ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಂಥಲ್ಲದ ‘ನಮ್ಮ ಮಕ್ಕಳು’

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಅದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಶೆಟ್ಟಿಪಲ್ಲಿ ಶಾಲೆ. ಅಂದು ಮಟಮಟ ಮಧ್ಯಾಹ್ನ. ವೃದ್ಧ ಬೈರಪ್ಪ ಶಾಲೆಯ ಬಳಿಗೆ ಮೆಲ್ಲನೆ ಹೆಜ್ಜೆ ಹಾಕುತ್ತಾ ಬಂದರು. ಬಾಳಿನ ಮುಸ್ಸಂಜೆಯಲ್ಲಿದ್ದ ಅವರನ್ನು ಕಂಡ ಶಿಕ್ಷಕ ಸ. ರಘುನಾಥ ಅವರಿಗೂ ಅಚ್ಚರಿ. ಮಂಡಿನೋವಿನ ಔಷಧಿ ಕೇಳಲು ಬಂದಿರಬಹುದೆಂದು ಮೊದಲಿಗೆ ಅಂದಾಜಿಸಿದರು. ಜೇಬಿಗೆ ಕೈಹಾಕಿ ಒಂದು ರೂಪಾಯಿಯ ನಾಣ್ಯ ಹೊರತೆಗೆದರು ಬೈರಪ್ಪ. ‘ನನ್ನಲ್ಲಿ ಇರುವುದೇ ಇಷ್ಟು. ನೀವು ಇದನ್ನ ತೆಗೆದುಕೊಳ್ಳಲೇಬೇಕು. ಶಾಲೆಯ ಅಭಿವೃದ್ಧಿಗೆ ಬಳಸಿಕೊಳ್ಳಿ...’ ಎಂದಾಗ ಶಿಕ್ಷಕರ ಊಹೆ ದಿಕ್ಕುತಪ್ಪಿತ್ತು.  

ಬೈರಪ್ಪ ನೀಡಿದ ನಾಣ್ಯವು ಗೋಡೆಯ ಮೇಲೆ ರಟ್ಟಿನಲ್ಲಿ ಅಂಟಿಸಿದ್ದ ಹಳೆಯ ನಾಣ್ಯಗಳಲ್ಲಿ ಸ್ಥಾನ ಪಡೆದು ಫಳಗುಟ್ಟಿತು. ಅದೊಂದು ದಿನ ಶಾಲೆಯ ಹುಡುಗಿಯೊಬ್ಬಳಿಗೆ ಜ್ವರ ಕಾಣಿಸಿಕೊಂಡಿತು. ಆಕೆ ಉಪವಾಸದಿಂದ ಶಾಲೆಗೆ ಬಂದಿದ್ದಳು. ಶಿಕ್ಷಕರು ಅವಳಿಗೆ ಹಾಲು ಮತ್ತು ಅಂಗಡಿಯಲ್ಲಿ ಬನ್‌ ತರಿಸಿಕೊಟ್ಟರು. ಬೈರಪ್ಪ ಕೊಟ್ಟಿದ್ದ ರೂಪಾಯಿ ನಾಣ್ಯವು ಬನ್‌ ಖರೀದಿಗೆ ಬಳಕೆಯಾಗಿತ್ತು. ಚಿಣ್ಣರ ಕಲಿಕೆಯ ಭಾಗವಾಗಿದ್ದ ನಾಣ್ಯ ಮಗುವಿನ ಹಸಿವನ್ನೂ ನೀಗಿಸಿತ್ತು. ಇಂದಿಗೂ ಅಜ್ಜನ ನಾಣ್ಯ ಮಕ್ಕಳು ಮತ್ತು ಶಿಕ್ಷಕರಿಗೆ ಬೆಲೆ ಕಟ್ಟಲಾಗದ ವಸ್ತುವಾಗಿ ಕಾಡುತ್ತಿದೆ.

–ಇಂತಹ ಅಅ‍ಪರೂಪದ ಸಾಧನೆಗೆ ಬುನಾದಿ ಹಾಕಿರುವುದು ‘ನಮ್ಮ ಮಕ್ಕಳು’ ಬಳಗದ ಹಿರಿಮೆ. ಚಿಂದಿ ಆಯುವ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ತುಡಿತ ರಘುನಾಥ ಅವರಲ್ಲಿತ್ತು. ಅವರ ಆಶಯ ‘ನಮ್ಮ ಮಕ್ಕಳು’ ಹೆಸರಿನಡಿ ಸಾಕಾರಗೊಂಡಿತು. ಎರಡೂವರೆ ದಶಕದ ಹಿಂದೆ ಸ್ಥಾಪನೆಯಾದ ಈ ಬಳಗ ಅಸಹಾಯಕ ಕುಟುಂಬದ ಮಕ್ಕಳ ಶಿಕ್ಷಣಕ್ಕೂ ಊರುಗೋಲಾಗಿದೆ. ಆಯಾ ಕುಟುಂಬದಲ್ಲಿಯೇ ಮಕ್ಕಳಿಗೆ ಕಲಿಕಾ ವಾತಾವರಣ ಸೃಷ್ಟಿಸುವುದು ಬಳಗದ ಹೆಗ್ಗಳಿಕೆ.

ಮಕ್ಕಳನ್ನು ಕುಟುಂಬದ ಪರಿಸರದಲ್ಲಿಯೇ ಬೆಳೆಸುವುದು ಬಳಗದ ಮೂಲ ಆಶಯ. ಅವರಿಗೆ ಕಲಿಕೆಯ ಒತ್ತಡ ಹೇರುವುದಿಲ್ಲ. ಮಕ್ಕಳು ಎಲ್ಲಿಯವರೆಗೆ ಓದುತ್ತಾರೆಯೋ ಅಲ್ಲಿಯವರೆಗೆ ಓದಿಸುವುದೇ ಪ್ರಥಮ ಆದ್ಯತೆ. ಬಳಗದ ಮೊದಲ ವಿದ್ಯಾರ್ಥಿ ರಾಜಾಸಾಬ್‌ ಓದಲು ಇಚ್ಛಿಸಿದ್ದು ಒಂಬತ್ತನೇ ತರಗತಿ. ಮುಂದೆ ಆತ ಓದಲಿಲ್ಲ. ತೆಂಗಿನಕಾಯಿ ವ್ಯಾಪಾರ ಮಾಡುತ್ತೇನೆ ಎಂದಾಗ ಅವನಿಗೆ ಬಳಗ ಬೆಂಬಲ ನೀಡಿತು.

ರಜಾ ದಿನಗಳಲ್ಲಿ ಇಂಗ್ಲಿಷ್‌ ಕಲಿಯಲು ಬಳಗಕ್ಕೆ ಬಂದ ಕೋನಪ್ಪ ಔಷಧಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿನ ಇಂಗ್ಲಿಷ್‌ ಔಷಧಿಗಳ ಬಗ್ಗೆ ತಿಳಿದುಕೊಳ್ಳುತ್ತಲೇ ಅವನಲ್ಲಿ ತಾನು ಎಂ.ಬಿ.ಬಿ.ಎಸ್‌. ಕೋರ್ಸ್‌ ವ್ಯಾಸಂಗ ಮಾಡಬೇಕೆಂಬ ಆಸೆ ಮೊಳಕೆಯೊಡೆಯಿತು. ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯ ಆಯ್ದುಕೊಂಡ. ಸಿ.ಇ.ಟಿ.ಯಲ್ಲಿ ಆತನಿಗೆ ವೈದ್ಯಕೀಯ ಸೀಟು ಕೂಡ ಸಿಕ್ಕಿತು. ಈಗ ಆತ ವೈದ್ಯ. ಧರ್ಮ ಮತ್ತು ಜಾತ್ಯತೀತವಾಗಿ ಬಳಗದ ನೆರಳಿನಲ್ಲಿ ಮಕ್ಕಳ ಬದುಕು ಅರಳಿರುವುದೇ ಅದಕ್ಕೆ ಸಂದಿರುವ ಗೌರವ. 

ಶಿಕ್ಷಣದ ಜೊತೆಗೆ ಮಕ್ಕಳಿಗೆ ಸ್ವಂತ ದುಡಿಮೆ ಮಾರ್ಗ ಕಲ್ಪಿಸುವುದೇ ಬಳಗದ ಉದ್ದೇಶ. ದುಡಿಯುವ ಆತನಿಂದ ಬಳಗ ಯಾವುದೇ ನೆರವು ಪಡೆಯುವುದಿಲ್ಲ. ನೆರವು ಪಡೆದಾತ ಕುಟುಂಬದ ನಿರ್ವಹಣೆಯ ನೊಗ ಹೊತ್ತ ಬಳಿಕ ಬಳಗಕ್ಕೂ ಆತ ಅಪರಿಚಿತ. ಇಲ್ಲಿಯವರೆಗೆ ಬಳಗದಿಂದ ನೆರವು ಪಡೆದವರ ಸಂಖ್ಯೆ 120 ದಾಟಿದೆ. ಸದ್ಯಕ್ಕೆ 18 ವಿದ್ಯಾರ್ಥಿಗಳು ನೆರವು ಪಡೆಯುತ್ತಿದ್ದಾರೆ.

ಮಕ್ಕಳಲ್ಲಿ ಹಸಿರು ಪ್ರೀತಿ: ಮಕ್ಕಳಲ್ಲಿ ಹಸಿರು ಪ್ರೀತಿ ಬಿತ್ತುವ ಕೆಲಸಕ್ಕೂ ಬಳಗ ದಿಟ್ಟಹೆಜ್ಜೆ ಇಟ್ಟಿದೆ. ಇದಕ್ಕಾಗಿ ಸ್ಥಾಪನೆಯಾಗಿದ್ದೇ ‘ಹಸಿರು ಹೊನ್ನು ಬಳಗ’. ಪ್ರಸ್ತುತ ‘ನಮ್ಮ ಮಕ್ಕಳು ಮತ್ತು ಹಸಿರು ಹೊನ್ನು ಬಳಗ’ ಒಗ್ಗೂಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಸಿರು ಕ್ರಾಂತಿಗೆ ಮುನ್ನುಡಿ ಬರೆದಿವೆ. 25 ಶಾಲೆಗಳಲ್ಲಿ ಉದ್ಯಾನ ನಿರ್ಮಿಸಿಕೊಟ್ಟಿರುವುದು ಬಳಗದ ಹಿರಿಮೆ. ಶಿಕ್ಷಕ ರಘುನಾಥ ಮತ್ತು ಪಿ.ವಿ. ರಾಜಾರೆಡ್ಡಿ ಈ ಬಳಗದ ರೂವಾರಿಗಳು. ರಾಜಾರೆಡ್ಡಿ ಆಶ್ರಯ ನೀಲ್ಬಾಗ್‌ ಶಾಲೆಯ ವ್ಯಾನ್‌ ಚಾಲಕರು. ಶಾಲಾ ಆವರಣದಲ್ಲಿ 8 ಸಾವಿರ ಗಿಡ ನೆಟ್ಟಿದ್ದಾರೆ. ಬಿಡುವಿನ ವೇಳೆಯಲ್ಲಿ ಗಿಡಗಳ ನಿರ್ವಹಣೆ ಅವರದ್ದೇ.

‘ಗಿಡಮರ ಬೆಳೆಸುವ ಹಿರಿಮಗ ನಾನು’ ಮತ್ತು 'ಗಿಡಮರ ಬೆಳೆಸುವ ಹಿರಿಮಗಳು ನಾನು’ ಎಂಬುದೇ ಬಳಗದ ಘೋಷ ವಾಕ್ಯಗಳು. ಬೆಳಿಗ್ಗೆ ಮಕ್ಕಳು ಶಾಲೆಗೆ ಬಂದ ತಕ್ಷಣ ನೆಟ್ಟಿರುವ ಗಿಡಕ್ಕೆ ಮುತ್ತಿಡಬೇಕು. ಬಳಿಕ ಗಿಡಕ್ಕೆ ನೀರು ಹಾಕಬೇಕು. ಆ ಮೂಲಕ ಮಕ್ಕಳಿಗೆ ಬಾಲ್ಯದಲ್ಲಿಯೇ ಪರಿಸರ ಪ್ರಜ್ಞೆ ಮೂಡಿಸಲು ಒತ್ತು ನೀಡಿದೆ. ಬಳಗದಿಂದ ಉದ್ಯಾನ ನಿರ್ಮಿಸಿಕೊಟ್ಟ ಕೊಡದವಾಡಿ ಮತ್ತು ಲಕ್ಕೇಪಲ್ಲಿ ಶಾಲೆಗೆ ಜಿಲ್ಲಾಮಟ್ಟದ ‘ಹಸಿರು ಮಿತ್ರ’ ಪ್ರಶಸ್ತಿಯೂ ಲಭಿಸಿದೆ.

ಬಳಗದಿಂದ ಇಲ್ಲಿಯವರೆಗೆ ನೆಟ್ಟಿರುವ ಗಿಡಗಳ ಸಂಖ್ಯೆ 32 ಸಾವಿರ ದಾಟಿದೆ. ಈ ಪೈಕಿ 23 ಸಾವಿರ ಗಿಡಗಳು ಬೆಳವಣಿಗೆಯಲ್ಲಿವೆ. ಅವಕಾಶ ಸಿಕ್ಕಿದ ಕಡೆಯಲ್ಲಿ ಗಿಡ ನೆಡುವುದೇ ಬಳಗದ ಮೂಲ ಧ್ಯೇಯ. ಆಸ್ಪತ್ರೆ, ಚರ್ಚ್‌, ಶಾಲೆಗಳು, ಸ್ಮಶಾನ, ರಸ್ತೆಬದಿಯಲ್ಲಿ ಗಿಡ ನೆಡಲಾಗುತ್ತಿದೆ. ಗ್ರಾಮದಲ್ಲಿ ಯಾವುದೇ ವ್ಯಕ್ತಿ ಸತ್ತರೆ ಅವರ ಹೆಸರಿನಲ್ಲಿ ಕುಟುಂಬದ ಸದಸ್ಯರ ನೆರವಿನೊಂದಿಗೆ ಗಿಡ ನೆಡಲಾಗುತ್ತಿದೆ. ಇದನ್ನು ವ್ರತದಂತೆ ಪಾಲಿಸಲಾಗುತ್ತಿದೆ.

'ನಮ್ಮ ಮಕ್ಕಳು' ರಘುನಾಥರ ಸಂಪರ್ಕ ಸಂಖ್ಯೆ: 9483137885.

**

ಕಟ್ಟಕಡೆಯ ಹಳ್ಳಿ ಶಾಲೆ ದತ್ತು

ಕೋಲಾರ ಜಿಲ್ಲೆಯ ಮರುಮುಕಿಂದಿಪಲ್ಲಿಯು ಕರ್ನಾಟಕದ ಕಟ್ಟಕಡೆಯ ಹಳ್ಳಿ. ಇಲ್ಲಿ ತೆಲುಗು ಪ್ರಭಾವ ಹೆಚ್ಚು. ಈ ಊರಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ಇಲ್ಲೊಂದು ಕನ್ನಡ ಶಾಲೆ ಇದೆ. ಮಕ್ಕಳ ಸಂಖ್ಯೆ ಕಡಿಮೆಯಾದಾಗ ಶಾಲೆ ಮುಚ್ಚುವ ಹಂತಕ್ಕೆ ಬಂತು. ಈ ಸುದ್ದಿ ‘ನಮ್ಮ ಮಕ್ಕಳು’ ಮತ್ತು 'ಹಸಿರು ಹೊನ್ನು' ಬಳಗಕ್ಕೆ ಮುಟ್ಟಿತು. ಕೂಡಲೇ ಬಳಗ ಜಾಗೃತವಾಯಿತು. ಶಾಲೆಗೆ ತೆರಳಿದ ಬಳಗದ ಸದಸ್ಯರು ಗ್ರಾಮಸ್ಥರ ಮನವೊಲಿಸಿದರು. ಜನರಿಗೆ ನಾಗರಿಕ ಸೌಲಭ್ಯ ಕಲ್ಪಿಸಿಕೊಟ್ಟು ಶಾಲೆಯನ್ನು ಬಳಗದಿಂದಲೇ ದತ್ತು ತೆಗೆದುಕೊಳ್ಳಲಾಯಿತು. 9ರಿಂದ ಮಕ್ಕಳ ಹಾಜರಾತಿ ಈಗ 18ಕ್ಕೇರಿದೆ.

‘ಮಹಿಳೆಯರು ಮತ್ತು ಮಕ್ಕಳಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ. ನನ್ನ ಮೂರೂವರೆ ದಶಕದ ಶಿಕ್ಷಕ ವೃತ್ತಿಯಲ್ಲಿ ನನಗೆ ಈ ಸತ್ಯದ ಅರಿವಾಗಿದೆ. ಮಕ್ಕಳೊಂದಿಗೆ ಒಡನಾಟದಿಂದ ಇದ್ದಾಗ ಎಂದಿಗೂ ನಾನು ಅಂಗವಿಕಲನಾಗಿರಲಿಲ್ಲ. ನಿವೃತ್ತಿಯಾದ ಮರುಕ್ಷಣವೇ ಅಂಗವಿಕಲನಾದೆ’ ಎನ್ನುವ ನಿವೃತ್ತ ಶಿಕ್ಷಕ ರಘುನಾಥ ಅವರ ಕಾಯಕಕ್ಕೆ ಕೊನೆ ಎಂಬುದಿಲ್ಲ.

**

ಮೇಷ್ಟ್ರು ಎಂದರೆ ಹೀಗಿರಬೇಕು ಎನ್ನುವುದಕ್ಕೆ ಅತ್ಯುತ್ತಮ ಮಾದರಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಸ. ರಘುನಾಥರು. ಮೂರುವರೆ ದಶಕದ ವೃತ್ತಿಜೀವನದಲ್ಲಿ ಮಕ್ಕಳೊಂದಿಗೆ ಅವರು ನಡೆಸಿದ ಅನುಸಂಧಾನ ಯಾವ ಮಹಾಕಾವ್ಯಕ್ಕೂ ಕಡಿಮೆಯಿಲ್ಲ. ಅವರ ಕನಸುಗಾರಿಕೆ ಹಾಗೂ ಪ್ರಯೋಗಶೀಲತೆಯ ಒಂದು ಉದಾಹರಣೆ 'ನಮ್ಮ ಮಕ್ಕಳು'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT