ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಿತ್ ಶೆಟ್ಟಿ ಹೇಳಿದ ಕುಡ್ಪಲ್ ಭೂತದ ಕಥೆ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರಿಯರೇ,

ಈ ಕಥೆ ನನ್ನ ದೂರದ ಸಂಬಂಧಿಯೊಬ್ಬ ಹೇಳಿದ್ದು. ನಾನು ಚಿಕ್ಕವನಾಗಿದ್ದಾಗ ಅವನ ಮನೆಗೆ ಆವಾಗಾವಾಗ ಹೋಗ್ತಿದ್ದೆ. ಅವ್ರ ಮನೆ ಹತ್ರಾನೇ ಕಾಡಿತ್ತು. ಆ ಕಾಡಿನಲ್ಲೊಂದು ದೊಡ್ಡ ಮಾವಿನ ಮರ. ದೊಡ್ಡದು ಅಂದ್ರೆ ತುಂಬಾ ದೊಡ್ಡದು... ಆ ಮರ ನೋಡಿದ್ರೇನೇ ಭಯ ಆಗ್ಬೇಕು ಅಂಥ ಮರ...

ನಮ್ ಕಡೆ ಕುಡ್ಪಲ್ ಭೂತ ಅಂತೊಂದು ಭೂತದ ಕಲ್ಪನೆ ಇದೆ. ತಲೆಮೇಲೆ ಒಂದೇ ಕಣ್ಣಿರುವ, ಉದ್ದ ಕೂದಲಿರುವ ಭೂತ ಅದು. ಅದು ರಾತ್ರಿ ಹೊತ್ತಲ್ಲಿ ಆ ಮಾವಿನ ಮರದ ಹತ್ರ ಬಂದು ಮಾವಿನ ಕಾಯಿ ಕೀಳ್ತಾ ಇರತ್ತಂತೆ. ಕಥೆ ಹೀಗಿದೆ:

ಒಂದಿನ ಒಬ್ಬ ರಾತ್ರಿ ಹೊತ್ತಲ್ಲಿ ಮಾವಿನ ಮರದ ಹತ್ರ ನಡ್ಕೊಂಡು ಬರ್ತಿದ್ದ. ಅಷ್ಟೊತ್ತಿಗೆ ಕುಡ್ಪಲ್ ಭೂತ ಅಲ್ಲೇ ನಿಂತ್ಕೊಂಡು ಮಾವಿನಕಾಯಿ ಕೀಳ್ತಾ ಇತ್ತು. ಅದನ್ನು ಹಿಂದುಗಡೆಯಿಂದ ನೋಡಿದ ದಾರಿಹೋಕನಿಗೆ ತಮ್ಮ ನೆರೆ ಮನೆ ಲಕ್ಷ್ಮಮ್ಮನ ಹಾಗೇ ಕಾಣಿಸಿದೆ. ಅವನು 'ಏನ್ ಲಕ್ಷ್ಮಮ್ಮಾ? ಏನ್ ಮಾಡ್ತಿದೀರಾ ಇಲ್ಲಿ? ಇಷ್ಟೊತ್ತಲ್ಲಿ?' ಅಂತ ಕೇಳ್ದ. ಮೊದಲ ಸಲ ಕೇಳ್ದಾಗ ಏನೂ ಉತ್ರ ಬರ್ಲಿಲ್ಲ. ಎರಡನೇ ಸಲ ಕೇಳ್ದಾಗ್ಲೂ ಉತ್ರ ಕೊಡ್ಲಿಲ್ಲ. ಮೂರನೇ ಸಲ ಕೇಳ್ದಾಗ ತಿರುಗಿ ನೋಡ್ತು. ಅವಳ ಮುಖ ನೋಡಿದ್ದೇ - ಇದು ಲಕ್ಷ್ಮಮ್ಮ ಅಲ್ಲ ಕುಡ್ಪಲ್ ಭೂತ ಅಂತ ಅವನಿಗೆ ಗೊತ್ತಾಗಿಹೋಯ್ತು.

ಆದರೆ ಆ ಭೂತ ಮಾತ್ರ ತಾನು ಲಕ್ಷ್ಮಮ್ಮ ಅನ್ನೊ ಥರ 'ಹಾಗೇ ಸುಮ್ನೆ ಬಂದಿದ್ದೆ. ನಶ್ಯದ ಪುಡಿ ಇದ್ರೆ ಕೊಡ್ತೀಯಾ?' ಅಂತ ಕೈಚಾಚ್ತು. ನಶ್ಯದ ಪುಡಿ ಕೊಡ್ಲಿಕ್ಕೆ ಹೋದ್ರೆ ಕೈಯಲ್ಲಿ ದೊಡ್ಡ ತೂತು! ಕೈಮೇಲೆ ಹಾಕಿದ ನಶ್ಯ ಕೆಳಗೆ ಬಿದ್ದೋಯ್ತು. ಅದನ್ನು ನೋಡಿ ಕುಡ್ಪಲ್ ಭೂತ, 'ಅಯ್ಯೋ ಕೆಳಗೆ ಬಿದ್ದೋಯ್ರು. ಸ್ವಲ್ಪ ಎತ್ತಿ ಕೊಡ್ತೀಯಾ?' ಅಂತ ಕೇಳ್ತು. ಹಾಗೆ ನಶ್ಯ ಎತ್ತಿಕೊಡ್ಲಿಕ್ಕೆ ಬಗ್ಗಿದಾಗ ಅವನ ತಲೆಮೇಲೆ ಹೊಡೆಯೋದು ಅದರ ಯೋಜನೆ. ಆದ್ರೆ ಅವನಿಗೆ ಅದರ ಐಡಿಯಾ ಗೊತ್ತಿತ್ತು‌. ಅದ್ಕೇ ಧೈರ್ಯಮಾಡಿ 'ನಂಗಾಗಲ್ಲ. ನೀನೇ ಎತ್ಕೋ' ಅಂದ. ನಶ್ಯ ಎತ್ಕೊಳ್ಳಕ್ಕೆ ಭೂತ ಬಗ್ಗಿದಾಗ ಅದರ ಕೂದಲು ಹಿಡ್ಕೊಂಡ. ಅದ್ರ ಕೂದಲು ತುಂಬಾ ನೈಸು. ಜಾರುತ್ತಿತ್ತು. ಆದ್ರೂ ಬಲವಾಗಿ ಹಿಡ್ಕೊಂಡು ಮೂರು ಸುತ್ತು ಬೀಸಿ ನೆಲಕ್ಕೆ ಒಗೆದ.

ಆಗ ಆ ಭೂತ, 'ನನ್ನನ್ನು ಬಿಟ್ಬಿಡು. ನೀ ನನ್ನ ಕೂದಲು ಹಿಡ್ಕೊಂಡು ನೆನಪಿಸಿಕೊಂಡಾಗೆಲ್ಲ ಬಂದು ನೀ ಹೇಳಿದ ಕೆಲಸ ಮಾಡಿಕೊಡ್ತೀನಿ' ಎಂದು ಬೇಡಿಕೊಂಡ್ತು. ಇವನು ಬಿಟ್ಟ.

ಆ ಭೂತದ ಒಂದು ಕೂದಲು ಮಾತ್ರ ಕೈಯಲ್ಕೇ ಇಟ್ಟುಕೊಂಡ. ಯಾವಾಗ ಆ ಕೂದಲು ಅವನ ಕೈತಪ್ಪುತ್ತದೋ ಆಗ ಆ ಭೂತ ಅವನನ್ನು ಕೊಂದು ಹಾಕತ್ತಂತೆ. ಅದ್ಕೆ ಅವನು ತನ್ನ ಕೈಗೆ ಆಪರೇಷನ್ ಮಾಡ್ಕೊಂಡು ಕೂದಲನ್ನು ಕೈಯೊಳಗೆ ಸೇರಿಸಿಕೊಂಡುಬಿಟ್ಟ! ನಂತರ ಆ ಜಾಗವನ್ನು ಒತ್ತಿಹಿಡಿದುಕೊಂಡು ನೆನೆಸಿಕೊಂಡಾಗೆಲ್ಲ ಆ ಭೂತ ಬಂದು ಅವನು ಹೇಳಿದ ಕೆಲಸ ಮಾಡಿಕೊಡ್ತಿತ್ತು.

ಇದು ಕಥೆ.

ಈ ಕಥೆ ಕೇಳುವ ಮೊದಲು ನನಗೆ ಭೂತ ಅಂದ್ರೆ ಏನು ಅಂತಲೇ ಗೊತ್ತಿರ್ಲಿಲ್ಲ. ಕಥೆ ಕೇಳಿದ ಮೇಲೆ ಕತ್ಲಂದ್ರೆ ಭಯ ಆಗೋಕೆ ಶುರುವಾಯ್ತು. ರಾತ್ರಿ ನಿದ್ರೇನೇ ಬರ್ತಿರಲಿಲ್ಲ. ಪಿಯುಸಿ ಮುಗಿಯುವವರೆಗೂ ನಾನು ಭಯದಿಂದ ರಾತ್ರಿ ಒಬ್ಬನೇ ಮಲಗ್ತಾನೇ ಇರ್ಲಿಲ್ಲ. ಹಾಂ, ಈ ಕಥೆಯನ್ನು ಓದಿ ನೀವು ಹೆದರೊಲ್ಲ ತಾನೇ... ಈ ಕಾಲದ ಮಕ್ಕಳು ಬಹಳ ಸ್ಟ್ರಾಂಗು! ಅಲ್ಲವೇ...

**

ಪೋಷಕರಿಗೆ ರಕ್ಷಿತ್ ಕಿವಿಮಾತು

ಸಾಮಾನ್ಯವಾಗಿ ಚಿಕ್ಕಮಕ್ಕಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳೂದೇ ಇಲ್ಲ. ಯಾವ ಸಂದರ್ಭದಲ್ಲಿಯೂ ಅವರ ಅಭಿಪ್ರಾಯ ಕೇಳಲಿಕ್ಕೂ ಹೋಗೋದಿಲ್ಲ. ಹಾಗೆ ಮಾಡಬಾರದು. ಯಾವುದಾದರೂ ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಮಕ್ಕಳ ಅಭಿಪ್ರಾಯವನ್ನೂ ಕೇಳಿ. ಆಗ ಅವರಿಗೆ ನಮ್ಮ ಮಾತಿಗೂ ಬೆಲೆ ಇದೆ ಅನಿಸತ್ತೆ. ಅದೇ ಕಾರಣಕ್ಕೆ ಜವಾಬ್ದಾರಿಯೂ ಬರ್ತದೆ. ಅವರ ಅಭಿಪ್ರಾಯವನ್ನು ಪರಿಗಣಿಸ್ತೇವೋ ಇಲ್ವೋ ಬೇರೆ ಮಾತು. ಆದ್ರೆ ಅವರನ್ನೂ ಒಂದು ಮಾತು ಕೇಳ್ಬೇಕು. ಆಗ ಅವ್ರಿಗೆ ನಮ್ಮ ಮಾತೂ ಕೇಳ್ತಾರೆ ಅಂತ ಮನಸ್ಸಿಗೆ ಬರ್ತದೆ. ಆ ಭಾವನೆ ತುಂಬ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT