ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಾತೃಪೂರ್ಣ: ಹೆಚ್ಚುವರಿ ಕಟ್ಟಡ ಬಳಸಿಕೊಳ್ಳಿ’

Last Updated 11 ನವೆಂಬರ್ 2017, 7:03 IST
ಅಕ್ಷರ ಗಾತ್ರ

ಕಾರವಾರ: ‘ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಊಟ ನೀಡಲು ಅಂಗನವಾಡಿ ಕೇಂದ್ರವನ್ನು ಬಿಟ್ಟು, ಯಾವುದಾದರೂ ಶಾಲೆಗಳ ಹೆಚ್ಚುವರಿ ಕಟ್ಟಡಗಳನ್ನು ಬಳಕೆ ಮಾಡಿಕೊಳ್ಳಬೇಕು’ ಎಂದು ಶಾಸಕ ಸತೀಶ್ ಸೈಲ್ ಅಧಿಕಾರಿಗಳಿಗೆ ಸೂಚಿಸಿದರು. ಶುಕ್ರವಾರ ಇಲ್ಲಿನ ತಾಲ್ಲೂಕು ಪಂಚಾಯ್ತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಯಾವುದೇ ತಾಯಿಯು ಮಕ್ಕಳನ್ನು ಬಿಟ್ಟು ತಾನೊಬ್ಬಳೆ ಊಟ ಮಾಡುವುದಿಲ್ಲ. ಅಂಗನವಾಡಿ ಮಕ್ಕಳಿಗೆ ಹಾಗೂ ಮಾತೃಪೂರ್ಣ ಫಲಾನುಭವಿಗಳಿಗೆ ಒಂದೇ ತೆರನಾದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಆದರೆ ಹೆಚ್ಚುವರಿಯಾಗಿ ನೀಡುವ ಮೊಟ್ಟೆ, ಚಿಕ್ಕಿಯನ್ನು ಅವರು ಮಕ್ಕಳ ಎದುರು ತಿನ್ನಲು ಇಷ್ಟಪಡುವುದಿಲ್ಲ. ಹೀಗಾಗಿ ಅಂಗನವಾಡಿಯನ್ನು ಬಿಟ್ಟು ಇತರೆ ಶಾಲೆಗಳಲ್ಲಿ ಲಭ್ಯ ಇರುವ ಹೆಚ್ಚುವರಿ ಕೊಠಡಿಯಲ್ಲಿ ಅವರಿಗೆ ಬಿಸಿಯೂಟದ ವ್ಯವಸ್ಥೆ ಮಾಡಿಕೊಡಬೇಕು’ ಎಂದು ಹೇಳಿದರು.

ಚರಂಡಿ ನೀರು ಮಿಶ್ರಣ: ‘ಕುಡಿಯುವ ನೀರಿನ ಪೈಪುಗಳು ಅಲ್ಲಲ್ಲಿ ಒಡೆದಿದ್ದು, ಚರಂಡಿ ನೀರು ಅದಕ್ಕೆ ಮಿಶ್ರಣವಾಗುತ್ತಿದೆ. ಈ ನೀರನ್ನು ಬಳಕೆ ಮಾಡುವುದರಿಂದ ಕೆಲವರಲ್ಲಿ ವಾಂತಿ, ಭೇದಿ ಕಂಡುಬರುತ್ತಿದೆ. ಜತೆಗೆ ಕಟ್ಟಡ ನಿರ್ಮಾಣದ ವೇಳೆ ನೀರನ್ನು ಟ್ಯಾಂಕುಗಳಲ್ಲಿ ಶೇಖರಿಸಿಡುವುದರಿಂದ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದಾಗಿ ನಗರದಲ್ಲಿ ಇದ್ದ ಒಂದು ಡೆಂಗಿ ಪ್ರಕರಣ ಇದೀಗ 12ಕ್ಕೆ ಏರಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಸೂರಜಾ ನಾಯ್ಕ ಸಭೆಯ ಗಮನಕ್ಕೆ ತಂದರು.

ನಗರಸಭೆಯ ಆರೋಗ್ಯ ನಿರೀಕ್ಷಕ ಯಾಕೂಬ್ ಪ್ರತಿಕ್ರಿಯಿಸಿ, ‘ಈಗಾಗಲೇ ಎಲ್ಲ ಕಡೆಯಲ್ಲಿಯೂ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಪೈಪುಗಳ ಒಡೆದಿರುವ ಕಡೆಯಲ್ಲಿ ಸರಿಪಡಿಸಲು ಗಮನ ಹರಿಸುತ್ತೇವೆ’ ಎಂದು ಅವರು ಹೇಳಿದರು. ‘ಹದಗೆಟ್ಟ ಒಳಚರಂಡಿ ಹಾಗೂ ಕುಡಿಯುವ ನೀರಿನ ಪೈಪುಗಳನ್ನು ಶೀಘ್ರವೇ ಸರಿಪಡಿಸಬೇಕು’ ಎಂದು ಸತೀಶ್ ಸೈಲ್ ಸೂಚಿಸಿದರು.

ಹೊರಗುತ್ತಿಗೆ ನೌಕರರ ಪಟ್ಟಿ ಕೊಡಿ: ‘ಯಾವ್ಯಾವ ಇಲಾಖೆಗಳಲ್ಲಿ ಎಷ್ಟೆಷ್ಟು ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಅವರ ಗುತ್ತಿಗೆದಾರರು ಯಾರು? ಅವರು ಎಷ್ಟು ವರ್ಷದಿಂದ ನೌಕರರನ್ನು ಪೂರೈಸುತ್ತಿದ್ದಾರೆ? ಎಂಬ ಬಗ್ಗೆ ಅಧಿಕಾರಿಗಳು ಒಂದು ವಾರದ ಒಳಗೆ ಪಟ್ಟಿ ನೀಡಬೇಕು. ಅನೇಕ ಗುತ್ತಿಗೆದಾರರು ಸರ್ಕಾರದಿಂದ ಬರುವ ಸಂಬಳದಲ್ಲಿ ಕಮಿಷನ್ ಪಡೆದು ನೌಕರರಿಗೆ ಉಳಿದದನ್ನು ಪಾವತಿಸುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಅವರನ್ನೇ ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಹೀಗಾಗಿ ಶೀಘ್ರವೇ ಈ ಬಗ್ಗೆ ವರದಿ ನೀಡಬೇಕು’ ಎಂದು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT