ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದೆ ನಮ್ಮದೇ ಸರ್ಕಾರ: ಯಡಿಯೂರಪ್ಪ

Last Updated 11 ನವೆಂಬರ್ 2017, 8:37 IST
ಅಕ್ಷರ ಗಾತ್ರ

ಸುಳ್ಯ: ‘ಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವುದು ಸೂರ್ಯ–ಚಂದ್ರರಷ್ಟೇ ಖಚಿತ. ಈ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸುತ್ತೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಬಂದಿದ್ದ ಅವರು, ಇಲ್ಲಿಯ ಶ್ರೀಚೆನ್ನಕೇಶವ ದೇವಸ್ಥಾನದ ಎದುರು ಶುಕ್ರವಾರ ನಡೆದ ಸಮಾವೇಶದಲ್ಲಿ ಮಾತನಾಡಿದರು.
ಟಿಪ್ಪು, ಹಿಟ್ಲರ್ ಜಯಂತಿ ಒಂದೇ: ಟಿಪ್ಪು ಜಯಂತಿ ಮಾಡುವುದು, ಹಿಟ್ಲರ್ ಜಯಂತಿ ಮಾಡುವುದು ಎರಡು ಒಂದೇ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳು ಇಸ್ಲಾಂ ಭಯೋತ್ಪಾದನೆ ಮಾಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಜಿಲ್ಲೆಯನ್ನು ಮಿನಿ ಪಾಕ್ ಮಾಡಲು ಹೊರಟಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯದ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ವಿರುದ್ಧ ಸರಿತಾ ಎನ್ನುವರ ಅತ್ಯಾಚಾರ ದೂರು ಇದೆ. ಅವರೊಬ್ಬ ಅತ್ಯಾಚಾರಿ. ಅವರನ್ನು ಜಿಲ್ಲೆಗೆ ಬಂದಾಗ ತಡೆಯಬೇಕು. ಮಾನ್ಯ ಸಿದ್ದರಾಮಯ್ಯ ಅವರೇ ಇವರೇ ನಿಮ್ಮ ಉಸ್ತುವಾರಿ’ ಎಂದು ಯಡಿಯೂರಪ್ಪ ಟೀಕಿಸಿದರು.

‘ಗರಿಷ್ಠ ಮುಖಬೆಲೆಯ ನೋಟು ರದ್ದತಿ ಮತ್ತು ಜಿಎಸ್‌ಟಿ ಎಂಬ ಎರಡು ಗುಂಡುಗಳು ಈ ದೇಶದ ಜನರ ಎದೆಗೆ ಹೊಕ್ಕಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ಗುಂಡು ಹೊಕ್ಕಿರುವುದು ಕಾಂಗ್ರೆಸ್ ಕಾಳಸಂತೆಕೋರರ ಹೊಟ್ಟೆಗೆ’ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ರಾಜ್ಯಕ್ಕೆ ಅನುದಾನ ನೀಡುತ್ತಿದ್ದರೂ, ಅದನ್ನು ಸಮರ್ಪಕ ಬಳಕೆ ಮಾಡದೇ, ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ. ಕೇಂದ್ರ ನೀತಿ ಆಯೋಗ ಮತ್ತು ಜಿಎಸ್‌ಟಿ ಸಭೆಗೆ ಹೋಗಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಮಾತನಾಡಿ, ‘ಕಾಂಗ್ರೆಸ್ಸಿಗರು ಈಗ ನಡೆಸುತ್ತಿರುವ ಯಾತ್ರೆ ಅವರ ಕೊನೆಯ ಯಾತ್ರೆ. ಅಮಿತ್ ಷಾ, ಕೃಷ್ಣನಂತೆ, ಯಡಿಯೂರಪ್ಪ ಅವರ ಯಾತ್ರೆಯ ಸಾರಥ್ಯ ನೀಡಿದ್ದಾರೆ. ಕರ್ನಾಟಕ ಕೌರವ ಸಿದ್ದರಾಮಯ್ಯ ಅಂತ್ಯ ಯಾತ್ರೆ ಶುರುವಾಗಿದೆ ಎಂದು ಹೇಳಿದರು.

ಸಾಮೂಹಿಕ ಜಪ: ಜಿಲ್ಲಾ ಪಂಚಾಯತಿ ಸದಸ್ಯ ಹರೀಶ್ ಕಂಜಿಪಿಲಿ ನೇತೃತ್ವದಲ್ಲಿ ಅಡಿಕೆ ಹಳದಿ ರೋಗ ಬಾಧಿತ ಕೃಷಿಕರ ಸಾಲ ಮನ್ನಾಕ್ಕೆ ಪ್ರಯತ್ನಿಸಲು ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ರಸ್ತೆ ಅಪಘಾತಕ್ಕೊಳಗಾದ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಹೆಗ್ಡೆ ಆರೋಗ್ಯಕ್ಕಾಗಿ ಸಾಮೂಹಿಕ ಮೃತ್ಯುಂಜಯ ಜಪ ನಡೆಯಿತು. ಸಂಸದ ಬಿ.ಎಸ್.ಶ್ರೀರಾಮುಲು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿದರು.

ಸಂಸದ ಅಯನೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಗಣೇಶ್ ಕಾರ್ಣಿಕ್, ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು, ಪ್ರಧಾನ ಕಾರ್ಯದರ್ಶಿಗಳಾದ ಉಮಾನಾಥ ಕೋಟ್ಯಾನ್, ಸುದರ್ಶನ ಮೂಡುಬಿದಿರೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಇದ್ದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿದರು. ಶಾಸಕ ಎಸ್.ಅಂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಕೇಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT