ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಳಿಪಟ ಮತ್ತು ಗುಬ್ಬಿ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅವತ್ತು ಶಾಲೆಗೆ ರಜಾ. ಮಕ್ಕಳೆಲ್ಲ ಹೊರಗಿನ ಬೆಳಕಿಗೆ ತಮ್ಮನ್ನು ಒಡ್ಡಿಕೊಂಡು ಹೋ ಹೋ ಅಂತ ಖುಷಿಯಿಂದ ಆಡುತ್ತಿದ್ದರು. ಗಾಳಿ ಚೆಂದವಾಗಿ ಬೀಸುತ್ತಿತ್ತು. ಸಣ್ಣಗೆ ಬಿಸಿಲು... ವಾತಾವರಣದಲ್ಲಿ ತಂಪು. ಸೈಕಲ್ ಹೊಡೆಯುವವರು, ಲಗೋರಿ ಆಡುವವರು, ಗಾಳಿಪಟ ಹಾರಿಸುವವರು... ಮಕ್ಕಳಿಂದ ರಸ್ತೆ ಫುಲ್ ರಶ್ ಆಗಿತ್ತು. ಗಾಡಿಗಳು ರಸ್ತೆಗೆ ಬರಲು ಸಂಕೋಚ ಪಡುತ್ತಿದ್ದವು. ಮಕ್ಕಳ ಕೈಯ ಗಾಳಿಪಟ ಅವರ ಉತ್ಸಾಹಕ್ಕೆ ತಾಳ ಹಾಕುತ್ತ, ಅವರನ್ನು ನೋಡಿ ಕುಣಿಯುತ್ತ ಮೇಲೆ ಮೇಲೆ ಹಾರಿತು.

ಆಟದಲ್ಲಿ ಮುಳುಗಿರುವಾಗಲೇ ಮಧ್ಯಾಹ್ನ ಮುಗಿದು ಕತ್ತಲಾಗುತ್ತಾ ಬಂತು. ದೊಡ್ಡವರೆಲ್ಲ ಪುಟಾಣಿಗಳಿಗೆ ಮನೆಯೊಳಗೆ ಬರುವಂತೆ ಹೇಳಿದರು. ಸೈಕಲ್ ಹೊಡೆಯುತ್ತಿದ್ದವರೆಲ್ಲ ಹೋದರು. ಗಾಳಿಪಟ ಹಾರಿಸುತ್ತಿದ್ದ ಮಕ್ಕಳಿಗೂ ಸುಸ್ತಾಗಿತ್ತು. ಗಾಳಿಪಟಕ್ಕೂ ಹಾರಾಡಿ ಹಾರಾಡಿ ಸಾಕಾಗಿತ್ತು. ಗಾಳಿಪಟವನ್ನು ಕೆಳಗಿಳಿಸಿ ಇನ್ನೇನು ಮನೆಗೆ ಹೋಗಬೇಕು ಅಂದುಕೊಳ್ಳುವಷ್ಟರಲ್ಲಿ ಆ ಗಾಳಿಪಟ ಲೈಟಿನ ಕಂಬವೊಂದಕ್ಕೆ ಬಂದು ತಗಲಿಕೊಂಡಿತು.

ಪಾಪ! ಆ ಗಾಳಿಪಟ ಹೆದರಿಬಿಟ್ಟಿತು. ಬೀಸುವ ಗಾಳಿಯ ಶಕ್ತಿ ಪಡೆದುಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಇನ್ನಷ್ಟು ಬಿಗಿಯಾಗಿ ಕಂಬಕ್ಕೆ ದಾರ ಸುತ್ತಿಕೊಂಡು ಪರಪರನೆ ನಡುಗತೊಡಗಿತು. ಮಕ್ಕಳಿಗೂ ಅದನ್ನ ಬಿಟ್ಟು ಮನೆಗೆ ಹೋಗಲು ಮನಸ್ಸಿರಲಿಲ್ಲ.

ಆ ಗುಂಪಿನಲ್ಲಿದ್ದ ಪುಟ್ಟ ಒಂದು ಕೋಲು ತಂದು ತೆಗೆಯಲು ನೋಡಿದ. ಸಾಧ್ಯವಾಗಲಿಲ್ಲ. ಚಿನ್ನು ಏಣಿ ಸಿಗಬಹುದಾ ಅಂತ ಹುಡುಕಿದಳು. ಏಣಿ ಕಾಣಿಸಲಿಲ್ಲ. ಮನೆಯಲ್ಲಿನ ಏಣಿ ತರುವುದು ಹೋಗಲಿ, ಮುಟ್ಟುವುದಕ್ಕೂ ಅಪ್ಪ ಅಮ್ಮ ಬಿಡುವುದಿಲ್ಲ ಎಂದು ಪುಟಾಣಿಗಳಿಗೆ ಗೊತ್ತಿತ್ತು.

ಹೊತ್ತು ಜಾರಿ ಕತ್ತಲಾಯಿತು. ಮತ್ತೆ ಮತ್ತೆ ಅಪ್ಪ-ಅಮ್ಮ ‘ಒಳಗೆ ಬನ್ನಿ ಸಾಕು ಆಟ’ ಅಂತ ಕೂಗು ಹಾಕ್ತಾನೇ ಇದ್ರು. ಅನಿವಾರ್ಯವಾಗಿ ಪುಟಾಣಿಗಳು ಮನೆಗೆ ಹೋಗಲೇಬೇಕಾಯ್ತು. ತುಂಬಾ ಬೇಸರದಿಂದ ಒಳಗೆ ಹೋದ್ರು.

ಈ ಕಡೆ ಗಾಳಿಪಟ ಒಂಟಿ ಆಗಿಬಿಡ್ತು. ಅದು ಪುಟಾಣಿಗಳು ಹೋಗೋದನ್ನ ನೋಡಿ, ‘ನಾಳೆಯಾದ್ರು ನನ್ನನ್ನ ಬಿಡಿಸಿಕೊಂಡು ಹೋಗಿ’ ಅಂತ ಅಳತೊಡಗಿತು. ತಂತಿಗೆ ತಗುಲಿ ಅಲ್ಲಲ್ಲಿ ಗಾಯವಾಗಿ ನೋಯತೊಡಗಿತು.

ದಿನದ ಕೆಲಸ ಮುಗಿಸಿ ಗೂಡಿನಲ್ಲಿದ್ದ ಮರಿಗಳಿಗೆ ತಿಂಡಿ ತಗೊಂಡು ಮನೆ ಕಡೆ ಹೋಗ್ತಾ ಇದ್ದ ಗುಬ್ಬಿಮರಿ ಈ ಗಾಳಿಪಟ ಅಳೋದನ್ನು ನೋಡಿತು. ಅದರ ಹತ್ತಿರ ಹಾರುತ್ತ ಬಂದು ಏನಾಯ್ತು? ಅಂತೆಲ್ಲ ವಿಚಾರಿಸಿತು. ಆಗ ಗಾಳಿಪಟ , ‘ಆ ಪುಟಾಣಿಗಳ ಜೊತೆ ನಾ ಆಟ ಆಡ್ತಾ ಇದ್ದೆ. ಕತ್ತಲಾಯ್ತು. ಮನೆಗೆ ಹೋಗುವಾಗ ಇಲ್ಲಿ ಸಿಕ್ಕಿಕಿಕೊಂಡೆ. ಅವರಿಗೆ ನನ್ನನ್ನ ಬಿಡಿಸಿಕೊಂಡು ಹೋಗ್ಲಿಕ್ಕೆ ಆಗ್ಲಿಲ್ಲ’ ಅಂತ ಅಳತೊಡಗಿತು.

ಕಂಬದ ನೆತ್ತಿಯ ಮೇಲೆ ಕೂತ ಗುಬ್ಬಿ ಗಾಳಿಪಟಕ್ಕೆ ಸಮಾಧಾನ ಮಾಡಿತು. ‘ಹಂಗೆಲ್ಲ ಅಳಬೇಡ. ನಾನೇನಾದ್ರೂ ಸಹಾಯ ಮಾಡ್ತೀನಿ’ ಎಂದು ಹೇಳಿ ಅದನ್ನು ಆ ಲೈಟ್ ಕಂಬದಿಂದ ಬಿಡಿಸಿಕೊಳ್ಳಲು ಪ್ರಯತ್ನಿಸಿತು. ಕೊಕ್ಕಿನಿಂದ ಎತ್ತಲು ಪ್ರಯತ್ನ ಮಾಡಿತು. ಏನೇ ಗುದ್ದಾಡಿದರೂ ಗಾಳಿಪಟವನ್ನು ಬಿಡಿಸಿಕೊಳ್ಳಲು ಆಗಲೇ ಇಲ್ಲ. ಹೀಗೆ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗಲೇ ಗಾಳಿಪಟದ ದಾರ ಗುಬ್ಬಿಯ ರೆಕ್ಕೆ ಮತ್ತು ಕತ್ತಿಗೆಲ್ಲ ಸುತ್ತಿಕೊಂಡು ಬಿಟ್ಟಿತು. ಈಗ ಗಾಳಿಪಟದೊಟ್ಟಿಗೆ ಗುಬ್ಬಿಯೂ ಸಿಕ್ಕಿಹಾಕಿಕೊಂಡ್ತು. ಪಢಪಢ ರೆಕ್ಕೆ ಬಡಿದು, ಕೊಕ್ಕು ಅತ್ತಿತ್ತ ಅಲ್ಲಾಡಿಸಿದಷ್ಟೂ ದಾರ ಬಿಗಿಯುತ್ತಲೇ ಹೋಯಿತು. ಕೊನೆಗೆ ಅಸಹಾಯಕವಾಗಿ ಸುಮ್ಮನೇ ಕಂಬದ ನೆತ್ತಿಯ ಮೇಲೆ ಕೂತುಬಿಟ್ಟಿತು. ಅದಕ್ಕೆ ಉಸಿರಾಡುವುದೂ ಕಷ್ಟವಾಗುತ್ತಿತ್ತು.

ಅದನ್ನು ನೋಡಿ ಗಾಳಿಪಟದ ದುಃಖ ಇನ್ನಷ್ಟು ಹೆಚ್ಚಾಯ್ತು. ‘ನನಗೆ ಸಹಾಯ ಮಾಡಲು ಹೋಗಿ ನೀನು ಸಿಕ್ಕಾಕಿಕೊಂಡ್ಯಲ್ಲಾ...’ ಎಂದು ಮತ್ತೆ ಅಳತೊಡಗಿತು. ಆಗ ಗುಬ್ಬಿ ‘ಹಾಗೆಲ್ಲ ಯೋಚನೆ ಮಾಡಬೇಡ. ಬೇರೆಯವರು ಕಷ್ಟದಲ್ಲಿದ್ದಾಗ ಸಹಾಯ ಮಾಡುವುದು ಎಲ್ಲರ ಕರ್ತವ್ಯ. ನೀನು ಸಿಕ್ಕಿಹಾಕಿಕೊಂಡಾಗ ನಾನು ಸಹಾಯ ಮಾಡ್ಲಿಕ್ಕೆ ಬಂದೆನಲ್ಲ, ಹಾಗೆಯೇ ನಾನು ಸಿಕ್ಕಿಹಾಕಿಕೊಂಡಿರುವುದರನ್ನು ನೋಡಿ ಇನ್ಯಾರಾದರೂ ಸಹಾಯ ಮಾಡಲಿಕ್ಕೆ ಬಂದೇ ಬರ್ತಾರೆ. ನಮ್ಮಿಬ್ಬರನ್ನೂ ಬಿಡಿಸ್ತಾರೆ’ ಎಂದು ಧೈರ್ಯ ತುಂಬಿತು. ಆದರೆ ಅದಕ್ಕೂ ಒಳಗೊಳಗೆ ಭಯವಾಗುತ್ತಿತ್ತು.

ಗೂಡಿನಲ್ಲಿದ್ದ ಮರಿಗಳ ಗತಿ ಏನಾಗಿರಬಹುದು? ರಾತ್ರಿಯಿಡೀ ಇಲ್ಲಿಯೇ ಇರಬೇಕಾಗಿ ಬಂದರೆ ಅವು ಕತ್ತಲಿಗೆ ಎಷ್ಟು ಹೆದರಿಕೊಳ್ಳಬಹುದು? ಅವಕ್ಕಿನ್ನೂ ರೆಕ್ಕೆಯೂ ಬಲಿತಿಲ್ಲ. ಹಾರಲು ಬರುವುದಿಲ್ಲ. ಒಂದೊಮ್ಮೆ ನಾನು ಇಲ್ಲಿಯೇ ಸಿಕ್ಕಿಕೊಂಡು ಸತ್ತುಹೋದರೆ ಅವುಗಳ ಗತಿ ಏನು? ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳುತ್ತವೆ? ಹೀಗೆ ಹಲವು ಪ್ರಶ್ನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತಿದ್ದವು. ಆದರೂ ತನ್ನ ಭಯವನ್ನು ಈಗಾಗಲೇ ಅಳುತ್ತಿರುವ ಗಾಳಿಪಟದ ಮುಂದೆ ತೋರಿಸಿಕೊಳ್ಳಲು ಹೋಗಲಿಲ್ಲ. ಕಷ್ಟದಲ್ಲಿದ್ದವರಿಗೆ ಧೈರ್ಯ ತುಂಬಬೇಕೇ ಹೊರತು ಅವರಿಗೆ ನಮ್ಮ ದುಃಖವನ್ನೂ ಹೇಳಿಕೊಂಡು ಇನ್ನಷ್ಟು ಭಯಬೀಳುವಂತೆ ಮಾಡಬಾರದು ಎಂದು ಅಮ್ಮ ಯಾವಾಗಲೂ ಹೇಳುತ್ತಿದ್ದ ಮಾತು ಅವಳ ಮನಸಲ್ಲಿತ್ತು.

ತನ್ನ ಗೂಡಿರುವ ಕಡೆಯಿಂದ ಬಂದ ಗಾಳಿಯ ಬಳಿ ‘ಗಾಳಿಯಣ್ಣ ಗಾಳಿಯಣ್ಣ... ನನ್ನ ಮರಿಗಳು ಹೇಗಿವೆ? ಅಳ್ತಿವೆಯಾ? ಭಯ ಬಿದ್ದಿವೆಯಾ? ಎಂದು ವಿಚಾರಿಸಿತು. ಗಾಳಿಯಣ್ಣ ಅವಳ ಗೂಡನ್ನು ಹಾದೇ ಬಂದಿದ್ದ. ಮರಿಗಳು ಅಮ್ಮ ಇನ್ನೂ ಬರದಿರುವುದನ್ನು ನೋಡಿ ಭಯ ಬಿದ್ದಿರುವುದು ಕಂಡಿದ್ದ. ಆದರೆ ಅದನ್ನು ಗುಬ್ಬಿಯ ಮುಂದೆ ಹೇಳಲು ಹೋಗದೆ, ‘ಅವು ಮಲ್ಕೊಂಡಿವೆ ಗುಬ್ಬಿಯಕ್ಕಾ... ಏನೂ ಭಯ ಇಲ್ಲ. ನೀನು ಯೋಚನೆ ಮಾಡಬೇಡ’ ಎಂದು ನಕ್ಕಿತು. ಗುಬ್ಬಿಗೆ ಸ್ವಲ್ಪ ಸಮಾಧಾನ ಆಯ್ತು. ರಾತ್ರಿಯಿಡೀ ಗಾಳಿಪಟದ ಜೊತೆ ಮಾತಾಡುತ್ತ ಅದರ ಕಣ್ಣೀರು ಒರೆಸುತ್ತ ಅಲ್ಲೇ ಕುಳಿತುಕೊಂಡಿತು.

ಬೆಳಗಾಯ್ತು. ಗುಬ್ಬಿ ಮತ್ತು ಗಾಳಿಪಟ ಮಾತಾಡುತ್ತ ಕುಳಿತಿದ್ದವು. ರಾತ್ರಿಯಿಡೀ ನಿದ್ದೆಗೆಟ್ಟು ಅವುಗಳಿಗೆ ದಣಿವಾಗಿತ್ತು. ಪುಟಾಣಿಗಳೆಲ್ಲ ಮತ್ತೆ ಓಡೋಡುತ್ತ ಗಾಳಿಪಟದ ಹತ್ತಿರ ಬಂದರು. ಅಲ್ಲಿ ದಾರಕ್ಕೆ ಗುಬ್ಬಿಯೂ ಸಿಕ್ಕಿಹಾಕಿಕೊಂಡಿರುವುದನ್ನು ನೋಡಿದರು. ಅವರಿಗೆ ಮೋಜು ಎನಿಸಿ ಕಲ್ಲನ್ನು ಎತ್ತಿಕೊಂಡು ಹೊಡೆಯಲು ಮುಂದಾದರು. ಗುಬ್ಬಿ ಮತ್ತೊಮ್ಮೆ ಶಕ್ತಿ ಮೀರಿ ರೆಕ್ಕೆ ಬಿಚ್ಚಿ ಹಾರಲು ಯತ್ನಿಸಿ ಆಗದೆ ಅಲ್ಲೇ ಕುಕ್ಕರಿಸಿತು. ಗಾಳಿಪಟ ಭಯದಿಂದ ಅಳತೊಡಗಿತು. ಇನ್ನೇನು ಕಲ್ಲೆತ್ತಿ ಹೊಡೆಯಬೇಕು, ಅಷ್ಟರಲ್ಲಿ ಒಂದು ಧ್ವನಿ ಕೇಳಿಸಿತು. ‘ನಿಲ್ಸಿ..!’.

ಕಲ್ಲೆತ್ತಿಕೊಂಡಿದ್ದ ಮಕ್ಕಳು ಭಯದಿಂದ ನಿಂತು ಅತ್ತಿತ್ತ ನೋಡತೊಡಗಿದರು. ಧ್ವನಿ ಮತ್ತೆ ಕೇಳಿತು. ‘ಅಲ್ಲೆಲ್ಲಿ ನೋಡ್ತಿದ್ದೀರಿ? ನಾನು ಲೈಟ್‌ ಕಂಬ ಮಾತಾಡ್ತಿರೋದು. ಇಲ್ಲಿ ನೋಡಿ...’ ಈ ಮಾತನ್ನು ಕೇಳಿದ್ದೇ ಮಕ್ಕಳೆಲ್ಲ ಭಯ ಬಿದ್ದು ಎದ್ನೋ ಬಿದ್ನೋ ಎಂದು ಓಡಿಹೋದರು.

ಪುಟ್ಟ ಮಾತ್ರ ಎಷ್ಟೇ ಭಯವಾದರೂ ಅಲ್ಲಿ ನಿಂತೇ ಇದ್ದ. ನಿಜಕ್ಕೂ ಲೈಟ್‌ ಕಂಬ ಮಾತಾಡುತ್ತಿತ್ತು. ಸುಮ್ಮನೇ ಕಂಬವನ್ನೂ, ಅದರ ನೆತ್ತಿ ಮೇಲಿದ್ದ ಗಾಳಿಪಟ ಮತ್ತು ಗುಬ್ಬಿಯನ್ನೂ ನೋಡಿದ. ‘ಒಂದಿನ ನಿನ್ನ ಅಮ್ಮ ನಿನ್ನನ್ನು ಮನೆಯಲ್ಲಿ ಉಪವಾಸ ಬಿಟ್ಟು ಎಲ್ಲಿಗಾದ್ರೂ ಹೋದ್ರೆ ಏನಾಗತ್ತೆ?’ ಕಂಬ ಕೇಳಿತು. ಪುಟ್ಟ ತೊದಲಿದ. ‘ನಿನ್ನಮ್ಮನನ್ನು ಎಲ್ಲಿಯಾದ್ರೂ ಯಾರಾದ್ರೂ ಹಿಡಿದಿಟ್ಕೊಂಡಿದ್ರೆ ನಿನ್ನ ಕಥೆ ಏನಾಗತ್ತೆ?’ ಪುಟ್ಟ ಈಗ ಕೊಂಚ ಭಯದಿಂದಲೇ ‘ಬೇಡ ಬೇಡ.. ಅಮ್ಮನಿಗೆ ಏನೂ ಆಗ್ಬಾರ್ದು’ ಎಂದ.

ಲೈಟ್‌ ಕಂಬ ಮಾತು ಮುಂದುವರಿಸಿತು. ‘ಪುಟ್ಟಾ, ನಿನ್ನ ಅಮ್ಮ ಹೇಗೋ ಹಾಗೇ ಈ ಗುಬ್ಬಕ್ಕ. ಅವಳಿಗೂ ಗೂಡಿನಲ್ಲಿ ಮರಿಗಳಿದ್ದಾವೆ. ರಾತ್ರಿಯಿಡೀ ಅಮ್ಮ ಬರ್ತಾಳೆ ಅಂತ ಕಾಯ್ತಿದ್ದಾರೆ. ಊಟಾನೂ ಮಾಡಿಲ್ಲ ಗೊತ್ತಾ? ಅಮ್ಮ ಇಲ್ಲಿ ಸಿಕ್ಕಾಕಿಕೊಂಡಿದ್ದಾರೆ. ಅವರಿಗೆ ಎಷ್ಟು ಹೆದ್ರಿಕೆ ಆಗಿರಬೇಕು ಯೋಚಿಸು. ನೀವು ನೋಡಿದರೆ ಈ ಗುಬ್ಬಕ್ಕನಿಗೆ ಕಲ್ಲು ಹೊಡೆದು ಕೊಲ್ಲೋಕೆ ಹೋಗ್ತಿದ್ದೀರಾ? ಅಮ್ಮನನ್ನು ಕೊಂದರೆ ಮಕ್ಕಳ ಕಥೆ ಏನಾಗ್ಬೇಕು? ಯಾರು ಊಟ ಮಾಡಿಸ್ತಾರೆ? ಬಟ್ಟೆ ಹಾಕಿ, ಸ್ಕೂಲಿಗೆ ಕಳಿಸಿ ಮಾಡ್ತಾರೆ? ಯಾರು ರಾತ್ರಿ ಲಾಲಿ ಹಾಡಿ ಕಥೆ ಹೇಳಿ ಮಲಗಿಸ್ತಾರೆ? ಯೋಚ್ಸು. ಮೊದಲು ಆ ಗುಬ್ಬಕ್ಕನನ್ನು ಬಿಡಿಸಿ ಗೂಡಿಗೆ ಕಳಿಸು. ಅಲ್ಲಿ ನಿನ್ನಂಥವೇ ಮಕ್ಕಳು ಕಾಯ್ತಿರ್ತಾರೆ’ ಎಂದಿತು.

ಕಂಬದ ಮಾತು ಕೇಳಿ ಪುಟ್ಟನ ಕಣ್ಣಲ್ಲಿ ನೀರೇ ಬಂತು. ಬೇಗ ಬೇಗ ಓಡಿ ಮನೆಗೆ ಹೋಗಿ ಅಪ್ಪನ ಬಳಿ ಹಟ ಮಾಡಿ ಏಣಿ ತೆಗೆದುಕೊಂಡು ಬಂದ. ಕಂಬಕ್ಕೆ ಒರಗಿಸಿ ಇಟ್ಟು ನಿಧಾನಕ್ಕೆ ಏಣಿ ಹತ್ತಿ ಗುಬ್ಬಕ್ಕನನ್ನೂ ಗಾಳಿಪಟವನ್ನೂ ಬಿಡಿಸಿದ. ರೆಕ್ಕೆ ಕತ್ತಿನಲ್ಲಾದ ಗಾಯವನ್ನು ಮೆಲುವಾಗಿ ಸವರಿದ. ಗುಬ್ಬಿ ಅವನ ಕೈಗೆ ಮೆಲುವಾಗಿ ಮುತ್ತಿಟ್ಟಿತು. ಖುಷಿಯಿಂದ ಕುಣಿದಾಡಿಬಿಟ್ಟ.

ಗುಬ್ಬಿ ಪುಟ್ಟನ ಕೈಯಿಂದ ಮೇಲೆ ಜಿಗಿದು ಕಂಬದ ಮೇಲೆ ಕೂತು ಥ್ಯಾಂಕ್ಸ್‌ ಹೇಳಿ ಗಾಳಿಪಟಕ್ಕೆ ‘ಬಾಯ್’ ಹೇಳಿ ಹಾರಿಹೋಯಿತು. ಗಾಳಿಪಟ ಗೆಲುವಿನಿಂದ ಮೇಲೆ ಹಾರಿ ಮತ್ತೆ ಕೆಳಗಿಳಿದು ಪುಟ್ಟನ ಹೆಗಲ ಮೇಲೆ ಪ್ರೀತಿಯಿಂದ ಕೂತುಕೊಂಡಿತು.

*


–ನಭಾ ಒಕ್ಕುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT