ಆಹಾರಪದ್ಧತಿ

ಆಹಾರದ ಅಭ್ಯಾಸ ತಂದೊಡ್ಡಿರುವ ಹೊಸ ಸಮಸ್ಯೆಗಳು

ಕಣ್ಣಿಗೆ ಕಂಡದ್ದೆಲ್ಲವನ್ನೂ ನಾಲಗೆಗೆ ರುಚಿಯೆನಿಸಿದ್ದೆಲ್ಲವನ್ನೂ ತಿನ್ನುವ ಚಟವನ್ನು ನಾವು ಬಿಡಲೇಬೇಕು. ನಮ್ಮ ಆಹಾರಾಭ್ಯಾಸಕ್ಕೂ ಆರೋಗ್ಯಕ್ಕೂ ನೇರ ಸಂಬಂಧವಿದೆ ಎನ್ನುವುದನ್ನು ಮರೆಯುವಂತಿಲ್ಲ.

ಆಹಾರದ ಅಭ್ಯಾಸ ತಂದೊಡ್ಡಿರುವ ಹೊಸ ಸಮಸ್ಯೆಗಳು

ಹಿಂದೆ ಮನುಕುಲವನ್ನು ಪ್ಲೇಗ್‌ನಂತಹ ಸೋಂಕು ರೋಗಗಳು ನಲುಗಿಸಿದರೆ ಇಂದು ನಾವುಗಳು ತಿನ್ನುವ ಆಹಾರವೇ ಇನ್ನೂ ಮಾರಕವಾಗಿ ನಮ್ಮನ್ನು ಕಾಡುತ್ತಿವೆ. ತತ್ವಶಾಸ್ತ್ರಜ್ಞ ಸೆನೆಕ ‘ಮನುಷ್ಯರು ಸಾಯುವುದಿಲ್ಲ – ಸ್ಪೂನ್ ಮತ್ತು ಫೋರ್ಕ್ ಮೂಲಕ ತಮ್ಮನ್ನು ತಾವೇ ಕೊಂದುಕೊಳ್ಳುತ್ತಾರೆ’ ಎಂದಿದ್ದ. ಅದು ಸರಿ ಎಂದು ಈಗ ಸಾಬೀತಾಗುತ್ತಿದೆ.

ಇಂದು ನಾವು ಕರೆಯುವ ಜೀವನಶೈಲಿ ಕಾಯಿಲೆಗಳಾದ ಹೃದ್ರೋಗ, ಮಧುಮೇಹ, ರಕ್ತದೊತ್ತಡ ಅಥವಾ ಕ್ಯಾನ್ಸರ್‌ಗಳು ಮುಖ್ಯವಾಗಿ ಆಹಾರ–ಅಭ್ಯಾಸದ ದೋಷದಿಂದ ಬರುವಂಥವು. ನಾವು ತಿಂದ ಆಹಾರ ದೇಹಕ್ಕೆ ಶಕ್ತಿ ಮತ್ತು ಆರೋಗ್ಯವನ್ನು ಕೊಡುವ ಬದಲು ದೇಹದ ಅಂಗಾಂಗಗಳನ್ನು ದುರ್ಬಲಗೊಳಿಸಿ, ಅನಾರೋಗ್ಯ ಮತ್ತು ಅಸ್ವಸ್ಥತೆಯನ್ನು ತಂದೊಡ್ಡುತ್ತಿದೆ. ನಮ್ಮ ಇಂದಿನ ಮುಕ್ಕಾಲು ಭಾಗ ಕಾಯಿಲೆಗಳನ್ನು ಚಯಾಪಚಯ (metabolic) ಕ್ರಿಯಾದೋಷಗಳೆಂದು ಪರಿಗಣಿಸುತ್ತಾರೆ. ಇವುಗಳ ಸಾಲಿನಲ್ಲಿ ಯಕೃತ್ತಿನಲ್ಲಿ ಕೊಬ್ಬು ತುಂಬಿಕೊಂಡು ರೋಗ ಮತ್ತು ಸಾವು-ನೋವುಗಳನ್ನು ಉಂಟುಮಾಡುತ್ತಿರುವುದು ಜಗತ್ತಿನಾದ್ಯಂತ ಹೆಚ್ಚಾಗುತ್ತಿದೆ. Life depends on the liver – ಎಂದು ಶ್ಲೇಷಾರ್ಥವನ್ನು ಹೊರಡಿಸುವುದುಂಟು. ಇದು ಅಕ್ಷರಶಃ ಸರಿ. ಹಿಂದೆ ಹೆಂಡ–ಸಾರಾಯಿಗಳನ್ನು ಕುಡಿದು ಲಿವರ್ ಹಾಳು ಮಾಡಿಕೊಳ್ಳುವುದು ಎಷ್ಟು ಕಂಡುಬರುತ್ತಿತ್ತೋ, ಅದಕ್ಕಿಂತ ಹೆಚ್ಚು ನಮ್ಮ ಇಂದಿನ ದಿನನಿತ್ಯದ ಆಹಾರವೇ ಅದಕ್ಕಿಂತ ಮಾರಕ ಲಿವರ್ ಕಾಯಿಲೆಗಳನ್ನು ತಂದೊಡ್ಡುತ್ತಿವೆ!

ಇದನ್ನು ನಾನ್ ಆಲ್ಕೋಹಾಲಿಕ್ ಫ್ಯಾಟಿಲಿವರ್ ಡಿಸೀಸ್ ಎನ್ನುತ್ತಾರೆ. ಇದರ ಇನ್ನೂ ತೀವ್ರ ಪರಿಸ್ಥಿತಿಯನ್ನು ನಾನ್ ಆಲ್ಕೋಹಾಲಿಕ್ ಸ್ಟೀಟೋ ಹೆಪಟೈಟಿಸ್ (NASH) ಎನ್ನುತ್ತಾರೆ. ಲಿವರ್‌ನಲ್ಲಿ ಶೇ. 5ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ತುಂಬಿಕೊಂಡಲ್ಲಿ ಅದು ಲಿವರ್ ಸಿರೋಸಿಸ್, ಹೃದ್ರೋಗ ಮತ್ತು ಕ್ಯಾನ್ಸರ್‌ಗಳಿಗೆ ಕಾರಣವಾಗುತ್ತದೆ. ವಿವಿಧ ದೇಶಗಳಲ್ಲಿ ಈ ರೀತಿಯ ಲಿವರ್ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚಿನ ವರದಿಯ ಪ್ರಕಾರ ಲಿವರ್ ಟ್ರಾನ್ಸ್‌ಪ್ಲಾನ್ಟ್ ಹೆಚ್ಚಾಗಿ ನಡೆಯುತ್ತಿರುವುದು ಈ ಸಮಸ್ಯೆಗಾಗಿಯೇ. ವಿಪರ್ಯಾಸವೆಂದರೆ ಈ ಕಾಯಿಲೆಯನ್ನು ಕಂಡುಹಿಡಿಯುವುದು ಸುಲಭವಲ್ಲ. ಲಿವರ್‌ನ ಬಯೋಪ್ಸಿ ಮಾಡಲೂ ಬೇಕಾಗಬಹುದು. ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಸ್ವಲ್ಪಮಟ್ಟಿಗೆ ಕೊಬ್ಬಿನ ಪ್ರಮಾಣವನ್ನು ಕಂಡುಕೊಳ್ಳಬಹುದು. ಇದಕ್ಕೆ ಔಷಧವಿಲ್ಲ ಎನ್ನುವುದು ಆಘಾತಕಾರಿಯೇ. ಜೀವನಶೈಲಿ ಅದರಲ್ಲೂ ಆರೋಗ್ಯಕರ ಆಹಾರ ಅಭ್ಯಾಸ ಇದನ್ನು ತಡೆಗಟ್ಟಬಹುದು ಮತ್ತು ನಿಯಂತ್ರಣಕ್ಕೂ ತರಬಹುದು. ಇಲ್ಲವಾದಲ್ಲಿ ಹೆಚ್ಚು ಸಂಕೀರ್ಣವಾದ ಟ್ರಾನ್ಸ್‌ಪ್ಲಾನ್ಟ್ ಒಂದೇ ಗತಿ. ಅದು ಅಷ್ಟು ಸುಲಭದ ಕೆಲಸವೂ ಅಲ್ಲ.

ಹಾಗಾದರೆ ನಮ್ಮ ಸಾಮಾನ್ಯ ಆಹಾರ ಇಂತಹ ಅನಾರೋಗ್ಯವನ್ನು ತಂದೊಡ್ಡುವ ಕಾರಣಗಳೇನು ಎಂದು ವಿಶ್ಲೇಷಿಸಬೇಕಾಗಿದೆ. ಮುಖ್ಯವಾಗಿ ಸಕ್ಕರೆ, ಸಂಸ್ಕರಿಸಿದ ಸ್ಟಾರ್ಚ್ ಮತ್ತು ವನಸ್ಪತಿಯಂತಹ ಕೊಬ್ಬಿನ ಪದಾರ್ಥಗಳು ಹೆಚ್ಚಾಗಿರುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಸಕ್ಕರೆ, ಅದರಲ್ಲೂ ಮುಖ್ಯವಾಗಿ ಇಂದು ಹೆಚ್ಚಾಗಿ ಉತ್ಪಾದಿಸುತ್ತಿರುವ ಮೆಕ್ಕೆಜೋಳದ ಸಕ್ಕರೆ. ಮೆಕ್ಕೆಜೋಳದ ಸ್ಟಾರ್ಚ್ ಅನ್ನು ಸಕ್ಕರೆಯನ್ನಾಗಿಸುವ ತಂತ್ರಜ್ಞಾನ ನಾವು ಅಳವಡಿಸಿಕೊಂಡಿದ್ದೇವೆ. ಹಾಗಾಗಿ ಅತಿ ಕಡಿಮೆ ಬೆಲೆಯಲ್ಲಿ ಈ ಸಕ್ಕರೆಯನ್ನು ತಯಾರಿಸಬಹುದು. ಇದನ್ನು ಹೈಫ್ರಕ್ಟೋಸ್ ಕಾರ್ನ್ ಸ್ಟಾರ್ಚ್ ಸಿರಪ್ ಎನ್ನುವ ಉದ್ದದ ಹೆಸರಿನಿಂದ ಕರೆಯುತ್ತಾರೆ. ಈ ಪದಾರ್ಥ ಇಂದು ಅತಿ ಹೆಚ್ಚು ಆಹಾರ ಸಂಸ್ಕರಣೆಯಲ್ಲಿ ಬಳಕೆಯಾಗುವ ಪದಾರ್ಥವಾಗಿದೆ. ಇದು ಕಡಿಮೆ ಬೆಲೆಯೂ ಆಗಿರುವುದರಿಂದ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಲಾಭ ಹೆಚ್ಚಾಗಿರುವುದರಿಂದ ಅದೇ ದುಡ್ಡಿನಲ್ಲಿ ಅಬ್ಬರದ ಪ್ರಚಾರವೂ ಮಾಡಬಹುದಾಗಿದೆ.

ದೇಹ ಈ ಸಕ್ಕರೆಯನ್ನು ಕಬ್ಬಿನ ಸಕ್ಕರೆಗಿಂತ ಬೇರೆ ರೀತಿಯಲ್ಲಿ ಚಯಾಪಚಯಗೊಳಿಸುತ್ತದೆ ಎನ್ನುತ್ತಾರೆ ತಜ್ಞರು. ಕಬ್ಬಿನ ಸಕ್ಕರೆ ಹೆಚ್ಚು ತಿನ್ನಬೇಕೆನ್ನುವುದಲ್ಲ;  ಆದರೆ ಈ ಸಕ್ಕರೆಯನ್ನು ದೇಹ ಸಂಸ್ಕರಿಸುವ ರೀತಿಯೇ ಬೇರೆಯಾಗಿದೆ. ಹೀಗಾಗಿ ಲಿವರ್‌ನಲ್ಲಿ ಇದೇ ಸಕ್ಕರೆ ಕೊಬ್ಬಾಗಿ ಕುಳಿತುಕೊಳ್ಳುತ್ತದೆ ಎಂದು ಇತ್ತೀಚಿನ ಅಧ್ಯಯನಗಳಲ್ಲಿ ತಿಳಿದುಬಂದಿದೆ. ಹಾಗೆಯೇ ಏಕದಳ ಧಾನ್ಯಗಳಾದ ಅಕ್ಕಿ, ಗೋಧಿಯನ್ನು ಸಂಸ್ಕರಿಸಿ ಅದರ ನಾರು ಮತ್ತು ಪೌಷ್ಟಿಕಾಂಶಗಳನ್ನು ಹೊರತೆಗೆದು, ಶುದ್ಧ ಬಿಳಿಅಕ್ಕಿ ಮತ್ತು ಮೈದಾ ಮಾಡಿಕೊಂಡು ತಿಂದಾಗಲೂ ಸ್ಟಾರ್ಚ್ ಬಹುಬೇಗ ಸಕ್ಕರೆಯಾಗಿ, ಅದು ಕೊಬ್ಬಾಗಿ ದೇಹದಲ್ಲಿ ಸೇರಿಕೊಳ್ಳುತ್ತದೆ. ಜೊತೆಗೆ ದ್ರವರೂಪದ ಎಣ್ಣೆಯನ್ನು ವನಸ್ಪತಿ ಎಂಬ ಘನರೂಪ ಪಡೆದಾಗ ಅಲ್ಲಿನ ರಾಸಾಯನಿಕ ಬದಲಾವಣೆಗಳು ಅದನ್ನು ಕೆಟ್ಟ ಕೊಬ್ಬಾಗಿ ಪರಿವರ್ತಿಸುತ್ತದೆ. ಲಿವರ್‌ನ ಆರೋಗ್ಯಕ್ಕಾಗಿ ನಾವು ಸಕ್ಕರೆ, ರಿಫೈನ್ಡ್ ಸ್ಟಾರ್ಚ್ ಮತ್ತು ಎಣ್ಣೆ ಬಳಕೆ ಎಷ್ಟು ಕಡಿಮೆ ಮಾಡುತ್ತೇವೋ ಅಷ್ಟು ಒಳ್ಳೆಯದು.

ಭಾರತೀಯರ ಆಹಾರಪದ್ಧತಿ ಏಕಮುಖಿಯಾಗಿ, ಸಂಸ್ಕರಿಸಿದ ಏಕದಳ ಧಾನ್ಯದ ಹಿಂದೆ ಬಿದ್ದಿರುವುದು ಆರೋಗ್ಯಕ್ಕೆ ಗಂಭೀರ ಸಮಸ್ಯೆಯನ್ನು ಒಡ್ಡುತ್ತಿದೆ. ಸಂಸ್ಕರಣೆ ಮಾಡಿದ ಆಹಾರದ ಬಳಕೆಯನ್ನು ಕಡಿಮೆ ಮಾಡಿ, ಹಾಗೆಯೇ ಹಣ್ಣು, ತರಕಾರಿಗಳ ಬಳಕೆಯನ್ನು ಹೆಚ್ಚು ಮಾಡಿ, ಆಹಾರ ವೈವಿಧ್ಯವನ್ನೂ ಬೆಳೆಸಿಕೊಂಡಲ್ಲಿ ಉಗುರಿನಲ್ಲಿ ಹೋಗುವ ಸಮಸ್ಯೆಗೆ ಕೊಡಲಿ ತೆಗೆದುಕೊಳ್ಳುವ ಅವಶ್ಯಕತೆಯೇ ಇರದು.

(ಕೆ.ಸಿ. ರಘು)

Comments
ಈ ವಿಭಾಗದಿಂದ ಇನ್ನಷ್ಟು
ಕಾಯಿಲೆಗೆ ಮದ್ದಲ್ಲದ ಔಷಧಗಳು!

ಉತ್ತಮ ಆರೋಗ್ಯ
ಕಾಯಿಲೆಗೆ ಮದ್ದಲ್ಲದ ಔಷಧಗಳು!

20 Jan, 2018
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

ವರದಿ
ಜನಸಂಖ್ಯೆ ಹೆಚ್ಚಳ: ಸಮಸ್ಯೆಯೂ ದ್ವಿಗುಣ

20 Jan, 2018
ವ್ಯಾಯಾಮಕ್ಕೂ ಇದೆ ನಿಯಮ!

ಆರೋಗ್ಯ
ವ್ಯಾಯಾಮಕ್ಕೂ ಇದೆ ನಿಯಮ!

20 Jan, 2018

ಆರೋಗ್ಯ
ಯಶಸ್ಸಿನ ಬೆನ್ನೇರಿ...

ಅನೇಕ ಮಹಾಸಾಧಕರ ಜೀವನಚರಿತ್ರೆಯನ್ನು ನೋಡಿ; ಅವರಲ್ಲಿ ಯಾರು ಕೂಡ ಸುಲಭವಾಗಿ ಯಶಸ್ಸಿನ ಉತ್ತುಂಗಕ್ಕೇರಿದ ನಿದರ್ಶನಗಳಿಲ್ಲ. ಆದರೆ ಅವರು ಸಾಧನೆಯ ಹಾದಿಯಲ್ಲಿ ಎದುರಿಸಿದ ಕಷ್ಟಗಳನ್ನು ದೊಡ್ಡದಾಗಿ...

17 Jan, 2018
‘ಶ್ರದ್ಧೆಯೇ ಮದ್ದು’

ಆರೋಗ್ಯ
‘ಶ್ರದ್ಧೆಯೇ ಮದ್ದು’

17 Jan, 2018