ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂಧನ ಜಯಂತಿಯಿಂದ ಹಿರಿಯರಿಗೆ ಅಪಮಾನ: ಶಾಸಕ

Last Updated 11 ನವೆಂಬರ್ 2017, 7:07 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕ್ರೂರಿ, ದರೋಡೆಕೋರ, ದಂಗೆಕೋರ, ಮತಾಂಧತೆಯಿಂದ ಕ್ರೌರ್ಯ ಮೆರೆದ ಟಿಪ್ಪುವಿನ ಜಯಂತಿಯನ್ನು ಆಚರಿಸುವ ಮೂಲಕ ನಮ್ಮ ಹಿರಿಯ ಚೇತನಗಳಿಗೆ ಅಪಮಾನ ಮಾಡಲಾಗಿದೆ. ಟಿಪ್ಪುವಿನ ಜಯಂತಿ ಇಂದಿಗೇ ಕೊನೆಯಾಗಬೇಕು’ ಎಂದು ಶಾಸಕ ಕೆ.ಜಿ. ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಆಡಳಿತ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಟಿಪ್ಪು ಜಯಂತಿಯ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಫ್ರೆಂಚರೊಂದಿಗೆ ಸೇರಿ ಟಿಪ್ಪು ತನ್ನ ಸಾಮ್ರಾಜ್ಯ ಉಳಿವಿಗಾಗಿ ಹೋರಾಟ ನಡೆಸಿದ್ದಾನೆಯೇ ಹೊರತು, ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಮಂಡ್ಯದ ಮೇಲುಕೋಟೆಯಿಂದ, ಕೊಡಗು, ಮಂಗಳೂರು, ಕೇರಳ ಸೇರಿದಂತೆ ಅನೇಕ ಕಡೆ ತನ್ನ ಕ್ರೌರ್ಯ ಮೆರೆದಿದ್ದಾನೆ’ ಎಂದರು.

‘ಅನ್ಯೂನ್ಯತೆಯಿಂದಿದ್ದ ಸಮಾಜದಲ್ಲಿ ಟಿಪ್ಪು ಜಯಂತಿಯಿಂದಾಗಿ ಅಶಾಂತಿ ನೆಲೆಸಿ, ಕೋಮು ದ್ವೇಷ ಉಂಟಾಗುವಂತಾಗಿದೆ. ನಾವು ಇಸ್ಲಾಂ ಧರ್ಮವನ್ನು ಗೌರವಿಸುತ್ತೇವೆ. ಆದರೆ, ಟಿಪ್ಪು ಜನ್ಮದಿನಾಚರಣೆಯನ್ನು ವಿರೋಧಿಸುತ್ತೇವೆ.

ಇಸ್ಲಾಂ ಧರ್ಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಇಲ್ಲದಿರುವುದರಿಂದ ಟಿಪ್ಪು ಭಾವಚಿತ್ರಕ್ಕೆ ತಾನು ಪುಷ್ಪ ನಮನ ಮಾಡುವುದಿಲ್ಲ. ಟಿಪ್ಪು ಹುಟ್ಟಿದ ದಿನವನ್ನು ಕರಾಳ ದಿನವಾಗಿ ಆಚರಿಸಬೇಕೆ ಹೊರತು ಜಯಂತಿಯನ್ನಾಗಿ ಆಚರಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಕಾರ್ಯಕ್ರಮವನ್ನು ಕೂಡಲೇ ಮುಕ್ತಾಯಗೊಳಿಸಬೇಕು’ ಎಂದು ಒತ್ತಾಯಿಸಿ ಸಭಾಂಗಣದಿಂದ ಹೊರನಡೆದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಜನಪ್ರತಿನಿಧಿಗಳು ಎದ್ದು ನಿಂತು ಟಿಪ್ಪು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಪ್ಪುಬಟ್ಟೆ ಪ್ರದರ್ಶಿಸಿದರು. ವೇದಿಕೆಯಲ್ಲಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ. ಜೀವನ್, ಕಾಫಿ ಮಂಡಳಿಯ ಉಪಾಧ್ಯಕ್ಷೆ ರೀನಾ ಪ್ರಕಾಶ್‌, ಸೇರಿದಂತೆ ಬಿಜೆಪಿಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯರು ಶಾಸಕರೊಂದಿಗೆ ಹೊರ ನಡೆದರು.

ಸಭೆ ಬಹಿಷ್ಕರಿಸಿ ಹೊರ ನಡೆದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಬಿಜೆಪಿ ಜನಪ್ರತಿನಿಧಿಗಳನ್ನು ತಾಲ್ಲೂಕು ಕಚೇರಿಯ ಮುಂಭಾಗ ಪೊಲೀಸರು ಬಂಧಿಸಲು ಮುಂದಾದಾಗ, ‘ಯಾವ ಕಾನೂನಿನಂತೆ ಬಂಧಿಸುತ್ತೀರಿ’ ಎಂದು ಶಾಸಕ ಕೆ.ಜಿ. ಬೋಪಯ್ಯ ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಒಟ್ಟು 32 ಮಂದಿಯನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆ ಮಾಡಿದರು.
ಬಿಜೆಪಿ ಜನಪ್ರತಿನಿಧಿಗಳು ಟಿಪ್ಪು ಜಯಂತಿಯನ್ನು ಬಹಿಷ್ಕರಿಸಿ ಹೊರನಡೆದ ಬಳಿಕ ಕಾರ್ಯಕ್ರಮ ಮುಂದುವರಿಯಿತು. ತಹಶೀಲ್ದಾರ್‌ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಯಣ್ಣ, ಕ್ಷೇತ್ರಶಿಕ್ಷಣಾಧಿಕಾರಿ ಲೋಕೇಶ್, ಪಟ್ಟಣ ಪಂಚಾಯಿತಿ ಸದಸ್ಯ ಮತ್ತಿನ್‌, ಶಿಬಾ ಪೃಥ್ವಿನಾಥ್‌ ಉಪಸ್ಥಿತರಿದ್ದರು.
ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ತಾಲ್ಲೂಕು ಕಚೇರಿ ಬಳಿ ಬಿಗಿ ಬಂದೋಬಸ್ತ್‌ ಆಯೋಜಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT