ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ರಾಗಿ ಬೀಜ ವಿತರಣೆ

Last Updated 11 ನವೆಂಬರ್ 2017, 5:51 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಕೃಷಿ ಇಲಾಖೆಯಿಂದ ವಿತರಿಸಲಾಗಿರುವ ರಾಗಿ ಬಿತ್ತನೆ ಬೀಜ ಅತ್ಯಂತ ಕಳಪೆಯಾಗಿದ್ದು, ತಾಲ್ಲೂಕಿನಾದ್ಯಂತ 100 ಹೆಕ್ಟೇರ್‌ಗೂ ಹೆಚ್ಚು ರಾಗಿ ಬೆಳೆ ನಷ್ಟವಾಗುತ್ತಿದೆ’ ಎಂದು ಭಾರತೀಯ ಕಿಸಾನ್‌ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಬೂದಾಳ ರಾಮಾಂಜಿ ಆರೋಪಿಸಿದ್ದಾರೆ.

ಬೀಜ ನಿಗಮದಿಂದ ಪಡೆದಿರುವ ರಾಗಿ ಬಿತ್ತನೆ ಬೀಜ ‘ಜಿಪಿ 28’ ವನ್ನು ಕೃಷಿ ಇಲಾಖೆಯು ರೈತರಿಗೆ ಒಂದು ಕೆ.ಜಿ.ಗೆ ₹ 35ರಂತೆ ವಿತರಿಸಿತ್ತು. ಆದರೆ ಹೊಲದಲ್ಲಿ ತೆನೆ ಹಂತಕ್ಕೆ ಬಂದಿದ್ದು, ಶೇ 40ರಷ್ಟು ಕಳಪೆ ಹಾಗೂ ಮಿಶ್ರ ತೆನೆ ಕಂಡು ಬಂದಿದೆ. ಇಳುವರಿ ಕಡಿಮೆಯಾಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ ಎಂದರು.

ಕೆಲವು ಕಡೆ ಕಾಳು ಕಟ್ಟಿದ್ದರೆ, ಕೆಲವೆಡೆ ತೆನೆ ಬಂದಿವೆ, ಇನ್ನು ಕೆಲವು ಹಣ್ಣಾಗಿವೆ, ಕೆಲವಂತೂ ಬೂದಿ ಬಣ್ಣ ಪಡೆದಿವೆ. ಇದರಿಂದಾಗಿ ಕಟಾವಿಗೆ ತೊಂದರೆಯಾಗಿದೆ. ಒಂದೇ ಬಾರಿಗೆ ಬೆಳೆ ಬರದಿರುವುದರಿಂದ ಕಟಾವು ತಡ ಮಾಡಿರುವುದರಿಂದ ಇಲಿಗಳ ಕಾಟ ಪ್ರಾರಂಭವಾಗಿದ್ದು, ನಷ್ಟ ಆಗುತ್ತಿದೆ ಎಂದರು.

ಗುಣಮಟ್ಟ ಇಲ್ಲದಿರುವುದು, ಇಳುವರಿಯ ಕುಂಠಿತ, ಕಟಾವಿಗೆ ತೊಂದರೆ, ರೋಗ ಹೆಚ್ಚಾಗಿರುವುದು ಎಲ್ಲವೂ ಸೇರಿಕೊಂಡು ರೈತರಿಗೆ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ. ಕಳೆದ ವರ್ಷ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಆದರೆ ಈ ಬಾರಿ ಮಳೆ ಉತ್ತಮವಾಗಿದ್ದರೂ ಕಳಪೆ ಬಿತ್ತನೆ ಬೀಜದಿಂದ ಬೆಳೆ ನಷ್ಟವಾಗಿದೆ. ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ರೈತರು ನಷ್ಟ ಹೊಂದಿದ್ದಾರೆ.

ಕೃಷಿ ಇಲಾಖೆಯಿಂದ ಪಡೆದಿರುವ ರಸೀದಿ, ರಾಗಿ ಬ್ಯಾಗ್‌ ಮೇಲಿರುವ ತಂಡದ ಸಂಖ್ಯೆ ಹಾಗೂ ದಿನಾಂಕದ ಪ್ರತಿಯನ್ನು ವಿವಿಧ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರು ಮತ್ತು ಉಪ ಕೃಷಿ ನಿರ್ದೇಶಕರಿಗೆ ನೀಡಿದ್ದೇವೆ. ಕ್ರಮ ಕೈಗೊಳ್ಳಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು. ರೈತರಿಗೆ ನಷ್ಟ ಪರಿಹಾರವನ್ನು ಕೊಡಬೇಕು. ಈ ರೀತಿ ಮುಂದೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT