ಮನೋಭಾವ

ಹೊಸ ಚಿಗುರಿನೊಂದಿಗೆ ಹಳೆಬೇರಿನ ಬಂಧ

ಏನಂತೆ ನಿನ್ನ ಸುಕುಮಾರಿದು. ಮನೆಗೆ ಬರುವ ಟೈಮೇನೇ ಇದು. ಇನ್ನು ನಡುರಾತ್ರಿ ತನಕನೂ ಮೊಬೈಲಲ್ಲಿ ಮೆಸೇಜು ಕುಟ್ತಾಳೆ. ಆ ಕಡೆ ಇರೊರು ಹುಡುಗನಾ ಹುಡುಗಿನಾ ಕೇಳೋರ‍್ಯಾರು. ನೀವಂತೂ ಗಂಡ-ಹೆಂಡತಿ ಸರಿಯಾಗಿದೀರಿ ಬಿಡು. ಅವಳಿಗೆ ಒಂದು ಮಾತು ಜೋರಾಗಿ ಹೇಳಿದರೆ ಎಲ್ಲಿ ಪ್ರಳಯಾನೇ ಆಗ್ಬಿಡುತ್ತೊ ಅನ್ನೋ ಥರ ಹೆದರಿ ಸಾಯ್ತೀರಿ. ಅವಳ ಆಡಿದ್ದೇ ಆಟ, ಮಾಡಿದ್ದೇ ಮಾಟ.

ಹೊಸ ಚಿಗುರಿನೊಂದಿಗೆ ಹಳೆಬೇರಿನ ಬಂಧ

'ಸ್ವಲ್ಪ ಮೆತ್ತಗೆ ಮಾತಾಡೆ, ಅಜ್ಜಿಗೆ ಕೇಳಿಸಿದ್ರೆ ಬೇಜಾರು ಮಾಡಿಕೊಳ್ತಾಳೆ' ಮಗಳಿಗೆ ಗದರಲು ನಿಂತಿರುವ ಕಾಂತಾಳ ಧ್ವನಿಯಲ್ಲಿ ಕೋಪಕ್ಕಿಂತಲೂ ಆತಂಕವೇ ಮೇಲುಗೈ ಪಡೆದಿತ್ತು. ತಗ್ಗಿದ ಸ್ವರದಲ್ಲಿ ಅಪ್ರಯತ್ನವಾಗಿ ದೈನ್ಯ ತೊಟ್ಟಿಕ್ಕುತ್ತಿತ್ತು. 'ಅಷ್ಟಿದ್ರೆ ನೀನೇ ನಿಮ್ಮಮ್ಮಂಗೆ ತಿಳಿಯೊ ಹಂಗೆ ಹೇಳ್ಕೊ. ನನ್ನ ವಿಷಯದಲ್ಲಿ ಮೂಗು ತೂರಿಸಿದ್ರೆ ನಾನು ಸುಮ್ಮನಿರೊಳಲ್ಲ ಗೊತ್ತಾಯ್ತಾ. ಒಂದ್ ಮಲಗೋಕೆ ಬಿಡಲ್ಲ, ತಿರುಗಾಡಲು ಬಿಡಲ್ಲ, ಟೀವಿ ನೋಡೊಕೆ ಬಿಡಲ್ಲ. ದಿಸ್ ಇಸ್ ಟೂ ಮಚ್, ಐ ಯಾಮ್ ಡಿಸಗಸ್ಟೆಡ್. ನಾನು ಬಾಯಿ ತೆಗೆದೆ ಅಂದ್ರೆ ನೀನು ನಿಮ್ಮಮ್ಮ ಕೂಡಿ ಮನೆ ಬಿಟ್ಟು ಓಡಿ ಹೋಗ್ತೀರಾ ಅಷ್ಟೆ’. ತನ್ನೆದುರು ನಿಂತು ಕಾಳರಾತ್ರಿ ಅವತಾರ ಧರಿಸಿದ ಅಚಿಂತ್ಯಳನ್ನು ಹೇಗೇಗೋ ರಮಿಸಿ ಅವಳ ರೂಮಿಗೆ ತಳ್ಳಿ ಬಾಗಿಲು ಹಾಕಿ ಅಡಿಗೆ ಮನೆಗೆ ಬಂದರೆ ಮಹಿಷಮರ್ದಿನಿಯ ಗೆಟಪ್‌ನಲ್ಲಿ ಕೂತಿದ್ದ ಶಾಂತಾ ಶುರುವಿಟ್ಟುಕೊಂಡಳು.

’ಏನಂತೆ ನಿನ್ನ ಸುಕುಮಾರಿದು. ಮನೆಗೆ ಬರುವ ಟೈಮೇನೇ ಇದು. ಇನ್ನು ನಡುರಾತ್ರಿ ತನಕನೂ ಮೊಬೈಲಲ್ಲಿ ಮೆಸೇಜು ಕುಟ್ತಾಳೆ. ಆ ಕಡೆ ಇರೊರು ಹುಡುಗನಾ ಹುಡುಗಿನಾ ಕೇಳೋರ‍್ಯಾರು. ನೀವಂತೂ ಗಂಡ-ಹೆಂಡತಿ ಸರಿಯಾಗಿದೀರಿ ಬಿಡು. ಅವಳಿಗೆ ಒಂದು ಮಾತು ಜೋರಾಗಿ ಹೇಳಿದರೆ ಎಲ್ಲಿ ಪ್ರಳಯಾನೇ ಆಗ್ಬಿಡುತ್ತೊ ಅನ್ನೋ ಥರ ಹೆದರಿ ಸಾಯ್ತೀರಿ. ಅವಳ ಆಡಿದ್ದೇ ಆಟ, ಮಾಡಿದ್ದೇ ಮಾಟ. ಅದೇನು ಬಟ್ಟೆ ಹಾಕ್ಕೋತಾಳೊ ಒಂದೂ ಮೈ ಮುಚ್ಚಲ್ಲ. ಈ ವಯಸ್ಸಲ್ಲಿ ನೀನು ಹೇಗಿದ್ದೆ ಅಂತ ನೆನಪು ಮಾಡ್ಕೊಳೆ. ಅದೆಷ್ಟು ಚೆನ್ನಾಗಿ ನಿನ್ನನ್ನು ಬೆಳೆಸಿದೀನಿ. ಆದ್ದರಿಂದಲೇ ನೀನು ಒಂದೊಳ್ಳೆ ಉದ್ಯೋಗ ಗಳಸ್ಕೊಂಡು ಗೌರವದ ಸಂಸಾರ ನಡಸ್ಕೊಂಡು ಸುಖವಾಗಿ ಬದುಕ್ತಾ ಇದೀಯಾ. ಆದರೆ ನಿನಗೆ ಇದ್ದೊಬ್ಬ ಮಗಳನ್ನ ನೆಟ್ಟಗೆ ಬೆಳೆಸೋಕೆ ಬರಲ್ಲ’ ಕಡಲಿನಲೆಗಳಂತೆ ಅಪ್ಪಳಿಸುತ್ತಿದ್ದ ತಾಯಿಯ ಮಾತುಗಳಿಗೆ ಅದುವರೆಗೆ ಬಂಡೆಯಂತೆ ನಿಂತಿದ್ದ ಕಾಂತಾ ಥಟ್ಟನೆ ಸಿಡುಕಿದಳು.

"ಹೌದಮ್ಮಾ ನಂಗೆ ಮಗಳನ್ನು ಬೆಳೆಸೋಕೆ ಬರಲ್ಲ, ನಾನೊಬ್ಬ ಕೆಟ್ಟ ತಾಯಿ. ನಾನು ಒಳ್ಳೆಯ ಮಗಳಾಗಿದ್ದೆ. ಅದಕ್ಕೆ ನೀನು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸ್ಕೊಂಡು ಬಂದೆ. ಇವತ್ತಿಗೂ ನಿನಗೆ ತಿರುಗಿ ಮಾತಾಡದೇನೆ ಹೂಂ ಅನ್ಕೊಂಡೇ ಬದುಕೋದು ರೂಢಿಯಾಗಿದೆ. ಆದರೆ ಒಳ್ಳೆ ಮಗಳಾದಷ್ಟು ಸುಲಭವಾಗಿ ಒಳ್ಳೆಯ ತಾಯಿಯಾಗೋಕೆ ಆಗಲಿಲ್ಲ". ಮಾತು ಮುಗಿಯುವಷ್ಟರಲ್ಲಿ ಅಳು ನುಗ್ಗಿ ಬಂದಿದ್ದರಿಂದ ಕಾಂತಾ ಸರಕ್ಕನೆ ಅಲ್ಲಿಂದ ಅಂಗಳಕ್ಕೆ ನಡೆದು ಬಿಟ್ಟಳು. "ಅದೇನು ಮಾಡಿಕೋತೀರೋ ಮಾಡಿಕೊಳ್ಳಿ. ನಂಗೇನಾಗಬೇಕಿದೆ ಈ ವಯಸ್ಸಲ್ಲಿ. ಏನೋ ನನ್ನ ಕರುಳು ಅನ್ನೊ ಕಕ್ಕುಲಾತಿಗೆ ತಡಿಲಾರದೆ ಹೇಳದೆ ಅಷ್ಟೆ. ನಿಮಗೆಲ್ಲಿದೆ ಅದನ್ನ ಅರ್ಥ ಮಾಡಿಕೊಳ್ಳೊ ತಾಳ್ಮೆ? ದೊಡ್ಡೋರ ಮಾತು ಕಟಕರೋಹಿಣಿ ಕಷಾಯದಂಗೆ ನಾಲಿಗೆಗೆ ಕಹಿಯಾದರೂ ಜಡ್ಡು ಓಡಿಸಿ ಜೀವ ಉಳಸುತ್ತೆ ಅನ್ನೊ ತಿಳವಳಿಕೆ ಇದ್ದರಲ್ವೆ" ಶಾಂತಾಳ ನೋವಿನ ಮಾತುಗಳು ಅಂಗಳದವರೆಗೂ ಬಂದು ಕಿವಿಗಪ್ಪಳಿಸಿದಾಗ ಕಾಂತಾ ನಿಟ್ಟುಸಿರು ಬಿಟ್ಟಳು.

ಇಂದು ಹಿರಿಯ ತಲೆಮಾರಿನವರು ಇರುವ ಬಹುತೇಕ ಕುಟುಂಬಗಳಲ್ಲಿ ಮೌಲ್ಯಗಳನ್ನು ಆರಾಧಿಸುವ ಶಾಂತಾಗಳು ಸಿಗುತ್ತಾರೆ. ತನ್ನ ಮೂರನೇ ತಲೆಮಾರು ಹೀಗೇಕೆ ಜೀವಿಸುತ್ತಿದೆ ಎಂದು ಕಕ್ಕಾಬಿಕ್ಕಿಯಾಗಿ ನಿಂತು ಅಲವತ್ತುಕೊಳ್ಳುತ್ತಾ ನಿಂತ ಅವರ ಕಕ್ಕುಲಾತಿಯಿದೆ. ಅದೇ ಕುಟುಂಬಗಳಲ್ಲಿ ಅಂತರಾಷ್ಟ್ರೀಯ ಪಠ್ಯಕ್ರಮವನ್ನು ಆಂಗ್ಲಭಾಷೆಯಲ್ಲಿ ಕಲಿತು ಆಧುನಿಕ ವೇಷಭೂಷಣಗಳಲ್ಲಿ ಗೆಳೆಯರ ಪಾರ್ಟಿಗಳಿಗೆ ಹೋಗುವ ಅಚಿಂತ್ಯಗಳಿದ್ದಾರೆ. ಅವರಿಬ್ಬರ ನಡುವೆ ಎರಡೂ ಧ್ರುವಗಳನ್ನು ಬೆಸೆಯುವ ಆಸೆಯಿಂದ ಕೈ ಚಾಚುತ್ತ ಬೆರಳಿಗೆ ನಿಲುಕದ ತುದಿಗಳತ್ತ ಅಸಹಾಯಕವಾಗಿ ದಿಟ್ಟಿಸುತ್ತಿರುವ ಕಾಂತಾಗಳಿದ್ದಾರೆ. ಹೌದು ಅವಳಿಗೆ ಅಥವಾ ಅವಳಂಥವರಿಗೆ ಅಮ್ಮ, ಅವಳ ಮಮತೆ, ಪ್ರೀತಿ, ಕಾಳಜಿ ಮತ್ತು ಆ ಕಾಳಜಿ ಹೆಚ್ಚಾದಾಗೊಮ್ಮೆ ಅವಳು ಉಪಯೋಗಿಸುವ ಬೈಗುಳದ ಅಸ್ತ್ರ ಎಲ್ಲವೂ ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಅವಳಿಗೆ ಅಷ್ಟೇ ಚೆನ್ನಾಗಿ ಮಗಳೂ ಅರ್ಥವಾಗುತ್ತಾಳೆ.

(ಪ್ರಜ್ಞಾ ಮತ್ತಿಹಳ್ಳಿ)

ಎಂಥ ದಿರಿಸು ಧರಿಸಿದ್ದರೂ ಅವಳ ದೇಹಭಾಷೆಯಲ್ಲಿ ಉಕ್ಕುವ ಆತ್ಮವಿಶ್ವಾಸ, ಗೆಳೆಯರ ಬೈಕುಗಳಲ್ಲಿ ತಿರುಗಿ ಬಂದಾಗ ಪ್ರತಿ ಸಣ್ಣ ವಿವರಗಳನ್ನೂ ಮುಚ್ಚಿಡದೆ ತನ್ನೊಂದಿಗೆ ಹಂಚಿಕೊಳ್ಳುವ ಪ್ರಾಮಾಣಿಕತೆ, ಸ್ನೇಹದ ಹದ್ದು ಮೀರದಂತೆ ಸಂಬಂಧಗಳನ್ನು ನಿಭಾಯಿಸಬೇಕೆಂಬ ತನ್ನ ಕಿವಿಮಾತನ್ನು ಪಾಲಿಸಲೆತ್ನಿಸುವ ನಿಸ್ಪೃಹತೆ ಎಲ್ಲವೂ ಅರ್ಥವಾಗುತ್ತಿದೆ. ಇದಕ್ಕಿಂತ ಹೆಚ್ಚಿನ ಬೇಲಿಯನ್ನು ಈ ಕಾಲದ ಮಕ್ಕಳಿಗೆ ಹಾಕಲಾಗುತ್ತದೆಯೆ? ಹೊರಗೆ ಹೋಗಬೇಡ, ಫೋನು ಮಾಡಬೇಡ, ಗೆಳೆಯರನ್ನು ಮನೆಗೆ ಕರೆತರಬೇಡ ಎಂದೆಲ್ಲ ಕಟ್ಟುನಿಟ್ಟುಗಳನ್ನು ಹಾಕಿದರೆ ಮನೆಯಲ್ಲಿ ಕುರಿಮರಿಯಂತೆ ತಲೆತಗ್ಗಿಸಿಕೊಂಡು ಓಡಾಡುತ್ತಲೇ ಯಾರಿಗೂ ಗೊತ್ತಾಗದಂತೆ ರಿಜಿಸ್ಟರ್ ಮದುವೆ ಮಾಡಿಕೊಂಡುಬಿಟ್ಟ ಘಟನೆಗಳೂ ಇವೆ. ಅತ್ತು ಕರೆದು ರಂಪಾಟ ಮಾಡಿದ ಪಾಲಕರಿಗೆ ತಣ್ಣಗೆ ಕೊಟ್ಟ ಅವಳ ಉತ್ತರವೆಂದರೆ "ನೀವು ಎಲ್ಲಾದಕ್ಕೂ ಬೇಡ ಬೇಡ ಅಂತಿದ್ರೆ ನಾನಾದ್ರೂ ಏನು ಮಾಡಲಿ? ನಂಗೆ ಹೆಂಗೆ ಬೇಕೊ ಹಂಗೆ ಇರೊ ಸ್ವಾತಂತ್ರ್ಯ ನೀವಂತೂ ಕೊಡಲಿಲ್ಲ, ಅದನ್ನು ಕೊಡೊವಂಥ ಹುಡುಗನ್ನ ನಾನೇ ಹುಡುಕಿಕೊಂಡೆ."

ಈಗ ಹೀಗೆ ಸೆಟೆದು ನಿಂತು, ಕಣ್ಣರಳಿಸಿಕೊಂಡು ಹೆತ್ತಪ್ಪ-ಅಮ್ಮನನ್ನೇ ಅಪರಾಧಿ ಸ್ಥಾನದಲ್ಲಿಟ್ಟು ರಾಣಿ ರುದ್ರಮಾದೇವಿಯ ಶೈಲಿಯಲ್ಲಿ ಘರ್ಜಿಸುತ್ತಿರುವ ಹುಡುಗಿಯನ್ನೇ ಅಲ್ಲವೇ ಅವಳಮ್ಮ ಅಜ್ಜಿಯರು ಇನ್ನಿಲ್ಲದ ಅಕ್ಕರೆಯಿಂದ ಮುದ್ದಿಸಿದ್ದು. ಮೂರು ದಶಕ ನಂತರ ಮನೆಗಿಳಿದ ಮೊದಲ ಮಗುವೆಂದರೆ ದೇವರಿತ್ತ ನಂದಾದೀಪವೆಂದು ಆನಂದಭಾಷ್ಪ ಸುರಿಸಿದ್ದು. ತೊಟ್ಟಿಲಲ್ಲಿ ಮಲಗಿಸಿದರೆ ಒಂಟಿಯಾಗಿಬಿಡುತ್ತದೆಯೆಂದು ಒಬ್ಬರಾದ ಮೇಲೊಬ್ಬರು ಎದೆಗೊತ್ತಿಗೊಂಡು ಮಡಿಲಲ್ಲಿ ಮಲಗಿಸಿಕೊಂಡೇ ಬೆಳಗು ಮಾಡುತ್ತಿದ್ದ ಕಥೆ ಹೇಳಿದರೆ ಮಗಳು ಸೊಟ್ಟಗೆ ನಕ್ಕು ಒಹ್ ಮೈ ಗಾಡ್, ಹೌ ಫೂಲಿಶ್ ಅನ್ನುತ್ತಾಳೆ. ಉದ್ದಕೆ ಕಾಲು ನೀಡಿಕೊಂಡು ಎಣ್ಣೆ ಹಚ್ಚಿ ಬಿಸಿ ಹೆಚ್ಚಾದರೆ ಅಳಬಹುದೆಂದು ತಣ್ಣೀರು ಬೆರೆಸುತ್ತ ರಾಗವಾಗಿ ಹಾಡು ಹೇಳುತ್ತ ನೀರೆರೆದು ಚೂರೂ ಕುಸುಗುಡದಂತೆ ಮೀಯಿಸಿ ತರುತ್ತಿದ್ದ ಅಜ್ಜಿಯರಿಗೆ ಚೋಟುದ್ದ ಮೊಮ್ಮಗಳು ಎದುರು ಮಾತಾಡಿದರೆ ಮೈಮೇಲೆ ಕುದಿ ನೀರೆರೆಚಿದಂತಾಗದಿದ್ದೀತೆ?

ತನ್ನ ವಾರಿಗೆಯ ಯುವ ಸಮುದಾಯದ ವರ್ತನೆಯನ್ನು ಅಳವಡಿಸಿಕೊಂಡ ಅಚಿಂತ್ಯನಂತಹ ಚಿಗುರುಗಳಿಗೆ ಇಡೀ ಪ್ರಪಂಚವೇ ವಸಂತಾಗಮನದ ಉದ್ಯಾನದಂತೆ ನಳನಳಿಸುತ್ತಿದೆ. ಕೈಯಲ್ಲಿ ವಾಹನ, ಪರ್ಸಲ್ಲಿ ಡೆಬಿಟ್ ಕಾರ್ಡುಗಳು. ಒಂದು ಎಸ್ಸೆಮೆಸ್ಸಿಗೆ ಹಾಜರಾಗುವ ಮಿತ್ರ ಸಮೂಹ. ಇದು ಅವಳ ಸುತ್ತಲಿರುವ ಮತ್ತು ಅವಳು ಕಾಣುತ್ತಿರುವ ಜಗತ್ತು. ಇದು ಅವಳ ಸತ್ಯ. ಹಾಗಾಗಿ ಇದೇ ಅವಳ ಮೌಲ್ಯ. ಇದಕ್ಕಿಂತ ಬೇರೆಯಾದದ್ದನ್ನು ಅವಳು ಒಪ್ಪಲಾರಳು. ಅಥವಾ ಇದು ಸರಿಯಲ್ಲ ಎನ್ನುವವರನ್ನು ಅವಳು ನಂಬಲಾರಳು. ಅವರೊಂದಿಗೆ ಅವಳು ಸಂವಹನವನ್ನು ನಿಲ್ಲಿಸಿಬಿಡುತ್ತಾಳೆ. ಅಂದರೆ ಅವರ ಪಾಲಿಗೆ ಅವಳು ಸ್ವಿಚ್ ಆಫ್ ಮಾಡಿದ ಮೊಬೈಲ್ ತರಹ. ಹೇಳುವುದು ಕೇಳುವುದೆಲ್ಲ ವ್ಯರ್ಥ.

ಶಾಂತಾಳೆದುರು ಇರುವುದು ಎರಡೇ ಆಯ್ಕೆಗಳು. ಮಕ್ಕಳನ್ನು ಬೆಳೆಸುವ ತನ್ನ ಕರ್ತವ್ಯವನ್ನು ತಾನಂತೂ ಚೆನ್ನಾಗಿ ಮಾಡಿದ್ದೇನೆ. ಈಗ ಮೊಮ್ಮಕ್ಕಳ ಜಗತ್ತೇ ಬೇರೆಯಾಗಿದೆ. ಅದು ತನ್ನ ಪಾಲಿಗೆ ಜರ್ಮನ್ನೊ, ಸ್ಪ್ಯಾನಿಶ್ ಭಾಷೆಯದೊ ಚಾನೆಲ್ ಹಚ್ಚಿದ ಹಾಗೆ, ಅರ್ಥವಾಗುವುದಿಲ್ಲ. ಆದ್ದರಿಂದ ತನ್ನ ಗಮನವನ್ನು ಆಧ್ಯಾತ್ಮ, ಸಂಗೀತ, ಸಾಹಿತ್ಯ ಇತ್ಯಾದಿ ಆಸಕ್ತಿಯ ವಿಚಾರಗಳ ಕಡೆಗೆ ಹರಿಸಿ ಆದಷ್ಟು ನೆಮ್ಮದಿಯಿಂದ ಇದ್ದುಬಿಡಬೇಕು. ಎಲ್ಲರಿಗೂ ಆದದ್ದೇ ತನ್ನ ಮೊಮ್ಮಕ್ಕಳಿಗೂ ಆಗುತ್ತದೆ. ಹಿಂದೆಲ್ಲ ವಾನಪ್ರಸ್ಥ ಅಂತ ಸಂಸಾರದ ಜಂಜಡದಿಂದ ದೂರ ಇರುತ್ತಿದ್ದರಲ್ಲ ಹಾಗೆ. ಅದಕ್ಕಾಗಿ ಮನೆ ಬಿಟ್ಟು ಹೋಗಬೇಕಾಗಿಲ್ಲ.

ಒಂದೇ ಸೂರಿನಡಿಗೆ ವಾಸಿಸುವಾಗಲೂ ತಮ್ಮ ಪಾಡಿಗೆ ತಾವು ಅಭಿರುಚಿಗೆ ಪೂರಕವಾದ ದಿನಚರಿಯನ್ನು ರೂಪಿಸಿಕೊಂಡು ತಮ್ಮ ಮುಸ್ಸಂಜೆಯ ನೆಮ್ಮದಿಯನ್ನು ಹಾಳು ಮಾಡಿಕೊಳ್ಳದೆ ಬದುಕಬಹುದು. ಇನ್ನೊಂದು ಆಯ್ಕೆಯೆಂದರೆ ಕಣ್ಣೆದುರಿನ ಚಾನೆಲ್ಲಿನ ಭಾಷೆ ಕಲಿಯಲೆತ್ನಿಸುವುದು. ಇದಕ್ಕೆ ಅಪಾರ ತಾಳ್ಮೆ ಅದಕ್ಕಿಂತ ಹೆಚ್ಚಾಗಿ ಬದಲಾವಣೆಗೊಪ್ಪುವ ಮನೋಭಾವ ಇರಬೇಕು. ಆ ಅಜ್ಜಿಯರು ಜೀನ್ಸ್ ಧರಿಸಿ ಮಾಲ್ ಗಳಲ್ಲಿ ಎಸ್ಕಲೇಟರ್ ಮೇಲೆ ನಿಂತಿರುತ್ತಾರೆ ಅಥವಾ ತಮ್ಮ ಒಂಭತ್ತು ವಾರಿನ ಕಚ್ಚೆ ಸೀರೆ ಸೆರಗನ್ನು ತಲೆಗೆಳೆದುಕೊಳ್ಳುತ್ತಲೇ ಮೊಮ್ಮಗಳ ಕೈಯ ಮೊಬೈಲ್‌ ನಲ್ಲಿ ಇಣುಕಿ ಸ್ಟೇಟಸ್ ಬದಲಾಯಿಸಲು ಸಲಹೆ ಕೊಡುತ್ತಿರುತ್ತಾರೆ. ಏನು ಮಾಡಲಿಕ್ಕೆ ಬರ‍್ತದ? ಕಾಲಾಯ ತಸ್ಮೈ ನಮ: ಅನ್ನಲಿಕ್ಕೇ ಬೇಕಲ್ಲ, ರೋಮದೊಳಗಿರೂ ಮುಂದ ರೋಮನ್ನರಾಗಬೇಕು. ಅನ್ನು ಮಂದಿಯಿದು.

ಕಾಂತಾಳಂತಹ ಎರಡನೆ ತಲೆಮಾರಿನವರು ಮಕ್ಕಳು ಸ್ವಿಚ್ ಆಫ್ ಮಾಡಿಕೊಳ್ಳದಿರುವಂತೆ ಹುಶಾರಾಗಿ ವ್ಯವಹರಿಸಬೇಕಾಗಿದೆ. ತಾವೂ ವಾಟ್ಸ್ಯಾಪ್‌, ಫೇಸುಬುಕ್‌ಗಳಲ್ಲಿ ಇದ್ದೇ ಮಗಳ ಮಿತ್ರಸಮೂಹದ ಮೇಲೆ ಕಣ್ಣಾಡಿಸಬೇಕಾಗಿದೆ. ಆಕ್ಷೇಪಾರ್ಹವಾದದ್ದು ಕಂಡರೆ ಮೆತ್ತಗೆ ಮಾತಾಡುತ್ತಲೇ ತನ್ನ ಅಭಿಪ್ರಾಯ ತಿಳಿಸಿ ಹಿರಿತನದ ಹಮ್ಮು ತೋರಿಸದೇ ಗೆಳತಿಯಂತೆಯೇ ವ್ಯವಹರಿಸಿ ತಿದ್ದಬೇಕಾಗಿದೆ. ತನಗಿಷ್ಟವಿರಲಿ, ಇಲ್ಲದಿರಲಿ ಮಗಳ ಜಗತ್ತಿನೊಳಗೆ ಹೋಗಿ ಅವಳಂತೆ ವ್ಯವಹರಿಸುತ್ತ ಅವಳನ್ನು ಕಾಪಾಡಬೇಕಾದ ಅನಿವಾರ್ಯತೆ. ವಯಸ್ಸಾದ ಅಮ್ಮನ ಮನಸ್ಸಿಗೆ ಹೆಚ್ಚಿಗೆ ನೋವಾಗದಂತೆ ಸಂಭಾಳಿಸಬೇಕಾದ ಚಾಕಚಕ್ಯತೆ. ಹೌದು ಕಾಂತಾಳಂತಹವರಿಗೆ ಈಗ ಬೇಕಾದುದು ಚಾಕಚಕ್ಯತೆ. ಅಯ್ಯೊ ತಾನು ಅಮ್ಮ-ಮಗಳ ನಡುವಿನ ಸೇತುವೆಯಾಗಿ ಇಬ್ಬರನ್ನೂ ಹೊತ್ತು ನಿಂತಿದ್ದೇನೆ ಎಂಬ ದೃಷ್ಟಿಯಿಂದ ವಿಚಾರ ಮಾಡಿದರೆ ಸ್ವಮರುಕ ಹುಟ್ಟಿಕೊಳ್ಳುತ್ತದೆ. ಅದು ಆತ್ಮವಿಶ್ವಾಸವನ್ನು ಕೊಂದುಬಿಡುತ್ತದೆ ಹಾಗೂ ಶಕ್ತಿಕುಂದಿಸುತ್ತದೆ. ಅದರ ಬದಲಿಗೆ ಇವೆಲ್ಲ ನಿಸರ್ಗಸಹಜ ಕ್ರಿಯೆಗಳು.

ಈ ದೇಶದ ಕೋಟ್ಯಾಂತರ ಜನರಿಗಾದದ್ದೇ ನನಗೂ ಆಗುತ್ತಿದೆ. ಸಾಧ್ಯವಾದಷ್ಟು ಸರಳವಾಗಿಯೇ ಇದನ್ನು ನಿರ್ವಹಿಸಬೇಕು. ಇಷ್ಟಕ್ಕೂ ಇದು ಯುದ್ಧವಲ್ಲ ಆಟ. ಇಲ್ಲಿರುವ ಈ ಇಬ್ಬರೂ ಯಾರೋ ಅನ್ಯರಲ್ಲ. ತನ್ನದೇ ದೇಹದ, ತನ್ನದೇ ಆತ್ಮದ, ತನ್ನದೇ ಜೀವದ ಎರಡು ವಿಸ್ತರಣೆಗಳು. ತನಗಲ್ಲದೇ ಇನ್ಯಾರಿಗೆ ಇವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ನನಗಿವರು ಚೆನ್ನಾಗಿ ಗೊತ್ತು ಮತ್ತು ನಾನಿವರನ್ನು ಚೆನ್ನಾಗಿ ನಿಭಾಯಿಸಬಲ್ಲೆ ಎಂದು ಆಲೋಚಿಸಿದರೆ ಇದು ಆಟ. ಒಂದಿಷ್ಟು ನಕ್ಕು, ಪುಸಲಾಯಿಸಿ, ರಮಿಸಿ, ಲಕ್ಷವನ್ನು ಬೇರೆಡೆಗೆ ಸೆಳೆದು ಅಜ್ಜಿಗೆ ವಯಸ್ಸಾಗಿದೆ, ಅವಳೊಂಥರಾ ಚಿಕ್ಕ ಮಗು ಥರಾ ನೀನೀಗ ದೊಡ್ಡೊಳಾಗಿದೀಯಾ ತಿಳವಳಿಕೆ ಬಂದಿದೆಯಲ್ವಾ ಅನ್ನುತ್ತ ಅಮ್ಮಾ ನೀನೆಷ್ಟು ತಿಳಕೊಂಡಿದೀಯಾ, ಅನುಭವಸ್ಥೆ, ನಿಂಗೆ ಕ್ಷಮಿಸೋದನ್ನ ಹೇಳಿಕೊಡಬೇಕಾ ಸುಮ್ಮನಿದ್ದು ಬಿಡು, ಅವಳಿನ್ನೂ ಚಿಕ್ಕವಳು ಬುದ್ಧಿ ಹೇಳೋಣ ಅನ್ನುತ್ತಲೊ ಹಾಗೂ ಹೀಗೂ ಹುಟ್ಟಿದ ಸೂರ್ಯನನ್ನು ಮುಳುಗಿಸಬೇಕು. ಮತ್ತೆ ಮರು ದಿನ ನಮಗೆ ಬೇಕಾದಂತೆ ಅಂದರೆ ಮನೆಗೆ ಅನುಕೂಲವಾಗುವಂತೆ ಹುಟ್ಟಿಸಬೇಕು.

Comments
ಈ ವಿಭಾಗದಿಂದ ಇನ್ನಷ್ಟು
‘ನಿದ್ದೆಯಲ್ಲೇ ನನ್ನ ಮಾತುಕತೆ!’

ಸಲಹೆ
‘ನಿದ್ದೆಯಲ್ಲೇ ನನ್ನ ಮಾತುಕತೆ!’

17 Mar, 2018
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

ಯೋಗ
ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

17 Mar, 2018
ಯುಗದ ಆದಿ ಯುಗಾದಿ

ಭೂಮಿಕಾ
ಯುಗದ ಆದಿ ಯುಗಾದಿ

17 Mar, 2018
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

ಆಯುರ್ವೇದ
ಬೇವು ಮತ್ತು ಬೆಲ್ಲ ಬೇಸಿಗೆಯ ಔಷಧ

17 Mar, 2018
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

ಭೂಮಿಕಾ
ಪ್ರಕೃತಿ, ಹೆಣ್ಣು ಮತ್ತು ಸಿಹಿ–ಕಹಿ

17 Mar, 2018