ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ: ಮೆಟ್ರೊ ನೌಕರರ ಜತೆ ಚರ್ಚೆ

ಕುಂದುಕೊರತೆ ಪರಿಹರಿಸಲು ಸಿದ್ಧ: ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌
Last Updated 15 ಮಾರ್ಚ್ 2018, 20:40 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಷ್ಕರ ನಡೆಸದಂತೆ  ಮೆಟ್ರೊ ನೌಕರರ ಜತೆಗೆ ಮಾತುಕತೆ ಆರಂಭಿಸಲಾಗಿದೆ. ಅವರ ಕುಂದುಕೊರತೆ ಪರಿಹರಿಸಲು ಸಿದ್ಧರಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ತಿಳಿಸಿದರು.

ಇದೇ 22ರಂದು ಮೆಟ್ರೊ ನೌಕರರು ಮುಷ್ಕರ ನಡೆಸಲು ನಿರ್ಧರಿಸಿರುವ ಬಗ್ಗೆ ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ನಿತ್ಯ 3.7 ಲಕ್ಷ ಜನರು ಮೆಟ್ರೊ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಮುಷ್ಕರ ನಡೆಸಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ. ಸೇವೆ ಸುಗಮವಾಗಿ ನಡೆಯಬೇಕು. ಅದಕ್ಕೆ ಬೇಕಾದ ಎಲ್ಲ ಪೂರ್ವಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

‘ಕಾರ್ಮಿಕ ಆಯುಕ್ತರು ಶುಕ್ರವಾರ ಸಂಧಾನ ಸಭೆ ನಡೆಸಲಿದ್ದಾರೆ. ನಂತರ ಅಂತಿಮ ತೀರ್ಮಾನ ಹೊರಬೀಳಲಿದೆ. ಮೆಟ್ರೊ ರೈಲು ಸೇವೆ ಅಗತ್ಯ
ಸೇವೆಯಾಗಿರುವುದರಿಂದ ಇದನ್ನು ಎಸ್ಮಾ ಕಾಯ್ದೆಯಡಿ ಸೇರಿಸಿ ಅಧಿಸೂಚನೆ ಹೊರಡಿಸಿದ್ದೇವೆ. ಆದರೆ, ಇದಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಇದನ್ನು ತೆರವುಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದರು.

'ಸಿಬ್ಬಂದಿ ಮುಷ್ಕರ ನಡೆಸಿದರೆ, ರೈಲು ಚಾಲನೆ ಮತ್ತು ನಿಲ್ದಾಣ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಜನತೆ ಮತ್ತು ಬಿಎಂಆರ್‌ಸಿಎಲ್‌ ಹಿತ ಗಮನದಲ್ಲಿಟ್ಟುಕೊಂಡು ಮುಷ್ಕರ ಮಾಡುವುದು ಸರಿಯಲ್ಲ ಎನ್ನುವುದನ್ನು ಸಿಬ್ಬಂದಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದೇವೆ’ ಎಂದರು.

‘ಉಪ ಮುಖ್ಯ ಎಂಜಿನಿಯರ್‌ಗಳು ನಿರಂತರವಾಗಿ ವಾರದಲ್ಲಿ ಎರಡು ದಿನ ಮೆಟ್ರೊ ರೈಲು ಚಾಲನೆಯ ಅಭ್ಯಾಸ ಮಾಡುತ್ತಾರೆ. ತರಬೇತಿ ಪಡೆದ ಮತ್ತು ಪ್ರಮಾಣಪತ್ರ ಹೊಂದಿದ 92 ಚಾಲಕರು ಹೆಚ್ಚುವರಿಯಾಗಿ ಲಭ್ಯವಿದ್ದಾರೆ. ಅನಿವಾರ್ಯ ಪರಿಸ್ಥಿತಿ ಎದುರಾದರೆ ಇವರು ರೈಲು ಚಾಲನೆ ಮಾಡುತ್ತಾರೆ. ಹೊರಗಿನಿಂದ ಚಾಲಕರನ್ನು ಕರೆತರುವುದಿಲ್ಲ. ಆದರೆ, ಅಂಥ ಪರಿಸ್ಥಿತಿ ಉದ್ಭವಿಸುವುದಿಲ್ಲವೆನ್ನುವುದು ನಮ್ಮ ನಂಬಿಕೆ’ ಎಂದರು.

'ಎರಡನೇ ಹಂತದ ಮೆಟ್ರೊ ಕಾಮಗಾರಿ ಚುರುಕಾಗಿ ನಡೆಯುತ್ತಿದೆ. ಕಾಲಮಿತಿಯೊಳಗೆ ಕಾಮಗಾರಿ ಪೂರ್ಣವಾಗುವ ವಿಶ್ವಾಸವಿದೆ' ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಿಎಂಆರ್‌ಸಿಎಲ್‌ ವ್ಯವಸ್ಥಾಪಕರು ಮತ್ತು ಕಾರ್ಮಿಕ ಆಯುಕ್ತರ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ನಾನೂ ಕೂಡ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ ಪರಿಸ್ಥಿತಿ ನಿಭಾಯಿಸುತ್ತೇವೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಪ್ರತಿಕ್ರಿಯಿಸಿದರು.

'ಮೆಟ್ರೊದಲ್ಲಿ ಕೆಲಸ ಮಾಡುತ್ತಿರುವ ನೌಕರರು ಮತ್ತು ಕಾರ್ಮಿಕರು ನಮ್ಮವರೇ. ಅವರಿಗೆ ಏನೇ ತೊಂದರೆಯಾದರೂ ಸರಿಪಡಿಸಲು ನಾವು ಮುಕ್ತ ಮನಸು ಹೊಂದಿದ್ದೇವೆ. ಮುಷ್ಕರ ನಡೆಸದಂತೆ ಅವರಿಗೂ ಮನವಿ ಮಾಡುತ್ತೇನೆ. ಶೀಘ್ರ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ’ ಎಂದು ಅವರು ಹೇಳಿದರು.
***

ಮೆಟ್ರೊ ನೌಕರರು ಇದೇ 22ರಂದು ಪ್ರತಿಭಟನೆ ನಡೆಸಿದ್ದೇ ಆದರೆ, ರೈಲು ಸಂಚಾರ ವ್ಯತ್ಯಯಗೊಳ್ಳುವುದನ್ನು ತಡೆಯಲು ನಿಗಮದ ಆಡಳಿತ ಮಂಡಳಿಯು ತುರ್ತು ಪರಿಸ್ಥಿತಿ ನಿಭಾಯಿಸುವ ತಂಡವನ್ನು ರಚಿಸಿದೆ. ಇದಕ್ಕೆ ಬಿಎಂಆರ್‌ಸಿಎಲ್‌ ನೌಕರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

‘ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿ ಸಮಸ್ಯೆ ಬಗೆಹರಿಸುವ ಬದಲು ಆಡಳಿತ ಮಂಡಳಿ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟವಾಡಲು ಹೊರಟಿದೆ’ ಎಂದು ಸಂಘದ ಉಪಾಧ್ಯಕ್ಷ ಎಸ್.ಮಂಜುನಾಥ್ ಟೀಕಿಸಿದರು.

ಮೆಟ್ರೊ ಚಾಲಕ ದೃಷ್ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಭಿನ್ನ ಸನ್ನಿವೇಶಗಳನ್ನು ನಿಭಾಯಿಸುವ ಚಾಕಚಕ್ಯತೆ ಗಳಿಸಲು ಆರು ತಿಂಗಳ ತರಬೇತಿ ಪಡೆದಿರಬೇಕು. ಖಾಲಿ ರೈಲನ್ನು ಪರೀಕ್ಷಾರ್ಥವಾಗಿ ಚಲಾಯಿಸಿ ಯಶಸ್ವಿಯಾದ ಬಳಿಕ ಸಾಮರ್ಥ್ಯ ಪರೀಕ್ಷೆಯಲ್ಲಿ (ಲಿಖಿತ ಮತ್ತು ಮೌಖಿಕ) ಉತ್ತೀರ್ಣರಾಗಬೇಕು. ಆನಂತರ ಪ್ರಯಾಣಿಕರನ್ನು ಹೊಂದಿದ ರೈಲನ್ನು ಅನುಭವಿ ಚಾಲಕನ ಜೊತೆ ಸೇರಿ ಚಲಾಯಿಸಬೇಕು ಎಂದರು.ಈ ಯಾವ ಅರ್ಹತೆಯೂ ಇಲ್ಲದವರು ಮೆಟ್ರೊ ರೈಲು ಚಲಾಯಿಸುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT