ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಡಿಗೆ ಟಿಪ್ಪು ಕೊಡುಗೆ ಸ್ಮರಣೀಯ’

Last Updated 11 ನವೆಂಬರ್ 2017, 6:42 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಈ ನಾಡಿಗಾಗಿ ಅನೇಕ ಮಹಾತ್ಮರು, ಶರಣರು ಹಾಗೂ ದಾರ್ಶನಿಕರು ಶ್ರಮಿಸಿದ್ದಾರೆ. ತ್ಯಾಗ, ಬಲಿದಾನ ಮಾಡಿದ್ದಾರೆ. ಅದರಲ್ಲಿ ಟಿಪ್ಪು ಕೂಡ ಒಬ್ಬರು. ರಾಜ್ಯಕ್ಕೆ ಅವರ ಕೊಡುಗೆ ಅಪಾರ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಅಜ್ಜಂಪೀರ್‌ ಖಾದ್ರಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತದ ಸಹಯೋಗದಲ್ಲಿ ನಡೆದ ಟಿಪ್ಪು ಅವರ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನಾಡಿಗಾಗಿ ಮಡಿದ ಮಹಾತ್ಮರನ್ನು ಒಂದು ಸಮಾಜಕ್ಕೆ ಸೀಮಿತ ಮಾಡಬಾರದು. ಒಮ್ಮೆ ಟಿಪ್ಪುವಿನ ಖಡ್ಗ ಹಿಡಿಯುವುದು, ಮತ್ತೊಮ್ಮೆ ಟಿಪ್ಪು ಜಯಂತಿ ವಿರೋಧಿಸುವುದು ಸರಿಯಲ್ಲ’ ಎಂದು ವಿರೋಧ ಪಕ್ಷದವರನ್ನು ಕುಟುಕಿದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ‘ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ಬನವಾಸಿ, ಶೃಂಗೇರಿ, ಗೋಕರ್ಣ ದೇವಾಲಗಳಿಗೆ ರಕ್ಷಣೆ ನೀಡುವ ಜೊತೆಗೆ ಸಾಕಷ್ಟು ದೇಣಿಯನ್ನೂ ಕೊಟ್ಟಿದ್ದರು. ಅಲ್ಲದೆ ಗೋಕರ್ಣದಲ್ಲಿ ಇಂದಿಗೂ ಸಲಾಂ ಒಂದೇ ಎಂಬ ವಿಶೇಷ ಕಾರ್ಯಕ್ರಮವನ್ನು ಆಚರಿಸುವುದನ್ನು ಕಾಣುತ್ತೇವೆ’ ಎಂದರು.

ಟಿಪ್ಪು ಸುಲ್ತಾನ್ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಹುಸೇನಸಾಬ್‌ ಕಳಸದ ಮಾತನಾಡಿ, ‘ಟಿಪ್ಪು ಒಬ್ಬ ವೀರ ಕನ್ನಡಿಗ. ಅವರ ಜನ್ಮಸ್ಥಳ ದೇವನಹಳ್ಳಿ ಕೋಟೆ. ಅಲ್ಲಿ ಸುಮಾರು 21 ದೇವಾಲಯಗಳನ್ನು ಅವರು ನಿರ್ಮಿಸಿದ್ದಾರೆ. ಅಂಥ ಮಹಾತ್ಮರನ್ನು ರಾಜಕೀಯ ಸ್ವಾರ್ಥಕ್ಕಾಗಿ ವಿರೋಧಿಸುವ ಮನೋಭಾವ ಬೆಳೆಸಿಕೊಳ್ಳುವುದು ಬೇಡ’ ಎಂದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀಕಾಂತ ಪೂಜಾರ ಮಾತನಾಡಿ, ‘ಟಿಪ್ಪು ಎಂಬ ಪದದ ಅರ್ಥ ಉಪ್ಪು ಬರುತ್ತಿದೆ. ಹೀಗಾಗಿ ಟಿಪ್ಪು ಹಿಂದೂಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟು ನಾಡಿನ ಏಳ್ಗೆಗಾಗಿ ಶ್ರಮಿಸಿದ್ದ ಧೀಮಂತ ಅವರು’ ಎಂದು ಬಣ್ಣಿಸಿದರು.

ಅಂಜುಮನ್‌ ಸಂಸ್ಥೆ ಅಧ್ಯಕ್ಷ ಮಜೀದ್‌ ಮಾಳಗಿಮನಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪಾರವ್ವ ಆರೇರ್‌, ಜಿಲ್ಲಾ ಪಂಚಾಯ್ತಿ ಸದಸ್ಯ ಬಸನಗೌಡ ದೇಸಾಯಿ, ಕಾಂಗ್ರೆಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್‌.ವೆಂಕೋಜಿ, ಮುಖಂಡರಾದ ವೀರೇಶ ಆಜೂರ, ಎಫ್‌.ಸಿ.ಪಾಟೀಲ, ಬಸನಗೌಡ ದುಂಡಿಗೌಡ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT