ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ತಿರುಚುವವರೇ ದೇಶದ್ರೋಹಿಗಳು

Last Updated 11 ನವೆಂಬರ್ 2017, 6:30 IST
ಅಕ್ಷರ ಗಾತ್ರ

ಗದಗ: ‘ಟಿಪ್ಪುವನ್ನು ಕನ್ನಡ ವಿರೋಧಿ ಎನ್ನುವವರು, ಟಿಪ್ಪುವಿನ ಇತಿಹಾಸ ತಿರುಚುವ ಪ್ರಯತ್ನ ಮಾಡುವರು ದೇಶದ್ರೋಹಿಗಳು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಹೇಳಿದರು. ಶುಕ್ರವಾರ ಇಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಟಿಪ್ಪು ಜಯಂತಿ ವಿರೋಧಿಸುವರಲ್ಲಿ ಹೆಚ್ಚಿನವರು ಇತಿಹಾಸವನ್ನೇ ಓದಿಲ್ಲ. ಟಿಪ್ಪು ಶ್ರೇಷ್ಠ ವ್ಯಕ್ತಿ. ಕನ್ನಡಾಭಿಮಾನಿ, ಧಾರ್ಮಿಕ ಸಹಿಷ್ಣು. ನಾಡಿನ ಹಿತಕ್ಕಾಗಿ ಮಕ್ಕಳನ್ನು ಒತ್ತೆ ಇಟ್ಟ ಸ್ವಾಭಿಮಾನಿ. ಅವರ ಜಯಂತಿ ಆಚರಿಸುವುದರಲ್ಲಿ ತಪ್ಪೇನಿದೆ? ದೇಶ, ಭಾಷೆ, ಸರ್ವಧರ್ಮದ ಬಗ್ಗೆ ಅಭಿಮಾನ ಹೊಂದಿದವರು ಟಿಪ್ಪುವನ್ನು ಒಪ್ಪಿಕೊಳ್ಳುತ್ತಾರೆ, ಟಿಪ್ಪುವಿಗೆ ಗೌರವ ಕೊಡುವ ಕೆಲಸವನ್ನು ಸರ್ಕಾರ ಮಾಡಿದೆ’ ಎಂದರು.

ವಿಜಾಪುರದ ಹಾಸಿಂಪೀರ್ ವಾಲಿಕಾರ ಟಿಪ್ಪು ಕುರಿತು ಉಪನ್ಯಾಸ ನೀಡಿದರು. ‘ಟಿಪ್ಪು ಯಾರ ವಿರೋಧಿಯೂ ಆಗಿರಲಿಲ್ಲ. ಕೇವಲ ಬ್ರಿಟಿಷರ ವಿರೋಧಿಆಗಿದ್ದರು. ಆದರೆ, ಕೆಲ ಕೋಮುವಾದಿಗಳು ಅವರ ವಿರುದ್ಧ ಸಲ್ಲದ ಆರೋಪ ಮಾಡುತ್ತಿದ್ದಾರೆ. ಟಿಪ್ಪುವಿನ ದೇಶಪ್ರೇಮ, ಕನ್ನಡಾಭಿಮಾನ ಕುರಿತು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಬೇಕು’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿ ಮನೋಜ್‌ ಜೈನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ ಗದ್ಯಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರಡಗಿ, ಪೌರಾಯುಕ್ತ ಮನ್ಸೂರ ಅಲಿ, ನಗರಸಭೆ ಅಧ್ಯಕ್ಷ ಬಿ.ಬಿ ಅಸೂಟಿ ಕಾರ್ಯಕ್ರಮದಲ್ಲಿ ಇದ್ದರು. ಜಿಲ್ಲಾಡಳಿತದಿಂದ ನಗರಸಭೆ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಿಗದಿಯಾಗಿತ್ತು. 4 ಗಂಟೆ ತಡವಾಗಿ, ಸಂಜೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

‘ಟಿಪ್ಪು ದೇಶಪ್ರೇಮ ಅನನ್ಯ’
ರೋಣ: ಬ್ರಿಟಿಷರನ್ನು ಸಿಂಹಸ್ವಪ್ನವಾಗಿ ಕಾಡಿ ಕೆಚ್ಚೆದೆಯಿಂದ ಹೋರಾಟ ನಡೆಸಿದ ವ್ಯಕ್ತಿ ಟಿಪ್ಪು ಸುಲ್ತಾನ್. ಅವರ ಸಾಧನೆಗಳು ಅಪಾರ ಎಂದು ಕಾಂಗ್ರೆಸ್ ಯುವ ಮುಖಂಡ ಮಿಥುನ್ ಪಾಟೀಲ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ನಡೆದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪುವಿನ ದೇಶಪ್ರೇಮ ಅನನ್ಯ. ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಂಡು ಸರ್ವಧರ್ಮಿಯರನ್ನು ಸಮನಾಗಿ ಪರಿಗಣಿಸಿ ಅನೇಕ ದೇವಸ್ಥಾನಗಳಿಗೆ ಕೊಡುಗೆ ನೀಡಿದಂತಹ ಧೀಮಂತ ನಾಯಕ ಟಿಪ್ಪು ಎಂದು ಅವರು ಪ್ರಶಂಸಿದರು.

ಪುರಸಭೆ ಅಧ್ಯಕ್ಷ ಶಿವಪ್ಪ ಕರಿಲಿಂಗಣ್ಣವರ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು, ಕೆ.ಐ.ಶೇಖ್ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯ ಶಫೀಕ್ ಮೂಗನೂರ, ನಾಜ್‌ಬೇಗಂ ಯಲಿಗಾರ ಕಾರ್ಯಕ್ರಮದಲ್ಲಿ ಟಿಪ್ಪು ಕುರಿತು ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಪುರಸಭೆ ಉಪಾಧ್ಯಕ್ಷೆ ವಿದ್ಯಾ ಬಡಿಗೇರ, ಬಸವರಾಜ ನವಲಗುಂದ, ಸಂಗು ನವಲಗುಂದ, ಕೆ.ನೂರುಲ್ಲಾ ಬಳ್ಳಾರಿ, ಗ್ರೇಡ್– 1 ತಹಶೀಲ್ದಾರ್ ಶಿವಕುಮಾರ ವಸ್ತ್ರದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವಿ.ಚಳಗೇರಿ, ಬಾವಾಸಾಬ್ ಬೆಟಗೇರಿ, ಆನಂದ ಚಂಗಳಿ, ಯುಸೂಫ್ ಇಟಗಿ, ಅಜ್ಜಪ್ಪ ರೆಡ್ಡೆರ, ಖಾದಿರಸಾಬ್ ಸಂಕನೂರ, ಮೌನೇಶ ಹಾದಿಮನಿ, ಉಪತಹಶೀಲ್ದಾರ್ ಎಸ್.ಜೆ.ಹಿರೇಮಠ, ಕಂದಾಯ ನಿರೀಕ್ಷಕ ಜೆ.ಟಿ.ಕೊಪ್ಪದ, ಶಿವಕುಮಾರ ಕುರಿ, ಎಸ್.ಸಿ. ಇಟೆಕಾರ, ಡಾ.ಹುಲಗಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT