ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ಟ್ರಿಕ್ ಸಮಸ್ಯೆ .. ನಿಮಗೆಷ್ಟು ಗೊತ್ತು..?

Last Updated 10 ನವೆಂಬರ್ 2017, 19:30 IST
ಅಕ್ಷರ ಗಾತ್ರ

ನಮ್ಮೆಲ್ಲರನ್ನೂ ಒಮ್ಮೆಯಾದರೂ ಕಾಡಿರಬಹುದಾದಂತಹ ಸಮಸ್ಯೆಯೆಂದರೆ ಎದೆ–ಉರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ. ಕೆಲವರನ್ನು ಇದು ಮೇಲಿಂದ ಮೇಲೆ ಕಾಡಿದರೆ, ಇನ್ನು ಕೆಲವರನ್ನು ಯಾವಾಗಲಾದರೊಮ್ಮೆ ಕಾಡುತ್ತದೆ. ಕೆಲವರಲ್ಲಿ ಆಹಾರಕ್ರಮದಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ತುಸು ಹೊತ್ತಿನ ಬಳಿಕವೇ ಎದೆ ಉರಿಯ ಸಮಸ್ಯೆ ಬಾಧಿಸಲು ಶುರು ಮಾಡುತ್ತದೆ.

ಜಠರದ ಒಳಪದರಗಳಲ್ಲಿನ ಉರಿಯೂತವೇ ಈ ಸಮಸ್ಯೆಗೆ ಮೂಲಕಾರಣ. ಸಾಮಾನ್ಯವಾಗಿ ಜಠರವು ಆಹಾರ ಚೀಲದಂತೆ ಕೆಲಸ ಮಾಡುವುದರ ಜೊತೆಯಲ್ಲಿಯೇ ಜೀರ್ಣಕ್ರಿಯೆಗೂ ಸಹಕರಿಸುತ್ತದೆ. ಜಠರದ ಒಳ ಪದರಗಳ ಜೀವಕೋಶಗಳು ಹೈಡ್ರೋಕ್ಲೋರಿಕ್ ಆಮ್ಲ ಹಾಗೂ ಪೆಪ್ಸಿನ್ ಎಂಬ ಕಿಣ್ವವನ್ನೂ ಉತ್ಪಾದಿಸುತ್ತವೆ. ಪೆಪ್ಸಿನ್ ಆಹಾರದಲ್ಲಿನ ಪ್ರೊಟೀನ್‌ಗಳನ್ನು ವಿಭಜನೆ ಮಾಡುವಲ್ಲಿ ಸಹಕರಿಸುತ್ತದೆ. ಆದರೆ, ಹೈಡ್ರೋಕ್ಲೋರಿಕ್ ಆಮ್ಲವು ಜಠರದ ಒಳಪದರಗಳ ಮೇಲೆ ಮತ್ತೊಂದು ಪದರವಾಗಿ ನಿಂತು, ಜಠರದ ಜೀವಕೋಶಗಳನ್ನು ರಕ್ಷಿಸುತ್ತದೆ. ಈ ಜೀವಕೋಶಗಳ ಉತ್ಪಾದನಾ ಕಾರ್ಯ ವೈಖರಿಯಲ್ಲಿ ವ್ಯತ್ಯಾಸವಾದಾಗ ಜಠರದ ಉರಿಯೂತ ಉಂಟಾಗುತ್ತದೆ.

ಕಾರಣಗಳೇನು?

ಆಹಾರಶೈಲಿಯಲ್ಲಿನ ದೋಷ - ಅತಿಯಾದ ಮಸಾಲೆಯುಕ್ತ ಆಹಾರದ ಸೇವನೆ, ಅತಿಯಾದ ಕಾಫಿ–ಟೀಗಳ ಸೇವನೆ.

ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯಲ್ಲಿನ ದೋಷ - ಕೆಲವರಲ್ಲಿ ವ್ಯಕ್ತಿಯ ರೋಗನಿರೋಧಕ ವ್ಯವಸ್ಥೆಯೇ ಜಠರದ ಜೀವಕೋಶಗಳನ್ನು ನಾಶ ಮಾಡುವ ವಸ್ತುಗಳನ್ನು ಉತ್ಪಾದಿಸುತ್ತದೆ.

ದೋಷಪೂರಿತ ಜೀವನಶೈಲಿ – ಅತಿಯಾದ ಮದ್ಯಸೇವನೆ ಮತ್ತು ಅತಿಯಾದ ಧೂಮಪಾನ.

ಸೋಂಕು – ಹೆಲಿಕೋ ಬ್ಯಾಕ್ಟರ್ ಪೈಲೋರಿ, ಸಾಲ್‌ಮೊನೆಲ್ಲಾ ಮುಂತಾದ ಸೂಕ್ಷ್ಮಾಣು, ಕೆಲವು ವೈರಾಣುಗಳು.

ಅಪೌಷ್ಟಿಕತೆ – ಆಹಾರದಲ್ಲಿ ಪ್ರೊಟೀನು ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳ ಕೊರತೆ.

ಕೆಲವು ಔಷಧಗಳ ಸೇವನೆ – ಆಸ್ಪಿರಿನ್, ಐಬುಪ್ರೋಫಿನ್... ಮುಂತಾದುವು

ಕೆಲವು ರಾಸಾಯನಿಕಗಳು – ಶಕ್ತಿಯುತವಾದ ಆಮ್ಲಗಳು, ವಿಕಿರಣಗಳು, ಅತಿ ತಂಪಾದ ವಸ್ತುಗಳು.

ಒತ್ತಡಯುತ ಜೀವನ – ಯಾವುದೇ ಬಗೆಯ ಮಾನಸಿಕ / ದೈಹಿಕ ಆಘಾತ ಮತ್ತು ಒತ್ತಡ... ವ್ಯಕ್ತಿ ಶಸ್ತ್ರಚಿಕಿತ್ಸೆಗಳಿಗೆ ಒಳಗಾದಾಗ, ಶರೀರಕ್ಕೆ ಸುಟ್ಟ ಗಾಯಗಳಾದಾಗ.

ಗುಣಲಕ್ಷಣಗಳೇನು?

ಮೇಲು ಹೊಟ್ಟೆಯಲ್ಲಿ ಹಾಗೂ ಎದೆಯ ಭಾಗದಲ್ಲಿ ನೋವು/ಉರಿ, ಅಜೀರ್ಣ, ಹೊಟ್ಟೆ ಉಬ್ಬರಿಸಿದಂತಾಗುವುದು, ವಾಕರಿಕೆ, ವಾಂತಿ, ತೇಗು ಬರುವುದು, ಹಸಿವಾಗದಿರುವುದು, ಶರೀರದ ತೂಕ ಕಡಿಮೆಯಾಗುವುದು – ಇವೇ ಮುಂತಾದವುಗಳು ಜಠರದ ಉರಿಯೂತದ ಲಕ್ಷಣಗಳು.

ವೈದ್ಯರಲ್ಲಿ ಸಲಹೆ ಪಡೆಯಿರಿ

ಎದೆ–ಉರಿ ಸಮಸ್ಯೆಯಿಂದ ಬಳಲುವವರು ನಿಮ್ಮ ಕುಟುಂಬ ವೈದ್ಯರಲ್ಲಿ ಸಲಹೆ ಪಡೆದರೆ ಒಳಿತು. ಏಕೆಂದರೆ ಅವರು ನಿಮ್ಮ ಸಮಸ್ಯೆಯ ತೀವ್ರತೆಗೆ ಸರಿಹೊಂದುವ ಔಷಧವನ್ನು ಸೂಚಿಸುತ್ತಾರೆ. ವೈದ್ಯವಿಜ್ಞಾನದಲ್ಲಿ ಜಠರದ ಉರಿಯೂತವನ್ನು ಸಮಸ್ಯೆಯ ಮೂಲ ಕಾರಣಗಳು ಹಾಗೂ ಜಠರದ ಯಾವ ಭಾಗದಲ್ಲಿ ಉರಿಯೂತ ಉಂಟಾಗಿದೆ ಎಂಬುದರ ಆಧಾರದ ಮೇಲೆ ಮುಖ್ಯವಾಗಿ ಮೂರು ಬಗೆಯಾಗಿ ವಿಂಗಡಿಸಲಾಗುತ್ತದೆ. ಎ, ಬಿ ಮತ್ತು ಎಬಿ. ಆದ್ದರಿಂದ, ಅವಶ್ಯಕತೆ ಇದೆ ಎಂದಾದರೆ ಉದರದರ್ಶಕಯಂತ್ರದ ಸಹಾಯದಿಂದ ಜಠರದ ಒಳಭಾಗವನ್ನು ಗಮನಿಸುತ್ತಾರೆ. ಅಗತ್ಯವಿದ್ದರೆ ಅಲ್ಲಿನ ಅಂಗಾಂಶದ ತುಣುಕನ್ನು ತೆಗೆದು ತಪಾಸಣೆಗೆ ಕಳುಹಿಸುತ್ತಾರೆ. ಇದರಿಂದ ಆ ಭಾಗದಲ್ಲಿ ಆಗುತ್ತಿರುವ ಜೀವಕೋಶಗಳಲ್ಲಿನ ಬದಲಾವಣೆಗಳ ಬಗೆಯನ್ನು ಗೊತ್ತು ಪಡಿಸಿಕೊಳ್ಳಬಹುದು. ಇದು ಮುಂದಿನ ಚಿಕಿತ್ಸಾಕ್ರಮಕ್ಕೆ ಸಹಕರಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಜೀವನಶೈಲಿ ಮತ್ತು ಆಹಾರಶೈಲಿಯಲ್ಲಿನ ಬದಲಾವಣೆಯೇ ಈ ಎದೆ–ಉರಿ ಸಮಸ್ಯೆಯನ್ನು ಶಮನಗೊಳಿಸಲು ಸಹಕಾರಿಯಾಗಬಲ್ಲದು.

ಕಡೆಯದಾಗಿ, ದಯವಿಟ್ಟು ನೆನಪಿಡಿ: ಒಮ್ಮೊಮ್ಮೆ ಹೃದಯಾಘಾತದ ಗುಣಲಕ್ಷಣಗಳೂ ಈ ಜಠರದ ಉರಿಯೂತದ ಗುಣಲಕ್ಷಣಗಳಂತೆಯೇ ತೋರುತ್ತವೆ. ಆದ್ದರಿಂದ ಈ ಎದೆ–ಉರಿಯ ಜೊತೆಯಲ್ಲಿ ವ್ಯಕ್ತಿ ಬೆವರುತ್ತಿದ್ದರೆ, ಉಸಿರಾಡಲು ತೊಂದರೆ ಪಡುತ್ತಿದ್ದರೆ, ಎಡತೋಳು - ಬೆನ್ನಿನವರೆಗೆ ನೋವು ಕಾಣಿಸುತ್ತಿದೆಯೆಂದರೆ ಅಥವಾ ನೋವು ಹೆಚ್ಚುತ್ತಾಹೋದರೆ ತಡ ಮಾಡದೆ ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.

**

ಪದೇ ಪದೇ ಈ ಸಮಸ್ಯೆಗೆ ತುತ್ತಾಗುವವರು ಈ ಕೆಳಗಿನ ಅಂಶಗಳನ್ನು ನೆನಪಿನಲ್ಲಿಡಬೇಕು :

* ಅತಿಯಾದ ಕಾಫಿ, ಟೀ, ಇಂಗಾಲ ತುಂಬಿದ ತಂಪುಪಾನೀಯಗಳ ಸೇವನೆ ಬೇಡ.

* ಮದ್ಯಪಾನ ಹಾಗೂ ಧೂಮಪಾನಿಗಳಾಗಿದ್ದರೆ, ಅವನ್ನು ನಿಲ್ಲಿಸಿ.

* ಅತಿಯಾದ ಉಪ್ಪಿನಂಶವಿರುವ, ಕೊಬ್ಬಿನಂಶವಿರುವ, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ, ಹುರಿದ ಆಹಾರ ಪದಾರ್ಥಗಳ ಸೇವನೆ ಬೇಡ.

* ದಿನದಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಇರಲಿ.

* ದಿನವೂ 8ರಿಂದ10 ತಾಸುಗಳ ನಿದ್ದೆ ತಪ್ಪಿಸಬೇಡಿ.

* ಆಹಾರದಲ್ಲಿ ಹಣ್ಣು, ತರಕಾರಿ ಮತ್ತಿತರ ನಾರಿನಾಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ.

* ಧಾನ್ಯಗಳು ಹಾಗೂ ಬೇಳೆಕಾಳುಗಳ ಸೇವನೆಗೆ ಹೆಚ್ಚು ಮಹತ್ವ ಕೊಡಿ.

* ವೈದ್ಯರ ಸಲಹೆಯಿಲ್ಲದೆ, ಯಾವುದೇ ಮಾತ್ರೆ ಅಥವಾ ಔಷಧವನ್ನು ಸೇವಿಸ ಬೇಡಿ.

* ದಿನವೂ 3 ರಿಂದ 4 ಲೀಟರ್‌ಗಳಷ್ಟು ನೀರನ್ನು ತಪ್ಪದೆ ಕುಡಿಯಿರಿ.

–ಡಾ. ವಿನಯ ಶ್ರೀನಿವಾಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT