹೊರಳುತ್ತದೆ. ಆಗ ಅಪ್ಪನ ಆಶಾಗೋಪುರ ಕಳಚಿ ಬೀಳುತ್ತದೆ. ವಾರಸ್ದಾರ ಹಾಕಿದ ಸವಾಲು ಸ್ವೀಕರಿಸಿ ಅಪ್ಪ ಓದಲು ಕಾಲೇಜಿನ ಮೆಟ್ಟಿಲು ಹತ್ತುತ್ತಾನೆ. ‘ಕಾಲೇಜ್‌ಕುಮಾರ್‌’ನ ಕಥೆಗೆ ಲಯ ಸಿಕ್ಕುವುದೇ ಅಲ್ಲಿ.

ತಂದೆಗೆ ಮಗ ಚೆನ್ನಾಗಿ ಓದಬೇಕೆಂಬ ಆಸೆ. ತನ್ನ ಕನಸನ್ನು ಅವನ ಮೂಲಕ ಈಡೇರಿಸಿಕೊಳ್ಳುವ ಛಲ. ಆದರೆ, ಮಗನಿಗೆ ವಿದ್ಯೆ ತಲೆಗೆ ಹತ್ತುವುದಿಲ್ಲ. ಪ್ರತಿದಿನ ಪೋಷಕರು ಮಕ್ಕಳ ಮೇಲೆ ಹೇರುತ್ತಿರುವ ಒತ್ತಡದಿಂದ ಆಗುತ್ತಿರುವ ಅವಾಂತರಗಳನ್ನು ತೆರೆಯ ಮೇಲೆ ಮುಖಾಮುಖಿಯಾಗಿಸುತ್ತಾರೆ ನಿರ್ದೇಶಕ ‘ಅಲೆಮಾರಿ’ ಸಂತು. ನಮ್ಮ ಆಸೆ ಈಡೇರಿಸಿಕೊಳ್ಳಲು ಮಕ್ಕಳ ಬಳಕೆ ಸಲ್ಲದು. ಅವರ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು ಎಂಬುದನ್ನು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ದ್ವಿತೀಯಾರ್ಧದಲ್ಲಿ ರವಿಶಂಕರ್‌ ಅವರೇ ನಾಯಕ. ಅಲ್ಲಿ ನಾಯಕ ಮತ್ತು ನಾಯಕಿ ಹಿನ್ನೆಲೆಗೆ ಸರಿದು ರವಿಶಂಕರ್ ಅವರ ಕಾಲೇಜಿನ ಕಥನ ಮುನ್ನೆಲೆಗೆ ಬರುತ್ತದೆ. ಇದು ಒಂದೆರೆಡು ದೃಶ್ಯಗಳಿಗೆ ಸೀಮಿತವಾಗದೆ ಕಥನದ ಭಾಗವೇ ಆಗಿಹೋಗುತ್ತದೆ. ತಂದೆಯು ಮಗನ ಶಿಕ್ಷಣದ ಜವಾಬ್ದಾರಿವಹಿಸಿಕೊಳ್ಳುವುದು ವಾಡಿಕೆ. ಇಲ್ಲಿ ಐವತ್ತು ವರ್ಷ ದಾಟಿದ ಅ‍ಪ್ಪನ ಶಿಕ್ಷಣದ ಜವಾಬ್ದಾರಿಯನ್ನು ಮಗ ಹೊರುತ್ತಾನೆ. ಕುಟುಂಬದ ನಿರ್ವಹಣೆಯ ನೊಗ ಮಗನ ಹೆಗಲೇರುತ್ತದೆ. ಉದ್ಯೋಗ ಸಿಗದೆ ಅಂಡಲೆಯುವ ನಾಯಕನ ಬದುಕು ಕೊನೆಗೆ ಕೃಷಿಯಲ್ಲಿ ಅರಳುತ್ತದೆ. ‍ಪದವಿ ಪಡೆಯುವ ಅಪ್ಪ ತನ್ನ ಕನಸನ್ನು ತಾನೇ ಈಡೇರಿಸಿಕೊಳ್ಳುತ್ತಾನೆ.

ವಿಲನ್‌, ಕಾಮಿಡಿ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ರವಿಶಂಕರ್ ಅಪ್ಪನಾಗಿ ಇಷ್ಟವಾಗುತ್ತಾರೆ. ಶ್ರುತಿ, ಅಚ್ಯುತ್‌ಕುಮಾರ್, ಪ್ರಕಾಶ್‌ ಬೆಳವಾಡಿ, ಸಾಧುಕೋಕಿಲ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ವಿಕ್ಕಿ ಮತ್ತು ಸಂಯುಕ್ತಾ ಹೆಗಡೆ ಅವರದ್ದು ಅಚ್ಚುಕಟ್ಟಾದ ನಟನೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಎರಡು ಹಾಡುಗಳು ಕೇಳಲು ಹಿತವಾಗಿವೆ.

ಮಕ್ಕಳ ಕಂಗಳಲ್ಲಿ ಭವಿಷ್ಯ ಕಂಡಿರುವ ಪೋಷಕರು ಮತ್ತು ಕಾಲೇಜಿನ ಮಹತ್ವ ಅರಿಯಬೇಕಾದ ವಿದ್ಯಾರ್ಥಿಗಳು ನೋಡಬಹುದಾದ ಸಿನಿಮಾ ‘ಕಾಲೇಜ್‌ಕುಮಾರ್’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT