ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಸುಲ್ತಾನನ ನೈಜ ಚರಿತ್ರೆ ಮುದ್ರಿಸಿ ಹಂಚಲು ಕ್ರಮ

Last Updated 11 ನವೆಂಬರ್ 2017, 6:20 IST
ಅಕ್ಷರ ಗಾತ್ರ

ಧಾರವಾಡ: ‘ಟಿಪ್ಪು ಕುರಿತು ನೈಜ ಚಿತ್ರಣವನ್ನು ಮುದ್ರಿಸಿ ಜನರಿಗೆ ಹಂಚುವ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಮಾತನಾಡಿ ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು. ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿಯ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಸರ್ಕಾರ ಇಂಥ ಗಿಮಿಕ್‌ಗಳನ್ನು ಮಾಡುತ್ತಿದೆ. ಸರ್ಕಾರ ತಾನು ನಡೆಸಿರುವ ಭ್ರಷ್ಟಾಚಾರಗಳನ್ನು ಮುಚ್ಚಿಹಾಕಲು ಟಿಪ್ಪು ಜಯಂತಿ ವಿವಾದವನ್ನು ಆರಂಭಿಸಿದೆ. ಇದಕ್ಕೆ ತಕ್ಕ ಪಾಠವನ್ನು ಕಾಂಗ್ರೆಸ್‌ ಮುಖಂಡರಿಗೆ ಜನರೇ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಜನರಿಗೆ ಬೇಡವಾದ ಟಿಪ್ಪು ಜಯಂತಿ ಆಚರಣೆ ಸರ್ಕಾರಕ್ಕೆ ಬೇಕಿರಲಿಲ್ಲ. ಟಿಪ್ಪು ಈ ಸಮಾಜಕ್ಕೆ ಮಾಡಿರುವ ನೋವನ್ನು ಸರ್ಕಾರ ಮತ್ತೊಮ್ಮೆ ಕೆದಕಿರುವುದು ಗಾಯವನ್ನು ಕೆರೆದು ಹುಣ್ಣು ಮಾಡಿಕೊಂಡಂತಾಗಿದೆ. ಇಂಥ ಕಾರ್ಯಕ್ರಮಕ್ಕೆ ನನ್ನ ಹೆಸರು ಹಾಕಬೇಡಿ ಎಂದರೂ ಜಿಲ್ಲಾಡಳಿತ ಹಾಕಿರುವ ಕ್ರಮ ಸರಿಯಲ್ಲ’ ಎಂದು ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದರು

ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಬೆಲ್ಲದ, ‘ದೇಶದ್ರೋಹಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರವು ಆಚರಿಸುವುದನ್ನು ರದ್ದುಗೊಳಿಸಬೇಕು. ಆ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಬೇಕು’ ಎಂದು ಒತ್ತಾಯಿಸಿದ್ದಾರೆ.

‘ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಪ್ರತಿ ವರ್ಷ ಟಿಪ್ಪು ಜಯಂತಿ ಆಚರಣೆ ಹೆಸರಿನಲ್ಲಿ ಶಾಂತಿ ಕದಡುವ ಮೂಲಕ ಕೋಮು ಗಲಬೆಗೆ ಕುಮ್ಮಕ್ಕು ನೀಡುತ್ತಿದೆ. ರಾಜ್ಯದಲ್ಲಿ ಶಾಂತಿ ನೆಲಸಲು ಶ್ರಮ ಪಡದೆ ಜನರ ಭಾವನೆಯೊಂದಿಗೆ ಆಟವಾಡುತ್ತಿರುವುದು ಸರಿಯಲ್ಲ.

ಇಂಥ ಸೂಕ್ಷ್ಮ ವಿಚಾರದಲ್ಲೂ ರಾಜಕೀಯ ಮಾಡಬಾರದು. ಪರಿಸ್ಥಿತಿಯನ್ನು ಅರಿತು ಜಯಂತಿ ಆಚರಣೆ ಕೈಬಿಡುವ ಮೂಲಕ ಜನರ ನೆಮ್ಮದಿಗೆ ಕಾರಣವಾಗಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಸಂಜಯ ಕಪಟ್ಕರ, ಶಂಕರ ಶೇಳ್ಕೆ, ಶರಣು ಅಂಗಡಿ, ಸದಾಶಿವ ಭಜಂತ್ರಿ, ದೇವರಾಜ ಶಹಾಪೂರ, ಸುನೀಲ ಮೋರೆ, ಈರಣ್ಣ ಹಪ್ಪಳಿ, ಶಿವಾನಂದ ಗುಂಡಗೋವಿ, ಶ್ರೀನಿವಾಸ ಕೋಟ್ಯಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT