ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದನ ಕನ್ನಡ ಜಗತ್ತು!

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

'ಅಬ್ಬಾ..., ಮಿಯಾವ್-ಅಂಬಾ, ತಾಚಿ, ಟಾಟಾ...' (ಅಪ್ಪ, ಬೆಕ್ಕು-ಹಸು ಒಂದೇ ಕಡೆ ಮಲಗಿವೆ. ನೋಡೋಕೆ ಹೋಗೋಣ ಬಾ.)

ಎದೆಯ ಮೇಲೆ ಕುಳಿತಿದ್ದ ಮಗಳು ತನ್ನ ಪುಟ್ಟ ಬೆರಳುಗಳಿಂದ ನನ್ನ ಕಣ್ರೆಪ್ಪೆ ಬಿಡಿಸಲು ಯತ್ನಿಸುತ್ತಾ ತೊದಲಿದಾಗ ಇನ್ನೂ ಬೆಳಕಾಗಿರಲಿಲ್ಲ.

ರಾತ್ರಿ ಇವಳ ಕನಸಿನಲ್ಲಿ ಯಾವ ಪ್ರಾಣಿ ಬಂದಿರುತ್ತೋ? ಅದು ಏನು ಮಾಡಿರುತ್ತೋ? ಬೆಳಿಗ್ಗೆ ಎದ್ದ ಮೇಲೆ ಅವಳು ಆಡುವ ಮೊದಲ ಮಾತು ಅದೇ ಆಗಿರುತ್ತೆ ಎಂಬುದು ನಾನು ಅನುಭವದಿಂದ ಕಂಡುಕೊಂಡ ಸತ್ಯ. ಒಂದುವೇಳೆ ಅವಳೇನಾದರೂ 'ಕೊಕ್ಕೊ ಅವೌ ಡಿಶುಂ' (ಕೋಳಿ-ನಾಯಿ ಕಿತ್ತಾಡುತ್ತಿವೆ) ಎನ್ನುತ್ತಾ ನನ್ನ ಬಳಿಗೆ ಬಂದರೆ ಕೋಳಿ ಮತ್ತು ನಾಯಿ ಒಟ್ಟಿಗೆ ಇರುವ ಸ್ಥಳವೇ ನಮ್ಮ ಮುಂಜಾನೆ ಸಂಚಾರದ ಮೊದಲ ತಾಣ.

ಒಂದೂವರೆ ವರ್ಷದ ಮಗುವಿಗೆ ಕನಸು ಬೀಳುತ್ತಾ? ಬಿದ್ದ ಕನಸು ನೆನಪಿರುತ್ತಾ?

ನಮ್ಮ ಮನೆಯ ಸುತ್ತಲು ‘ಅಮ್ಮೆ’ (ಎಮ್ಮೆ), ‘ಅಂಬಾ’ (ಹಸು), ‘ಅವೌ ಅವೌ’ (ನಾಯಿ), ಮಿಯಾವ್ (ಬೆಕ್ಕು), ‘ಮೇ’ (ಕುರಿ), ‘ಮೇಮೇ’ (ಮೇಕೆ), ‘ಕೊಕ್ಕೊ’ (ಕೋಳಿ), ‘ಚಿವಿಚಿವಿ’ (ಅಳಿಲು), ‘ಕುದ್ದೆ’ (ಕುದುರೆ), ‘ಕುತ್ತೆ’ (ಕತ್ತೆ), ‘ಅನ್ನಿ’ (ಹಂದಿ) ಇನ್ನೂ ಏನೇನೋ ಇವೆ. ದೊಡ್ಡವರ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದ ಈ ಪ್ರಾಣಿಗಳು ಮಕ್ಕಳ ಜೊತೆಗೆ ಹೇಗೆ ಫ್ರೆಂಡ್‌ಶಿಪ್ ಸಾಧಿಸುತ್ತವೆ?

ನನ್ನ ಮಗನಿಗೂ ಮಗಳಿಗೂ ಐದು ವರ್ಷಗಳ ಅಂತರ. ಹೆಣ್ಮಕ್ಕಳೇ ಸ್ಟ್ರಾಂಗು ನೋಡಿ, ಇವಳೇ ಅಣ್ಣನಿಗೆ ಹೊಡೆದು, ಅವಳೇ ಅಳುತ್ತಾ ದೂರು ಹೇಳಲು ಬರುತ್ತಾಳೆ.

‘ಅನ್ನ ಅತ್ತಾ ಅಬ್ಬು’ (ಅಣ್ಣ ಹೊಡೆದ, ನೋವಾಯಿತು) ಎನ್ನುತ್ತಾ ಬಳಿಗೆ ಬಂದು ಪಂಚೆ ಎಳೆದಾಗ ನಾನು ತಕ್ಷಣ 'ಯಾಕೋ ಪುಟ್ಟ ಅವಳಿಗೆ ಹೊಡೆದೆ?' ಅಂತ ಜೋರು ಮಾಡಬೇಕು. ಇಲ್ಲದಿದ್ದರೆ, 'ಅನ್ನ ಅಬ್ಬಾ ಅತ್ತಾ ಅಬ್ಬು' ಎಂದು ’ಅಣ್ಣನ ಜೊತೆಗೆ ಅಪ್ಪನು ಸೇರಿ ನನಗೆ ಹೊಡೆದರು’ ಎನ್ನುವ ದೂರು ಅವಳ ಅಜ್ಜನಿಗೆ ಮುಟ್ಟುತ್ತದೆ. 'ಮಗಳು ಏನು ಹೇಳ್ತಾಳೆ ಅಂತ ಅರ್ಥ ಮಾಡಿಕೊಳ್ಳೋಕೆ ಬರಲ್ಲ. ನೀನ್ಯಾವ ಸೀಮೆ ಜರ್ನಲಿಸ್ಟೋ?' ಎನ್ನುವ ಠೇಂಕಾರ ಹೈಕಮಾಂಡ್‌ನಿಂದ ಹೊಮ್ಮುತ್ತದೆ.

ಅವಳಿಗೆ ಸ್ನಾನ ಮಾಡಿಸುವುದು ಒಂದು ದೊಡ್ಡ ಸಾಹಸ. ‘ಚಾನ ಮಾತೀಯಾ ಬಂಗಾರಿ...’ (ಸ್ನಾನ ಮಾಡ್ತೀಯಾ ಬಂಗಾರಿ) ಎನ್ನುತ್ತಾ ಬಟ್ಟಲಿಗೆ ಎಣ್ಣೆ ಬಗ್ಗಿಸಿದ ತಕ್ಷಣ ಜೂಟಾಟ ಶುರು. ‘ಬೇ, ಚಾನ ಬೇ...’ (ಬೇಡ, ಸ್ನಾನ ಬೇಡ) ಆರ್ಭಟ ಮನೆತುಂಬಾ ಪ್ರತಿಧ್ವನಿಸಿ, ರಾಜಿ ಪಂಚಾಯಿತಿಯಾದ ಮೇಲೆಯೇ ಅಮ್ಮೋರ ಮಜ್ಜನ.

ಇವಳ ಜೊತೆಗೆ ವ್ಯವಹರಿಸುವಾಗ ನನಗೆ ಆಗುವ ದೊಡ್ಡ ಕಷ್ಟ ಅಂದ್ರೆ ಅವಳ ಭಾಷೆಯಲ್ಲಿ ಪದೇಪದೆ ಬಳಕೆಯಾಗುವ ‘ಬೇ’ ಅಕ್ಷರ. ಬೇಕು ಎನ್ನುವುದಕ್ಕೂ ‘ಬೇ’, ಬೇಡ ಎನ್ನುವುದಕ್ಕೂ ‘ಬೇ’ - ಸಂದರ್ಭ ಮತ್ತು ಮೂಡ್‌ಗೆ ಅನುಸಾರವಾಗಿ ನಾನು ಅರ್ಥಮಾಡಿಕೊಂಡು ವ್ಯವಹರಿಸಬೇಕಷ್ಟೇ.

‘ಮಮ್, ಅಚ್ಚಿ, ಅಜ್ಜಿ, ಮಜ್ಜಿ’ (ಹಸಿವಾಗ್ತಿದೆ ಮಜ್ಜಿಗೆ ಅನ್ನ ಕೊಡು ಅಜ್ಜಿ) ಎನ್ನುತ್ತಾ ಕೈಲಿ ಬಟ್ಟಲು ಹಿಡಿದುಕೊಂಡು ತುತ್ತು ಮೇಲೆತ್ತುತ್ತಾಳೆ. ಆದರೆ ಬಾಯಿಗೆ ಎರಡು ಅಗುಳು ಹೋದರೆ ಹೆಚ್ಚು. ಯಾರಾದರೂ ತಿನ್ನಿಸಲು ಹೋದರೆ ‘ಬೇ, ನಾನ್’ (ಬೇಡ, ನಾನೇ ತಿನ್ನುತ್ತೇನೆ) ಎನ್ನುತ್ತಾ ದೂರ ತಳ್ಳುತ್ತಾಳೆ. ನಿರ್ದಿಷ್ಟವಾಗಿ ಇಂಥವರೇ ತಿನ್ನಿಸಬೇಕು ಎನ್ನುವ ಮೂಡ್‌ನಲ್ಲಿದ್ದರೆ ‘ತಾತಾ, ಅಚ್ಚಿ, ಬಾ, ಬೇ, ತಿ’ (ತಾತಾ ಹಸಿವಾಗ್ತಿದೆ. ಬೇಗ ಬಂದು ತಿನ್ನಿಸು) ಎನ್ನುತ್ತಾ ತಾತನನ್ನು ಹುಡುಕಿಕೊಂಡು ಓಡಾಡುತ್ತಾಳೆ.

ತಿನಿಸುಗಳಿಗೂ ಅವಳ ನಿಘಂಟಿನಲ್ಲಿ ಪ್ರತ್ಯೇಕ ಪದಗಳಿವೆ. ‘ಚೋಚೆ’ (ದೋಸೆ), ತಿತ್ತನ್ನ (ಚಿತ್ರಾನ್ನ), ‘ನ್ನ’ (ಅನ್ನ), ‘ಮಚ್ಚು’ (ಮೊಸರು), ‘ಪಾಚ’ (ಪಾಯಸ), ‘ಮು’ (ಮುದ್ದೆ), ‘ಖಾ’ (ಖಾರ ಅಥವಾ ಸಾರು), ‘ಪಲ್ಲ’ (ಪಲ್ಯ), ‘ತ್ನಿ’ (ಚಟ್ನಿ), ‘ಉಪು’ (ಉಪ್ಪಿಟ್ಟು), ‘ತೊತ್ತಿ’ (ರೊಟ್ಟಿ) ಇತ್ಯಾದಿ ಇತ್ಯಾದಿ. ಅವಳಿಗೆ ಇಷ್ಟವಾದದ್ದನ್ನು ಬಡಿಸಲು ಕೇಳುವ ರೀತಿಯೂ ಬಲುಸೊಗಸು. ‘ಇಲ್ಲೆಲ್ಲಾ ತಿತ್ತನ್ನ ಇನ್ನೂನು’ ಅಂತ ಒಂದೇ ಉಸಿರಿಗೆ ಹೇಳಿದಳು ಎಂದರೆ, ‘ನನಗೆ ಸ್ವಲ್ಪ ಚಿತ್ರಾನ್ನ ಬಡಿಸಿ’ ಎಂದು ಅರ್ಥ. ‘ಖಾ, ಜೀಯಾ’ ಎಂದು ಕೂಗಿದರೆ ‘ಖಾರಾ ಆಗಿದೆ, ನೀರು ಕುಡಿಸಿ’ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.

ಪಂಕ್ತಿಯಲ್ಲಿ ಊಟಕ್ಕೆ ಕುಳಿತಾಗ ಮೋಜು ತುಸು ಹೆಚ್ಚು. ಬಡಿಸಲು ಏನು ತಂದಿದ್ದಾರೆ ಎನ್ನುವುದಕ್ಕಿಂತ ಯಾರು ಬಡಿಸಲು ಬರುತ್ತಾರೆ ಎನ್ನುವುದೇ ಅವಳಿಗೆ ಮುಖ್ಯ. ಅಜ್ಜಿ ಪಾಯಸ ಬಡಿಸಲು ಬಂದರೆ ‘ಪಾಚ, ಬೇ’ (ಪಾಯಸ ಬೇಕು) ಆಗುತ್ತೆ. ಅದೇ ಅಪ್ಪ ಪಾಯಸ ತಂದರೆ; ‘ಪಾಚ, ಖಾ, ಬೇ’ (ಪಾಯಸ ಖಾರ ಆಗುತ್ತೆ, ಬೇಡ ಹೋಗು) ಎಂದು ಬೈಸಿಕೊಳ್ಳಬೇಕು. ಪ್ರೀತಿ ಹೆಚ್ಚಾಗಿ ಅಪ್ಪಿತಪ್ಪಿ ನಾನೇನಾದರೂ ಅವಳಿಗೆ ಪಾಯಸ ಬಡಿಸಿದರೆ, ‘ತಾತಾ, ಅಪ್ಪ, ಪಾಚ, ಖಾ, ಅತ್ತ, ಬಾ’ (ತಾತಾ ಅಪ್ಪ ಪಾಯಸ ಹಾಕಿದರು, ನನಗೆ ಖಾರ ಆಗ್ತಿದೆ. ಅಪ್ಪನಿಗೆ ಹೊಡಿ ಬಾ) ಎಂಬ ದೂರು ದಾಖಲಾಗಿ, ನನಗೆ ಕಠಿಣ ಶಿಕ್ಷೆ ಆದ ಮೇಲೆಯೇ ಅಳು ನಿಲ್ಲೋದು.

ಅವಳ ಬಾಯಲ್ಲಿ ಮಂತ್ರಗಳ ಉಚ್ಚಾರವೂ ಸೊಗಸು. ‘ಓಂ ಮೋ ಯಣ ಮೋಂ’ (ಓಂ ನಮೋ ನಾರಾಯಣಾಯ ಓಂ) ಎನ್ನುತ್ತಾ ದೇವರಕೋಣೆಗೆ ಹೋದಳು ಎಂದರೆ ಮಂಟಪದ ವಿಗ್ರಹಗಳೆಲ್ಲಾ ಆಟದ ಸಾಮಾನು. ದೇವರ ಮಂಟಪ ಇರಿಸಿರುವ ಮೆಟ್ಟಿಲ ಮೇಲೆ ಕುಳಿತು, ಕಂಚಿನ ತಾಳಗಳನ್ನು ನೆಲಕ್ಕೆ ಕುಟ್ಟುತ್ತಾ ‘ಅಂಗ ನೀ ವೋ ರ’ (ರಂಗ ನಿನ್ನ ಕೊಂಡಾಡುವೋ ಮಂಗಳಾತ್ಮರಾ) ಭಜನೆ ಶುರುಮಾಡಿಬಿಡುತ್ತಾಳೆ.

ಆಂಜನೇಯ ಅವಳ ನೆಚ್ಚಿನ ದೇವರು. ‘ಆಂಜೇಯ ಮಾಮಿ ತೋತಾ’ ಎನ್ನುವಾಗ ಕೆನ್ನೆ ತುಂಬಾ ಗಾಳಿ ತುಂಬಿಕೊಂಡು ಇವಳೂ ಆಂಜನೇಯನ ತಂಗಿಯಂತೆಯೇ ಕಾಣಿಸುತ್ತಾಳೆ. ‘ಚೀನಾಚ ಮಾಮಿ ತೋತಾ’ (ಶ್ರೀನಿವಾಸ ದೇವರಿಗೆ ನಮಸ್ಕಾರ) ಹೇಳುವಾಗ ಎರಡೂ ಕೈಗಳು ತಾಡಾಸನ ಮಾಡುವಷ್ಟು ಮೇಲಕ್ಕೆ ಹೋಗಿರುತ್ತವೆ. ಅಪ್ಪಿತಪ್ಪಿ ‘ಕೋಂದ’ (ಗೋವಿಂದ) ಹೇಳಿದರೆ ಮುಗಿಯಿತು. ಅವತ್ತು ಮನೆಯಲ್ಲಿ ಪಾಯಸದ ಊಟ ಆಗಲೇಬೇಕು.

ಅವಳಿಗೆ ಪೌಡರ್ ಹಾಕಿ, ಬಟ್ಟೆ ತೊಡಿಸುವುದು ಅವರಮ್ಮನಿಂದಷ್ಟೇ ಗೆಲ್ಲಲು ಸಾಧ್ಯವಾಗುವ ಸವಾಲು. ‘ಪೌ... ಬೇ...’ ಎನ್ನುವಾಗ ಅವಳ ಕೈಲಿರುವ ಪೌಡರ್ ಡಬ್ಬಿಯ ರಂಧ್ರಗಳು ಮೇಲ್ಮುಖವಾಗಿದ್ದರೆ ಅವಳಿಗೆ ಪೌಡರ್ ಹಾಕಿಸಿಕೊಳ್ಳುವ ಮೂಡ್ ಇದೆ ಎಂದು ಅರ್ಥ. ಒಂದು ವೇಳೆ ಅವೇ ಶಬ್ದಗಳನ್ನು ಉಚ್ಚರಿಸುವಾಗ ಪೌಡರ್ ಡಬ್ಬಿಯ ರಂಧ್ರಗಳು ಕೆಳಮುಖವಾಗಿದ್ದರೆ ತಾಯಿ-ಮಗಳ ನಡುವೆ ಶೀಘ್ರ ಮಹಾಯುದ್ಧವೊಂದು ನಡೆಯಲಿದೆ ಎನ್ನುವುದರ ಮುನ್ಸೂಚನೆ. ‘ಕೂ ಟಾಟಾ’ದ (ರೈಲು ತೋರಿಸಲು ಕರೆದುಕೊಂಡು ಹೋಗ್ತೀನಿ) ಆಮಿಷ ಒಡ್ಡಿದಾಗ ಮಾತ್ರ ನಮ್ಮ ಹೀರೊಯಿನ್‌ಗೆ ಮೇಕ್‌ಅಪ್‌ ಮಾಡುವುದು ಸಖತ್ ಸುಲಭ.

‘ಚಿಂಪಿಚಿವ್’ (ಗುಬ್ಬಿ), ‘ಕೂಕೂ’ (ಪಿಕಳಾರ), ‘ಗುವ್ ಗುವ್’ (ಪಾರಿವಾಳ), ‘ಕಿಚಿಪಿಚಿ ಕಿಚಿಪಿಚಿ’ (ಗಿಣಿ), ‘ಬಿಬಿಪಕ್ಕಿ’ (ಕೊಕ್ಕರೆ) ಹೀಗೆ ನನ್ನ ಕಷ್ಟಕ್ಕೆ ಒದಗುವ ಸ್ನೇಹಿತರು ಹಲವರು. ಮಗಳ ಮೂಡು ಕೆಟ್ಟು ತಾರಕ ಸ್ವರದ ಹಟ ಶುರುವಾದಾಗ ಇವರ ಸಹಾಯ ಇಲ್ಲದಿದ್ದರೆ ಬಲುಕಷ್ಟ. ಕಾರ್ತಿಕ ಮಾಸದ ಸ್ವಚ್ಛ ನೀಲಿ ಆಗಸದಲ್ಲಿ ‘ಮಿಮಾಮ’ಗಳು (ವಿಮಾನ) ಉಳಿಸುವ ಬಿಳಿಗೆರೆ ನೋಡುವುದು ಅವಳಿಗಷ್ಟೇ ಅಲ್ಲ, ನನಗೂ ಇಷ್ಟ.

ನನ್ನ ಮಗಳ ಗಣಿತಜ್ಞಾನ ವಿಪರೀತಕ್ಕಿಟ್ಟುಕೊಳ್ಳುವುದು ಕುರಿ ಮಂದೆ ಮನೆಮುಂದೆ ಬಂದಾಗ. ‘ಅದು’ (ಒಂದು), ‘ಒಂದು’ (ಎರಡು), ‘ಇನ್ನೊಂದು’ (ಮೂರು), ‘ಇನ್ನೊಂದೊಂದು’ (ನಾಲ್ಕು) ಎನ್ನುವಲ್ಲಿಗೆ ಅವಳ ಸಂಖ್ಯಾಜ್ಞಾನಕ್ಕೆ ಮಂಗಳ. ಇಲ್ಲಿಂದಾಚೆಗೆ ಮತ್ತೆ ‘ಅದು’ ಶುರುವಾಗಬೇಕು.

‘ಆನೆ ಲಾಲಿ, ತಾಚಿ ಪಾಪು’ ಎನ್ನುತ್ತಾ ಮನೆಯಲ್ಲಿರುವ ಅಷ್ಟೂ ಗೊಂಬೆಗಳ ಶಯನೋತ್ಸವ ಆದ ಮೇಲೆಯೇ ನಮ್ಮ ರಾಣಿಸಾಹೇಬರು ಪವಡಿಸುವುದು. ಮಧ್ಯಾಹ್ನದ ನಿದ್ದೆ ಗಡದ್ದು ಆಗಿದ್ದರೆ ನನ್ನ ಸ್ಥಿತಿ ದೇವರಿಗೇ ಪ್ರೀತಿ. ‘ಒಂದಿನ ಅವೌ ಅವೌ ಬಂತಂತೆ. ಅಂಬಾ ಹತ್ತ ಹೋತಂತೆ. ಮಮ್‌ ಕೊಡ್ತಂತೆ, ಮುದ್ದುಮುದ್ದು ಮಾಡ್ತಂತೆ’ ಎನ್ನುತ್ತಾ ಆಂಗಿಕಾಭಿನಯ ಸಹಿತ ಕಥೆ ಹೇಳಬೇಕು. ‘ದಿದ್ದಿ, ಚಾಕು’ (ನಿದ್ದೆ ಬರ್ತಿದೆ, ಸಾಕು) ಎಂದರೆ ನನ್ನ ಕಥೆಗೆ ವಿರಾಮ. ‘ಇನ್ನಾ, ಆನಿ’ (ನಾಯಿ ಕಥೆ ಬೇಡ, ಆನೆ ಕಥೆ ಹೇಳು) ಎಂದರೆ ನಾನು ಬಿಳಿಗಿರಿರಂಗನಬೆಟ್ಟದ ಆನೆಗಳನ್ನೆಲ್ಲಾ ದೊಡ್ಡಬಳ್ಳಾಪುರದ ನಮ್ಮ ಪುಟ್ಟ ಮನೆಗೆ ಕರೆಸಬೇಕು.

ಎದೆಯಮೇಲೆ ಕವುಚಿ ಮಲಗಿದ ಅವಳೂ ‘ಹೂಂ’ಗುಟ್ಟುವುದು ನಿಲ್ಲಿಸಿದರೆ, ನಿದ್ದೆಗೆ ಜಾರಿದಳು ಎಂದರ್ಥ. ಮೆಲ್ಲ ಅವಳನ್ನು ಬದಿಗೆ ಮಲಗಿಸಿದರೂ ಎದೆಗಿಳಿದ ಅವಳ ನಗು ಸ್ವಚ್ಛಸುಂದರ.

ನನ್ನ ಮಗಳಿಗೆ ಅವಳದೇ ಜಗತ್ತು, ಅವಳದೇ ಭಾಷೆ. ಆ ಜಗತ್ತಿಗೆ ನನಗೂ ಪ್ರವೇಶ ಸಿಕ್ಕಿದೆ ಎನ್ನುವುದೇ ನನ್ನ ಹೆಮ್ಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT