ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟಿಪ್ಪು ಸುಲ್ತಾನ್ ಜನಪರ ಆಡಳಿತಗಾರ’

Last Updated 11 ನವೆಂಬರ್ 2017, 4:59 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ಟಿಪ್ಪುವಿಗೆ ತಾನು ಹಿಂದೂ ಸಾಮ್ರಾಜ್ಯದ ಆಡಳಿತ ನಡೆಸುತ್ತಿದ್ದೇನೆ ಎನ್ನುವ ಪ್ರಜ್ಞೆ ಸದಾ ಇತ್ತು. ಹೀಗಾಗಿಯೇ ಆಡಳಿತದ ಮುಖ್ಯ ಹುದ್ದೆಗಳಲ್ಲಿ ಹಿಂದೂಗಳನ್ನೇ ಮುಖ್ಯಸ್ಥರನ್ನಾಗಿಸಿಕೊಂಡಿದ್ದ ಎಂದು ಇತಿಹಾಸ ತಜ್ಞ ಡಾ.ಎಸ್‌.ವೆಂಕಟೇಶ್‌ ಅಭಿಪ್ರಾಯ‍‍ಪಟ್ಟರು. ಅವರು ಶುಕ್ರವಾರ ನಗರದ ಎ.ಬಿ.ಎಂ ಹಾಲ್‌ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ನಡೆದ ಹಜರತ್‌ ಟಿಪ್ಪು ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಇತಿಹಾಸವನ್ನು ಅವಲೋಕಿಸಿದರೆ ಎಲ್ಲ ರಾಜರ ಕಾಲದಲ್ಲೂ ನಡೆದಿರುವಂತಹ ಘಟನೆಗಳೇ ಟಿಪ್ಪು ಕಾಲದಲ್ಲೂ ನಡೆದಿವೆ. ಆದರೆ, ಇದಕ್ಕೂ ಮೀರಿದಂತಹ ಜನಪರ ಹಾಗೂ ಹಿಂದೂಪರವಾದ ಕೆಲಸಗಳನ್ನು ಟಿಪ್ಪು ಮಾಡಿದ್ದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ಶೃಂಗೇರಿ, ಮೇಲುಕೋಟೆ, ನಂಜನಗೂಡು ದೇವಾಲಯಗಳಿಗೆ ಟಿಪ್ಪು ನೀಡಿರುವ ಕೊಡುಗೆಗಳು ಇಂದಿಗೂ ದೇವಾಲಯದಲ್ಲಿ ಇವೆ ಎಂದರು.

ಜಾತಿ, ಧರ್ಮ ಎಲ್ಲವನ್ನು ಮೀರಿದ ವಾತಾವರಣದಲ್ಲಿ ಟಿಪ್ಪು ಬೆಳೆದಿದ್ದ. ಹೀಗಾಗಿಯೇ ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಮೂಲಕ ಆಡಳಿತ ನಡೆಸಿದ್ದ. ಇಡೀ ಭಾರತೀಯ ರಾಜ ಮನೆತಗಳಲ್ಲೂ ಅತ್ಯುತ್ತಮ ಪುಸ್ತಕ ಸಂಗ್ರಹಿಸಿದ್ದ ಉದಾರಹಣೆ ಇಲ್ಲ. ಆದರೆ, ಟಿಪ್ಪು ಅರಮನೆಯಲ್ಲಿ 2,000 ಪುಸ್ತಕಗಳ ಸಂಗ್ರಹಣೆ ಇತ್ತು ಎಂದರು.

ನಗರದ ಹೃದಯ ಭಾಗದಲ್ಲಿನ ನಾಗರಕೆರೆ ಟಿಪ್ಪು ಅಭಿವೃದ್ಧಿಪಡಿಸಿದ್ದ ಎನ್ನುವುದನ್ನು ಇತಿಹಾಸ ಹೇಳುತ್ತದೆ. ಇದಲ್ಲದೆ ಈತನ ಕಾಲದಲ್ಲಿ ಜಾರಿಗೆ ತಂದ ಭೂ ಸುಧಾರಣೆ ಹಾಗೂ ಗೌಡಿಕೆ, ಪಟೇಲ್‌ಗಿರಿಯನ್ನು ಕೆಳ ಜಾತಿಯ ಜನರಾದ ಬೆಸ್ತರಿ‌ಗೂ ಗೌಡಿಕೆ ಕೊಟ್ಟಿದ್ದ. ಈ ಬಗ್ಗೆ ತಾಲ್ಲೂಕಿನ ತೂಬಗೆರೆಯಲ್ಲಿ ಅಚ್ಚ ಕನ್ನಡದಲ್ಲಿ ಕೆತ್ತಿಸಲಾಗಿರುವ ಶಾಸನದಲ್ಲಿ ಇದೆ ಎಂದು ಹೇಳಿದರು.

ದೊಡ್ಡಬಳ್ಳಾಪುರ ಇವತ್ತು ರೇಷ್ಮೆ ನಗರವಾಗಿ ಗುರುತಿಸಿಕೊಂಡಿರುವುದಕ್ಕೆ ಟಿಪ್ಪು ನೀಡಿದ ಸಹಕಾರದಿಂದ ಮಾತ್ರ ಸಾಕಾರವಾಗಿದೆ. ಬೆಂಗಳೂರಿನ ಅವೆನ್ಯೂ ರಸ್ತೆಯ ಬಳ್ಳಾಪುರ ಪೇಟೆಯಲ್ಲೂ ನಗರದಿಂದ ನೇಕಾರಿಕೆ ಜನಾಂಗದವರನ್ನು ಕರೆದುಕೊಂಡು ಹೋಗಿ ರೇಷ್ಮೆ ವ್ಯಾಪಾರ ಅಭಿವೃದ್ಧಿಪಡಿಸಿದ್ದ. ರೇಷ್ಮೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಿ ಸೂಕ್ತ ಮಾರ್ಗದರ್ಶನ ನೀಡಿದ್ದ. ಉತ್ತಮ ಕೃಷಿ ಜ್ಞಾನ ಹೊಂದಿದ್ದ ಕೆಲವು ರೈತ ಸಮುದಾಯಗಳನ್ನು ಮೈಸೂರಿನಿಂದ ದೊಡ್ಡಬಳ್ಳಾಪುರಕ್ಕೆ ಕಳುಹಿಸಿ ಕೃಷಿಯಲ್ಲಿ ಆಧುನಿಕ ಪರಿಕರಗಳ ಬಳಕೆ ಮತ್ತು ಕೃಷಿಗೆ ಅಗತ್ಯವಿದ್ದ ವಸ್ತುಗಳನ್ನು ತಾನೇ ಒದಗಿಸಿದ್ದನ್ನು ಇತಿಹಾಸ ಪುಟಗಳಿಂದ ತಿಳಿಯಬಹುದಾಗಿದೆ ಎಂದರು.

‘ಇಂದಿಗೂ ಟಿಪ್ಪು ವಂಶಸ್ಥರು ಕೊಲ್ಕತ್ತದಲ್ಲಿ ಸಾಮಾನ್ಯರಂತೆ ಬದುಕುತ್ತಿದ್ದಾರೆ. 10 ವರ್ಷಗಳಿಂದ ಅವರೊಡನೆ ಸಂಪರ್ಕದಲ್ಲಿದ್ದೇನೆ. ಆಗಿ ಹೋಗಿರುವ ಘಟನೆಗಳಿಗೆ ಚಿಂತಿಸಿ ಫಲವಿಲ್ಲ. ಇಂದಿನ ವಾಸ್ತವ ಹಾಗೂ ಸತ್ಯಾಂಶ ಅರಿತು ಶಾಂತಿ ಸಹಬಾಳ್ವೆಯಿಂದ ಬದುಕುವುದು ಮುಖ್ಯ ಎನ್ನುವುದು ಟಿಪ್ಪು ವಂಶಸ್ಥರ ಅಭಿಮತ’ ಎಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ಧ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಟಿಪ್ಪು ಸಮಾಜದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಸ್ಮರಿಸಿದರು. ಟಿಪ್ಪು ಬಗ್ಗೆ ಕೆಟ್ಟ ಅಭಿಪ್ರಾಯ ಬಿಂಬಿಸುವುದು ತರವಲ್ಲ. ಇತಿಹಾಸ ಪುರುಷರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ದೇವನಹಳ್ಳಿಯ ಟಿಪ್ಪು ಜನ್ಮಸ್ಥಳದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ, ಉಪಾಧ್ಯಕ್ಷೆ ಮೀನಾಕ್ಷಿಕೆಂಪಣ್ಣ, ನಗರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿನಟರಾಜ್‌, ಉಪವಿಭಾಗಾಧಿಕಾರಿ ಎನ್‌.ಮಹೇಶ್‌ಬಾಬು, ತಹಶೀಲ್ದಾರ್‌ ಬಿ.ಎ.ಮೋಹನ್‌, ನಗರಸಭೆ ಪೌರಾಯುಕ್ತ ಶೇಕ್‌ಫಿರೋಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌.ರಂಗಪ್ಪ, ತಾಲ್ಲೂಕು ಪಂಚಾಯಿತಿ ಅಧಿಕಾರಿ ಜಯಪಾಲ್‌, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಯಪ್ಪ, ಮುಸ್ಲಿಂ ಮುಖಂಡರಾದ ಪ್ರೊ.ಅಬ್ದುಲ್‌ರವೂಫ್‌, ಅಜಂಪಾಷ ಸೇರಿದಂತೆ ವಿವಿಧ ಕನ್ನಡ ಪರ, ರೈತಪರ ಹಾಗೂ ದಲಿತಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT