ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ಕದಡಲು ಬಿಜೆಪಿ ಹುನ್ನಾರ–ಡಿಕೆಶಿ

Last Updated 11 ನವೆಂಬರ್ 2017, 9:01 IST
ಅಕ್ಷರ ಗಾತ್ರ

ರಾಮನಗರ: ‘ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂಬ ಭಯದಿಂದ ಬಿಜೆಪಿಯು ಟಿಪ್ಪು ಸುಲ್ತಾನ್‌ ಜಯಂತಿಯನ್ನು ನೆಪವಾಗಿಟ್ಟುಕೊಂಡು ಸಮಾಜದ ಶಾಂತಿ ಕದಡಲು ಸಂಚು ರೂಪಿಸಿದೆ’ ಎಂದು ಸಚಿವ ಡಿ.ಕೆ. ಶಿವಕುಮಾರ್ ಆರೋಪಿಸಿದರು. ಜಿಲ್ಲಾಡಳಿತದ ನೇತೃತ್ವದಲ್ಲಿ ಇಲ್ಲಿನ ಜೂನಿಯರ್‌ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಮೈಸೂರು ಹುಲಿ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಹತ್ತು ಹಲವು ಸಂತರು, ಹೋರಾಟಗಾರರ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಇದ್ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸದ ಬಿಜೆಪಿಯು ಟಿಪ್ಪು ಹೆಸರು ಕೇಳಿದರೆ ಉರಿದು ಬೀಳುವುದು ಏಕೆ. ಅಲ್ಪಸಂಖ್ಯಾತರು ಈ ದೇಶದ ಭಾಗವಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಟಿಪ್ಪು ಮತಾಂಧನೇ ಆಗಿದ್ದರೆ ನಮ್ಮ ಮೇಲುಕೋಟೆ, ಶ್ರೀರಂಗಪಟ್ಟಣ, ಶೃಂಗೇರಿಯ ದೇಗುಲಗಳು ಹಾಗೆಯೇ ಉಳಿಯುತ್ತಿರಲಿಲ್ಲ. ಸ್ವಾತಂತ್ರ್ಯ ನಂತರದ ಭಾರತದಲ್ಲಿ ಇಂದಿರಾಗಾಂಧಿ, ದೇವರಾಜ ಅರಸು ಅವರು ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ತಂದರು. ಆದರೆ ಅದಕ್ಕೂ ಶತಮಾನಗಳ ಮೊದಲೇ ಟಿಪ್ಪು ತನ್ನ ರಾಜ್ಯದಲ್ಲಿ ಈ ಕಾನೂನು ತಂದು ಸಾಮಾಜಿಕ ಕ್ರಾಂತಿ ಮಾಡಿದ್ದ’ ಎಂದು ಅವರು ಬಣ್ಣಿಸಿದರು.

‘ರಾಜ್ಯದ ಹಿತಕ್ಕಾಗಿ ಟಿಪ್ಪು ತನ್ನ ಎರಡು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟಿದ್ದ. ಅವನನ್ನು ದೇಶದ್ರೋಹಿ ಎನ್ನುತ್ತಿರುವ ಈಶ್ವರಪ್ಪ, ಜಗದೀಶ್‌ ಶೆಟ್ಟರ್‌ ಆದಿಯಾಗಿ ಯಾರಾದರೂ ಬಿಜೆಪಿ ನಾಯಕರು ದೇಶಕ್ಕಾಗಿ ತಮ್ಮವರನ್ನು ಒತ್ತೆ ಇಟ್ಟಿದ್ದಾರ’ ಎಂದು ಅವರು ಪ್ರಶ್ನಿಸಿದರು.

‘ಹಿಂದೊಮ್ಮೆ ಇದೇ ಟಿಪ್ಪುವಿನ ಪೇಟ, ಕತ್ತಿ ಹಿಡಿದು ಪೋಸು ಕೊಟ್ಟಿದ್ದ ಶೆಟ್ಟರ್‌, ಯಡಿಯೂರಪ್ಪ ಈಗ ಅದೇ ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ. ಕೇವಲ ಮತಗಳಿಗಾಗಿ ಯಾಕೆ ಇಂತಹ ನಾಟಕ ಆಡುತ್ತೀರಿ’ ಎಂದು ಅವರು ಲೇವಡಿ ಮಾಡಿದರು. ‘ರಾಮನಗರಕ್ಕೆ ರೇಷ್ಮೆ ಪರಿಚಯಿಸಿದ್ದು ಟಿಪ್ಪು. ಇಲ್ಲಿನ ಸಾವಿರಾರು ಕುಟುಂಬಗಳು ಇದರಿಂದ ಉದ್ಯೋಗ ಕಂಡುಕೊಂಡಿವೆ, ಹೀಗಾಗಿ ಅವರ ಋಣ ನಮ್ಮೆಲ್ಲರ ಮೇಲಿದೆ’ ಎಂದರು.

ಮಂಡ್ಯದ ಕರ್ನಾಟಕ ಜನಶಕ್ತಿ ಸಂಘಟನೆಯ ವಿ. ವಾಸು ಪ್ರಧಾನ ಉಪನ್ಯಾಸ ನೀಡಿ ‘ಟಿಪ್ಪು ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಏಳ್ಗೆಗೆ ದುಡಿದಿದ್ದು, ಅದನ್ನು ಸಹಿಸದ ಒಂದು ವರ್ಗ ಮಾತ್ರ ಅವರನ್ನು ವಿರೋಧಿಸುತ್ತಾ ಬಂದಿದೆ’ ಎಂದು ಆರೋಪಿಸಿದರು.

‘ಕನ್ನಂಬಾಡಿ ಕಟ್ಟೆ ನಿರ್ಮಾಣಕ್ಕೆ ಮೊದಲು ಯೋಜನೆ ರೂಪಿಸಿದ್ದು ಟಿಪ್ಪು. ರಾಜ್ಯದ ಸಾಕಷ್ಟು ಊರುಗಳಿಗೆ ಹೆದ್ದಾರಿ ನಿರ್ಮಿಸಿದ್ದು ಇದೇ ವ್ಯಕ್ತಿ. ಆತನ ಕಾಲದಲ್ಲಿ ವ್ಯಾಪಾರ ವಹಿವಾಟು ಉಚ್ಛ್ರಾಯ ಸ್ಥಿತಿಯಲ್ಲಿತ್ತು’ ಎಂದು ಬಣ್ಣಿಸಿದರು, ಟಿಪ್ಪು ಜಯಂತಿಯನ್ನು ಕೇವಲ ಮುಸ್ಲಿಮರಿಗೆ ಸೀಮಿತಗೊಳಿಸದೆ ಎಲ್ಲ ವರ್ಗದವರೂ ಆಚರಿಸಬೇಕು ಎಂದು ಆಶಿಸಿದರು.

ನಿವೃತ್ತ ಜಿಲ್ಲಾಧಿಕಾರಿ ಎಫ್‌.ಆರ್. ಜಮಾದಾರ್‌, ವೈದ್ಯರಾದ ಡಾ. ಜಿಲಾನಿ, ಡಾ. ಕೆ.ಪಿ. ಹೆಗಡೆ, ಸಮಾಜ ಸೇವಕ ಹಜೀಜ್‌ ದಾರ್‌ ಹಾಗೂ ಪತ್ರಕರ್ತ ಅಬ್ಬೂರು ರಾಜಶೇಖರ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಐಜೂರು ಸರ್ಕಾರಿ ಉರ್ದು ಪ್ರೌಢಶಾಲೆ ವಿದ್ಯಾರ್ಥಿನಿ ಆಯೇಷಾ ಬಾನು ಟಿಪ್ಪು ಸುಲ್ತಾನ್‌ ಬಗ್ಗೆ ಮಾತನಾಡಿ ಎಲ್ಲರ ಗಮನ ಸೆಳೆದರು. ಶಾಂತಲಾ ಕಲಾ ಕೇಂದ್ರದ ಚಿತ್ರಾ ರಾವ್‌ ನೇತೃತ್ವದಲ್ಲಿ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರದರ್ಶನದ ಮೂಲಕ ಎಲ್ಲರನ್ನೂ ರಂಜಿಸಿದರು.

ರಾಯಲ್‌ ಪ್ರೌಢಶಾಲೆಯ ವಿದ್ಯಾರ್ಥಿಗಳು ಕವ್ವಾಲಿ ಪ್ರಸ್ತುತಪಡಿ ಸಿದರು. ವಾರ್ತಾ ಇಲಾಖೆಯು ಟಿಪ್ಪು ಕುರಿತು ಹೊರತಂದಿರುವ ಕಿರು ಹೊತ್ತ‌ಗೆಯನ್ನು ಬಿಡುಗಡೆ ಮಾಡಲಾಯಿತು. ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ, ಮುಖಂಡ ಇಕ್ಬಾಲ್‌ ಹುಸೇನ್‌, ಎಂಐಇ ಅಧ್ಯಕ್ಷ ಶೇಷಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್. ವೆಂಕಟೇಶ್‌, ಜಿಲ್ಲಾಧಿಕಾರಿ ಬಿ.ಆರ್. ಮಮತಾ, ಜಿ.ಪಂ. ಸಿಇಒ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ರಮೇಶ್, ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್, ಉಪಾಧ್ಯಕ್ಷೆ ತಹಸೀನ್‌ ತಾಜ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್‌ ಬಾಸಿತ್‌, ಸದಸ್ಯರಾದ ಎಚ್‌.ಎಸ್‌. ಲೋಹಿತ್, ಆರ್.ಚೇತನ್‌ಕುಮಾರ್, ಮುತ್ತುರಾಜು, ಮುಖಂಡರಾದ ಇಕ್ಬಾಲ್ ಷರೀಫ್‌, ಎಚ್‌.ಎಂ. ಕೃಷ್ಣಮೂರ್ತಿ, ರಾ.ಸಿ. ದೇವರಾಜು, ಜಯಮ್ಮ, ಫರಾನಾ ಇದ್ದರು. ವಿ. ಲಿಂಗರಾಜು ಹಾಗೂ ಸಂಗಡಿಗರು ನಾಡಗೀತೆ, ರೈತ ಗೀತೆ ಹಾಡಿದರು. ನಗರಸಭೆ ಆಯುಕ್ತ ಕೆ. ಮಾಯಣ್ಣ ಗೌಡ ಸ್ವಾಗತಿಸಿದರು. ಶಿವಸ್ವಾಮಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT