ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ಸೇವೆ 13ರಂದು ಮತ್ತೆ ಸ್ಥಗಿತ

Last Updated 11 ನವೆಂಬರ್ 2017, 9:09 IST
ಅಕ್ಷರ ಗಾತ್ರ

ಶಿವಮೊಗ್ಗ: ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಚಲೋ ಕಾರ್ಯಕ್ರಮ ಆಯೋಜಿಸಿರುವ ಕಾರಣ ನ. 13ರಂದು ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು ಹಾಗೂ ಕ್ಲಿನಿಕ್‌ಗಳು ಸಾರ್ವಜನಿಕ ಸೇವೆಗೆ ಲಭ್ಯವಿರುವುದಿಲ್ಲ.

ವೈದ್ಯರು ಹಾಗೂ ಸಿಬ್ಬಂದಿ ಬೆಳಗಾವಿಯಲ್ಲಿ 14ರಿಂದ ಸರದಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಒಂದು ವೇಳೆ ಅಧಿವೇಶನದಲ್ಲಿ ಮಸೂದೆ ಅಂಗೀಕಾರವಾದರೆ ಎಲ್ಲ ವೈದ್ಯರು ಅನಿರ್ದಿಷ್ಟಾವಧಿಯವರೆಗೆ ವೃತ್ತಿ ತ್ಯಾಗದ ನಿರ್ಧಾರ ಪ್ರಟಿಸಲಿದ್ದಾರೆ ಎಂದು ವೈದ್ಯಕೀಯ ಸಂಘ ಎಚ್ಚರಿಕೆ ನೀಡಿದೆ.

ಅಪಪ್ರಚಾರಕ್ಕೆ ಅಸಮಾಧಾನ: ಆರೋಗ್ಯ ಸಚಿವರಾದ ರಮೇಶ್ ಕುಮಾರ್ ಅವರು ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರುದ್ಧ ವೈದ್ಯರ ಮುಷ್ಕರ ಕುರಿತು, ಖಾಸಗಿ ವೈದ್ಯರು ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಸಂಘದ ಶಿವಮೊಗ್ಗ ಶಾಖೆಯ ಅಧ್ಯಕ್ಷ ಡಾ.ಆರ್.ಬಿ. ಪುರುಷೋತ್ತಮ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ತಿದ್ದುಪಡಿಗೆ ಮಾತ್ರ ಸಂಘ ವಿರೋಧ ವ್ಯಕ್ತಪಡಿಸಿದೆ. ಸಂಪೂರ್ಣ ಕಾಯ್ದೆಯಲ್ಲ. ಆದರೆ, ಸಂಪೂರ್ಣ ಕಾಯ್ದೆಯನ್ನೇ ವಿರೋಧಿಸುತ್ತಾರೆ ಎಂದು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆಯ ತಿದ್ದುಪಡಿಗಳಿಗೆ ಸಂಬಂಧಪಟ್ಟಂತೆ ಭಾರತೀಯ ವೈದ್ಯಕೀಯ ಸಂಘವು ಸುಮಾರು 9 ತಿಂಗಳಿನಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದೆ. ಆರೋಗ್ಯ ಸಚಿವರ ಹಠಮಾರಿ ಧೋರಣೆ ಪರಿಣಾಮ ಖಾಸಗಿ ವೈದ್ಯರು, ತಮಗಿಷ್ಟವಿಲ್ಲದಿದ್ದರೂ ಮುಷ್ಕರ ನಡೆಸಬೇಕಾಗಿ ಬಂದಿದೆ ಎಂದು ದೂರಿದ್ದಾರೆ.

ಈಗಾಗಲೇ, ಜಿಲ್ಲಾ ಗ್ರಾಹಕರ ನ್ಯಾಯಾಲಯ ಮತ್ತು ವೈದ್ಯಕೀಯ ಪರಿಷತ್ತುಗಳು ರೋಗಿಗಳಿಗೆ ನ್ಯಾಯ ಕೊಡಲು ಸ್ಥಾಪಿಸಲಾಗಿರುವ ಸಂಸ್ಥೆಗಳು. ಇದರ ಜತೆಗೆ, ಇನ್ನೊಂದು ಸಂಸ್ಥೆ ಹುಟ್ಟುಹಾಕಿದರೆ, ವೈದ್ಯರ ಮೇಲೆ ಪ್ರಕರಣಗಳು ದಾಖಲಾದರೆ, ಇಡೀ ತಿಂಗಳು ನ್ಯಾಯಾಲಯಗಳಿಗೆ ಅಲೆಯಬೇಕಾಗುತ್ತದೆ. ಆಗ ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ಯಾರೊಬ್ಬರೂ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಸಮಯ ಎದುರಾದರೆ ಸರ್ಕಾರ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಏನು ಕ್ರಮ ಕೈಗೊಳ್ಳುತ್ತದೆ ಎಂದು ಪ್ರಶ್ನಿಸಿದ್ದಾರೆ.

ವೈದ್ಯರಿಗೆ ಜೈಲುಶಿಕ್ಷೆ ವಿಧಿಸುವ ಕಾಯ್ದೆಯ ಭಯದಿಂದ, ತುರ್ತು ಸಮಯದಲ್ಲಿ ವೈದ್ಯರು ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಶಿಫಾರಸು ಮಾಡುತ್ತಾರೆ. ಆಗ ಯಾರನ್ನು ದೂರಬೇಕು. ರೋಗಿಯ ಜೀವ ಹೋದರೆ ಯಾರು ಹೊಣೆ. ಸರ್ಕಾರ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಏಕಮುಖ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದಿಂದ ಯಾವುದೇ ಸವಲತ್ತು ಪಡೆಯದೇ, ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಆಸ್ಪತ್ರೆ ಪ್ರಾರಂಭಿಸಿ, ಸರ್ಕಾರದಿಂದಲೂ ನೀಡಲು ಸಾಧ್ಯವಾಗದ ಸವಲತ್ತುಗಳನ್ನು ಖಾಸಗಿ ವೈದ್ಯರು ನೀಡುತ್ತಿದ್ದಾರೆ. ಇಂತಹ ವೈದ್ಯರನ್ನು ಸುಲಿಗೆಕೋರರು ಎಂದು ಕರೆದು ಅವಮಾನಿಸುವುದು ಸಲ್ಲದು.

ಗ್ರಾಮೀಣ ಪ್ರದೇಶಗಳಲ್ಲೂ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಎಲ್ಲಾ ಸವಲತ್ತುಗಳನ್ನು ನೀಡಿ, ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ನೇಮಕ ಮಾಡಿದ್ದರೆ, ಖಾಸಗಿ ಆಸ್ಪತ್ರೆಗಳು ಏಕೆ ಹುಟ್ಟಿಕೊಳ್ಳುತ್ತಿದ್ದವು ಎಂದು ಸಂಘದ ಕಾರ್ಯದರ್ಶಿ ಡಾ.ಕೆ.ಆರ್. ರವೀಶ್ ಪ್ರಶ್ನಿಸಿದ್ದಾರೆ.

1.25 ಲಕ್ಷ ಕೋಟಿ ಬಜೆಟ್ ಮಂಡಿಸುವ ರಾಜ್ಯ ಸರ್ಕಾರಕ್ಕೆ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿಯೂ ಸಿ.ಟಿ. ಸ್ಕ್ಯಾನ್ ಮತ್ತು ಎಂ.ಆರ್.ಐ ಯಂತ್ರ ಅಳವಡಿಸಲು ಸಾಧ್ಯವಾಗದೇ ಇರುವಾಗ, ತಮ್ಮ ಸ್ವಂತ ಹಣದಲ್ಲಿ ಇಂತಹ ಸವಲತ್ತು ನೀಡಿ ಸಾರ್ವಜನಿಕರ ಹಿತ ಕಾಪಾಡುತ್ತಿರುವ ಖಾಸಗಿ ವೈದ್ಯರ ಸೇವೆ ಅರ್ಥ ಮಅಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಖಾಸಗಿ ಆರೋಗ್ಯ ಕ್ಷೇತ್ರ ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಸರ್ಕಾರ ಮತ್ತೊಂದು ಕಡೆ ವಿವಿಧ ರೀತಿಯ ವ್ಯವಹಾರಿಕ ತೆರಿಗೆ ವಿಧಿಸುತ್ತಿದೆ. ಇಂತಹ ಕೆಟ್ಟ ಕಾನೂನುಗಳಿಂದ ವೈದ್ಯರು ತಮ್ಮ ವೃತ್ತಿ ತ್ಯಜಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಮುಂದಿನ ಪೀಳಿಗೆಯ ವೈದ್ಯರು ಇಂತಹ ಕೆಟ್ಟ ವ್ಯವಸ್ಥೆಯ ಸಹವಾಸವೇ ಬೇಡ ಎಂದು ದೇಶ ತೊರೆಯಲು ತೀರ್ಮಾನಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಸರ್ಕಾರ ಜಾರಿಗೆ ತಂದಿರುವ ಯಶಸ್ವಿನಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬಾಲ ಸಂಜೀವಿನಿ, ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮಗಳಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಚಿಕಿತ್ಸೆ ನೀಡುತ್ತಿವೆ. ಇದು ಸಾರ್ವಜನಿಕರ ಮೇಲೆ ಖಾಸಗಿ ಆಸ್ಪತ್ರೆಗಳಿಗಿರುವ ಬದ್ಧತೆ. ಸರ್ಕಾರ ಈಗಾಲಾದರೂ ಅರ್ಥಮಾಡಿಕೊಂಡು ಕಾಯ್ದೆಯ ಕೆಲವು ಅಂಶಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ವೈದ್ಯ ಮತ್ತು ರೋಗಿಯ ಸಂಬಂಧ ಅವಿನಾಭಾವವಾಗಿರಬೇಕು. ಕಾನೂನುಗಳಿಂದ ಯಾವುದೇ ಸಂಬಂಧ ಸುಧಾರಿಸಲು ಸಾಧ್ಯವಿಲ್ಲ. ಇಂತಹ ಕಾನೂನುಗಳು ವೈದ್ಯ ಮತ್ತು ರೋಗಿಯ ನಡುವೆ ಕಂದಕ ಸೃಷ್ಟಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT