ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಬಂದೋಬಸ್ತ್‌ನಲ್ಲಿ ಟಿಪ್ಪು ಜಯಂತಿ

Last Updated 11 ನವೆಂಬರ್ 2017, 5:33 IST
ಅಕ್ಷರ ಗಾತ್ರ

ಬೀದರ್: ಟಿಪ್ಪು ಸುಲ್ತಾನ್ ಜಯಂತಿಯನ್ನು ಶುಕ್ರವಾರ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಆಚರಿಸಲಾಯಿತು. ಜಿಲ್ಲಾ ಆಡಳಿತದ ವತಿಯಿಂದ ಇಲ್ಲಿಯ ಜಿಲ್ಲಾ ರಂಗ ಮಂದಿರದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಪೊಲೀಸ್‌ ಬಿಗಿ ಬಂದೋಬಸ್ತ್‌ನಲ್ಲಿ ನಡೆಯಿತು.

ರಂಗ ಮಂದಿರಕ್ಕೆ ಬರುತ್ತಿದ್ದ ಪ್ರತಿಯೊಬ್ಬರನ್ನೂ ಪೊಲೀಸರು ತಪಾಸಣೆ ಮಾಡುತ್ತಿದ್ದರು. ದ್ವಿಚಕ್ರ ವಾಹನ ಸವಾರರನ್ನು ತಡೆದು ವಿಚಾರಣೆ ಮಾಡಿ ಕಳಿಸುತ್ತಿದ್ದರು. ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿರುವುದನ್ನು ನೋಡಿಯೇ ಬಹುತೇಕರು ರಂಗ ಮಂದಿರದತ್ತ ಸುಳಿಯಲಿಲ್ಲ.

ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದೂವರೆ ತಾಸು ತಡವಾಗಿ ಆರಂಭವಾಯಿತು. ರಂಗ ಮಂದಿರ ಪೂರ್ತಿಯಾಗಿ ಭರ್ತಿ ಆಗಿರಲಿಲ್ಲ. ಕೆಲವರನ್ನು ಬಿಟ್ಟರೇ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮೂವರಿಗೆ ಮಾತ್ರ ಭಾಷಣ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಸಂತಪುರದ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಮಹಮ್ಮದ್ ಅವರಿಗೆ ಟಿಪ್ಪು ಕುರಿತು ಕವನ ವಾಚಿಸಲು ಅವಕಾಶ ಮಾಡಿಕೊಡಲಾಯಿತು.

ರಾಜಕೀಯಕ್ಕಾಗಿ ವಿರೋಧ: ಟಿಪ್ಪು ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ‘ರಾಷ್ಟ್ರೀಯತೆ, ದೇಶ ಭಕ್ತಿ ಯಾರದೋ ಸೊತ್ತಲ್ಲ. ಇತಿಹಾಸ ಅರಿಯದೇ ಕೆಲವರು ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಟಿಪ್ಪು ಒಬ್ಬ ಕನ್ನಡಿಗ ಎನ್ನುವುದು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪರಕೀಯರನ್ನು ದೇಶದಿಂದ ಓಡಿಸಲು ಎಲ್ಲ ರೀತಿಯ ಪ್ರಯತ್ನವನ್ನೂ ಮಾಡಿದ ಆತನಿಗೆ ಪರಧರ್ಮದ ಗೌರವ ಇತ್ತು. ವಿವಿಧತೆಯಲ್ಲಿ ಏಕತೆ ಕಂಡಿದ್ದ.

ಟಿಪ್ಪು ಅಪ್ಪಟ ದೇಶಭಕ್ತ. ಹಿಂದೂ ವಿರೋಧಿ ಆಗಿರಲಿಲ್ಲ. 156 ದೇವಸ್ಥಾನ ಹಾಗೂ ಚರ್ಚ್‌ ನಿರ್ಮಾಣಕ್ಕೆ ಆರ್ಥಿಕ ನೆರವು ಕೊಟ್ಟಿದ್ದ. ಬ್ರಾಹ್ಮಣರಿಗೂ ರಕ್ಷಣೆ ಒದಗಿಸಿದ್ದ’ ಎಂದು ತಿಳಿಸಿದರು. ‘ರಾಷ್ಟ್ರ ನಿರ್ಮಾಣದಲ್ಲಿ ಅಲ್ಪಸಂಖ್ಯಾತರ ಕೊಡುಗೆಯೂ ಇದೆ.

ಕೆಲವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಟಿಪ್ಪು ರಾಜ್ಯವನ್ನು ರೇಷ್ಮೆ ನಾಡಾಗಿ ಪರಿವರ್ತಿಸಿದ್ದ. ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ರಾಷ್ಟ್ರಪತಿ ಕೋವಿಂದ್‌ ಅವರು ಸಹ ಟಿಪ್ಪು ಅವರನ್ನು ಹೊಗಳಿದ್ದಾರೆ. ಆಗಲೇ ಬಿಜೆಪಿಯವರು ಬಾಯಿ ಮುಚ್ಚಿಕೊಳ್ಳಬೇಕಿತ್ತಾದರೂ ರಾಜಕೀಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್‌ ಮಾತನಾಡಿ, ‘ಟಿಪ್ಪು ಜಾತಿವಾದಿಯಾಗಿದ್ದರೆ ಮಂದಿರ, ಚರ್ಚ್‌ಗಳಿಗೆ ನೆರವು ಕೊಡುತ್ತಿರಲಿಲ್ಲ. ಟಿಪ್ಪು ಕೋಟೆಯಲ್ಲಿ ಇಂದಿಗೂ ದೇಗುಲಗಳಿವೆ. ನಾಡಿನ ರಕ್ಷಣೆಯ ವಿಷಯದಲ್ಲಿ ಯಾರೊಂದಿಗೂ ಒಪ್ಪಂದ ಮಾಡಿಕೊಳ್ಳಲಿಲ್ಲ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್, ಕಂಠೀರವ ಸ್ಟುಡಿಯೊ ನಿಗಮದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ, ಎನ್‌.ಎ.ಖಾದ್ರಿ, ಮಹಮ್ಮದ್ ಲೈಕೋದ್ದಿನ್, ಅಬ್ದುಲ್‌ ಅಲಿ, ಇರ್ಷಾದ್ ಪೈಲಾನ್, ಹೆಚ್ಚುವರಿ ಜಿಲ್ಲಾಧಿಕಾರಿ ಷಣ್ಮುಖ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ದೇವರಾಜ್‌, ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ ಇದ್ದರು. ಮೈಸೂರು ಹುಲಿ ಕಿರು ಪುಸ್ತಕ ಬಿಡುಗಡೆ ಮಾಡಲಾಯಿತು. ಚನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT