ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಸಿಗರಾದ ಶಾಲಾ ಮಕ್ಕಳು

Last Updated 11 ನವೆಂಬರ್ 2017, 5:42 IST
ಅಕ್ಷರ ಗಾತ್ರ

ಹನೂರು: ಅಲ್ಲಿ ಮಿನಿ ಆಹಾರ ಮೇಳವೇ ಸೃಷ್ಟಿಯಾಗಿತ್ತು. ದಿನನಿತ್ಯ ಬರೆಯಲು ಪೆನ್ನು ಹಿಡಿದು ಕೂರುತ್ತಿದ್ದ ವಿದ್ಯಾರ್ಥಿಗಳು ಅಂದು ಸೌಟು ಹಿಡಿದು ಬಾಣಸಿಗರಾಗಿದ್ದರು. ಬಗೆಬಗೆಯ ಖಾದ್ಯಗಳ ಘಮಲು ಸುತ್ತಲೂ ವ್ಯಾಪಿಸಿತ್ತು.

ರುಚಿಕರ ಅಡುಗೆಗಳನ್ನು ಬೇಯಿಸುವ ಮತ್ತು ಕರಿಯುವ ಕಾರ್ಯದಲ್ಲಿ ಮಕ್ಕಳು ಮಗ್ನರಾಗಿದ್ದರೆ, ಶಿಕ್ಷಕರು ಹಾಗೂ ಪೋಷಕರು ಬಗೆಬಗೆಯ ತಿನಿಸುಗಳನ್ನು ಚಪ್ಪರಿಸಿ ಸವಿಯುತ್ತಿದ್ದರು. ‘ಇದಕ್ಕೆ ಉಪ್ಪು ಕಡಿಮೆ, ಇನ್ನೂ ಸ್ವಲ್ಪ ಖಾರ ಹಾಕು’ ಎಂಬ ಸಲಹೆಗಳನ್ನು ನೀಡುತ್ತಿದ್ದರು. ತರಹೇವಾರಿ ಭಕ್ಷ್ಯಗಳ ರಾಶಿ ಮುಂದಿದ್ದರೂ ಮಕ್ಕಳಲ್ಲಿ ಅಂದು ಅವುಗಳನ್ನು ಸೇವಿಸುವುದಕ್ಕಿಂತ ಬಡಿಸುವ ಉತ್ಸಾಹವೇ ಕಾಣಿಸುತ್ತಿತ್ತು.

ಇಲ್ಲಿನ ಸಮೀಪದ ಕಡುಬೂರಿನ ಅನಿಷಾ ಸಂಸ್ಥೆಯಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಕಂಡುಬಂದ ದೃಶ್ಯವಿದು. ಮಾರ್ಟಳ್ಳಿ ಸುತ್ತಮುತ್ತಲಿನ 16 ಶಾಲೆಗಳಿಂದ ಬಂದಿದ್ದ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕೈದೋಟದಲ್ಲಿ ತಾವೇ ಬೆಳೆದಿದ್ದ ತರಕಾರಿಗಳನ್ನು ಹೊತ್ತುತಂದಿದ್ದರು.

ಸೋರೆಕಾಯಿ, ಕುಂಬಳಕಾಯಿ, ಹೀರೆಕಾಯಿ, ಬಸಳೆಸೊಪ್ಪು, ಅಲಸಂದೆ ಮುಂತಾದ ತರಕಾರಿಗಳ ದೊಡ್ಡ ರಾಶಿಯೇ ನಿರ್ಮಾಣವಾಗಿತ್ತು. ಮಕ್ಕಳು ಅವುಗಳಿಂದ ಹಲವು ಬಗೆಯ ತಿನಿಸುಗಳನ್ನು ತಯಾರಿಸುವ ಮೂಲಕ ಗಮನಸೆಳೆದರು. ಈ ಖಾದ್ಯಗಳನ್ನು ಸವಿದ ಪೋಷಕರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಬೆನ್ನುತಟ್ಟಿದರು.

ಮಕ್ಕಳಿಂದ ಕೈದೋಟ: ಕಡಬೂರಿನಲ್ಲಿರುವ ಅನಿಷಾ ಸಂಸ್ಥೆಯು ಸಾವಯವ ಕೃಷಿಯ ಬಗ್ಗೆ ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ. ಜತೆಗೆ ಇಲ್ಲಿನ ಪ್ರತಿ ಶಾಲೆಯಲ್ಲೂ ಸಾವಯವ ಕೃಷಿ ತೋಟವನ್ನು ವಿದ್ಯಾರ್ಥಿಗಳ ನೆರವಿನಿಂದ ನಿರ್ಮಿಸಿದೆ. ವಿದ್ಯಾರ್ಥಿಗಳಿಗೆ ಸಾವಯವ ಬೀಜಗಳನ್ನು ವಿತರಿಸಿ ತಮ್ಮ ಮನೆಗಳಲ್ಲಿ ಕೈದೋಟ ನಿರ್ಮಿಸುವಂತೆ ಉತ್ತೇಜಿಸುತ್ತಿದೆ. ಉತ್ತಮವಾಗಿ ಕೈದೋಟ ನಿರ್ವಹಣೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದೆ.

130 ಕೆ.ಜಿ. ತರಕಾರಿ: ಸಂಸ್ಥೆಯು ಮಕ್ಕಳು ತಾವು ಬೆಳೆದ ತರಕಾರಿಗಳನ್ನು ಬಳಸಿ ಅವರೇ ವಿವಿಧ ಬಗೆಯ ಖಾದ್ಯ ತಯಾರಿಸುವ ವಿಶಿಷ್ಟ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು. ಸುಮಾರು 130 ಕೆ.ಜಿ. ಬಗೆ ಬಗೆಯ ತರಕಾರಿಗಳನ್ನು ತಂದಿದ್ದ ವಿದ್ಯಾರ್ಥಿಗಳು ವೈವಿಧ್ಯಮಯ ಅಡುಗೆಗಳನ್ನು ತಯಾರಿಸಿದರು.

ಮಾರ್ಟಳ್ಳಿ ಗ್ರಾಮದ ಸೇಂಟ್ ಮೇರಿಸ್ ಪ್ರೌಢಶಾಲೆಯ ವಿದ್ಯಾರ್ಥಿ ಪ್ರಮೋದ ಹೀರೆಕಾಯಿಯಿಂದ ಐದು ಬಗೆಯ ತಿಂಡಿ ತಯಾರಿಸಿ ಭೇಷ್‌ ಎನಿಸಿಕೊಂಡರು. ವಡ್ಡರದೊಡ್ಡಿ ಗ್ರಾಮದ ಸೇಂಟ್ ಚಾರ್ಲ್ಸ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಸಂಧ್ಯಾ ಹಾಗಲಕಾಯಿಯಲ್ಲಿ ಮಾಡಿದ ನಾಲ್ಕು ಬಗೆಯ ತಿನಿಸು ಮೆಚ್ಚುಗೆಗೆ ಪಾತ್ರವಾಯಿತು.

‘ತರಕಾರಿ ಎನ್ನುವುದು ಬೇಯಿಸಿ ತಿನ್ನುವುದಕ್ಕೆ ಮಾತ್ರ ಸೀಮಿತ ಎಂಬ ಮನೋಭಾವವಿದೆ. ಆದರೆ ಇಂದು ವಿದ್ಯಾರ್ಥಿಗಳು ಒಂದು ತರಕಾರಿಯಿಂದ ಎಷ್ಟೆಲ್ಲ ವಿಧದ ತಿಂಡಿ ತಿನಿಸುಗಳನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎನ್ನುತ್ತಾರೆ ಅನಿಷಾ ಸಂಸ್ಥೆಯ ಮುಖ್ಯಸ್ಥೆ ವಲ್ಲಿರಾಜನ್.

‘ಎಲ್ಲ ಮಕ್ಕಳು ಹಲವು ಬಗೆಯ ತರಕಾರಿಗಳನ್ನು ಬೆಳೆದಿದ್ದಾರೆ. ವಿವಿಧ ಸಮುದಾಯದ ಜನರು ಬಂದು ಖಾದ್ಯ ವೈವಿಧ್ಯದ ಬಗ್ಗೆ ತಿಳಿದುಕೊಂಡಿದ್ದಾರೆ. ಮಕ್ಕಳಲ್ಲಿ ಪ್ರತಿಭೆ, ಆಸಕ್ತಿಯನ್ನು ಗುರುತಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು’ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT